e-ಪ್ರೀತಿ
ಹಾಯ್,
ಗುಡ್ ಮಾರ್ನಿಂಗ್
ಹೆಲೋ
ಆರ್ ಯು ದೇರ್?
ಯಸ್
ಅಬ್ಬಾ!! ಕೊನೆಗೂ ಅವನು ನನ್ನ ಮೆಸೇಜ್್ಗೆ ಉತ್ತರಿಸಿದ. ನಂಗೆ ಅವನು ಸಿಕ್ಕಿದ್ದೇ ಚಾಟ್ ರೂಮಿನಲ್ಲಿ.. ನನ್ನ ಚಾಟ್ ಲಿಸ್ಟ್್ನಲ್ಲಿ ಸುಧೀ...ಅವನೇ ಸುಧೀಶ್ ಹೆಸರು ಮುಂದೆ ಗ್ರೀನ್ ಲೈಟ್ ಕಂಡರೆ ಕೂಡಲೇ ನಾನು ಹಾಯ್ ಮೆಸೇಜ್ ಕಳುಹಿಸುತ್ತಿದ್ದೆ. ನಾವು ಈವರೆಗೂ ಭೇಟಿಯಾಗಿಲ್ಲ. ಮಾತ್ರವಲ್ಲದೆ ನಾನು ಹೇಗಿದ್ದೇನೆ ಎಂದು ಅವನಿಗೂ ಅವ ಹೇಗಿದ್ದಾನೆ ಎಂದು ನನಗೂ ತಿಳಿದಿಲ್ಲ. ಆದರೂ ಏನೋ ಒಂದು ಆತ್ಮೀಯತೆ. ಅವನ ಜೊತೆ ಚಾಟ್ ಮಾಡದೇ ಇದ್ದ ದಿನ ಮನಸ್ಸಲ್ಲಿ ಏನೋ ಒಂದು ರೀತಿಯ ತಳಮಳ. ಈ ರೀತಿ ಅವನಿಗೂ ಅನಿಸುತ್ತದಾ ಎಂದು ನಂಗೆ ಗೊತ್ತಿಲ್ಲ. ಆದರೂ ನಾನಂತೂ ಅವನೊಂದಿಗೆ ಚಾಟಿಂಗ್ ಮಾಡುವುದರಲ್ಲಿ ಸಂತೋಷ ಕಂಡುಕೊಳ್ಳುತ್ತೇನೆ.
ಸುಧೀ....
ಯಸ್
ಬ್ಯುಸಿ?
ನೋ...
ಟೆಲ್ ಮಿ...
ನಥಿಂಗ್...
ಅನು... ಏನಾಯ್ತು ಹೇಳು?
ಏನಿಲ್ಲ...
ಊಟ ಮಾಡಿದ್ಯಾ?
ಇಲ್ಲ..
ಯಾಕೆ?
ಮೂಡ್ ಇಲ್ಲ...
ವೈ...
ಗೊತ್ತಿಲ್ಲ...
ನಂಗೊತ್ತು...
ಏನೂಂತ?
ಇವತ್ತು ನಾನು ಬ್ಯುಸಿಯಾಗಿದ್ದೆ. ರೆಡ್ ಲೈಟ್ ಸ್ಟ್ಯಾಟಸ್ ನೋಡಿ ನಿನ್ನ ಮುಖ ಕೂಡಾ ರೆಡ್ ಆಗಿರಬಹುದು ಎಂದು ನಂಗೊತ್ತಾಗಲ್ವಾ?
ಮ್ ಮ್...
ಈಗ ನೋಡು... ಗ್ರೀನ್ ಲೈಟ್ :)
ಆಮೇಲೆ ಅದು ...ಇದು.. ಹಾಗೆ ಹೀಗೆ ಅಂತಾ ನಾವು ಚಾಟಿಸಿದಕ್ಕೆ ಲೆಕ್ಕವೇ ಇರಲಿಕ್ಕಿಲ್ಲ. ಹೀಗೆ ನನ್ನ ಜೀವನದಲ್ಲಿ ಹೊಸ ಚಾಟಿಂಗ್ ಗೆಳೆಯ ಪ್ರವೇಶ ಮಾಡಿದ್ದ. ಮೊದ ಮೊದಲು ಗೆಳೆಯರಾಗಿದ್ದ ನಾವು ಮತ್ತೆ ಯಾವಾಗ ಈ ಪ್ರೇಮ ಪಾಶಕ್ಕೆ ಸಿಲುಕಿದೆವು ಎಂದು ಗೊತ್ತೇ ಆಗಲಿಲ್ಲ. ನಿಜ, ನಾನು ಸುಧಿಯನ್ನು ಮಿಸ್ ಮಾಡುತ್ತಿದ್ದೇನೆ. ಅವ ಚಾಟಿಂಗ್ ಮಾಡಲು ಬರುತ್ತಿದ್ದಾನೆ ಎಂಬ ನಿರೀಕ್ಷೆಯಲ್ಲಿ ದಿನಾ ಆನ್್ಲೈನ್ ಆಗಿರುತ್ತೇನೆ. ಚಾಟ್ ಲಿಸ್ಟ್್ನಲ್ಲಿ ಅವನ ಸ್ಟ್ಯಾಟಸ್ ಮೆಸೇಜ್ ನೋಡುವುದೇ ನನ್ನ ಕೆಲಸ. ಯಾವಾಗ ರೆಡ್ ಲೈಟ್ ಹೋಗಿ ಗ್ರೀನ್ ಲೈಟ್ ಕಾಣಿಸುತ್ತದೋ ಆವಾಗ ಹಾಯ್ ಎಂಬ ಮೆಸೇಜ್ ಕಳುಹಿಸುವುದು ನನ್ನ ಕಾಯಕ.
ಆದ್ರೆ ಈವಾಗ ನಂಗೆ ಅವನನ್ನು ಬಿಟ್ಟಿರೋಕೆ ಆಗ್ತಾ ಇಲ್ಲ. ಅದಕ್ಕೆ ರೆಡ್ ಲೈಟ್ ಇರುವಾಗಲೂ ಹಾಯ್ ಮೆಸೇಜ್ ಕಳುಹಿಸುತ್ತಿದ್ದೇನೆ. ಸುಧೀಶ್ ಈಸ್ ಬ್ಯುಸಿ. ಯು ಮೇ ಬಿ ಇಂಟರಪ್ಟಿಂಗ್ ಅಂತಾ ಮೆಸೇಜ್ ತೋರಿಸಿದ್ರೂ ನಾನವನನ್ನು ಇಂಟರಪ್ಟ್ ಮಾಡುತ್ತೇನೆ.
ನನಗೆ ಸಂತೋಷವಾದಾಗ ನನ್ನೊಂದಿಗೆ ನಗಲು, ಬೇಜಾರಾದಾಗ ಸಂತೈಸಲು ಸುಧಿ ಬೇಕು. ನಿಜ, ಐ ಆ್ಯಮ್ ಇನ್ ಲವ್. ಈ ಮಾತನ್ನು ಸುಧಿಗೆ ಹೇಳಬೇಕು. ಹೇಗೆ ಹೇಳಲಿ?
ಅವನ ಮನಸ್ಸಲ್ಲಿಯೂ ನನ್ನ ಬಗ್ಗೆ ಪ್ರೀತಿಯ ಭಾವನೆಗಳು ಇವೆಯಾ? ನಂಗೊತ್ತಿಲ್ಲ... ಇದ್ದರೂ ಇರಬಹುದು. ಯಾಕೆಂದ್ರೆ ಮೊನ್ನೆ ಮೊನ್ನೆ ಅವ ನನ್ನಲ್ಲಿ ತುಂಬಾ ರೊಮ್ಯಾಂಟಿಕ್ ಆಗಿ ಮಾತನಾಡಿದ. ಛೇ... ಅಲ್ಲ ಚಾಟ್ ಮಾಡಿದ. ಆವಾಗ ಎಷ್ಟು ಸಂತೋಷವಾಗಿತ್ತು ಗೊತ್ತಾ. ಇವತ್ತು ಅವನಲ್ಲಿ ಕೇಳಲೇ ಬೇಕು...
ಸುಧೀ...ಐ ಮಿಸ್ ಯು...
ಮೀ ಟೂ...
ಯಾಕೆ?
ನಿನ್ನ ಜೊತೆ ಚಾಟ್ ಮಾಡುವುದೆಂದರೆ ಏನೋ ಎಂದು ಸಂತಸ. ಮರುಭೂಮಿಯಲ್ಲಿ ತಂಗಾಳಿ ಬೀಸಿದಂತೆ. ಅವ ರೊಮ್ಯಾಂಟಿಕ್ ಆಗಿ ಹೇಳಿದ
ಆಹಾ...
ನಿಜವಾಗ್ಲೂ ಅನು..ಆ ತಂಗಾಳಿಯಲ್ಲಿ ನಿನ್ನ ಸುಗಂಧವಿದೆ. ನೀನು ನನ್ನ ಹತ್ರ ಬಂದು ಕುಳಿತಂತೆ ಏನೋ ಒಂದು ರೀತಿಯ ಅನುಭವ... ;) ಯಾಕೆ ಸುಮ್ಮನಾದೆ?
ನಿನಗೂ ಹಾಗೆ ಅನಿಸಲ್ವಾ?
ಇಲ್ಲ...
ನಂಗೊತ್ತು...
ನೀನು ಸುಳ್ಳು ಹೇಳ್ತಾ ಇದ್ದಿ ಅಂತಾ...ಅನು, ಒಂದು ಮಾತು ಹೇಳಲಾ?
ಮ್..
ಐ ಲವ್ ಯೂ...
ನಂಗೆ ಏನು ಹೇಳಬೇಕೆಂದು ಗೊತ್ತಾಗ್ತಾ ಇಲ್ಲ...ಸುಮ್ಮನಾದೆ
ಆರ್ ಯು ದೇರ್?
ಅನು ???
ಯಸ್...
ಯಾಕೆ ಸುಮ್ಮನಾದೆ?
ನಿಂಗೆ ನನ್ನನ್ನು ಇಷ್ಟ ಇಲ್ವಾ?
ಮ್ಮ್...ಯಸ್ ನಂಗೊತ್ತಿತ್ತು...ನಿನ್ನ ಮನಸ್ಸಲ್ಲಿ ನಾನಿದ್ದೇನೆ ಅಂತಾ..
ಇನ್ನು ಸಾಕು ಈ ಚಾಟಿಂಗ್, ಹೇಳು ಯಾವಾಗ ಭೇಟಿಯಾಗೋಣ. ನಂಗೆ ನಿನ್ನನ್ನು ನೋಡ್ಬೇಕು...
ಅದೂ... ಆಮೇಲೆ ಸರಿ ಅಂತಾ ನಾನೂ ಒಪ್ಪಿಕೊಂಡೆ.
ಈವರೆಗೆ ಆನ್್ಲೈನ್್ನಲ್ಲಿ ಬರೀ ಚಾಟ್ ಮೆಸೇಜ್ ಕಳುಹಿಸುತ್ತಿದ್ದ ನಾವು ಈಗ ಪರಸ್ಪರ ಫೋನ್ ನಂಬರ್್ಗಳನ್ನು ವಿನಿಮಯ ಮಾಡಿದೆವು. ದಿಲ್ ಕೋ ಗಯಾ...ಹೋಗಯಾ ಕಿಸೀಕಾ.... ಹಾಡು ಎಫ್್ಎಂನಲ್ಲಿ ಕೇಳಿ ಬರುತ್ತಿತ್ತು.
ಆಗಲೇ ನನ್ನ ಫೋನ್ ರಿಂಗಾಯ್ತು.
ಹಲೋ...ಅನು..ಸುಧೀ ಹಿಯರ್.....
ಹೇಳಿ...
ಮತ್ತೆ ನಾವು ಯಾವಾಗ ಭೇಟಿಯಾಗೋಣ? ನಮ್ಮ ಸಂಗಮ ಸ್ಥಳ ಯಾವುದು ಅಂತಾ ಹೇಳು?
ಇಲ್ಲಿ ನನಗೆ ಯಾವ ಸ್ಥಳವೂ ಅಷ್ಟೊಂದು ಪರಿಚಿತವಾಗಿಲ್ಲ ಸುಧೀ..ಓಕೆ ಕಬ್ಬನ್ ಪಾರ್ಕ್್ಗೆ ಬರ್ತೀಯಾ?
ಸರಿ. ನಾಡಿದ್ದು ಆದಿತ್ಯವಾರ ಕಬ್ಬನ್ ಪಾರ್ಕ್್ನಲ್ಲಿ ಭೇಟಿಯಾಗೋಣ. ಹೇ..ಅನು... ಈವರೆಗೆ ನೋಡದೇ ಇದ್ದ ಆ ಚೆಲುವೆಯನ್ನು ನೋಡಲು ನನ್ನ ಮನಸ್ಸು ತುಡಿಯುತ್ತಿದೆ.
ಸುಧೀ...(ನನ್ನನ್ನು ಚೆಲುವೆ ಅಂದಿದ್ದಾನಲ್ವಾ..ಅದಕ್ಕೆ ಒಳಗೊಳಗೇ ಖುಷಿ ಪಟ್ಟೆ)
ನಮ್ಮಿಬ್ಬರ ಭೇಟಿಗೆ ಇನ್ನೂ ಒಂದು ದಿನ ಪೂರ್ತಿ ಇದೆ. ಅವ ನಿರಂತರವಾಗಿ ಮೆಸೇಜ್ ಕಳುಹಿಸುತ್ತಲೇ ಇದ್ದ. ನಾನೂ... ರಾತ್ರಿ ಗುಡ್ ನೈಟ್ ಸ್ವೀಟ್ ಡ್ರೀಮ್ಸ್ ಎಂದು ಮೆಸೇಜ್ ಕಳುಹಿಸಿದೆ. ಇಷ್ಟೇನಾ...ಇದರೊಂದಿಗೆ ಬೇರೆ ಏನೂ ಇಲ್ವಾ?
ಏನು?
ಸ್ವೀಟ್ಸ್...ಒಂದೇ ಒಂದು ಪ್ಲೀಸ್...
ನೀನು ನನ್ನನ್ನು ಮುಖಃತ ಭೇಟಿಯಾದಾಗ ಕೊಡ್ತೇನೆ... ಸರೀನಾ? ಅಬ್ಬಾ ಏನು ಧೈರ್ಯದಿಂದ ಹೇಳಿಬಿಟ್ಟೆ ಅಂತಾ ನಂಗೂ ಗೊತ್ತಿಲ್ಲ.
ನಿಜನಾ?
ಆವಾಗ ಒಂದಲ್ಲ ಒಂದು ರಾಶಿ ಕೊಡ್ಬೇಕು...
ಸರಿ...
ನಾನು ಆ ಆದಿತ್ಯವಾರದ ನಿರೀಕ್ಷೆಯಲ್ಲೇ ಇದ್ದೆ. ಆದ್ರೂ ಮನಸ್ಸಿನ ಒಳಗೊಳಗೆ ಏನೋ ಭಯ. ಈವರೆಗೂ ನಾವು ಪರಸ್ಪರ ನೋಡಿಲ್ಲ. ಆದ್ರೆ ಪ್ರೀತಿಸಿದ್ದೀವಿ. ಅವ ಹೇಗಿರುವನೋ ಏನೋ? ಈವರೆಗೆ ಕಂಡದ್ದು ಸುಂದರ, ಇನ್ನು ಕಾಣಲಿರುವುದು ಅದಕ್ಕಿಂತಲೂ ಸುಂದರವಾಗಿರಬಹುದು ಎಂದು ಯಾವುದೋ ಚಲನಚಿತ್ರದ ಡೈಲಾಗ್ ಪಕ್ಕನೆ ನೆನಪಿಗೆ ಬಂತು. ಸುಧಿ ಜೊತೆಗೆ ಮಾತನಾಡಿದಾಗೆಲ್ಲಾ ಅವ ನನ್ನನ್ನು ಸಂತೋಷವಾಗಿರಿಸಲು ಪ್ರಯತ್ನಿಸುತ್ತಿರುವುದು ನನ್ನ ಅನುಭವಕ್ಕೆ ಬಂದಿದೆ.
ಈ ಆರು ತಿಂಗಳುಗಳ ಕಾಲ ನಡೆಸಿದ ಚಾಟಿಂಗ್್ನಲ್ಲಿ ನಾವೆಷ್ಟೊ ಬಾರಿ ಸುಮ್ಮನೆ ಜಗಳವಾಡಿದ್ದೇವೆ. ನಾನು ಮುನಿಸಿಕೊಂಡಾಗ ಮುದ್ದಿಸಿ ನನ್ನನ್ನು ನಗಿಸಿದ್ದಾನೆ. ನಂಗೊತ್ತು ಅವನಿಗೆ ಪ್ರೀತಿಸುವ ಹೃದಯವಿದೆ. ಅಷ್ಟು ಸಾಕು. ಆದ್ರೆ ಅವನ ಮನಸ್ಸಲ್ಲಿ ಏನಿದೆಯೋ? ನನ್ನ ಈ ರೂಪವನ್ನು ಅವ ಮೆಚ್ಚಿಕೊಳ್ಳದಿದ್ದರೆ? ನಂಗೆ ಅವನನ್ನು ಮರೆಯಲು ಸಾಧ್ಯನಾ? ಮನಸ್ಸಿನಲ್ಲಿ ಏನೋ ತಳಮಳ.
ಅಂತೂ ನಾವಂದು ಕೊಂಡಿದ್ದ ಆ ಸುದಿನ ಬಂದೇ ಬಿಟ್ಟಿತು. ಆದಿತ್ಯವಾರ ಬೆಳಗ್ಗೆ ಎದ್ದು ಎಲ್ಲಾ ಕೆಲಸಗಳನ್ನು ಬೇಗ ಬೇಗ ಮುಗಿಸಿಕೊಂಡೆ. ಗಂಟೆ ಒಂಭತ್ತಾಯಿತು. ಸುಧಿಯ ಪತ್ತೆ ಇಲ್ಲ. ಇವ ಚೀಟ್ ಮಾಡಿದ್ತಾ? ಅಂತಾ ಒಂದು ಬಾರಿ ಯೋಚಿಸಿದೆ. ಇರಲಿ ಬಿಡಿ, ಮೊಬೈಲ್ ತೆಗೆದು ಅವನ ನಂಬರ್ ಡಯಲ್ ಮಾಡಿದೆ. ಪೆಹಲಾ ನಶಾ ...ಪೆಹಲಾ ಖುಮಾರ್...ನಯ ಪ್ಯಾರ್ ಹೇ..ನಯ ಇಂತ್್ಜಾರ್...ಎಂಬ ಹಾಡು ಕೇಳಿಬರುತ್ತಿತ್ತು.
ಹಲೋ ಸ್ವೀಟಿ...
ಸುಧೀ..ಎಲ್ಲಿದ್ದೀಯಾ?
ನೀನೆಲ್ಲಿದ್ದಿ ಹೇಳು... ನಾನಿನ್ನು 20 ನಿಮಿಷದಲ್ಲಿ ಕಬ್ಬನ್ ಪಾರ್ಕ್್ಗೆ ತಲುಪಲಿದ್ದೇನೆ.
ನೀನು?
ಎಲಾ ಇವನಾ? ಇಷ್ಟು ಬೇಗ ಬಂದು ಬಿಡ್ತಾನೆ ಅಂತಾ ಗೊತ್ತಿರಲಿಲ್ಲ. ನಾನು..ಇನ್ನೇನು ಅಲ್ಲಿಗೆ ಬಂದು ಬಿಡ್ತೇನೆ. ನೀನು ಆ ರಾಕ್ಸ್ ಹತ್ರ ನಿಲ್ಲು ಎಂದು ಹೇಳಿ ಫೋನಿಟ್ಟೆ.
ನಂತರ ಅವಸರವಸರವಾಗಿ ರೆಡಿಯಾದೆ. ಮೊದಲ ಬಾರಿ ಹುಡುಗನೊಬ್ಬ ಅಲ್ಲ...ನನ್ನ ಪ್ರೇಮಿಯನ್ನು ಭೇಟಿ ಮಾಡ್ತಾ ಇದ್ದೇನೆ. ಅವನಿಗೆ ಏನು ಕೊಡಲಿ? ಸರಿ, ಒಂದು ಡೈರಿ ಮಿಲ್ಕ್ ತೆಗೆದುಕೊಂಡೆ. ಹತ್ತು ಗಂಟೆಗೆ ಸರಿಯಾಗಿ ನಾನು ಕಬ್ಬನ್ ಪಾರ್ಕ್ ತಲುಪಿದೆ. ಅದೇ ರಾಕ್ಸ್ ಬಳಿ ತಿಳಿ ಬ್ಲೂ ಟಿಶರ್ಟ್ ಮತ್ತು ಬ್ಲ್ಯಾಕ್ ಪ್ಯಾಂಟ್ಸ್ ಧರಿಸಿದ ಯುವಕನೊಬ್ಬನನ್ನು ದೂರದಿಂದಲೇ ನೋಡಿದೆ. ಅವನೇ ಸುಧಿ ಆಗಿರಬಹುದೇನೋ? ಎಂಬ ಸಂಶಯ ಪರಿಹರಿಸುವ ಸಲುವಾಗಿ ಫೋನ್ ಮಾಡಿದೆ. ಹೌದು, ಅವನ ಫೋನ್ ರಿಂಗಾಯ್ತು, ರಿಸೀವ್ ಮಾಡಿ ಹಲೋ ಎಂದ. ನಾನು....ಅನು...
ಅವ ನನ್ನತ್ತ ನೋಡಿದ...ಅನು... ಫೋನ್ ಕಟ್ ಮಾಡಿದೆ.
ನಾನು ಅಂದುಕೊಂಡಂತೆ ಅವ ಸುಂದರವಾಗಿದ್ದ. ಏನು ಹೇಳಬೇಕೆಂದು ತಿಳಿಯುತ್ತಿಲ್ಲ..ಐ ಆ್ಯಮ್ ಕನ್್ಫ್ಯೂಸ್್ಡ್.
ಅನು..ಬಾ ಕುಳಿತುಕೋ...ಎಂದು ನನ್ನ ಕೈ ಹಿಡಿದ. ಮೊದಲ ಸ್ಪರ್ಶ...ರೋಮಾಂಚನ..
ಯಾಕೆ ಮೈ ತಣ್ಣಗಾಗಿದೆ?
ಏನಿಲ್ಲ... ನಾಚಿಕೊಳ್ತಾ ಇದ್ದೀಯಾ? ನನ್ನ ಮುಂದೆ ಯಾಕೆ ಇಷ್ಟೊಂದು ನಾಚಿಕೆ? ಅಂತೂ ನೀನು ನಾನು ಅಂದುಕೊಂಡಂತೆ ಇದ್ದೀಯಾ...
ಹಾಗೆ ಒಂದಷ್ಟು ಹೊತ್ತು ನಾವು ಹೀಗೆ ಹರಟೆ ಹೊಡೆಯುತ್ತಾ ಕುಳಿತೆವು. ನನ್ನ ಭಯ ದೂರವಾಗಿತ್ತು. ನನ್ನ ಕೈ ಹಿಡಿದು...ಐ ಲವ್ ಯೂ ಎಂದ.. ಮಿ ಟೂ... ಅವನ ಜೊತೆ ಸಮಯ ಕಳೆದದ್ದು ಗೊತ್ತೇ ಆಗಲಿಲ್ಲ. ಹಸಿವೂ ಆಗಿಲ್ಲ. ನಾವು ಹಂಚಿ ತಿಂದದ್ದು ಆ ಡೈರಿ ಮಿಲ್ಕ್ ಮಾತ್ರ.. ವಾಚ್ ನೋಡಿದೆ. ಸಂಜೆ ಐದು ಗಂಟೆಯಾಗಿತ್ತು. ಇನ್ನು ಹೊರಡಬೇಕು ಎಂದು ಹೇಳಿದ.
ಹೂಂ..ಇನ್ಯಾವಾಗ? ಸಮಯ ಸಿಕ್ಕಾಗೆಲ್ಲಾ ಭೇಟಿಯಾಗ್ತೇನೆ ಎಂದು ನನ್ನ ಕೆನ್ನೆ ಮುಟ್ಟಿ ಹೇಳಿದ. ನೀನೀಗ ಹೋಗ್ಬೇಡ ಸುಧೀ ಎಂದು ನಾನು ಮನಸ್ಸಿನಲ್ಲೇ ಹೇಳುತ್ತಿರುವುದು ಅವನಿಗೆ ಕೇಳಿಸಿತ್ತು ಎಂದೆನಿಸುತ್ತದೆ. "ಇಲ್ಲ ..ಅನು ಈವಾಗ ಹೊರಡಬೇಕು...ಆಮೇಲೆ ನೀನು ಮನೆಗೆ ತಲುಪುವಾಗ ಲೇಟಾಗುತ್ತೆ. ಇನ್ನೊಮ್ಮೆ ಭೇಟಿಯಾಗೋಣ". ಕೀ ಬೋರ್ಡ್ ಕುಟ್ಟುತ್ತಾ ಪ್ರೇಮ ಸಂದೇಶ ಕಳುಹಿಸುತ್ತಿದ್ದ ನನ್ನ ಆ ಬೆರಳುಗಳು ಅವನ ಬೆರಳುಗಳೊಂದಿಗೆ ಬೆರೆತಿದ್ದವು..ಕಣ್ಣಂಚಿನಲ್ಲಿ ನೀರು ತುಂಬಿತ್ತು.
"ಓ ಕೆ ...ಅನು, ಏನೋ ಮರೆತಂತಿದೆ..."
ಏನು?
ಆ ಸ್ವೀಟ್ ಎಲ್ಲಿ?
ನಂಗೆ ಏನು ಹೇಳಬೇಕೆಂದು ಗೊತ್ತಾಗ್ತಾ ಇಲ್ಲ.
ಅವ ಹತ್ತಿರ ಬಂದ...ನನ್ನ ಕೈಗಳು ಕಂಪಿಸುತ್ತಿದ್ದವು. ಮುಖದ ಮೇಲೆ ತೇಲುತ್ತಿದ್ದ ನನ್ನ ಕೂದಲನ್ನು ಸರಿಸಿ ಹಣೆ ಮೇಲೆ ಒಂದು ಹೂ ಮುತ್ತನಿಟ್ಟ. "ಅನು ಐ ಲವ್ ಯೂ..".ನನಗರಿವಿಲ್ಲದಂತೆ ಅವನನ್ನು ತಬ್ಬಿಕೊಂಡೆ. ಅವನ ಬಿಸಿ ಮೈ ನನ್ನ ಮೈಗೆ ತಾಕುತಿತ್ತು. ಅವನ ತೋಳಿನಲ್ಲಿ ನಾನು ಬಂಧಿಯಾಗಿಬಿಟ್ಟೆ. ಅವನ ಹೃದಯ ಬಡಿತ ನನ್ನೆದೆಯ ಬಡಿತದೊಂದಿಗೆ ಮಿಳಿತವಾಗಿತ್ತು. ಅವ ನನ್ನ ಕೆನ್ನೆ ಚುಂಬಿಸಿದ...ಆಮೇಲೆ....ಅನೂ...ನಾನು 'ನೋ' ಅಂತಾ ಹೇಳಲಿಲ್ಲ. ನನ್ನ ತುಟಿ ಮೇಲೆ ಅವನ ತುಟಿ ಒತ್ತಿದ. ನಾವೇನು ಮಾಡುತ್ತಿದ್ದೇವೆ ಎಂಬ ಪರಿವೆಯೇ ನಮಗಿಲ್ಲದಾಗಿತ್ತು. ಮೊದಲ ಸ್ಪರ್ಶ, ಮೊದಲ ಚುಂಬನದ ಸವಿಯನ್ನು ನಾನು ಅನುಭವಿಸುತ್ತಿದ್ದೆ. ಇನ್ನು ಸಾಕು ಎಂಬಂತೆ ನಾವೇ ಎಚ್ಚತ್ತು ಕೊಂಡೆವು. ಅವ ಬೈಕ್ ಸ್ಟಾರ್ಟ್ ಮಾಡಿದ. ಅವನಿಗೆ ವಿದಾಯ ಹೇಳಲು ನನಗೆ ಶಕ್ತಿಯೇ ಇಲ್ಲವೆಂಬಂತೆ ಭಾಸವಾಗುತ್ತಿತ್ತು. ನನ್ನ ಕೈಹಿಡಿದು ಮತ್ತೊಮ್ಮೆ ಮುದ್ದಿಸಿದ. ನಾನು ಅತ್ತು ಬಿಟ್ಟೆ. ನನ್ನ ಕಣ್ಣೀರು ಒರೆಸಿ...ಬೈ ಎಂದ...ನಾನು ತಲೆ ಅಲ್ಲಾಡಿಸಿ 'ಸರಿ' ಎಂದೆ.
ಮತ್ತೆ ಮನೆಗೆ ತಲುಪಿದಾಗ ಫೋನ್ ಮಾಡಿದ. ಹೀಗೆ ಚಾಟ್ ರೂಮಿನಲ್ಲಿ ಆರಂಭವಾದ ನಮ್ಮ ಪರಿಚಯ ಇದೀಗ ಪ್ರೀತಿಯಾಗಿ ಬೆಳೆದಿದೆ. ಅವನ ಮೆಸೇಜ್್ಗಾಗಿ ನನ್ನ ಮೊಬೈಲ್ ಕಾದಿರುತ್ತದೆ. ಚಾಟ್ ವಿಂಡೋದಲ್ಲಿ ಸುಧೀ ಯಾವಾಗ ಕಾಣಿಸಿಕೊಳ್ಳುತ್ತಾನೆ ಎಂದು ನಾನು ಆತುರದಿಂದ ಕಾಯುತ್ತಿರುತ್ತೇನೆ.
ಹೂಂ. ನಿಮ್ಮಲ್ಲಿ ಇಷ್ಟೆಲ್ಲಾ ಹೇಳಿದ್ತಲ್ಲಾ...ಸರಿ, ಸುಧಿ ಆನ್್ಲೈನ್್ನಲ್ಲಿದ್ದಾನೆ. ನಾನು ಚಾಟ್ ಮಾಡೋಕ್ಕೆ ಹೋಗ್ತಾ ಇದ್ದೀನಿ. ಪ್ಲೀಸ್... ಬೇಜಾರು ಮಾಡ್ಕೊಳ್ಬೇಡಿ. ನನ್ನ ಸ್ಟ್ಯಾಟಸ್ ಮೆಸೇಜ್ ಈಗ ಬ್ಯುಸಿ ಅಂತಾ ತೋರಿಸುತ್ತೆ. ಏನೂ ಕೇಳ್ಬೇಡಿ. I am busy. You may be interrupting!!
Comments
ಉ: e-ಪ್ರೀತಿ
In reply to ಉ: e-ಪ್ರೀತಿ by manjunath s reddy
ಉ: e-ಪ್ರೀತಿ