ಕಿವಿಯಿಂದಿಳಿದ ಸಂಗೀತದ ಗುಂಗು!!
ಮನುಷ್ಯನ ತಲೆಯ ಮೇಲೆ ದೇವರುಗಳೋ ದೆವ್ವಗಳೋ ಸವಾರಿ ಮಾಡುತ್ತ ಇರುತ್ತವಂತೆ . ಮಸ್ತಕದಿಂದಿಳಿಸಿದ ಪುಸ್ತಕಗಳ ಬಗ್ಗೆ ಹಿಂದೆ ಬರೆದಿದ್ದೆ . ಈಗ ಇದನ್ನು ಓದಿ.
ವರುಷ ೧೯೭೬ ಇರಬಹುದು. ಎಂಟನೇ ಕ್ಲಾಸಿನಲ್ಲಿದ್ದೆ . 'ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನೀ ಸ್ನೇಹ ಸಂಬಂಧ ' ಹಾಡನ್ನು ಕ್ಲಾಸಿನಲ್ಲಿ ಗುನುಗುನಿಸಿ ಬೈಸಿಕೊಂಡಿದ್ದು ನೆನಪಿದೆ. ಆಗಲೇ ವಿವಿಧಭಾರತಿಯಲ್ಲಿ ಎಮ್.ಎಸ್,ಐ .ಎಲ್ ನವರು ವಾರಕ್ಕೊಮ್ಮೆ ನಡೆಸಿಕೊಡುತ್ತಿದ್ದ ಗೀತಲಹರಿ ( ಅಥವಾ ಬೇರೇನೋ ಹೆಸರು) ಕಾರ್ಯಕ್ರಮದಿಂದ ಭಾವಗೀತೆಗಳ ಬೇಂದ್ರೆ , ಕಂಬಾರ , ಮೈಸೂರು ಅನಂತಸ್ವಾಮಿ , ಪಿ.ಕಾಳಿಂಗರಾಯರು , ಅಶ್ವತ್ಥ , ಸುಬ್ಬಣ್ಣ ಮುಂತಾದ ಗಾಯಕರು , ಕವಿಗಳ ಬಗೆಗೆ ಗೊತ್ತಾಗಿದ್ದು . ೧೯೭೭-೭೮ ರ ಸುಮಾರಿಗೆ ಟೇಪ್ ರಿಕಾರ್ಡರ್ ಎಲ್ಲೆಲ್ಲೂ . ಆಗ ಕುರ್ಬಾನಿ ಹಾಡು ಎಲ್ಲೆಲ್ಲೂ ಮೊಳಗುತ್ತಿತ್ತು . ಆಗ ಬಂದ ಕನ್ನಡದ ಮೊದಲ ಭಾವಗೀತೆಗಳ ಕ್ಯಾಸೆಟ್ಟೇ ಕೆ. ಎಸ್. ನಿಸ್ಸಾರ್ ಅಹ್ಮದ್ ರ ನಿತ್ಯೋತ್ಸವ ನಮ್ಮ ಮನೆಗೂ ಬಂದಿತು. ೧೯೮೦ರಲ್ಲಿರಬಹುದು . ಧಾರವಾಡದಲ್ಲಿ ಆಗ ಜಾನಪದ ಗಾಯಕ ಬಾಳಪ್ಪ ಹುಕ್ಕೇರಿ ಅವರ ಕ್ಯಾಸೆಟ್ ಮನೆಯಲ್ಲಿ ಹಚ್ಚಿ ಕೇಳುತ್ತಿದ್ದಾಗ ಅದನ್ನು ಬಾಗಿಲಲ್ಲಿ ಬಂದವರು ಯಾರು ಗೊತ್ತೇ ? ಸ್ವತಹ ಬಾಳಪ್ಪ ಹುಕ್ಕೇರಿ ಅವರೇ ! ಪಕ್ಕದ ಮನೆಗೆ ಬಂದಿದ್ದರಂತೆ , ತಮ್ಮ ಹಾಡು ಪಕ್ಕದ ಮನೆಯಿಂದ ಕೇಳಿ ಸಂತೋಷ ಪಟ್ಟು ನಮ್ಮ ಮನೆಗೆ ಬಂದಿದ್ದರು!
ಆಗ ಕಾಲೇಜು ದಿನಗಳು ಧಾರವಾಡ ಮುಖ್ಯ ಸ್ಟೇಶನ್ನು , ಮತ್ತೆ ವಿವಿಧಭಾರತಿ , ಅಷ್ಟೇ ಏಕೆ ದುರದ ಭದ್ರಾವತಿ , ಬೆಂಗಳೂರು , ಗುಲ್ಬರ್ಗಾ, ಮಂಗಳೂರು ಆಕಾಶವಾಣಿ ಕೇಂದ್ರಗಳಿಂದ ಕೇಳದ ಭಾವಗೀತೆ , ಭಕ್ತಿಗೀತೆ , ಚಿತ್ರಗೀತೆ ಗಳಿಲ್ಲ . ದೂರದ ಸಿಲೋನಿನಿಂದ ಬರುತ್ತಿದ್ದ ಕನ್ನಡ , ಹಿಂದಿ , ಇಂಗ್ಲೀಷ್ ಹಾಡುಗಳನ್ನೂ ಕೇಳುತ್ತಿದ್ದೆ . ಧಾರವಾಡ ವಿವಿಧ ಭಾರತಿ ೧೧ ಗಂಟೆಗೆ ಬಂದ್ ಆದರೆ ರಾತ್ರಿ ಹನ್ನೊಂದೂವರೆ ವರೆಗೆ ಮುಂಬೈ ವಿವಿಧಭಾರತಿಯಲ್ಲಿ ಹಾಡುಗಳು ಬರುತ್ತಿದ್ದವು . ಟ್ರಾನ್ಸಿಸ್ಟರ್ ಹcಚಿಕೊಂಡು ಕೇಳುತ್ತ ಮಲಗಿ ಬಿಡುತ್ತಿದ್ದೆ . ಯಾವಾಗಲೋ ಅವ್ವ ಬಂದು ಬಂದ್ ಮಾಡಿ ಎತ್ತಿಡುತ್ತಿದ್ದಳು . ಅಮೇಲೆ ಟೀವೀ , ಕೇಬಲ್ ಬಂದು ಕೆಲಸ , ವರ್ಗಾವರ್ಗಿ ಜಂಜಾಟದಲ್ಲಿ ರೇಡಿಯೋ ಕೇಳುವುದು ಕಡಿಮೆ ಆಯಿತು . ಆದರೂ ಕ್ಯಾಸೆಟ್ ಸಂಗ್ರಹ ಬೆಳೆಯುತ್ತಲೇ ಇತ್ತು .
ನಂತರ ಮದುವೆ ಆಯಿತು . ರೇಡಿಯೋ , ಡಬಲ್ ಕ್ಯಾಸೆಟ್ ಡೆಕ್ , ಮೂರು ಸೀಡೀ ಚೇಂಜರ್ ಇರುವ ೧೨೦೦ ವ್ಯಾಟ್ ನ ೧೫೦೦೦ ಬೆಲೆಯ ಫಿಲಿಪ್ಸ್ ಮ್ಯೂಸಿಕ್ ಸಿಸ್ಟಮ್ ೨೦೦೨ ರಲ್ಲಿ ಮನೆಗೆ ಬಂದರೂ , ಹೆಂಡತಿ ಅಥವಾ ನಾನು ಟೀವೀ ನೊಡುತ್ತಿದ್ದಾಗಲಂತೂ ಮೌನವಾಗೇ ಇರುತ್ತಿತ್ತು .
ಟೀವೀ ನೋಡದಿದ್ದಾಗ ಕ್ಯಾಸೆಟ್ ಹಚ್ಚುತ್ತಿದ್ದೆ . ಜೋರಾಗಿ ಕೇಳಿದರೇ ಮಾತ್ರ ಕೇಳಿದ ಹಾಗೆ ಅಂತ ನನಗೆ ಅನ್ನಿಸೋದು . ವಾಲ್ಯೂಮ್ ಕಡಿಮೆ ಮಾಡಿ ಅಂತ ನನ್ನ ಹೆಂಡತಿ ಅನ್ನೋಳು . ಕೇಳಿದರೆ ಜೋರಾಗೇ ಕೇಳಬೇಕು . ಇಲ್ಲದಿದ್ದರೆ ಬೇಡವೇ ಬೇಡ ಅನ್ನೋದು ನನ್ನ ಅಂಬೋಣ . ಫಲಿತಾಂಶ ? ಅದು ಆಫ್! . ಅದರಲ್ಲಿ ಡಬಲ್ ಕ್ಯಾಸೆಟ್ ವ್ಯವಸ್ಥೆಯಿದ್ದು ಒಂದು ಕ್ಯಾಸೆಟ್ಟಿನಿಂದ ಇನ್ನೊಂದಕ್ಕೆ ವರ್ಗಾಯಿಸಬಹುದಿತ್ತು . ಒಂದು ಕ್ಯಾಸೆಟ್ ನಲ್ಲಿರೋ ಎಲ್ಲ ಹಾಡು ನಮಗೆ ಸೇರಿರಲಿಕ್ಕಿಲ್ಲ ಅಲ್ಲವೇ . ನಮಗೆ ಬೇಕಾದ ಹಾಡುಗಳನ್ನಷ್ಟೇ ಕೇಳೋದು ಹೇಗೆ ? ಅದಕ್ಕೆ ನನಗೆ ಬೇಕಾದ ಹಾಡುಗಳನ್ನು ಮಾತ್ರ ಹೊಸ ಕ್ಯಾಸೆಟ್ಟುಗಳಿಗೆ ಡಬ್ ಮಾಡಿಕೊಂಡದ್ದಾಯಿತು . ಎರಡು ಮೂರು ವರುಷದ ಹಿಂದೆ ಆ ಸಿಸ್ಟಮ್ ಕ್ಯಾಸೆಟ್ ಫಾರ್ವರ್ಡ್ / ರಿವರ್ಸ್ ಆಗದ ಹಾಗೆ ಆಯಿತು . ಒಂದು ಸಾವಿರ ಕೊಟ್ಟು ರಿಪೇರಿ ಮಾಡಿಸಿದ್ದರೂ ಸರಿಯಾಗಲಿಲ್ಲ . ಹೇಗೂ ಬಳಸುತ್ತ ಇರಲಿಲ್ಲವಲ್ಲ . ಅಷ್ಟಕ್ಕೇ ಬಿಟ್ಟು ಬಿಟ್ಟಿದ್ದೆ . ಆದರೂ ಕ್ಯಾಸೆಟ್ ಸಂಗ್ರಹ ಇದ್ದೇ ಇತ್ತಲ್ಲ . ಸಂಗ್ರಹ ಬುದ್ಧಿ ಒಳ್ಳೆಯದಲ್ಲ ಅಂತ ಯರೋ ಹೇಳಿದ್ದಾರೆ . ಆದರೂ ಒಳ್ಳೆಯದನ್ನ ಸಂಗ್ರಹಿಸುತ್ತಾ ಹೋಗಬೇಕೆನ್ನುವ ಬುದ್ಧಿ . ಹೊಸದನ್ನ ಸೇರಿಸದಿದ್ದರೂ ಇದ್ದ ಸಂಗ್ರಹ(ಅದೂ ಮೂರು ದಶಕ ಗಳದ್ದು )ವನ್ನಾದರೂ ಉಳಿಸಿಕೊಳ್ಲಬೇಕಲ್ಲ ? ಕ್ಯಾಸೆಟ್ ಬಳಸದೇ ಇದ್ದರೆ ಕೆಟ್ಟು ಹೋಗುವುವು ಏನೋ ? ಇದ್ದ ಹಾಡುಗಳೆಲ್ಲ ಸೀಡೀ ಯಲ್ಲಿ ಸಿಗುವುದು ಅನುಮಾನ .
ಅಷ್ಟು ಹೊತ್ತಿಗೆ ಕಂಪ್ಯೂಟರ್ರು , ಇಂಟರ್ನೆಟ್ಟು ಮನೆಗೆ ಬಂದಿತು . ಕತೆಯನ್ನು ಹೆಚ್ಚು ಬೆಳೆಸದೇ ಹೇಳಬೇಕೆಂದರೆ ... ಕೆಲವನ್ನ ಇಂಟರ್ನೆಟ್ಟಿಂದ ಡೌನ್ಲೋಡ್ ಮಾದಿಕೊಂಡೆ . ಅಲ್ಲಿ ಸಿಗದ್ದನ್ನ ... ಇನ್ನೊಂದು ( ಹೌದು !) ಫಿಲಿಪ್ಸ್ ಸಿಸ್ಟಂ - ಕ್ಯಾಸೆಟ್ / ಸೀಡೀ /ರೇಡಿಯೋ ದಿಂದ ಎಂಪಿ೩ ಗೆ ಬದಲಿಸಿ ಯೂಎಸ್ ಬಿ ಡ್ರೈವ್ ನಲ್ಲಿ ಉಳಿಸುವ ರಿಪ್ಪರ್ ಸಿಸ್ಟಂ - ಖರೀದಿ ಮಾಡಿ ಎಂ ಪಿ೩ ಗೆ ಬದಲಿಸಿದ್ದೇನೆ . ಅದರಿಂದ ನನ್ನ ಕ್ಯಾಸೆಟ್ ರಾಶಿ ಕರಗಿತು. ಇನ್ನೊಂದು ಹತ್ತು ಉಳಿದಿವೆ .. ಹೊಸ ವರ್ಷ ಬರುವುದರ ಒಳಗಾಗಿ ಅವನ್ನೂ ಎಂಪಿ೩ ಗೆ ಬದಲಿಸುವ ಗುರಿ ಹೊಂದಿದ್ದೇನೆ . ಆಗದಿದ್ದರೂ ತೊಂದರೆ ಇಲ್ಲ . ಇದ್ದುಕೊಳ್ಳಲಿ! .
ಮುಖ್ಯ ವಿಷಯ ಅಂದರೆ ಹೊಸ ಹಾಡುಗಳನ್ನು ಕೇಳುತ್ತಿಲ್ಲ ; ತೀರಾ ಒಳ್ಳೆಯ ಹಳೆಯವನ್ನು ಇಟ್ಟುಕೊಂಡಿದ್ದೇನೆ ಅಷ್ಟೇ. ಬೇಕಾದಾಗ ಕೇಳಬಹುದು . ಅವನ್ನೂ ಕೇಳುತ್ತಿಲ್ಲ ; ಹೀಗಾಗಿ ಈಗೀಗ ಮೌನವನ್ನು ಆಲಿಸುತ್ತಿದ್ದೇನೆ . ತಲೆಯಲ್ಲಿ ತುಂಬಿದ್ದ ಸಂಗೀತ / ಹಾಡುಗಳ ಗುಂಗೂ ಮಾಯವಾಗಿದೆ !
Comments
ಉ: ಕಿವಿಯಿಂದಿಳಿದ ಸಂಗೀತದ ಗುಂಗು!!
ಉ: ಕಿವಿಯಿಂದಿಳಿದ ಸಂಗೀತದ ಗುಂಗು!!