'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಅನಂತಮೂರ್ತಿಯವರಿಗೆ ಬೇಸರವಾಗಿದೆ. ಕೋಪವೂ ಬಂದಂತಿದೆ. ತಾವಿನ್ನು ಸಾರ್ವಜನಿಕವಾಗಿ ಸಾಹಿತ್ಯ ಚರ್ಚೆ ಮಾಡುವುದಿಲ್ಲವೆಂದು ಅವರು ಘೋಷಿಸಿದ್ದಾರೆ. ದಯವಿಟ್ಟು ಹಾಗೆ ಮಾಡಬೇಡಿ ಎಂದು ಅವರ ಶಿಷ್ಯರೂ ಅಭಿಮಾನಿಗಳೂ ಬೇಡಿಕೊಳ್ಳುತ್ತಿದ್ದಾರೆ. ಈ ರಾದ್ಧಾಂತಕ್ಕೆಲ್ಲ ಕಾರಣಗಳು: ಇತ್ತೀಚೆಗೆ ಬೆಂಗಳೂರಿನಲ್ಲಿ ಭೈರಪ್ಪನವರ 'ಆವರಣ' ಕೃತಿ ಕುರಿತು ಎನ್.ಎಸ್.ಶಂಕರ್ ಬರೆದಿರುವ 'ಆವರಣದ ಅನಾವರಣ' ಎಂಬ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಅವರಾಡಿದ ಮಾತುಗಳು ಪತ್ರಿಕೆಗಳಲ್ಲಿ ವರದಿಯಾಗಿರುವ ರೀತಿ ಹಾಗೂ ಇದನ್ನು ಆಧರಿಸಿ ಒಂದೆರಡು ಪತ್ರಿಕೆಗಳು ಇವರ ವ್ಯಕ್ತಿತ್ವದ ಮೇಲೆ ವ್ಯವಸ್ಥಿತವಾಗಿ ನಡೆಸಿರುವ ದಾಳಿ.
ಎಲ್ಲವನ್ನೂ 'ಬಿಸಿ ಬಿಸಿ' ಸುದ್ದಿಯಾಗಿ ಪರಿವರ್ತಿಸಿ ಓದುಗರಿಗೆ ಉಣಬಡಿಸುವ ಚಾಳಿ ಬೆಳೆಸಿಕೊಂಡಿರುವ ಇತ್ತೀಚಿನ ವ್ಯಾಪಾರಿ ಪತ್ರಿಕೋದ್ಯಮಕ್ಕೆ ರಾಜಕಾರಣ, ಸಾಹಿತ್ಯ, ಸಂಸ್ಕೃತಿ ಎಲ್ಲ ಒಂದೇ. ಹಾಗಾಗಿಯೇ, ಸಾಹಿತ್ಯ-ಸಂಸ್ಕೃತಿಗಳಿಗೆ ಸಂಬಂಧಪಟ್ಟ ಸಮಾರಂಭಗಳಿಗೆ ವಿಶೇಷ ಒಲವು ಅಥವಾ ತರಬೇತಿಯುಳ್ಳ ವರದಿಗಾರರನ್ನು ಕಳಿಸುವ ಪರಿಪಾಠ ಎಂದೋ ನಿಂತು ಹೋಗಿದೆ. ಇಂತಹ ಪರಿಸ್ಥಿಯಲ್ಲಿ ವಿಚಾರ ಸಂಕಿರಣಗಳಲ್ಲಿ ಮಾತನಾಡುವವರು, ಸೂಕ್ಷ ಸಾಹಿತ್ಯ ಚಿಂತನೆ ಅಥವಾ ಚರ್ಚೆಗೆ ಚಾಲನೆ ನೀಡುವ ಮುನ್ನ ಎರಡು ಬಾರಿ ಯೋಚಿಸಿ ಮಾತುಗಳನ್ನಾರಂಭಿಸುವಂತಾಗಿದೆ. ಏಕೆಂದರೆ, ಮಾರನೆಯ ಬೆಳಿಗ್ಗೆ ಯಾವದೋ ಒಂದು ಪತ್ರಿಕೆ ತನ್ನ ಮಾರುಕಟ್ಟೆ ದೃಷ್ಟಿಯಿಂದಲೋ ಅಥವಾ ತಾನು ನಂಬಿರುವ ರಾಜಕೀಯ ಸಿದ್ಧಾಂತದ ದೃಷ್ಟಿಯಿಂದಲೋ, ಪ್ರಚೋದಕ ಶೀರ್ಷಿಕೆ ಕೊಟ್ಟು ಅವನ ಮಾತುಗಳನ್ನು ತಿರುಚಿಯೋ, ಸಂದರ್ಭ ಕಿತ್ತು ಉಲ್ಲೇಖಿಸಿಯೋ ವಿವಾದ ಸೃಷ್ಟಿಸುವ; ಅಥವಾ ಬೇಕೆಂದೇ ಆ ಮಾತಿನ ಮಹತ್ವವನ್ನೇ ಹಾಳು ಮಾಡುವ ರೀತಿಯಲ್ಲಿ ವರದಿ ಮಾಡುವ ಸಾಧ್ಯತೆಗಳು ಇಂದು ಹೆಚ್ಚಿವೆ. ಹೀಗಾಗಿ ಸಮಾರಂಭದ ವರದಿಗೆ ಯಾವ ಪತ್ರಿಕೆಯವರು ಮತ್ತು ಯಾವ ವರದಿಗಾರರು ಬಂದಿದ್ದಾರೆ ಎಂದು ಪತ್ತೆ ಹಚ್ಚಿ ಮಾತನಾಡಬೇಕಾದ ದುಃಸ್ಥಿತಿ ನಮ್ಮ ಸಾಂಸ್ಕೃತಿಕ ಲೋಕಕ್ಕೆ ಒದಗಿ ಬಂದಿದೆ! ಇದು ಬಹುತೇಕ ಸಂದರ್ಭಗಳಲ್ಲಿ ಅಸಾಧ್ಯವಾದುದರಿಂದ, ಪತ್ರಕರ್ತರಿದ್ದ ಸಮಾರಂಭಗಳಲ್ಲಿ ಸೂಕ್ಷ್ಮ ವಿಚಾರಗಳನ್ನು ಮಾತನಾಡದಿರುವುದು, ಚರ್ಚಿಸದಿರುವುದು ಒಳ್ಳೆಯದೆಂದು ಕೆಲವರು ಭಾವಿಸತೊಡಗಿದ್ದರೆ ಆಶ್ಚರ್ಯವಿಲ್ಲ.
ಅನಂತಮೂರ್ತಿಯವರ ಸದ್ಯದ ನಿರ್ಧಾರಕ್ಕೆ ಕಾರಣವಾಗಿರುವ ವರದಿಗಳನ್ನೇ ತೆಗೆದುಕೊಳ್ಳಿ. ಸಮಾರಂಭಕ್ಕೆ ಖುದ್ದಾಗಿ ಹೋಗದ ಯಾರಿಗೂ ಅವರೇನು ಮಾತನಾಡಿದರೆಂದು ನಿರ್ದಿಷ್ಟವಾಗಿ ಗೊತ್ತಾಗದ ರೀತಿಯ ವೈವಿಧ್ಯಮಯ; ಆದರೆ ಅಪೂರ್ಣವಾದ ವರದಿಗಳು ಪತ್ರಿಕೆಗಳಲ್ಲಿ ಬಂದಿವೆ. ಆಯಾ ವರದಿಗಾರನ ಅಥವಾ ಆಯಾ ಪತ್ರಿಕೆಯ ವಿಶಿಷ್ಟತೆಗೆ ತಕ್ಕ ಶೈಲಿಗೂ ವರದಿಗಾರಿಕೆಯಲ್ಲಿ ಅವಕಾಶವಿದೆ, ನಿಜ. ಆದರೆ, ಆಡಿದ ಮಾತಿನ ಸಂದರ್ಭ ಕಿತ್ತು ಅಥವಾ ಮಾತಿನ ಒತ್ತನ್ನು ಬದಲಾಯಿಸಿ ವರದಿ ಮಾಡಿದರೆ, ಅದು ದುರುದ್ದೇಶದ ವರದಿ ಮಾತ್ರವಾಗುತ್ತದೆ. ಕೆಲವು ಪತ್ರಿಕೆಗಳಲ್ಲಿ ಎಂತಹ ಕುಚೇಷ್ಟೆಯ ವರದಿಗಾರರಿದ್ದಾರೆಂದರೆ, ನೀವು ಆಡದ ಮಾತುಗಳನ್ನೂ ತಮ್ಮ ವರದಿಗಳಲ್ಲಿ ನಿಮ್ಮ ಬಾಯಲ್ಲಿ ಆಡಿಸಿ, ನಿಮಗೆ ಅಚ್ಚರಿಯನ್ನೋ ಆಘಾತವನ್ನೋ ಉಂಟುಮಾಡಬಲ್ಲವರಾಗಿದ್ದಾರೆ! ಒಂದು ವರ್ಷದ ಹಿಂದೆ ಅಧ್ಯಯನ ಶಿಬಿರವೊಂದರಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಸರಕಾರದ ನಿರ್ಧಾರ ಎಷ್ಟು ಅವಸರದ್ದು ಹಾಗಾ ಅವೈಜ್ಞಾನಿಕವಾದದ್ದು ಎಂದು ನಾನು ಮಾತನಾಡಿದ್ದೆ. ಆದರೆ ಮರುದಿನ ನೋಡಿದರೆ, ಅದು 'ವಿಜಯ ಕರ್ನಾಟಕ'ದಲ್ಲಿ 'ಇಂಗ್ಲಿಷ್ ಕಲಿಕೆ: ನಾಗಭೂಷಣ್ ಸ್ವಾಗತ' ಎಂಬ ಶೀರ್ಷಿಕೆಯಡಿ, ನಾನಾಡಿದ ಮಾತುಗಳಿಗೆ ತದ್ವಿರುದ್ಧವಾದ ವರದಿ ಪ್ರಕಟವಾಗಿದೆ! ಈ ಬಗ್ಗೆ ನಾನು ನೀಡಿದ ದೂರಿನ ಬಗ್ಗೆ ಅದರ ಸಂಪಾದಕರು ಇನ್ನೂ ವಿಚಾರಣೆ ಮಾಡುತ್ತಲೇ ಇದ್ದಾರೆ...
ಅದಿರಲಿ, ಈ 'ಆವರಣದ ಅನಾವರಣ'ದ ಸಮಾರಂಭಕ್ಕೆ ನಾನೂ ಒಬ್ಬ ಭಾಷಣಕಾರನಾಗಿ ಹೋಗಬೇಕಿತ್ತು. ಆದರೆ ಅಂದೇ ನನ್ನೂರು ಶಿವಮೊಗ್ಗದಲ್ಲಿ ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿಬಿಟ್ಟುದದರಿಂದ ಬರಲಾಗುವುದಿಲ್ಲವೆಂದು ಸಂಘಟಕರಿಗೆ ತಿಳಿಸಿದ್ದೆ. ಆದರೆ ಈ ಆಹ್ವಾನ, ಎರಡು ತಿಂಗಳ ಹಿಂದೆಯೇ ಒಂದಷ್ಟು ಪುಟ ಓದಿ, ಮುಂದೆ ಓದಲಾಗದೆ ಬಿಟ್ಟಿದ್ದ 'ಆವರಣ' ಕಾದಂಬರಿಯನ್ನು ಮತ್ತೆ ಕೈಗೆತ್ತಿಕೊಳ್ಳಲು ಪ್ರೇರೇಪಿಸಿತು. ಎರಡು-ಮೂರು ದಿನಗಳಲ್ಲಿ ಹಾಗೂ ಹೀಗೂ ಕಷ್ಟ ಪಟ್ಟು ಓದಿ ಮುಗಿಸುತ್ತಿದ್ದಂತೆಯೇ, ಆ ಹೊತ್ತಿಗೆ ಭೈರಪ್ಪನವರನ್ನು ಕುರಿತು ಆ ಸಮಾರಂಭದಲ್ಲಿ ಅನಂತಮೂರ್ತಿಯವರು ನೀಡಿದ್ದರೆಂದು ಹೇಳಲಾದ 'ಹೇಳಿಕೆ' ಬಗ್ಗೆ ನನ್ನ ಪ್ರತಿಕ್ರಿಯೆ ಬಯಸಿ 'ವಿಜಯ ಕರ್ನಾಟಕ' ಪತ್ರಿಕೆಯಿಂದ ದೂರವಾಣಿ ಕರೆ ಬಂತು. ನಾನು ಈ ಪತ್ರಿಕೆಯ ವರದಿಯನ್ನು ಓದಿರಲಿಲ್ಲವಾದುದರಿಂದ, ಯಾವ ಹೇಳಿಕೆಗೆ ಪ್ರತಿಕ್ರಿಯೆ ಬೇಕೆಂದು ಅವರನ್ನೇ ಕೇಳಿದೆ. ಅವರು, 'ಭೈರಪ್ಪ ಕಾದಂಬರಿಕಾರರೇ ಅಲ್ಲ' ಎಂಬ ಹೇಳಿಕೆಗೆ ಎಂದಾಗ ನಾನು, 'ಅವರು ಹಾಗೆ ಹೇಳಿದ್ದರೆ ಅವರ ಮಾತು ಒಪ್ಪುವುದು ಕಷ್ಟ. ಆದರೆ, ಅವರು ನಿರ್ದಿಷ್ಟವಾಗಿ ಆವರಣ ಕೃತಿ ಕುರಿತು ಹೇಳಿದ್ದರೆ, ಅದು ಸರಿಯಾದ ಮಾತೇ ಆಗಿದೆ. ಏಕೆಂದರೆ ...' ಎಂದು ನನ್ನ ಸಂಕ್ಷಿಪ್ತ ಪ್ರತಿಕ್ರಿಯೆ ನೀಡಿದೆ.
'ವಿಜಯ ಕರ್ನಾಟಕ'ದ ವೈಯುಕ್ತಿಕ ಶೈಲಿಯ ಸಂಪಾದಕತ್ವ ಹಾಗೂ ಅದರ ಪರಿಣಾಮವಾಗಿ ಭಾಷೆ, ದೃಷ್ಟಿ, ಶೈಲಿ, ಅಂಕಣಗಳ ವಿಷಯದಲ್ಲಿ ಅರಳಿರುವ, ಕನ್ನಡಕ್ಕೇ ತಾಜಾ ಅನ್ನಿಸುವ ಅದರ ಅನೇಕ ಹೊಸತನಗಳ ಬಗ್ಗೆ ನನ್ನ ಮೆಚ್ಚುಗೆ ಇದೆ. ಆದರೆ, ಒಂದು ನಿರ್ದಿಷ್ಟ ರಾಜಕೀಯ ಚಿಂತನೆಯೊಂದಕ್ಕೆ ತನ್ನನ್ನು ತಾನೆ ತೆತ್ತುಕೊಂಡಂತೆ ಅನುಸರಿಸಿಕೊಂಡು ಬರುತ್ತಿರುವ ಅದರ ಸಂಪಾದಕೀಯ ನೀತಿಯ ಬಗ್ಗೆ ಮೊದಲಿಂದಲೂ ಅನುಮಾನವಿಟ್ಟುಕೊಂಡಿರುವುದರಿಂದ, ಮಾರನೆಯ ದಿನ ಸಹಜ ಕುತೂಹಲದಿಂದ ಆ ಪತ್ರಿಕೆಯನ್ನು ತರಿಸಿ ನೋಡಿದೆ. ಮುಖಪುಟದಲ್ಲೇ ದಪ್ಪಕ್ಷರಗಳಲ್ಲಿ, 'ಅನಂತಮೂರ್ತಿ ಹೇಳಿಕೆಗೆ ಸಾಹಿತಿಗಳ ಆಕ್ರೋಶ' ಎಂಬ ಶೀರ್ಷಿಕೆಯಡಿ ಒಂದು ವರದಿ. ನನಗೆ ಆಶ್ಚರ್ಯದ ಜೊತೆಗೆ ಪತ್ರಿಕೆಯೊಂದು ಸಾಂಸ್ಕೃತಿಕ ವಿಚಾರದಲ್ಲಿ ಇಷ್ಟೊಂದು ಆಸಕ್ತಿ ವಹಿಸುತ್ತಿರುವ ಬಗ್ಗೆ ಒಂದು ಕ್ಷಣ ಸಂತೋಷವೆನಿಸಿದರೂ, ವರದಿ ಓದುತ್ತಿದ್ದಂತೆ ನನ್ನ ಸಂತೋಷವೆಲ್ಲ ಜರ್ರನೆ ಇಳಿದು ಹೋಯಿತು. ಏಕೆಂದರೆ, ಕನ್ನಡದ ಯಾವ ಪ್ರಮುಖ ಸಾಹಿತಿಯೂ ಈ ವರದಿಯಲ್ಲಿ ಕಾಣಿಸಿಕೊಂಡಿರಲಿಲ್ಲ! ಅಲ್ಲಿದ್ದವರಲ್ಲಿ ಹೆಸರಿಸಬಹುದಾದ ಸಾಹಿತಿಗಳೆಂದರೆ ಚಂಪಾ, ಎಲ್.ಎಸ್. ಶೇಷಗಿರಿರಾವ್ ಮತ್ತು ಕೆ. ಮರುಳಸಿದ್ಧಪ್ಪ ಮಾತ್ರ. ಇವರಲ್ಲಿ ಕೊನೆಯವರ ಹೊರತಾಗಿ ಮಿಕ್ಕವರೆಲ್ಲೂ ಪತ್ರಿಕೆಯ ಉದ್ದೇಶಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದ್ದರು.
ಎಲ್.ಎಸ್.ಎಸ್. ಹಾಗೂ ಚಿದಾನಂದ ಮೂರ್ತಿಯವರ ನಿಲುವುಗಳು ಈಗಾಗಲೇ ಪರಿಚಿತವಿದ್ದುದರಿಂದ ಆಶ್ಚರ್ಯ ಹುಟ್ಟಿಸಲಿಲ್ಲವಾದರೂ, ಚಂದ್ರಶೇಖರ ಪಾಟೀಲರ ನಿಲುವು ಸಾಹಿತ್ಯ ಹಾಗೂ ಸಾಮಾಜಿಕ ಸಂವೇದನೆಯ ವಿಷಯದಲ್ಲಿ ಅವರು ಮುಟ್ಟಿರುವ ಪಾತಾಳ ಲೋಕದ ಪರಿಚಯ ಮಾಡಿಕೊಡುವಂತಿತ್ತು. ಇಲ್ಲಿ ಅವರ ಪ್ರತಿಕ್ರಿಯೆ ಕೇಳಿದ್ದು, ಅನಂತ ಮೂರ್ತಿಯವರು 'ಆವರಣ' ಕೃತಿಯನ್ನು ಕುರಿತ ಚರ್ಚೆಯ ಹಿನ್ನೆಲೆಯಲ್ಲಿ ಹೇಳಿದಂತೆ ಭೈರಪ್ಪನವರು ಕಾದಂಬರಿಕಾರರೋ ಅಲ್ಲವೋ ಎಂಬುದರ ಬಗ್ಗೆ. ಆದರೆ ಇಲ್ಲಿ ಅವರು ತಮ್ಮ ಪ್ರತಿಕ್ರಿಯೆಯ ಅವಕಾಶವನ್ನು ಪೂರ್ತಾ ಅನಂತಮೂರ್ತಿಯವರ ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ಹೀಗೆಳೆಯಲು ಮಾತ್ರ ಬಳಸಿಕೊಂಡು, ಅನಂತಮೂರ್ತಿಯವರು ಎತ್ತಿದ ಸಾಹಿತ್ಯ ಮೀಮಾಂಸೆಯ ಪ್ರಶ್ನೆಗೆ ನೇರ ಉತ್ತರ ಹೇಳುವುದರಿಂದ ನುಣಿಚಿಕೊಳ್ಳುವ ಜಾಣತನ ಪ್ರದರ್ಶಿಸಿದ್ದಾರೆ. ಹಾಗೇ, 'ಭೈರಪ್ಪನವರಿಗಿಂತ ಅನಂತಮೂರ್ತಿ ಹೆಚ್ಚು ಅಪಾಯಕಾರಿ' ಎಂದೆನ್ನುವ ಮೂಲಕ ಈ ವರದಿಯ ಹಿಂದಿರುವ ಪತ್ರಿಕೆಯ ದುರುದ್ದೇಶವನ್ನು ಬೆಂಬಲಿಸಿದ್ದಾರೆ. ಇವರು ಒಂದು ವರ್ಷದ ಹಿಂದಷ್ಟೇ ಇದೇ 'ಅನಂತ ಮೂರ್ತಿ ಕಾಯಿಲೆಗೆ ಸಿಕ್ಕಿ, ಚಿದಾನಂದ ಮೂರ್ತಿಯವರ ಸಹಯೋಗದಲ್ಲಿ ಮತ್ತು ಆಳುವ ಪಕ್ಷಗಳ ಬೆಂಬಲದೊಂದಿಗೆ ಕನ್ನಡೇತರ ಶ್ರೀಮಂತ ಉದ್ಯಮಿಯೊಬ್ಬನನ್ನು ರಾಜ್ಯಸಭೆಗೆ ಕಳಿಸುವಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದರು ಎಂಬುದನ್ನು ನೆನೆಸಿಕೊಂಡಾಗ, ಇವರ ಇಂತಹ ವಕ್ರ ವರ್ತನೆಗಳಿಂದ ಕನ್ನಡ ಸಾಹಿತ್ಯ ಸಂಸ್ಕೃತಿಗಳು ನೈತಿಕವಾಗಿ ಇನ್ನೂ ಯಾವ ಯಾವ ಆಳ-ಪಾತಾಳಗಳನ್ನು ಮುಟ್ಟಬೇಕಾಗಿದೆಯೋ ಎಂದು ಆತಂಕ ಪಡುವಂತಾಗಿದೆ.
ಇದೆಲ್ಲದರ ಮಧ್ಯೆ 'ವಿಜಯ ಕರ್ನಾಟಕ'ದವರು ನನ್ನ ಅಭಿಪ್ರಾಯವನ್ನು ಕೇಳಲು ಏಕೆ ಮುಂದಾದರು ಎಂದು ನನಗೆ ಈಗಲೂ ಆಶ್ಚರ್ಯವಾಗುತ್ತಿದೆ. ಒಂದೆರಡು ತಿಂಗಳುಗಳ ಹಿಂದೆ ಸುಪ್ರಸಿದ್ಧ ಮಾಸ ಪತ್ರಿಕೆಯಲ್ಲಿ ಅನಂತಮೂರ್ತಿಯವರ ಇತ್ತೀಚಿನ ಪುಸ್ತಕವನ್ನು ಕಟುವಾಗಿ ಟೀಕಿಸಿದ್ದುದೇ ಅವರಿಗೆ ಸ್ಫೂರ್ತಿ ಒದಗಿಸಿರಬಹುದು. ಅದೇನೇ ಇರಲಿ, ಪತ್ರಿಕೆ ನನ್ನ ಅಭಿಪ್ರಾಯವನ್ನು 'ಭೈರಪ್ಪನವರು ಕಾದಂಬರಿಕಾರರು ಎನ್ನುವುದರಲ್ಲಿ ಅನುಮಾನವಿಲ್ಲ' ಎಂದು ಪುನರ್ರೂಪಿಸಿಕೊಂಡ ವಾಕ್ಯದೊಂದಿಗೆ ಆರಂಭಿಸಿ ಸಂತೋಷ ಪಟ್ಟುಕೊಂಡಿತ್ತು. ಆದರೆ ಮಾರನೆಯ ದಿನದ ಪತ್ರಿಕೆ ನೋಡಿದಾಗ, ಸದ್ಯ, ನನ್ನ ಅಭಿಪ್ರಾಯವನ್ನು ಹಿಂದೊಮ್ಮೆ ಮಾಡಿದಂತೆ ತದ್ವಿರುದ್ಧಗೊಳಿಸಿ ಪ್ರಕಟಿಸಿಲ್ಲ ಎಂದು ನಾನು ಸಂತೋಷ ಪಟ್ಟುಕೊಳ್ಳುವಂತಾಯಿತು! ಏಕೆಂದರೆ, ಪತ್ರಿಕೆಯ ಮಾರನೆಯ ದಿನದ ಸಂಚಿಕೆಯಲ್ಲೂ ಅನಂತಮೂರ್ತಿಯವರ ಮೇಲಿನ ದಾಳಿ ಮುಖಪುಟ ಶೀರ್ಷಿಕೆಯೊಂದಿಗೆ ಮುಂದುವರೆದಿದೆ! ಒಂದೇ ದಿನದಲ್ಲಿ ನೂರಾರು ಓದುಗರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಥವಾ ಸಂಘಟಿಸಿ ಪ್ರಕಟಿಸಿದ್ದ ಆ ಉತ್ಸಾಹವನ್ನು ಕಂಡಾಗ, ಇದೊಂದು ಸಂಪೂರ್ಣವಾಗಿ ವ್ಯವಸ್ಥಿತವಾದ ಕಾರ್ಯಕ್ರಮ ಎಂಬುದು ಯಾರಿಗಾದರೂ ಗೊತ್ತಾಗುವಂತಿತ್ತು. ಆದರೆ ಈ 'ಜನಜಾಗೃತಿ ಕಾರ್ಯಕ್ರಮ'ದ ಉದ್ದೇಶ ಅಥವಾ ಅಗತ್ಯವಾದರೂ ಏನು, ತಿಳಿಯದಾಗಿತ್ತು!
ಅಲ್ಲಿ ಪ್ರಕಟಗೊಂಡಿದ್ದ ನೂರಾರು ಪ್ರತಿಕ್ರಿಯೆಗಳಲ್ಲ್ಲಿ ಅನಂತಮೂರ್ತಿ ವಿರೋಧಿ ಅಲ್ಲ ಎನ್ನಬಹುದಾದವು ಮೂರು ಮಾತ್ರ. ಒಂದು ಸಾರಾಸಗಟು ಭೈರಪ್ಪ ವಿರೋಧಿ ಪತ್ರವಾದರೆ, ಇನ್ನೊಂದು ಎರಡೂ ಕಡೆ ಸಮತೋಲ ಸಾಧಿಸಲು ಲೆಕ್ಕಾಚಾರದಲ್ಲಿ ಯತ್ನಿಸಿರುವ ಪತ್ರ. ಮೂರನೆಯದು, ಹಿರಿಯ ಲೇಖಕ ಕೃಷ್ಣ ಕೊಲ್ಹಾರ ಕುಲಕರ್ಣಿಯವರ ಪತ್ರ. ಕುಲರ್ಣಿಯವರು ಪತ್ರಿಕಾ ವರದಿಯಲ್ಲಿನ ಅನಂತಮೂರ್ತಿಯವರ ಅಭಿಪ್ರಾಯವನ್ನು ಸಾರಾ ಸಗಟಾಗಿ ಒಪ್ಪದಿದ್ದರೂ, 'ಆವರಣ' ಒಂದು ಕಾಲಘಟ್ಟದ ಚರಿತ್ರೆಯ ಒಂದು ಪಾಶ್ರ್ವವನ್ನು ಮಾತ್ರ ಚಿತ್ರಿಸಿರುವುದರಿಂದ ಒಂದು ದುರ್ಬಲ ಕೃತಿಯಾಗಿದೆ ಎಂದಿದ್ದಾರೆ. ಮಿಕ್ಕಂತೆ, ನೂರಾರು ಓದುಗರು ಭೈರಪ್ಪನವರನ್ನು ಹಾಡಿ ಹೊಗಳುವ ಮತ್ತು ಅನಂತಮೂರ್ತಿಯವರನ್ನು ವಿಧ ವಿಧವಾಗಿ ತೆಗಳುವ ಸಾಲುಗಳು ಪತ್ರಿಕೆಯ ಇಡೀ ಒಂದು ಪುಟದಷ್ಟು ತುಂಬಿಕೊಂಡಿವೆ! ಇದನ್ನು ನಿಜವಾಗಿ ಪತ್ರಿಕೋದ್ಯಮ ಎಂದು ಕರೆಯಬೇಕೋ ಅಥವಾ ಸಾಂಸ್ಕೃತಿಕ ರಾಜಕಾರಣವೆಂದು ಕರೆಯಬೇಕೋ ನನಗೆ ತಿಳಿಯದಾಗಿದೆ. ಸಂಪಾದಕ ವರ್ಗದವರು ಯಾವ ಅಭಿಪ್ರಾಯವನ್ನೂ ಕಡೆಗಣಿಸದೆ, ಅವು ಬಂದಂತೆ ನಿಷ್ಪಕ್ಷಪಾತ ದೃಷ್ಟಿಯಿಂದ ಪ್ರಕಟಿಸಿದ್ದಾರೆ ಎಂದು ನಂಬಿದರೂ, ಇಂತಹ ಬದ್ಧ ಓದುಗ ವರ್ಗವನ್ನು ಸೃಷ್ಟಿಸಿಕೊಂಡಿರುವ ಈ ಪತ್ರಿಕೆ ಇನ್ನು ಮುಂದೆ ಬೆಳೆಯುವುದಾದರೂ ಯಾವ ದಿಕ್ಕಿನಲ್ಲಿ ಎಂದು ಆಶ್ಚರ್ಯವಾಗುತ್ತದೆ. ಹಾಗೇ, ಇಂತಹ ಪತ್ರಿಕೋದ್ಯಮ ಕಟ್ಟಬಹುದಾದ ಸಮಾಜವಾದರೂ ಎಂತಹುದು ಎಂಬುದನ್ನು ಕಲ್ಪಿಸಿಕೊಂಡರೇ ಭಯವಾಗುತ್ತದೆ! ಏಕೆಂದರೆ, ಸಾಹಿತ್ಯ ಕೃತಿಯೊಂದನ್ನು ಟೀಕಿಸುವುದೇ ಒಂದು ಭಯಂಕರ ಸಾಮಾಜಿಕ ಅಪರಾಧವೆಂಬಂತೆ, ಹೀಗೆ ಒಂದು ಅಭಿಪ್ರಾಯ ಚಳುವಳಿಯನ್ನು ಸಂಘಟಿಸುವ ಈ ಸಾಂಸ್ಕೃತಿಕ ರಾಜಕಾರಣ, ಮೂಲತಃ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯನ್ನೇ ಪ್ರಶ್ನಿಸುವಂತಹುದು.
ಹೋಗಲಿ, ಇವರೆಲ್ಲ ಇಷ್ಟು ಬದ್ಧತೆಯಿಂದ ಸಮರ್ಥಿಸುತ್ತಿರುವ ಆ 'ಆವರಣ' ಎಂಬ ಕಾದಂಬರಿಯಾದರೂ ಎಂತಹುದು? ಕಾದಂಬರಿ ಎಂಬ ಸಾಹಿತ್ಯ ಪ್ರಕಾರಕ್ಕೇ ಅವಮಾನವೆಸಗುವಂತಿರುವ ಈ ಕೃತಿ ನಿಂತಿರುವುದು; ಲೇಖಕರ ಕೈಗೊಂಬೆ ಪಾತ್ರವಾಗಿರುವುದರಿಂದಾಗಿ strength of character (ಚಾರಿತ್ರ್ಯದ ಆಂತರಿಕ ಶಕ್ತಿ) ಎಂಬುದೇ ಇಲ್ಲದೆ, ಸುಲಭವಾಗಿ ಎಲ್ಲವನ್ನೂ ನಂಬುತ್ತ ಹೋಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿ; ನಂತರ ತನ್ನ ಈ ಮತಾಂತರದ ಹಿಂದೆ ಒಂದು ಚಾರಿತ್ರಿಕ ಪಿತೂರಿಯೇ ಇದೆಯೆಂದು ತರ್ಕಿಸುತ್ತಾ ಹೋಗುವ ಲಕ್ಷ್ಮಿ ಎಂಬ ಎಡಬಿಡಂಗಿ ಹೆಣ್ಣು ಮಗಳು ನಡೆಸುವ ಚಾರಿತ್ರಿಕ ಸಂಶೋಧನೆ ಎಂಬ ಹುಚ್ಚಾಟದ ಮೇಲೆ. ಈ ಹುಚ್ಚಾಟಕ್ಕೆ ಕಾದಂಬರಿ ಸ್ವರೂಪ ನೀಡಲು ಕೆಲವು ಪೊಳ್ಳು ಪಾತ್ರಗಳನ್ನೂ, ಟೊಳ್ಳು ಸಂದರ್ಭಗಳನ್ನೂ ಸೃಷ್ಟಿಸಲಾಗಿದೆ. ಈ ಲಕ್ಷ್ಮಿಯೇ ಇಂದಿನ ಹಿಂದೂ ಧರ್ಮದ ಪ್ರತಿನಿಧಿಯಾಗಿದ್ದರೆ, ಹಿಂದೂ ಜನತೆಯ ಹಿತ ದೃಷ್ಟಿಯಿಂದಲೇ ಆ ಧರ್ಮ ಆದಷ್ಟು ಬೇಗ ನಾಶವಾಗುವುದು ಒಳಿತೆಂದು ಈ ಕಾದಂಬರಿಯನ್ನು ಓದಿದ ವಿವೇಕಿಯಾದ ಯಾವುದೇ ಓದುಗನಿಗೆ ಅನ್ನಿಸದಿರದು. ಏಕೆಂದರೆ, ಈಕೆಯ ಅವಿವೇಕ ಹಿಂದೂ ಧರ್ಮದ ಅವಿವೇಕವೆಂಬಂತೆಯೇ ಕಾದಂಬರಿಯುದ್ದಕ್ಕೂ ಸ್ವಯಂ ಮರುಕ ಹಾಗೂ ವ್ಯಗ್ರತೆಯ ದ್ವಂದ್ವ ಧ್ವನಿಯಲ್ಲಿ ನಿರೂಪಿತವಾಗುತ್ತಾ ಹೋಗಿದೆೆ!
ಫ್ಯಾಸಿಸ್ಟ್ ಮನೋಭಾವದ ಎಲ್ಲರಂತೆ ಭೈರಪ್ಪನವರಿಗೆ ಮೂಲಭೂತವಾಗಿ ಮಾನವತೆಯಲ್ಲೇ ನಂಬಿಕೆ ಇಲ್ಲದಾಗಿದೆ. ಹಾಗಾಗಿಯೇ, ಇವರು ನಂಬಿದಂತೆ ಜಗತ್ತಿನ ಈವರೆಗಿನ ಇಡೀ ಮುಸ್ಲಿಂ ಸಮುದಾಯ ಧರ್ಮಲಂಡವೂ, ಅನಾಗರೀಕವೂ, ಕ್ರೂರಿಯೂ, ಆಕ್ರಮಣಕಾರಿಯೂ ಆಗಿದ್ದರೆ, ಕಾಲಾನುಕಾಲದಲ್ಲಿ ಅದರೊಳಗಿಂದ ಮನುಷ್ಯ ಚೈತನ್ಯ ಒಂದಲ್ಲ ಒಂದು ರೂಪದಲ್ಲಿ ಬಂಡಾಯವೇಳಲೇ ಬೇಕಿತ್ತಲ್ಲವೇ ಎಂದು ಯೋಚಿಸುವ ಶಕ್ತಿಯನ್ನೇ ಭೈರಪ್ಪ ಹಾಗೂ ಅವರ ಮಿತ್ರರು ಕಳೆದುಕೊಂಡಿದ್ದಾರೆ. ಅಥವಾ ಮುಸ್ಲಿಮರು ಮನುಷ್ಯರೇ ಅಲ್ಲ ಎಂದು ಇವರು ತೀರ್ಮಾನಿಸಿದ್ದಾರೋ? ಈ ಕೃತಿ ರಚಿಸಲು ಲೇಖಕರು ಒಂದು ವಾರವೋ, ಹತ್ತು ದಿನಗಳೋ ಎರಡು ಮುಸ್ಲಿಂ ಕುಟುಂಬಗಳ ಜೊತೆ ವಾಸ ಮಾಡಿದರಂತೆ. ಆ ಸಮಯದಲ್ಲಿ ಅವರು ಆ ಸಮಾಜದ ಶಾಸ್ತ್ರಾಚಾರಗಳನ್ನೂ ಅದರ ಪರಿಭಾಷೆಯನ್ನೂ ಪರಿಚಯ ಮಾಡಿಕೊಳ್ಳಲು ಯತ್ನಿಸಿದ್ದಾರೆಯೇ ಹೊರತು, ಆ ಮನೆ ಮಕ್ಕಳೊಂದಿಗೆ ಸ್ಪಂದನಶೀಲ ಸಂಬಂಧವನ್ನು ತೆರದುಕೊಳ್ಳಲು ಪ್ರಯತ್ನಿಸಿದಂತೆ ಕಾಣುವುದಿಲ್ಲ. ಅಂತಹ ಪ್ರಯತ್ನವನ್ನೇನಾದರೂ ಅವರು ಮಾಡಿದ್ದರೆ, ಒಳತೋಟಿ ಎಂಬುದೇ ಇಲ್ಲದ ಪಾತ್ರಗಳಿಂದ ತುಂಬಿ ಹೋಗಿರುವ ಇಂತಹ ಕಗ್ಗವನ್ನು ಸೃಷ್ಟಿಸುತ್ತಿರಲಿಲ್ಲ.
ಸ್ವಧರ್ಮದಲ್ಲಿ ಬಂಧಿತರಾದ ಯಾರೂ ಅನ್ಯಧರ್ಮವೊಂದರ ಅಂತರಾಳವನ್ನು ಅರಿಯಲಾರರು. ಹಾಗಾಗಿ 'ಆವರಣ'ದಲ್ಲಿ ನಾವು ಕಾಣುವುದು ಅಂತರಾಳವೇ ಇಲ್ಲದ ಮುಸ್ಲಿಂ 'ಸಂಸ್ಕೃತಿ'ಯನ್ನು. ಭಾರತದಲ್ಲಿ ನೈರುತ್ಯ ದಿಕ್ಕಿನಿಂದ ವ್ಯಾಪಾರಿಗಳ ಮೂಲಕ ಬಂದ ಹಾಗೂ ವಾಯುವ್ಯ ದಿಕ್ಕಿನಿಂದ ಶಸ್ತ್ರಸಜ್ಜಿತವಾಗಿ ಬಂದ ಇಸ್ಲಾಂ ಧರ್ಮದ ಎರಡು ಧಾರೆಗಳು ಕ್ರಿಯಾಶೀಲವಾಗಿದ್ದು; ಇವೆರಡರ ನಡುವೆ ಆಧುನಿಕ ಕಾಲದ ಸವಾಲುಗಳ ನೆಲೆಯಲ್ಲಿ ಸದಾ ಸಂಘರ್ಷ-ಅನುಸಂಧಾನಗಳು ನಡೆಯುತ್ತಿದ್ದು, ಇಸ್ಲಾಂ ಕೂಡಾ ಎಲ್ಲ ಧರ್ಮಗಳಂತೆ ಒಳಕುದಿಗೆ ಸಿಕ್ಕಿ ಒಳಗೇ ಬೇಯುತ್ತಿದೆ ಎನ್ನುವುದನ್ನು ಕಾಣಿಸುವಂತಹ ಅಧ್ಯಯನವೂ ಭೈರಪ್ಪನವರಿಗೆ ಸಾಧ್ಯವಾಗಿದ್ದರೆ, ಈ ಕಗ್ಗ ಇನ್ನಷ್ಟು ಓದಲರ್ಹವಾದ ಕೃತಿಯಾಗುತ್ತಿತ್ತೇನೋ! ಲೇಖಕರೇ ಒಂದು ಸೃಜನಶೀಲ ತಂತ್ರವೆಂಬಂತೆ ಕೃತಿಯ ಕೊನೆಯಲ್ಲಿ ಹೆಮ್ಮೆಯಿಂದ ನೀಡಿರುವ ಆಕರ ಗ್ರಂಥಗಳ ಪಟ್ಟಿ ನೋಡಿದರೆ, ಅದರ ತುಂಬಾ ಇರುವುದು ಇಸ್ಲಾಂನ ರಾಜಕಾರಣ ಕುರಿತ ಗ್ರಂಥಗಳೇ. ಸಾಂಸ್ಕೃತಿಕ ಇಸ್ಲಾಂ ಕುರಿತ ಗ್ರಂಥಗಳ ಸುಳಿವೇ ಇಲ್ಲ.
ಭಾರತದಲ್ಲಿ ಇಂದು ಇಸ್ಲಾಂ ಮೂಲಭೂತವಾದಿ ಅಥವಾ ಕೋಮುವಾದಿಯಾಗಿಲ್ಲ ಎಂದು ಯಾರೂ ಹೇಳುತ್ತಿಲ್ಲ. ಕಣ್ಣೆದುರೇ ಕಾಣುವ ಘಟನೆ ಅಥವಾ ಬೆಳವಣಿಗೆಗಳಿಗೆ ಸಾಕ್ಷಿ ಯಾಕೆ ಬೇಕು? ಆದರೆ, ಇದನ್ನೆದುರಿಸುವುದು ನಾವೂ ಹಾಗೇ ಆಗುವುದರಿಂದಲ್ಲ. ಹಾಗಾದಾಗ ಎರಡೂ ಕಡೆ ಎಲ್ಲ ವಿವೇಕವೂ ಕಳೆದು ಹೋಗಿ ಮೃಗ ರಾಜ್ಯವೊಂದು ಸೃಷ್ಟಿಯಾಗುತ್ತದಷ್ಟೆ. 'ಆವರಣ'ದ ಬರವಣಿಗೆಯ ಹಿಂದಿನ ಕಹಿ ಮತ್ತು ಶೈಲಿ ನೋಡಿದರೆ. ಭೈರಪ್ಪನವರು ಇದನ್ನೇ ಬಯಸಿದಂತೆ ಕಾಣುತ್ತದೆ. ಕನಿಷ್ಠ ಲೇಖಕರು, ಹಿಂದೂಗಳೇ ಆಗಿದ್ದ ಮರಾಠರು ಶೃಂಗೇರಿ ಮಠವನ್ನು ಕೊಳ್ಳೆ ಹೊಡೆದದ್ದರ; ಹಾಗೂ ಪಕ್ಕಾ ಮುಸಲ್ಮಾನನೇ ಆಗಿದ್ದ ಹೈದರಾಬಾದಿನ ನಿಜಾಮ, ಇಂಗ್ಲಿಷರ ಮತ್ತು ಮರಾಠರ ಜೊತೆ ಸೇರಿ, ಉಗ್ರ ಮುಸ್ಲಿಮನೇ ಆಗಿದ್ದ ಎಂದು ಸ್ವತಃ ತಾವೇ ಹೇಳುವ ಟಿಪ್ಪುವಿನ ವಿರುದ್ಧ ಯುದ್ಧ ಹೂಡಿ, ಅವನ ಅವಸಾನಕ್ಕೆ ಕಾರಣವಾದದ್ದರ ಹಿಂದಿನ ರಾಜಕಾರಣದ ಸಂಕೀರ್ಣತೆಗಳನ್ನು ಅರಿಯುವ ವ್ಯವಧಾನವನ್ನಾದರೂ ಪ್ರದರ್ಶಿಸಬೇಕಿತ್ತು. ಬದಲಿಗೆ, ಜನಪದರ ನಡುವೆಯೇ ಬಡತನದ ಬೇಗೆಯಲ್ಲಿ ಬೆಳೆದುದಾಗಿ ಹೇಳಿಕೊಳ್ಳುವ ಭೈರಪ್ಪನವರು, ಇಂತಹ ಜನಪದರು ಮುಸ್ಲಿಂ ಶ್ರೀಮಂತರಿಂದ ಹಣ ಪಡೆದು ಲಾವಣಿ ಕಟ್ಟಿ ಸಂತೆ-ಜಾತ್ರೆಗಳಲ್ಲ್ಲಿ ಹಾಡಿ ಟಿಪ್ಪುವನ್ನು 'ಹುಲಿ'ಯನ್ನಾಗಿ ಮಾಡಿದ್ದಾರಷ್ಟೆ ಎಂದು ಹೇಳುವ ಧಾಷ್ಟ್ರ್ಯವನ್ನು ಪ್ರದರ್ಶಿಸಿದ್ದಾರೆ! ಇಲ್ಲಿ ಅನುಮಾನಸ್ಪದವೆನ್ನಿಸುವುದು ಭೈರಪ್ಪನವರ ಋಣ ಪ್ರಜ್ಞೆಯೇ ಹೊರತು ಜನಪದರ ಕಲಾ ಪ್ರಾಮಾಣಿಕತೆಯಲ್ಲ. ನಾವೀಗ, ಭೈರಪ್ಪನವರು ಸಂಘ ಪರಿವಾರದವರಿಂದ ಹಣ ಪಡೆದು ಈ 'ಆವರಣ'ವನ್ನು ಬರೆದಿದ್ದಾರೆ ಮತ್ತು ಈ ಕೃತಿ ಈಗಾಗಲೇ ಆರೋ ಏಳೋ ಮುದ್ರಣಗಳನ್ನು ಕಂಡಿರುವುದೂ, ಸಂಘ ಪರಿವಾರದ ಶಾಖೆಗಳ ಸಹಕಾರದಿಂದಲೇ ಎಂದರೆ ಹೇಗೆ? ಭೈರಪ್ಪನವರು ಯೋಚಿಸಬೇಕು.
ಇವರ ಋಣ ಪ್ರಜ್ಞೆ ಅನುಮಾನಾಸ್ಪದ ಎನ್ನುವುದಕ್ಕೆ ಇನ್ನೊಂದು ಉದಾಹರಣೆ: ತಮ್ಮ ಈ ಕೃತಿಯ ಪೀಠಿಕೆಯಲ್ಲಿ, 'ಆವರಣ' ಎಂಬ ಪದದ ಅರ್ಥವನ್ನು, ಸತ್ಯವನ್ನು ಮರೆಮಾಚುವ ಮಾಯೆಯ ಕೆಲಸ ಎಂದು ಪರಿಚಯಿಸುತ್ತಾ, 'ವೇದಾಂತಿಗಳು ಹೇಳುವ ಈ ಪರಿಕಲ್ಪನೆಗಳನ್ನು ಬೌದ್ಧ ದಾರ್ಶನಿಕರೂ ಒಪ್ಪಿದ್ದಾರೆ' ಎಂದು ಹೇಳುತ್ತಾರೆ. ಆದರೆ ಅದರ ಅರ್ಥ ವಿವರಣೆಗಾಗಿ ಬಹುಪಾಲು ಬೌದ್ಧ ಪಠ್ಯಗಳಿಂದಲೇ ಉಲ್ಲೇಖ ಮಾಡುತ್ತಾರೆ. ನಂತರ ಅವರು ಈ ಸಂಬಂಧ ಮಾಡುವ ವೈದಿಕ ಪಠ್ಯಗಳ ಉಲ್ಲೇಖಗಳೆಲ್ಲವೂ ಬೌದ್ಧಯುಗಾನಂತರದ ಗ್ರಂಥಗಳಿಂದ ಆಯ್ದವು. ಆದರೂ, ಈ ಪರಿಕಲ್ಪನೆ ಮೂಲತಃ ವೇದಾಂತಿಗಳದು ಎಂಬ ಪ್ರತಿಪಾದನೆ! ನಮ್ಮ ಇಡೀ ಚರಿತ್ರೆಯೇ ಇಂತಹ ಆವರಣಕ್ಕೊಳಗಾದಂತಿದೆ!
ಭೈರಪ್ಪನವರು ತಾವು ನಂಬಿದ ಸತ್ಯವನ್ನು ಅನಾವರಣ ಮಾಡುವ 'ಆವರಣ' ಎಂಬ ಈ ನಾಟಕದಲ್ಲಿ ತಮ್ಮ ವಾದವನ್ನು ಒಪ್ದದವರೆಲ್ಲರನ್ನೂ ಸಾರಾಸಗಟಾಗಿ ಮಾರ್ಕ್ಸಿಸ್ಟ್ ಬುದ್ಧಿಜೀವಿಗಳು, ಸೋಷಲಿಸ್ಟರು, ವಿಚಾರವಾದಿಗಳು ಎಂದು ಗುರುತಿಸಿ; ಅವರೆಲ್ಲರೂ ಭ್ರಷ್ಟರು, ಅಪ್ರಾಮಾಣಿಕರು, ಅವಕಾಶವಾದಿಗಳು, ವಿಷಯ ಲಂಪಟರು ಎಂಬಂತೆ, ತಮ್ಮ ಯಾವುದೋ ಹಳೆಯ ತೀಟೆ ತೀರಿಸಿಕೊಳ್ಳುವ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಆದರೆ ಈ ತೀಟೆ ತೀರಿಸಿಕೊಳ್ಳವ ಆತುರದಲ್ಲಿ ಅವರನ್ನು ಕಾಡದೇ ಹೋಗಿರುವ ಒಂದು ಪ್ರಶ್ನೆ ಎಂದರೆ, ಹಿಂದೂಗಳಲ್ಲೇ ಏಕೆ ತಾವು ಯೋಚಿಸುವ ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಒಂದು ದೊಡ್ಡ ಜನಸ್ತೋಮವೇ ಇದೆ ಎಂಬುದು. ಆದರೆ, ಇದಕ್ಕವರು ಸುಲಭ ಉತ್ತರ ಕಂಡುಕೊಂಡಿದ್ದಾರೆ: ಅವರ ಈ 'ಆವರಣ'ದಲ್ಲಿ ವಾಚ್ಯವಾಗಿಯೇ ಚಿತ್ರಿತವಾಗಿರುವಂತೆ, ಮುಸ್ಲಿಮರಿಂದ ಬೀಜ ಒಡೆಸಿಕೊಂಡಿರುವ ಹಿಂದೂ ಧರ್ಮ ನಪುಂಸಕವಾಗಿದೆ. ಹಾಗಾಗಿ ಹಿಂದೂಗಳಲ್ಲಿ ವೀರ್ಯವಂತಿಕೆಯನ್ನು ಸಾಧಿಸಲು 'ಅಶ್ವಮೇಧ ಯಾಗ'ವೊಂದು ಜರೂರಾಗಿ ನಡೆಯಬೇಕಿದೆ. ಅದರ ಪೂರ್ವ ಸಿದ್ಧತೆಗಳಾಗಿ ಈ 'ಸಾರ್ಥ' ಈ 'ಆವರಣ' ಇತ್ಯಾದಿ ವೀರ್ಯಪ್ರಚೋದಕಗಳು! ಹಿಂದೂ ಧರ್ಮ ಇಂದಿನ ಸಂದರ್ಭದಲ್ಲಿ ಇದಕ್ಕಿಂತ ಹೆಚ್ಚು ಹೀನಾಯವಾಗಿ ಪ್ರಸ್ತುತಗೊಳ್ಳಲಾರದೇನೋ...
ಆದರೆ ವಾಸ್ತವವೆಂದರೆ- ತಮ್ಮ ಸಾಮಾಜಿಕ ಹಿನ್ನೆಲೆಯ ಪೂರ್ವಾಗ್ರಹಗಳಿಂದಾಗಿಯೋ ಏನೋ- ಭೈರಪ್ಪನವರು ಭ್ರಮಿಸಿದಂತೆ, ಹಿಂದೂ ಧರ್ಮವು strength of character ಏನೇನನ್ನೂ ಕಳೆದು ಕೊಳ್ಳದೆ, ಚರಿತ್ರೆಯುದ್ದಕ್ಕೂ ತನ್ನ ವಿವೇಕವನ್ನು ಉಳಿಸಿಕೊಂಡು ಬಂದಿದೆ. ಹಾಗಾಗಿಯೇ, ಎಂತಹ ಸವಾಲು-ಸಂಕಷ್ಟಗಳ ಸಂದರ್ಭಗಳಲ್ಲೂ ಅದು ತನ್ನನ್ನು ತಾನೇ ಪರಿಶೋಧಿಸಿಕೊಳ್ಳುತ್ತ ಗುಣಾತ್ಮಕವಾಗಿ ಬೆಳೆಯುತ್ತಾ ಬಂದಿದೆ. ಆದರೆ ಹಿಂದೂ ಧರ್ಮದ ಈ ಪರಿಶೋಧಿತ ರೂಪಗಳು ಭೈರಪ್ಪನವರು ಪ್ರತಿನಿಧಿಸುವ ಧಾರ್ಮಿಕ ಪಟ್ಟಭದ್ರ ಹಿತಾಸಕ್ತಿಗಳಿಗೆ ಭಯಂಕರವಾಗಿ ಕಾಣುತ್ತಿವೆ. ಹಾಗಾಗಿಯೇ ಅವರು ಚರಿತ್ರೆಯ ಒಂದೊಂದೇ ಗೋರಿಯನ್ನು ಬಗೆಯುತ್ತಾ , ಅವುಗಳೊಳಗಿಂದ ಒಂದೊಂದೇ ಭಯದ ಭೂತಗಳನ್ನು ಬಿಡುಗಡೆ ಮಾಡತೊಡಗಿದ್ದಾರೆ! 'ಸಾರ್ಥ' ಈ ಗೋರಿ ಬಗೆಯುವ ಕೆಲಸದ ಪೀಠಿಕೆಯಂತಿದ್ದರೆ, 'ಆವರಣ'ವು ಬಿಡುಗಡೆಗೊಂಡ ಆ ಭೂತಗಳು ಭೈರಪ್ಪನವರ ನಿರ್ದೇಶನದಲ್ಲಿ ನಡೆಸುವ ರುದ್ರ ಭಯಂಕರ ನರ್ತನಕ್ಕೆ ವೇದಿಕೆ ಒದಗಿಸಿದೆಯಷ್ಟೆ.
ಹಿಂದೆ ಇಂತಹ ಭೂತ ನರ್ತನ ನೋಡಿ ಹೆದರಿದ ಜನ ರಕ್ಷಣೆಗಾಗಿ ಪುರೋಹಿತ-ಪೂಜಾರಿ-ಮಂತ್ರವಾದಿಗಳ ಬಳಿ ಹೋಗುತ್ತಿದ್ದಂತೆ, ಈ ಕಾದಂಬರಿಯ ಪ್ರಭಾವ ವಲಯಕ್ಕೆ ಸಿಕ್ಕ ಸಮಾಜ ಈಗ ತ್ರಿಶೂಲಧಾರಿ ರಾಜಕಾರಣದ ಬಳಿಗೆ ಓಡಿಬರುತ್ತಾರೆಂದು ಭೈರಪ್ಪ, 'ವಿಜಯ ಕರ್ನಾಟಕ' ಹಾಗೂ ಇಂತಹ ಪುಢಾರಿಗಿರಿಯನ್ನೇ ನೆಚ್ಚಿ ನಡೆಯುತ್ತಿರುವ ಪತ್ರಿಕೆಗಳ ಹಿಂದಿನ ರಾಜಕೀಯ ಹಿತಾಸಕ್ತಿಗಳು, ಭಾರಿ ನಿರೀಕ್ಷೆಯಲ್ಲಿದ್ದುವೆಂದು ತೋರುತ್ತದೆ. ಆದರೆ ಅವರಿಗೆ ಅನಂತಮೂರ್ತಿಯವರ ಹೇಳಿಕೆ, 'ಆವರಣ'ವೆಂಬ ತಮ್ಮ ಈ 'ಸಾಂಸ್ಕೃತಿಕ ಯೋಜನೆ'ಯ ವಿಶ್ವಾಸಾರ್ಹತೆಯನ್ನೇ ಭಂಗಗೊಳಿಸುವ ಪ್ರಯತ್ನವಾಗಿ ಕಂಡಿದೆ. ಹಾಗಾಗಿಯೇ ಈ ವ್ಯವಸ್ಥಿತ ದಾಳಿ. 'ಆವರಣ' ಪ್ರಕಟವಾದಾಗ ಅದನ್ನು ವಿಶೇಷ ಲೇಖನ-ಸಂದರ್ಶನಗಳ ಪ್ರಚಾರ-ಸಂಭ್ರಮಗಳೊಂದಿಗೆ ಸ್ವಾಗತಿಸಿದ್ದುದು ಈ ಪತ್ರಿಕೆಗಳೇ ಎಂಬುದೂ ಗಮನಾರ್ಹ.
ಅನಂತಮೂರ್ತಿಯವರ ಮೇಲಿನ ಈ ದಾಳಿ ಕೇವಲ ಅವರ ಮೇಲಿನ ದಾಳಿಯೆಂದಷ್ಟೇ ಚಂಪಾರಂತೆ ಸಂಕುಚಿತವಾಗಿ ಯೋಚಿಸುವವರು, ಈ ಪ್ರಯತ್ನದ ಹಿಂದಿರುವ ಸಾಮಾಜಿಕ ಅಪಾಯಗಳನ್ನು ಅರಿಯಬೇಕಾಗಿದೆ: ಎಲ್ಲ ಬುದ್ಧಿಜೀವಿಗಳ, ಚಿಂತಕರ, ವೈಚಾರಿಕರ ವಿಶ್ವಾಸಾರ್ಹತೆಯನ್ನು ವ್ಯವಸ್ಥಿತವಾಗಿ ಹಾಳು ಮಾಡಿ, ಎಲ್ಲ ಸೃಜನಶೀಲ ಚಟುವಟಿಕೆಗಳನ್ನೂ ಒಂದು ಅನಧಿಕೃತ ಸಾಂಸ್ಕೃತಿಕ ಸೇನೆಯೊಂದರ ಸುಪರ್ದಿಗೆ ಒಪ್ಪಿಸುವ ಪ್ರಯತ್ನವೊಂದು ಈಗ ರಾಷ್ಟ್ರಾದ್ಯಂತ ವಿವಿಧ ರೂಪಗಳಲ್ಲಿ ನಡೆಯುತ್ತಿದೆ.. ಈ ಹಿನ್ನೆಲೆಯಲ್ಲಿ, ಈ ಕಾದಂಬರಿಯಲ್ಲಿ ವರ್ತಮಾನಕ್ಕೆ ಸಂಬಂಧಿಸಿದಂತೆ ಬರುವ ಎಲ್ಲ ಶೀಲಗೆಟ್ಟ ಪಾತ್ರಗಳೂ ಬುದ್ಧಿಜೀವಿಗಳು, ಚಿಂತಕರು ಹಾಗೂ ವಿಚಾರವಾದಿಗಳೇ ಆಗಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ. ನಿಜ, ಈ ವರ್ಗದ ಕೆಲವರ ಬೇಜವಾಬ್ದಾರಿತನ, ಆಲಸ್ಯ, ಸ್ವಾರ್ಥ ಹಾಗೂ ಅಪ್ರಾಮಾಣಿಕತೆಗಳೂ ಈ ಬೆಳವಣಿಗೆಗೆ ಕಾರಣವಾಗಿದೆ. ಹಾಗಾಗಿ, ಈ ವರ್ಗ ಈ ಸಂದರ್ಭದಲ್ಲಿ ಇನ್ನಷ್ಟು ಎಚ್ಚರ ಹಾಗೂ ಕ್ರಿಯಾಶೀಲತೆಯಿಂದ ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ಎಂಬುದೂ ನಿಜ. ಆದರೆ ಇದೆಲ್ಲ, ಇಂತಹ ಪ್ರಯತ್ನಗಳನ್ನು ಸಮರ್ಥಿಸಲು ಅಥವಾ ಮನ್ನಿಸಲು ಒಂದು ನೆಪವಾಗಬಾರದು. ಹಾಗೇನಾದರೂ ಆದರೆ, ಎಲ್ಲರೂ ಒಟ್ಟಿಗೇ ಮುಳುಗಬೇಕಾದೀತು!
ಕೊನೆಯ ಮಾತು: ಪಾಪ, ಸಾಬರೆಲ್ಲ ಸಾಬಸ್ತರೇ. ಅವರೇನಾದರೂ ಸಲ್ಲದ ಚೇಷ್ಟೆಗಳನ್ನು ಮಾಡುತ್ತಿದ್ದರೆ, ಅದು ಅವರ ಅಲ್ಪಸಂಖ್ಯಾತತೆಯ ಅಭದ್ರತೆಯಿಂದಾಗಿ ಮಾತ್ರ ಎಂದು ವಾದಿಸುವ ಕೆಲವು ವಕ್ರ ಎಡಪಂಥೀಯರಿಗೆ ಸರಿಯಾದ ಉತ್ತರ ಕೊಡಲೆಂದೇ ಸಕಲ ಸಿದ್ಧತೆಗಳೊಂದಿಗೆ ಬರಯಲ್ಪಟ್ಟಂತೆ ತೋರುವ ಈ 'ಆವರಣ'ದಲ್ಲಿ; 'ನೀನೇನಾದರೂ ಆ ಮುಸ್ಲಿಮನನ್ನು ಮದುವೆಯಾದಲ್ಲಿ, ಮುಂದೊಂದು ದಿನ ನಮ್ಮ ದೇವಸ್ಥಾನಗಳನ್ನು ಒಡೆಯುವ ಮಕ್ಕಳನ್ನೋ ಮೊಮ್ಮಕ್ಕಳನ್ನೋ ಪಡೆಯುವ ಪಾಪಕ್ಕೆ ನೀನು ಗುರಿಯಾಗುವೆ' ಎಂದು ತನ್ನ ಮಗಳಿಗೆ ಎಚ್ಚರಿಕೆ ಕೊಡುವ ತಂದೆಯೊಬ್ಬನನ್ನು ಪ್ರಖರ ಗಾಂಧಿವಾದಿಯನ್ನಾಗಿ ಚಿತ್ರಿಸಿರುವ ಭೈರಪ್ಪನವರು, ಆ ಗಾಂಧಿವಾದಿಯು ಶೇಷಾ ಶಾಸ್ತ್ರಿ ಎಂಬ ವೇದಶಾಸ್ತ್ರ ಪ್ರವೀಣನಾದ ಬ್ರಾಹ್ಮಣನೊಬ್ಬನಿಂದ ಮಾರ್ಗದರ್ಶನ ಪಡೆಯುವ ಒಕ್ಕಲಿಗನನ್ನಾಗಿ ಗುರುತಿಸುವ ಮೂಲಕ, ಒಂದೇ ಕಲ್ಲಿನಲ್ಲಿ ಎರಡು-ಮೂರು ಹಣ್ಣುಗಳನ್ನು ಹೊಡೆದುರುಳಿಸುವ ಪ್ರಯತ್ನ ಮಾಡಿದ್ದಾರೆ. ಶ್ರೀಮಾನ್ ದೇವೇಗೌಡರೇ ಗಮನಿಸಿ-ಇದು ನಿಮಗಾಗಿ!
ಇಂತಹ ಕುತಂತ್ರ ಬುದ್ಧಿಯ ನಾಯಕತ್ವವೇ ನಿಜವಾಗಿ ಹಿಂದೂ ಧರ್ಮಕ್ಕೆ ಉರುಳಾಗಿರವುದು;ಸಾಬರೂ ಅಲ್ಲ, ಕ್ರಿಶ್ಚಿಯನ್ನರೂ ಅಲ್ಲ.ಇದೇ 'ಆವರಣ' ಹೇಳುವ ಪರೋಕ್ಷ ಸತ್ಯವೂ ಆಗಿದೆ!
Comments
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by prapancha
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ಶ್ರೀಶಕಾರಂತ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ಶ್ರೀಶಕಾರಂತ
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by honnalichandra…
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by honnalichandra…
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by prapancha
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by prapancha
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by honnalichandra…
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ritershivaram
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by prapancha
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by prapancha
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by uniquesupri123
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ksmanju
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by uniquesupri123
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by uniquesupri123
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by phmd
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by phmd
ಉ:
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by phmd
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ksmanju
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ranganath
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!
In reply to ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ! by ramesh-m
ಉ: 'ಆವರಣ' ಎಂಬ ರಾಜಕೀಯ ಕಾರ್ಯಕ್ರಮ!