ಅರ್ಚನ ಪುರಾಣ!!!

ಅರ್ಚನ ಪುರಾಣ!!!

"ಅರ್ಚನ" ಅದು ನನ್ನ ಹೆಸರು. ಇನ್ನು ಅದರ ಪುರಾಣ ಅದೆಲ್ಲಿಂದ ಶುರು ಮಾಡಲಿ? ಶುರುವಿನಿಂದಲೇ ಶುರು ಮಾಡುತ್ತೇನೆ.

ನಮ್ಮಮ್ಮನ ಹೆಸರು ತಾರ ಅಂತ. ಅವರ ಹೆಸರು ಇಂಗ್ಲೀಷ್ ವರ್ಣಮಾಲೆಯ ಕೊನೆಯ ಅಕ್ಷರಗಳಲ್ಲಿ ಬರೋದ್ರಿಂದ ಅವ್ರಿಗೆ ರಗಳೆ. ರಗಳೆ ಯಾಕಪ್ಪ ಅಂದ್ರೆ ಸ್ಕೂಲು ಕಾಲೇಜುಗಳಲ್ಲಿ ಹೆಸರಿನ ಪಟ್ಟಿ ಇಂಗ್ಲೀಷ್ ವರ್ಣಮಾಲೆಯ ಪ್ರಕಾರ ಇರೋದ್ರಿಂದ ಹಾಜರಿ ಕರೀಬೇಕಾದ್ರೆ ನಮ್ಮಮ್ಮನ ಹೆಸರು ಕೊನೆಗೆ. ಪರೀಕ್ಷೆಗೆ ಬರೀಬೇಕಾದ್ರೆ ಕೂತುಕೊಳ್ಳಬೇಕಾದ್ದು ಕೊನೆಗೆ. ಡೆಸ್ಕುಗಳ ಬೆಂಚುಗಳ ಅವಸ್ಥೆ ಕೊನೆಸಾಲುಗಳಲ್ಲಿ ಅಷ್ಟಕ್ಕಷ್ಟೆ. ಈ 'ಕೊನೆ'ಗಳ ರಗಳೆಗಳಿಂದ ಬೇಸತ್ತ ನಮ್ಮಮ್ಮ ಒಂದು ಪ್ರತಿಜ್ಞೆ ಮಾಡಿದ್ರು. ಅದೇನಪ್ಪಾ ಅಂದ್ರೆ 'ನಾನು ಅನುಭವಿಸಿದ ರಗಳೆಗಳನ್ನು ನನ್ನ ಮಕ್ಕಳು ಅನುಭವಿಸಬಾರದು' ಅಂತ. ಅದಕ್ಕಾಗಿ ಅವ್ರ ಹೆಸರು "ಅ" ಅಕ್ಷರದಿಂದ ಶುರು ಆಗೋ ಹಾಗೆ ಇಡಬೇಕು ಅಂತ. ಸಾಕಲ್ಲ ಪೀಠಿಕೆ! ಸುಮಾರಾಯ್ತು.

ಅಂತೂ ಇಂತೂ ನಾನು ಹುಟ್ಟಿದೆ. ನಮ್ಮಮ್ಮ ಅವರಮ್ಮನ ಮನೆಗೆ ಅಂದ್ರೆ ಮಂಗ್ಳೂರಿಗೆ ಹೋಗಿದ್ರಿಂದ ನಮ್ತಂದೆಗೆ ಬೆಳ್ತಂಗಡಿಗೆ ದೂರವಾಣಿಯ ಮುಖಾಂತರ ಸುದ್ದಿ ಮುಟ್ಟಿತು. ನಮ್ತಂದೆ ಮಂಗ್ಳೂರಿಗೆ ನಮ್ಮನ್ನು ನೋಡಲು ಬರುತ್ತಾ ಇರಬೇಕಾದ್ರೆ ಒಂದು ರಿಕ್ಷಾ ಎದುರಿಂದ ಬಂತು. ಅದರ ಮುಂದೆ ಬರೆದಿತ್ತು "ಅರ್ಚನ". ನಮ್ತಂದೆಗೆ ತುಂಬಾ ಹಿಡಿಸಿತು ಆ ಹೆಸರು. ಅಂತೂ ನಾನು 'ಅರ್ಚನ'ಳಾದೆ. ನಮ್ಮಲ್ಲಿ ಒಂದು ಹೆಸರು ಹೊರಬಳಕೆಗೆ. ಒಂದು ಸುಲಭದ್ದು ಮನೆಬಳಕೆಗೆ. ನಮ್ಮ ಬಳಗದಲ್ಲಿ ಆಗಲೇ ಒಂದು ಶಮ್ಮಿ, ಒಂದು ಚುಮ್ಮಿ ಇದ್ರು. ಹಾಗೆ ನಾನು ಅವ್ರಿಗೆ ಪ್ರಾಸವಾಗುವಂತೆ 'ಅಮ್ಮಿ' ಆದೆ.

ನಮ್ಮಮ್ಮನ ಆಸೆಯಂತೆ ನನ್ನ ಹೆಸರೇ ಎಲ್ಲ ಕಡೆ ಮೊದಲಾಯಿತು. ಹಾಜರಿಯಲ್ಲಿ ಮೊದಲು. ಪರೀಕ್ಷೆಯಲ್ಲಿ ಕೂತುಕೊಳ್ಳಲು ಮೊದಲು. ಆದ್ರೆ ನಮ್ಮಮ್ಮನ ಥಿಯರಿ ಪ್ರಕಾರ ನಂಗೆ ಅಷ್ಟೇನೂ ಅನುಕೂಲ ಆದ ಹಾಗೆ ಕಾಣಲಿಲ್ಲ. ಪ್ರಾಕ್ಟಿಕಲ್ ಪರೀಕ್ಷೆಯ ವೈವಾದಲ್ಲಿ ಪರೀಕ್ಷಕರ ಪ್ರಶ್ನೆಗಳ ಬಾಣಗಳ ಮಹಾಪೂರವನ್ನು ಎದುರಿಸುವ ಪ್ರಥಮ ಸಿಪಾಯಿಯಾಗಬೇಕಾಯ್ತು. ನಾನು ಕೋಣೆಯಿಂದ ಹೊರಬಿದ್ದ ತಕ್ಷಣ ಎಲ್ಲ ಸಹಪಾಠಿಗಳು ನನ್ನನ್ನು ಮುತ್ತಿಕೊಳ್ತಾ ಇದ್ರು. 'ಏನು ಕೇಳಿದ್ರು? ಏನು ಕೇಳಿದ್ರು?' ಅಂತ ನಾನು ಹೇಳಿದ ಮೇಲೆ ಅವ್ರಿಗೆಲ್ಲ ಒಂದು ಐಡಿಯಾ ಸಿಕ್ತಾ ಇತ್ತು. ಇನ್ನು ಕಾಲೇಜಲ್ಲಿ ನನ್ನ ಕ್ಲಾಸಲ್ಲಿ ನನ್ನ ಜೊತೆಗೆ ಇನ್ನೂ ಇಬ್ಬರು ಅರ್ಚನ ಇದ್ರು. ನಾನು ಇನಿಷಿಯಲ್ಸು ಏನೂ ಹಾಕ್ಕೊಂಡಿರಲಿಲ್ಲ. ಆದ್ರಿಂದ ಹಾಜರಿ ಕರಿಬೇಕಾದ್ರೆ ಒಬ್ಬರು ಮೇಡಮ್ ಕರೀತಾ ಇದ್ದಿದ್ದು ಹೀಗೆ. "ಪ್ಲೇನ್ ಅರ್ಚನ", ಅರ್ಚನ ಬಿ.ಎಂ., ಅರ್ಚನ ವೀರರಾಜು ಅಂತ. ಅಂತೂ ಉಳಿದಿಬ್ಬರಿಗಿಂತ ನಾನೇ ಮುಂದಿದ್ದರೂ ಪ್ಲೇನ್ ಅರ್ಚನ ಅಂತ ಕರೆಸಕೊಳ್ಳಬೇಕಾದ್ರೆ ಮುಜುಗರ ಆಗುತ್ತಿದ್ದುದು ಸುಳ್ಳಲ್ಲ. ಇರಲಿ ಬಿಡಿ. ಇನ್ನೆನಪ್ಪ ಪುರಾಣ ಅಂದ್ರೆ, ಕಾಲೇಜಿಗೆ ಬಂದ್ಮೇಲೆ ನನ್ನ ಗೆಳತಿಯರು ನನ್ನ ಚಂದದ ಹೆಸರನ್ನು ಮೊಟಕುಗೊಳಿಸುವ ಸಂಭ್ರಮದಲ್ಲಿ ಆರ್ಚಿ, ಅರ್ಚು, ಇನ್ನೂ ಕೆಲವರಂತೂ 'ಚನಾ' ಅಂತ ವಿರೂಪದ ಪರಾಕಾಷ್ಠೆಗೆ ಏರಿಸಿಬಿಟ್ಟಿದ್ದರು. ನಮ್ಮ ಜೀವಶಾಸ್ತ್ರದ ಮೇಡಮ್ ಅದ್ಯಾಕೋ ನನ್ನನ್ನು ಅರಾಕ್ನೆ ಅಂತ ಕರೀತಾ ಇದ್ರು. ನನಗೆ ಅರಾಕ್ನೆ ಕಥೆ ಗೊತ್ತಿದ್ರಿಂದ ಇನ್ನೂ ಮುಜುಗರ. ನಾನೇನೂ ಅವಳ ಹಾಗೆ ದುರಹಂಕಾರಿ ಆಗಿರಲಿಲ್ಲ. ಅದೂ ಇರಲಿ ಬಿಡಿ. ಕಾಲೇಜು ಮುಗಿಸಿ ಕೆಲಸದ ಸಲುವಾಗಿ ಬೆಂಗಳೂರಲ್ಲಿ ರೂಮ್ ಮಾಡ್ಕೊಂಡು ಇರಬೇಕಾದ್ರೆ ನನ್ನ ಮನೆಮಾಲಿಕರು ನಾಲ್ಕು ಜನ ಸಹೋದರಿಯರು. ಅವ್ರು 'ಅರ್ಚನ' ಅಂತ ಏನು ಅಷ್ಟುದ್ದ ಕರೀಬೇಕು ಅಂತ "ರಚ್ಚಿ" ಅಂತ ಮರುನಾಮಕರಣ ಮಾಡಿಯೇಬಿಟ್ರು. ಬೆಳಗಾದ್ರೆ ಸರಿ ರಚ್ಚಿ ನೀರು ಬಂತು, ರಚ್ಚಿ ಅದು, ರಚ್ಚಿ, ಇದು ಅಂತ ಒಳ್ಳೆ ರಚ್ಚೆ ಹಿಡಿಸಿಬಿಡೋರು. ನಂಗೆ ಆ ಹೆಸರು ಎಷ್ಟು ಅಭ್ಯಾಸವಾಗಿ ಹೋಗಿತ್ತು ಅಂದ್ರೆ ಮಂಗ್ಳೂರಿಗೆ ಹೋದಾಗ ಅರ್ಚನ ಅಂತ ಯಾರಾದ್ರೂ ಕರೆದ್ರೆ ಯಾರಪ್ಪ ಅಂತ ಎರಡ್ಸಲ ಯೋಚನೆ ಮಾಡಬೇಕಾಗಿತ್ತು. ಅಂತೂ ಆ ವೇಳೆನೂ ಕಳೀತು. ಆಮೇಲೆ ನಂಗೆ ಮದುವೆ ಆಯಿತು. ಯಾರ ಜೊತೆ ಅಂದ್ರೆ ದಿಲ್ಲಿ ಹುಡ್ಗನ ಜೊತೆ. ಅವರ ಬಳಗದಲ್ಲಿ ಹಿರಿ ಅಜ್ಜಿಯಂದಿರಿಗೆ ನನ್ನ ಹೆಸರು ಹೇಳಲು ನಾಲಗೆ ಹೊರಳದೆ ಅಲಕಾ, ಅಚಲಾ, ಅಚನಾ, ರಚನಾ ಇನ್ನೆನೋ ಆಗಿ ಹೋದೆ. ದಿನಕ್ಕೆ ಹಲವು ಬಾರಿ ಹೆಸರಿನಲ್ಲೇನಿದೆ? ಎಲ್ಲ ಮಾಯೆ! ಅಂತ ದಾರ್ಶನಿಕ ಭಾವದ ಮೊರೆ ಹೋಗುತ್ತಾ ಇದ್ದೆ. ಸಮಾಧಾನ ಪಟ್ಟುಕೊಳ್ತಾ ಇದ್ದೆ.

ಆ ಸಮಯ ಕೂಡ ಕಳೆದು ಹೋಯಿತು. ಓದೋದಕ್ಕೋಸ್ಕರ ನಾನು ಲಂಡನ್ನಿಗೆ ಬಂದೆ. ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡುವ ಅವಕಾಶವೂ ಸಿಕ್ಕಿತು. ನಾನು ನನ್ನ ಪ್ರೊಫೆಸರನ್ನು ಈ ಮೊದಲು ಭೇಟಿಯಾಗಿರಲಿಲ್ಲ. ಬರೇ ಈ ಮೇಲ್ ಮುಖಾಂತರವಷ್ಟೆ ಮಾತುಕತೆ. ಮೊದಲ ಬಾರಿ ಭೇಟಿಯಾದಾಗ ಅವರಂದಿದ್ದು "ವೆಲ್ ಕಮ್ ಟು ಯು.ಕೆ. ಅರ್ಚಾನಾ" ಅಂತ. ಅದೂ ಎಷ್ಟು ಒತ್ತಿ ಹೇಳಿದ್ರು 'ಅರ್ಚಾನಾ' ಅಂತ ಪಾಪ ತುಂಬಾ ಕಷ್ಟ ಪಟ್ಟಿರಬೇಕು. ಅಭ್ಯಾಸನೂ ಮಾಡಿರಬೇಕು. ಮೊದಲ ಸಲ ಭೇಟಿ ಆಗ್ತಿರೋದ್ರಿಂದ ನಂಗೂ ಸರಿಪಡಿಸಲು ಸಂಕೋಚ. ಮುಂದೆ ನೋಡೋಣ ಅಂತ ಸುಮ್ಮನಾದೆ. ನನ್ನನ್ನು ಅವರ ತಂಡಕ್ಕೆ ಹಾಗೆ ಪರಿಚಯ ಮಾಡಿಕೊಟ್ಟ ಕಾರಣ ಎಲ್ಲರ ಬಾಯಲ್ಲಿ "ಅರ್ಚಾನಾ" ನಲಿದಾಡಿತು. ನನ್ನ ಹುಡ್ಗನೂ ನನ್ನನ್ನು ರೇಗಿಸ್ಲಿಕ್ಕೆ 'ಅರ್ಚಾನಾ' ಅಂತ ಶುರು ಮಾಡಿದ. ಸ್ವಲ್ಪ ಹಳಬಳಾದಮೇಲೆ ಒಂದಿನ ಎಲ್ಲರ ಜತೆ ಕಾಫಿ ಕುಡಿತಾ ಇರಬೇಕಾದ್ರೆ 'ಹೆಸರು ಮತ್ತದರ ಸರಿಯಾದ ಉಚ್ಚಾರಣೆ' ಬಗ್ಗೆ ಮಾತು ಬಂತು. ನಾನು ಮೆಲ್ಲನೆ ಅಂದೆ. "ನನ್ನ ಹೆಸರು ಅರ್ಚನ ಅಂತ ಅರ್ಚಾನಾ ಅಲ್ಲ". ಎಲ್ಲರೂ ಪೈಪೋಟಿಗೆ ಬಿದ್ದು ಆ ಪೂರ್ತಿ ದಿನ ನನ್ನನ್ನು ಪುನಃ ಕೇಳಿ ಕೇಳಿ, ಅವರು ಪುನಃ ಹೇಳಿ ಹೇಳಿ, ಅಂತೂ ಮರುದಿನದ ಹೊತ್ತಿಗೆ ನಾನು ಹಳೆಯ 'ಅರ್ಚನ'ಳಾದೆ. ಪುನಃ (ಕರ್ಣ)ಪ್ರಿಯವೆನಿಸಿತು ನನಗೆ ನನ್ನ ಚಂದದ ಹೆಸರು!

ಆದ್ರೂ ಕೆಲವು ಸಲ ಆಭಾಸ ತಪ್ಪಿದ್ದಲ್ಲ. ಒಂದ್ಸಲ ನಾನು ಪ್ರೆಸಂಟೇಶನ್ ಕೊಡೋ ಮುಂಚೆ ನನ್ನನ್ನು ಸಭೆಗೆ ಪರಿಚಯಿಸಿದ ಮಹಾಶಯ ಅಂದಿದ್ದು "ಆರ್ಖಾನಾ" ಅಂತ. ಬೆಚ್ಚಿಬಿದ್ದೆ ನಾನು! ಇದಕ್ಕೆ ಮಂಚೆ ಯಾರೂ ಹೀಗಂದಿರಲಿಲ್ಲ. ಕರ್ಣಕಠೋರ! ಮಾತು ಶುರು ಮಾಡೋ ಮುಂಚೆ ಸ್ವ ಪರಿಚಯ ಮಾಡಿಕೊಳ್ಳಬೇಕಾಯಿತು. ಇನ್ನೂ ಕೆಲವರಿಂದ ಆರ್ಖಾನಾ ಅಂತ ಕರೆಸಿಕೊಂಡಮೇಲೆ ಅದ್ಯಾಕೋ ಕುತೂಹಲ ಶುರು ಅಯಿತು. ಅದ್ಯಾಕೆ ಇವರು archನ್ನು ಆರ್ಖ್ ಅಂತಾರೆ ಆರ್ಚ್ ಯಾಕನ್ನಲ್ಲ ಆಂತ! ಕೆಟ್ಟ ಕುತೂಹಲ ನೋಡಿ! ಶಬ್ದಕೋಶದಲ್ಲಿ ನೋಡಿದಾಗ ಆರ್ಕಿಮೀಡೀಸ್ (archimedes), ಆರ್ಕಿಟೆಕ್ಚರ್ (architecture) ಇನ್ನೂ ಹಲವು ಶಬ್ದಗಳು ಸಿಕ್ಕಿದವು. ಭಾರತೀಯರ ಮುಖಗಳನ್ನು ನೋಡಿದಾಗ 'ಅಬ್ಬ ಇವರಾದ್ರು ಸರಿಯಾಗಿ ಕರೀಬಹುದು' ಅಂತ ಅಂದುಕೊಂಡರೆ ಅವರು ಬಿಳಿಯರ ತಲೆ ಮೇಲೆ ಹೊಡೆದ ಹಾಗೆ 'ಆರ್ಖಾನಾ' ಅಂತ ಮುತ್ತಿನ ಮಣಿ ಉದುರಿಸಿಬಿಟ್ಟಿರುತ್ತಾರೆ. ಅದರ ಮೇಲೆ ಇನ್ನೊಂದು ಬಿರುದು 'ವಿಚಿತ್ರ ಹೆಸರು' (strange name) ಅಂತ. ಏನು ವಿಚಿತ್ರಾನೋ ಆ ಭಗವಂತನಿಗೇ ಗೊತ್ತು.

ಸದ್ಯಕ್ಕಂತೂ ಇಷ್ಟೆ ನಾಮಗಳು ನನಗೆ. ಆದ್ದರಿಂದ ನನ್ನ ಅರ್ಚನ ಪುರಾಣವನ್ನು ಇಲ್ಲಿಗೆ ಸಮಾಪ್ತಗೊಳಿಸುತ್ತೇನೆ. ಈ ಪುರಾಣ ಪಠಣವನ್ನು ಮಾಡಿದವರಿಗೆಲ್ಲ ಶುಭವಾಗಲಿ. ಹೇಗನ್ನಿಸಿತು ಅನ್ನೋದನ್ನು ಹೇಳಲು ಮರೆಯದಿರಿ!

Rating
No votes yet

Comments