ಚಂದನದ ಕಂಪ ಹೀರುತ್ತಾ ...

ಚಂದನದ ಕಂಪ ಹೀರುತ್ತಾ ...

ಚಂದನದ ಕಂಪ ಹೀರುತ್ತಾ,,.
ನಮಸ್ಕಾರ ಸಂಪದದ ಎಲ್ಲಾ ಸಂಪದಿಗರಿಗೆ (ಹಳಬರಿಗೆ .. ಹೊಸಬರಿಗೆ.. ಎಲ್ಲರಿಗೂ) ಹೇಗಿದ್ದೀರಿ ?  6 ತಿಂಗಳ ನಂತರ ಮತ್ತೆ ಸಂಪದದಲ್ಲಿ ಬರೆಯುವ ಅವಕಾಶ ಸಿಕ್ಕಿದೆ. ಕಾರಣಾಂತರಗಳಿಂದ ಬರಹ ಸ್ವಲ್ಪ ಮಟ್ಟಿಗೆ ಕುಂಟಿತವಾಗಿತ್ತು. ಅದರ ಜೊತೆಗೆ ನಾನಿಲ್ಲ ಅಂತ ಸಂಪದ ಕೂಡ ಕೈಕೊಟ್ಟಿತ್ತು ! ಹ್ಹ ಹ್ಹ... ಇರಲಿ... ವಿಷಯಕ್ಕೆ ಬರ್ತೀನಿ.. ಕೆಲವು ತಿಂಗಳ ಹಿಂದೆ ದೂರದರ್ಶನದ " ಥಟ್ ಅಂತ ಹೇಳಿ " ಕಾರ್ಯಕ್ರಮದಲ್ಲಿ ಭಾಗವಹಿಸಲಿಕ್ಕೆ ಬೆಂಗಳೂರಿಗೆ ಬಂದಿದ್ದೆ. ಅದೊಂದು ಅವಿಸ್ಮರಣೀಯ ಅನುಭವ. ಚಂದನದ ಕಂಪನ್ನು ಆಸ್ವಾದಿಸಲಿಕ್ಕೆ ಒಳಗೆ ಕಾಲಿಟ್ಟ ಕೂಡಲೇ..ನಮ್ಮ ಸಂಚಾರಿ ದೂರವಾಣಿಗಳನ್ನು ತೆಗೆದಿಟ್ಟುಕೊಂಡರು. ನಿಮಗೇ ಗೊತ್ತಲ್ಲಾ .. ಮೊಬೈಲ್ ಇಲ್ಲದೆ ಇದ್ದರೆ ನಮ್ಮ ಮತ್ತು ಹೊರಜಗತ್ತಿನ ನಡುವಿನ ಕೊಂಡಿ ಕಳಚಿದ ಹಾಗೆ. ಸರಿ.. ಏನಾದರಿರಲಿ.. ಭಾಗವಹಿಸಲಿಕ್ಕೆ ಅತ್ಯಂತ ಉತ್ಸುಕಳಾಗಿ ಬಂದಿದ್ದ ನನಗೆ ಅದೇನೂ ಅನ್ನಿಸಲಿಲ್ಲ. ಬೆಳಗ್ಗೆ ೯ ಗಂಟೆಗೆ ದೂರದರ್ಶನದ ಕಛೇರಿಯ ಒಳಗಿದ್ದೆವು. ಅಲ್ಲಿನ ಸಂದರ್ಶಕರ ಕೊಠಡಿಯಲ್ಲಿ ನಮ್ಮನ್ನು ಕೂರಿಸಲಾಯಿತು. ( ನಾನು ಮತ್ತು ನನ್ನ ಪತಿ ಲೋಕೇಶ್) ಕಾರ್ಯಕ್ರಮದ ನಿರ್ಮಾಪಕರಾದ ರಘು ಅವರನ್ನು ನೋಡಬೇಕೆಂದು ಮೊದಲೇ ತಿಳಿಸಿದ್ದರಿಂದ ಅವರಿಗಾಗಿ ಕಾದು ಕುಳಿತೆವು. ಒಬ್ಬೊಬ್ಬರಾಗಿ ಸಹಸ್ಪರ್ಧಿಗಳು ಬರುತ್ತಿದ್ದರು. ಸ್ಪರ್ಧೆಯ ಸಮಯ ಹತ್ತಿರವಾಗುತ್ತಿದ್ದಂತೆ ಒಂದು ರೀತಿಯ ದಿಗಿಲು ಶುರುವಾಯ್ತು. ಸರಿಯಾಗಿ ೧೦.೪೫ ಕ್ಕೆ ಸ್ಪರ್ಧೆಯ ಸೂತ್ರದಾರರಾದ ಶ್ರೀ ನಾಸೋ( ನಾ.ಸೋಮೇಶ್ವರ) ಅವರ ಆಗಮನವಾಯ್ತು. ಅವರನ್ನು ಟೀವಿಯಲ್ಲಷ್ಟೇ ನೋಡಿದ್ದರಿಂದ ”ಥಟ್” ಅಂತ ಗುರುತು ಹತ್ತಲಿಲ್ಲ. ಹ್ಹ ..ಹ್ಹ.. ಮೊದಲಿಗೇ ಸೋಲು.. ಬಹಳ ಶಿಸ್ತಿನ ಮನುಷ್ಯ ಕಣ್ರೀ.. ಬಂದವರೇ ಮೊದಲಿಗೆ ತಮ್ಮ ಮೇಕಪ್ಪಿಗೆ ಕುಳಿತುಬಿಟ್ಟರು. ( ಬಹುಶಃ ಸಮಯ ಮೀರುತ್ತಿತ್ತು.. ನಮಗಿಂತ ಮೊದಲು ಕೂಡಾ ಒಂದು ತಂಡ ಸ್ಪರ್ಧೆಗೆ ಸಿದ್ಧವಾಗಿತ್ತು). ನಂತರವಷ್ಟೇ ನನ್ನ ಪರಿಚಯ ಮಾಡಿಕೊಂಡೆ.. ಅಲ್ಲಿಯೇ ಇದ್ದ ಕ್ಯಾಂಟೀನಿನ ಕಾಫಿಯೊಂದಿಗೆ ಅವರೊಂದಿಗೆ ಮಾತನಾಡುವ ಇನ್ನಷ್ಟು ಕ್ಷಣಗಳು ಜೊತೆಯಾದವು. ನಂತರ ಸ್ಪರ್ಧೆ ಶುರುವಾಯ್ತು. ಮೊದಲ ತಂಡದ ಸ್ಪರ್ಧೆಗೆ ಕೂತಲ್ಲೇ ಉತ್ತರ ಹೇಳುತ್ತಿದ್ದ ನನಗೆ ನನ್ನ ಸರದಿ ಬಂದಾಗಲೇ ತಿಳಿದಿದ್ದು ಆ ಕುರ್ಚಿಯ ಮೇಲೆ ಕುಳಿತಾಗ ಆಗುವ ಟೆನ್ಷನ್ ಎಂಥದ್ದು ಅನ್ನೋದು. ಪಕ್ಕದಲ್ಲಿದ್ದವರು ಬಝರ್ ಒತ್ತಿ ಬಿಟ್ಟರೆ ಅನ್ನುವ ಆತುರದಲ್ಲಿ ಗೊತ್ತಿಲ್ಲದ ಪ್ರಶ್ನೆಯೊಂದಕ್ಕೆ ಊಹೆ ಮಾಡಲು ಹೋಗಿ ಒಂದು ಪುಸ್ತಕ ಕಳೆದುಕೊಂಡೆ. ಅಂತೂ ಕ್ಷಣ ಕ್ಷಣದ ಕುತೂಹಲ .. ಟೆನ್ಷನ್ ಗಳ ನಡುವೆ ಸ್ಪರ್ಧೆ ಮುಗಿತ್ತು. ಒಟ್ಟು 5 ಪ್ರಶ್ನೆಗಳಿಗೆ ಉತ್ತರಿಸಿ 4 ಪುಸ್ತಕ ತೆಗೆದುಕೊಂಡೆ. ನಿಜಕ್ಕೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಬಹಳೇ ಖುಷಿಯಾಯ್ತು. ನಾಸೋ ಅವರ ಭೇಟಿಯಂತೂ ಮುದ ನೀಡಿತು. ಅವರಿಗೆ ಅವರೇ ಸಾಟಿ ಕಣ್ರೀ ... ಇಡೀ ಸ್ಪರ್ಧೆಯ ಕೇಂದ್ರ ಬಿಂದು ಅವರೇ. ಕಂಚಿನ ಕಂಠ... ಸ್ಫುಟವಾದ ಉಚ್ಛಾರಣೆ.. ಭಾಷೆಯ ಬಗೆಗಿನ ಹಿಡಿತ.. ವಿಷಯದ ಬಗೆಗಿನ ಆಳವಾದ ಅಧ್ಯಯನ.. ಸಂಧರ್ಭಕ್ಕೆ ತಕ್ಕ ಹಾಗೆ ಸಮಯದ ಉಪಯೋಗ ಪಡೆಯುವ ಛಾತಿ.. ನಿಜಕ್ಕೂ ಖುಷಿಯಾಯ್ತು. ಅವರ ಸಾರಥ್ಯವಿರುವುದರಿಂದಲೇ ಏನೋ ಕಾರ್ಯಕ್ರಮ ಇಷ್ಟೆಲ್ಲಾ ಯಶಸ್ಸು ಕಂಡಿರುವುದು. ಖಾಸಗಿ ವಾಹಿನಿಗಳ ಭರಾಟೆಯ ನಡುವೆ ಪ್ರತಿದಿನ ರಾತ್ರಿ ೯.೩೦ ನ್ನು ಕಾಯುವಂತೆ ಮಾಡಿರುವುದು. ಇಂಥ ಅವಕಾಶ ಕೊಟ್ಟಿದ್ದಕ್ಕೆ ದೂರದರ್ಶನಕ್ಕೆ ... ನಾಸೋ ಅವರಿಗೆ .. ಅವರ ಜೊತೆ ಪರಿಚಯವಾದ ರಘು ಸರ್ ಅವರಿಗೆ ಥ್ಯಾಂಕ್ಸ್ ಹೇಳಿಕೊಳ್ತಾ ... ಅನುಭವ ಕೇಳಿದ್ದಕ್ಕೆ ನಿಮಗೂ ಥ್ಯಾಂಕ್ಸ್ ಹೇಳ್ತೀನಿ..  ಅಕ್ಟೋಬರ್ ೭ ನೇ ತಾರೀಖು ಅದರ ಪ್ರಸಾರವಾಯ್ತು .

Rating
No votes yet

Comments