ನಂದಿಬೆಟ್ಟಕ್ಕೆ ಸೈಕಲ್ ಸವಾರಿ :: ನೆನಪುಗಳು-೧: ಮೊದಲ ಸೈಕಲ್

ನಂದಿಬೆಟ್ಟಕ್ಕೆ ಸೈಕಲ್ ಸವಾರಿ :: ನೆನಪುಗಳು-೧: ಮೊದಲ ಸೈಕಲ್

           ಹೋದ ಶನಿವಾರ, ರಾತ್ರಿ ಮಲಗುವ ಮುನ್ನ "ನಾನು ರೆಡಿ" ಎಂದು ಗೆಳೆಯ ದಿವುನಿಗೆ (ದಿವಾಕರ) ಫೋನಿನಲ್ಲಿ ಹೇಳಿದ್ದೆ. ನಾಲ್ಕು ದಿನ ಮೊದಲೇ, ಈ ಭಾನುವಾರ ನಂದಿ ಬೆಟ್ಟಕ್ಕೆ ಸೈಕಲ್ ನಲ್ಲಿ ಹೋಗೋಣವೆಂದು ದಿವು ಹೇಳಿದ್ದ. ಬೆಳಗ್ಗೆ ಆರು ಗಂಟೆ ಅಶ್ಟೊತ್ತಿಗೆ ಹೆಬ್ಬಾಳದಲ್ಲಿ ಎಲ್ಲರೂ ಸಿಗುವುದೆಂದು ಮಾತಾಗಿತ್ತು. ಬೆಳಗ್ಗೆ ಐದು ಕಾಲಿಗೆ ಎಚ್ಚರಗೊಂಡವನಿಗೆ, "ಇದು ನನ್ನಿಂದ ಆಗುವುದೇ ?" ಎಂಬ ಪ್ರಶ್ನೆ ಕಾಡತೊಡಗಿತು.  ಹಾಗೇ ಸ್ವಲ್ಪ ಹೊತ್ತು ಕೂತು, "ಚಿಂತನೆ" ನಡೆಸಿ, 'ನೋಡಿಯೇ ಬಿಡೋಣ' ಎಂದು ತಯಾರಾಗತೊಡಗಿದೆ.
 
           ಕೆಳಗೆ ಬಂದು, ಸೈಕಲ್ ಅನ್ನು ಗೇಟಿನ ಹೊರಗೆಳೆದು ಹತ್ತಿ, ಕಸ್ತೂರಿ ನಗರ ದಾಟುವಾಗ, ಆರು ಗಂಟೆಯಾಗಿತ್ತು. ಚುಮು-ಚುಮು ಚಳಿ, ಮೊದಲು ಕಿರಿ-ಕಿರಿ ಅನಿಸಿ, ಸ್ವಲ್ಪ ಹೊತ್ತಿಗೆ ಬೆಚ್ಚಗಾಗಿ, ಬೆವರೊಡಯತೊಡಗಿದಾಗ, ಹಾಯೆನಿಸಿತು. ಬಾಣಸವಾಡಿ ಮೈನ್ ರೋಡ್ ನಿಂದ, ಔಟರ್ ರಿಂಗ್ ರೋಡ್ ಸೇರಿ, ಕಲ್ಯಾಣ ನಗರ, ಹೆಣ್ಣೂರು ಕ್ರಾಸ್, ಮಾನ್ಯತಾ ಟೆಕ್ ಪಾರ್ಕ್, ಲುಂಬಿನಿ ಗಾರ್ಡನ್ (ನಾಗವಾರ ಕೆರೆ) ದಾಟಿ, ಆರೂವರೆ ಸುಮಾರಿಗೆ ಹೆಬ್ಬಾಳ ತಲುಪಿದಾಗ, ದಿವು, ಕೌಶಿ (ಕೌಶಿಕ) ಮತ್ತು ವಿಶಿ (ವಿಶ್ವನಾಥ) ಬಂದು ಆಗಲೇ ಹದಿನೈದು ನಿಮಿಶವಾಗಿತ್ತು. ನಾನು ಬರುವಶ್ಟರಲ್ಲೇ, ಹೆಬ್ಬಾಳ ಫ್ಲೈ-ಓವರ್ ಮೇಲೆ, ಒಂದು ಸುತ್ತು ಫೋಟೋ ಸೆಶನ್ ಮುಗಿಸಿದ್ದರು. ಮೂವರಲ್ಲಿದ್ದ ಉತ್ಸಾಹ ನೋಡಿ, ನನ್ನಲ್ಲಿದ್ದ ಆತಂಕ ಮಾಯವಾಯಿತು. ಮೂವರು ಸೈಕ್ಲಿಂಗ್ ನಲ್ಲಿ ನನಗಿಂತಲೂ ಸಿನಿಯರ್-ಗಳು. ಅದರಲ್ಲಿ ದಿವುನದು ಒಂದು ವರ್ಶದ ನಿರಂತರ ಸೈಕ್ಲಿಂಗ್. ನನ್ನದು ಮೂರುವರೆ ತಿಂಗಳುಗಳು ಹೆಮ್ಮರವಾಗುವಾಸೆಯ ಚಿಗುರಿನ ಅನುಭವ.
 
          ಮೋಡಗಟ್ಟಿದ್ದ ಆಕಾಶ, ಇನ್ನಿವತ್ತು ಬಿಸಿಲು ಬರುವುದಿಲ್ಲ ಅನ್ನುವಂತಿದ್ದ ಭಾನುವಾರ ಬೆಳಗಿನ, ಆರೂವರೆ ಗಂಟೆಯ ಚಳಿ-ಚಳಿ ಅನ್ನಿಸುವಂತಹ ವಾತಾವರಣ, ಸೈಕ್ಲಿಂಗ್ ಗೆ ಹೇಳಿ ಮಾಡಿಸಿದ ಹಾಗಿತ್ತು. ಅಲ್ಲಿಂದ ಶುರುವಾಯಿತು ನಾಲ್ವರ ಸೈಕಲ್ ಪ್ರಯಾಣ, ನಂದಿಬೆಟ್ಟಕ್ಕೆ.
    
          ನಾನು ಮತ್ತು ಕೌಶಿ, ಕೊಡಿಗೇಹಳ್ಳಿ ಸಿಗ್ನಲ್ ಮುಟ್ಟುವಶ್ಟರಲ್ಲೇ, ಸಾಲ ವಸೂಲಿದಾರರು ಬೆನ್ನಿಗೆ ಬಿದ್ದವರಂತೆ ತುಳಿಯುತ್ತಿದ್ದ ದಿವು ಮತ್ತು ವಿಶಿ, ಕಣ್ಣಿಗೆ ಕಾಣದಶ್ಟು ಮುಂದಿದ್ದರು. ಅದಾಗಿ ಬ್ಯಾಟರಾಯನಪುರ ದಾಟಿ, ಜಿ.ಕೆ.ವಿ.ಕೆ ಮುಟ್ಟುವಶ್ಟರಲ್ಲೇ ಕೌಶಿಗೆ, ಅವರಿಬ್ಬರೂ ತನ್ನಲ್ಲಿ ಏನೋ ಬಾಕಿ ಉಳಿಸಿ ಓಡುತ್ತಿದ್ದಾರೆ ಎಂಬ ಅನುಮಾನ ಕಾಡಿತೋ ಏನೋ, ಅವರಿಬ್ಬರನ್ನೂ ಬೆನ್ನಟ್ಟತೊಡಗಿದ. ಕೊನೆಯಲ್ಲಿ ಉಳಿದ ನಾನು, ಕೊಂಚ ಮಟ್ಟಿನ ಸಾಲಗಾರನಾಗಿದ್ದರೂ, ಯಾರ ಬೆದರಿಕೆ ಇಲ್ಲದೇ, ನನ್ನ ಲಹರಿಯಲ್ಲಿಯೇ ತುಳಿಯತೊಡಗಿದೆ.
 
          ಅದೇ ಚಿರ-ಪರಿಚಿತ ಏರ್-ಪೋರ್ಟ್ ರೋಡಿನಲ್ಲಿ, ಸುಮ್ಮನೆ ಕೆಲ ನೆನಪುಗಳು ಸುರುಳಿ ಬಿಚ್ಚತೊಡಗಿದವು. ಬಹಳಶ್ಟು ಜನರಂತೆ, ನನಗೂ ಬಾಲ್ಯದಲ್ಲಿ ಮೂರು-ಗಾಲಿಯ ಸೈಕಲ್ ಸವಾರಿ ಮಾಡಿರುವ ಅಲ್ಪ-ಸ್ವಲ್ಪ ನೆನಪಿದೆ. ನನ್ನ ಬಾಲ್ಯದ, ಮೂರು ಗಾಲಿಯ ಸೈಕಲ್ ಅನ್ನು ನಾ "Harley Davidson" (ದೊಡ್ಡ 'U' ಆಕಾರದ, ಉದ್ದನೆ ಹ್ಯಾಂಡಲ್ ಇದ್ದುದ್ದಕ್ಕೆ, ನಾ ಇಟ್ಟ ಹೆಸರು) ಸೈಕಲ್ ಅಂತಲೇ ನೆನಪಿಟ್ಟುಕೊಂಡಿದ್ದೇನೆ. ನಾನು ಸುಮಾರು ಎರಡು ವರ್ಶದವನಾಗಿದ್ದಾಗ ತೆಗೆದ ಬ್ಲ್ಯಾಕ್-ಎಂಡ್-ವ್ಹೈಟ್ ಫೋಟೋವಿನಲ್ಲಿ ನಾನು ನನ್ನ ಮೂರು ಗಾಲಿಯ ಸೈಕಲ್ ಮೇಲೆ ಕೂತು, ನನ್ನ ಉದ್ದನೆಯ ಕೇಶ-ರಾಶಿಯನ್ನು ಹರಡಿಕೊಂಡು, ಒಂದು ಮುಗ್ಧ ನಗೆಯ ಫೋಸು ಕೊಟ್ಟಿದ್ದೇನೆ. ನನ್ನ ಅಮ್ಮ, ತನ್ನ ಮೊಮ್ಮಕ್ಕಳ (ಅಕ್ಕನವರ ಮಕ್ಕಳು) ಫೋಟೋಗಳ ಪಕ್ಕದಲ್ಲಿ, ನನ್ನ ಆ ಫೋಟೋವನ್ನು ಶೋ-ಕೇಸಿನಲ್ಲಿ ಇಟ್ಟಿದ್ದಾರೆ. ಮನೆಗೆ ಹೊಸಬರು ಬಂದಾಗಲೆಲ್ಲ, ಈ ಫೋಟೋಗಳನ್ನ ತೋರಿಸಿ, "ಇವ್ರು ನನ್ನ ಮೊಮ್ಮಕ್ಕಳು, ಇವ ನನ್ನ ಮಗಾ ರೀ", ಅಂತ ಹೇಳಿ, "ಸಣ್ಣನಿದ್ದಾಗ್ರೀ.." ಅಂತ ಜೋಡಿಸಿ ಹೇಳುವುದು ನನ್ನಮ್ಮನ ವಾಡಿಕೆ.
 
            ಹಾಗೆಯೇ, ನಾನು ಆರನೆಯೇ ಕ್ಲಾಸಿನಲ್ಲಿದ್ದಾಗ, ಆ ವಯಸ್ಸಿನ ಬಹಳಶ್ಟು ಹುಡುಗರಿಗೆ(ಆ ಕಾಲದಲ್ಲಿ) ಬರುವ ಬಯಕೆಯಂತೆ, ಸೈಕಲ್ ಹೊಡೆಯುವ ಹುಚ್ಚು ಬಂದಿತ್ತು. ಅದಕ್ಕಾಗಿ ನಾನು ಮನೆಯಲ್ಲಿ ಸಾಕಶ್ಟು, ಅಳು-ಜಗಳಗಳ ಅಪ್ಲಿಕೇಶನ್ನುಗಳನ್ನು ಹಾಕಿದ್ದೆ. ಇವ್ಯಾವೂ ವರ್ಕ್-ಓಟ್ ಆಗುವುದಿಲ್ಲ ಅನ್ನಿಸಿ, ಅನಿರ್ದಿಶ್ಟ ಉಪವಾಸ ಹೂಡಿ, ಸಮಾ ಏಟುಗಳನ್ನು ತಿಂದಿದ್ದೆ. ನನ್ನ ಬಯಕೆ ತಡೆಯಲಾಗದೆ, ಪಾಕೆಟ್-ಮನಿ ಯನ್ನು ಉಳಿಸಿ, ಬಾಡಿಗೆ-ಸೈಕಲ್ ಓಡಿಸಿದ್ದೆ. ದೊಡ್ಡ ಆಟ್ಲಾಸ್ ಸೈಕಲ್ಲುಗಳನ್ನು "ಒಳಗಾಲು" ಹಾಕಿ ಓಡಿಸುವುದನ್ನು ರೂಢಿ ಮಾಡಿಕೊಂಡಿದ್ದೆ. ನಾನು ಚೆನ್ನಾಗಿ ಓದುತ್ತಿದ್ದನೆಂದೋ, ನಮ್ಮಪ್ಪಂಗೆ ಪ್ರಮೋಶನ್ ಸಿಕ್ಕಿತೆಂದೋ ಅಥವಾ ನನ್ನ ಬಯಕೆಯ ತೀವ್ರತೆ ಮಿತಿ-ಮೀರಿಯೋ, ಯಾವುದಕ್ಕೋ ನೆನಪಿಲ್ಲ, ಒಟ್ಟಿನಲ್ಲಿ ನನಗೆ ಸೈಕಲ್ ಯೋಗ ಒದಗಿ ಬಂತು.
 
              ದಪ್ಪ ಟಯರಿನ, ದಪ್ಪ ಫ್ರೇಮಿನ, ಆ ಸೈಕಲ್, ನನ್ನ ಕುಳ್ಳ-ಡುಮ್ಮ ಆಕೃತಿಗೆ, ಗಟಿ-ಮುಟ್ಟಾಗಿ ಹೇಳಿಮಾಡಿಸಿದಂತ್ತಿತ್ತು. ಮೊದ-ಮೊದಲು ನನ್ನ ಸೈಕಲ್ ಮೇಲೆ ಅಭಿಮಾನ ಇದ್ದದ್ದು, ಬರು-ಬರುತ್ತಾ, ಇದರಲ್ಲೇನೋ ಕಡಿಮೆಯಾಗಿದೆ ಅನಿಸತೊಡಗಿತು. ನನ್ನ ಕೆಲ ಕ್ಲಾಸ್-ಮೇಟುಗಳ ಸೈಕಲ್ ಗಳ ಹ್ಯಾಂಡಲುಗಳ ಎರಡೂ ತುದಿಗಳಿಗೆ "ಕೊಂಬು"ಗಳಿದ್ದವು. ಏರಿನಲ್ಲಿ ಅವುಗಳನ್ನ ಹಿಡಿದು ಜಗ್ಗಿ-ಜಗ್ಗಿ, ಎದ್ದೆದ್ದು ತುಳಿಯುತ್ತಿದ್ದರು. ಇನ್ನು ಕೆಲ ದೋಸ್ತರ ಸೈಕಲ್ ಗಳ ಮುಂದಿನ ಗಾಲಿಗಳಿಗೆ "ಶಾಕ್ ಅಬ್ಸಾರ್ಬರ್" ಗಳಿರುತ್ತಿದ್ದವು. ಹಂಪು ಬಂದಾಗಲೋ, ತಗ್ಗು ಬಂದಾಗಲೋ ಹ್ಯಾಂಡಲ್ಲಿನ ಮುಖಾಂತರ ಅವುಗಳ ಮೇಲೆ ಭಾರ ಹಾಕಿ, ತಮಗೆ ಧಡಕಿ ಆಗುವುದೇ ಇಲ್ಲ, ಎಂದು ’ಡೇಮೋ’ ಮಾಡುತ್ತಿದ್ದರು. ಬ್ರೇಕುಗಳ ಮುಖಾಂತರ "ಕಯ್ಯಂಯ್ಯೋಂ" ಎಂಬ ಸದ್ದನ್ನು ಹೊರಡಿಸುತ್ತಿದ್ದರು. ಸ್ಕೂಲಿನಲ್ಲಿ ನನ್ನ ಸೀನಿಯರ್ ಒಬ್ಬ ಎರಡೂ ಗಾಲಿಗಳಿಗೆ "ಶಾಕ್ ಅಬ್ಸಾರ್ಬರ್" ಇರುವ ಸೈಕಲ್ ತರುತ್ತಿದ್ದ. ಅಂತಹ ಸೈಕಲ್ ಕೊಡಿಸಿಕೊಳ್ಳಲೇಬೇಕೆಂದು ನನ್ನ ಆಸೆ ಬಹುದಿನಗಳವರೆಗಿತ್ತು. ಒಮ್ಮೆ ದೊಡ್ಡ ರಿಪೇರಿಯ ನೆಪ ಹೇಳಿ ನನ್ನ ಸೈಕಲ್ಲಿಗೆ "ಕೊಂಬು" ಹಾಕಿಸಿಕೊಂಡಾಗ, ಅಪ್ಪನ ಕೆಂಗಣ್ಣಿಗೆ ಗುರಿಯಾಗಿದ್ದು ಇದೆ.
                          
              ನಾನು ಹತ್ತನೆಯ ಕ್ಲಾಸಿನಲ್ಲಿದ್ದಾಗ, ಮನೆಯಲ್ಲಿಯೇ ಇದ್ದ ಕೆಲ ಸ್ಕ್ರೂ-ಡ್ರೈವರ್, ಸ್ಪ್ಯಾನರ್, ಪಕ್ಕಡು ಗಳಿಂದ ನನ್ನ ಸೈಕಲ್ಲನ್ನು ಬಿಚ್ಚಿ-ಜೋಡಿಸುವ ಹವ್ಯಾಸ ಶುರುವಿಟ್ಟುಕೊಂಡೆ. ಬೆಲ್, ಲಾಕು, ಬ್ರೇಕುಗಳಿಂದ  ಶುರುವಾಗಿ ಮುಂದಿನ ಗಾಲಿ, ಹಿಂದಿನ ಗಾಲಿ, ಚೈನು ಗಾಲಿಗಳ ತನಕ ಮುಂದುವರಿಯಿತು. ಮೊದ-ಮೊದಲು ಇದಕ್ಕೆ ಮನೆಯಲ್ಲಿ ಭಾರೀ ಅಕ್ಷೇಪಣೆಯಿತ್ತು. ನನ್ನ ಬಿಚ್ಚಿ-ಜೋಡಿಸುವ ಸಾಮರ್ಥ್ಯ ಅರಿತೋ ಅಥವಾ ಮಗ ಏನಾಗದಿದ್ದರೂ, ಮೆಕ್ಯಾನಿಕ್ ಅಂತೂ ಆಗಿಯೇ ಆಗುತ್ತಾನೆಂಬ ಕಾನ್ಫಿಡೆನ್ಸ್ ನಿಂದಲೋ ಸುಮ್ಮನಾದರು. ಒಂದು ದಿನ ಹೀಗೆ ನನ್ನ ಮೂಡು ಬಂದು, ನನ್ನ ಸೈಕಲ್ಲನ್ನು ಕೊನೆಯ ನಟ್ಟು ಬೋಲ್ಟಿನ ತನಕ (ಗಾಲಿಗಳಲ್ಲಿರುವ ಬಾಲ್-ಬೇರಿಂಗ್ ಸಹಿತ) ಬಿಚ್ಚಿಟ್ಟಿದ್ದನ್ನು ನೋಡಿದ, ನಮ್ಮ ಮರಾಠಿ ಓನರ್, "ಅತ ಮೇಸ್ತ್ರಿ ಬುಲಾಯಚ್-ಪಾಹೀಜೆ" ಅಂದಿದ್ದರು. ನಾನದನ್ನು ಮರು-ಜೋಡಿಸಿದ್ದನ್ನು ನೋಡಿ ಭಾರಿ ಆಶ್ಚರ್ಯದ ಜೊತೆಗೆ ಖುಶಿಯಾಗಿತ್ತವರಿಗೆ.
 
            ಕಾಲೇಜಿಗೆ ಸೇರಿದಾಗಲೇ, ನನಗೆ "ಗೇರ್" ಇರುವ ಸೈಕಲ್ ಗಳ ಕಡೆಗೆ ಅಸಕ್ತಿ ಮೂಡಿತ್ತು. ಅಲ್ಲದೇ ನನ್ನ ಕಾಲೇಜು, ಮನೆಯಿಂದ ೬ ಕಿ.ಮಿ ದೂರ ಇದ್ದುದ್ದರಿಂದ, ನನಗೆ ಈಗಿರುವ ಸೈಕಲ್ ಹಳೆಯದಾಗಿದೆಯೆನಿಸಿತು. ಆದರೆ ಮನೆಯಲ್ಲಿ ಮತ್ತೊಂದು ಸೈಕಲ್ ಕೇಳುವ ಧೈರ್ಯ ಇರಲಿಲ್ಲ. ಒಮ್ಮೆ ಹೀಗೆ ಕಾಲೇಜ್ ಮುಗಿಸಿ ಬಂದು ಕೌಂಪೌಂಡ್ ನಲ್ಲಿ ಸೈಕಲ್ ನಿಲ್ಲಿಸಿದವನು, ಲಾಕ್ ಮಾಡುವುದನ್ನು ಮರೆತೆ. ಅಶ್ಟೇ!! ನನ್ನ ನಾಲ್ಕು ವರ್ಶದ ಸಂಗಾತಿಯನ್ನು ಮತ್ತಿನ್ನೆಂದು ನೋಡಲಿಲ್ಲ. ಅಪ್ಪನಿಂದ ಇನ್ನೊಂದು ಸೈಕಲಿನ ಭರವಸೆ ದೊರೆಯಿತು. ನಾನು ಆಗಲೇ ಗೇರ್ ಸೈಕಲ್ಲಿಗೆ ಹೊಂಚುಹಾಕುತ್ತಿದ್ದೆ.


ಮುಂದುವರೆಸುತ್ತೇನೆ.....

Rating
No votes yet

Comments