ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ...
(ತುಂಬ ದಿನಗಳ ಹಿಂದೆ ಬರೆದು ಮರೆತ ಬರಹ ಇದು. ಥೇಟ್ ಕಟ್ಟಿಟ್ಟು ಮರೆತ ಕಾಣಿಕೆಯಂತೆ. ಊರು ಬಿಟ್ಟು ಬಂದವರಿಗೆ, ಪ್ರೀತಿಯ ಜೀವಗಳನ್ನು ದೂರದಲ್ಲಿ ಬಿಟ್ಟು ತಪಿಸುತ್ತಿರುವ ಎಲ್ಲರಿಗೂ ಹೊಸ ವರ್ಷದ ಸಂದರ್ಭಕ್ಕೆಂದು ಇದನ್ನು ಅರ್ಪಿಸುತ್ತಿದ್ದೇನೆ.)
ಎಲ್ಲಿದ್ದೀ ಜೀವವೆ?
ಹುಷಾರಾಗಿ ಪತ್ರಿಕೆಯನ್ನು ಎತ್ತಿಕೋ. ಮೆಲುವಾಗಿ ಪುಟಗಳನ್ನು ಬಿಡಿಸು. ಒಮ್ಮೆ ಉಸಿರು ಬಿಟ್ಟು, ಮನಸ್ಸನ್ನು ಸ್ವಸ್ಥವಾಗಿಸಿಕೊಂಡು ಇದನ್ನು ಓದು.
ಏಕೆಂದರೆ ಇವು ಬರಿ ಅಕ್ಷರಗಳಲ್ಲ. ಇಲ್ಲಿ ನನ್ನ ಹೃದಯವಿದೆ.
ನೀನು ಈ ಬರಹವನ್ನು ಓದುವ ಹೊತ್ತಿಗೆ ಹೊಸ ವರ್ಷದ ಸೂರ್ಯ ನಿನ್ನ ಮನೆಯ ಕಿಟಕಿಯನ್ನು ದಾಟಿ, ಹಾಲ್‌ನಲ್ಲಿ ಮಿನುಗುತ್ತಿರುತ್ತಾನೆ. ನಿನ್ನ ಕಾಫಿ ಹಬೆಯಾಡುತ್ತಿರುತ್ತದೆ. ಬೆಚ್ಚನೆಯ ಸ್ವೆಟರ್‌ನ ಒಳಗೆ ನಿನ್ನ ಹೃದಯವೂ ಬೆಚ್ಚಗಿರುತ್ತದೆ ಎಂಬುದು ನನಗೆ ಗೊತ್ತು. ಕಾಫಿಯ ಬಿಸಿ ಗುಟುಕು ತುಟಿಗಳನ್ನು ಸೋಕಿ, ನಾಲಗೆಯಲ್ಲಿ ಹರಡಿ, ಅನ್ನನಾಳವನ್ನು ಬೆಚ್ಚಗಾಗಿಸುತ್ತ ಜಠರ ಪ್ರವೇಶಿಸಿ ನಿನ್ನನ್ನು ಸೇರಿಕೊಳ್ಳುವ ಈ ಹೊತ್ತು ನಾನಲ್ಲಿರಬೇಕಿತ್ತು.
ಆದರೆ ತುಂಬ ದೂರ ಉಳಿದುಬಿಟ್ಟಿದ್ದೇನೆ. ಅದಕ್ಕೆಂದೇ ಈ ಬರಹ. ನಿನಗಾಗಿ. ನಿನ್ನ ನೆನಪಿಗಾಗಿ.
ನಾನಿದನ್ನು ಹಳೆಯ ವರ್ಷದ ಕೊನೆಯ ದಿನಗಳಲ್ಲಿ ಕೂತು ಬರೆಯುತ್ತಿದ್ದೇನೆ. ಒಂದು ಕ್ಷಣ ನನಗೆ ಅಚ್ಚರಿಯಾಗುತ್ತಿದೆ. ಹೃದಯದ ಭಾವನೆಗಳು ಅದ್ಹೇಗೆ ಅಕ್ಷರಗಳಾಗಿ, ಕಂಪ್ಯೂಟರ್‌ನಂತಹ ನಿರ್ಲಿಪ್ತ ಯಂತ್ರದ ಕೀಲಿಮಣೆಯಲ್ಲಿ ಮುದ್ರಿತವಾಗುತ್ತ, ಮಾಯಾ ಪರದೆಯೊಳಗೆ ಹರಡಿಕೊಳ್ಳುತ್ತ, ಫೋನ್ ಲೈನಿನಲ್ಲಿ ವಿದ್ಯುತ್ಕಾಂತೀಯ ತರಂಗಗಳಾಗುತ್ತ ಅದೆಲ್ಲೋ ಇರುವ ಇನ್ನೊಂದು ಕಂಪ್ಯೂಟರ್‌ನಲ್ಲಿ ಬಿಚ್ಚಿಕೊಂಡು ಮತ್ತೆ ಅಕ್ಷರಗಳಾಗಿ, ಪುಟಕ್ಕಿಳಿದು ಮಸಿಯಾಗಿ ಹರಡಿ, ಓದುವ ನಿನ್ನ ಮನಸ್ಸಿನೊಳಗೆ ಭಾವನೆಗಳಾಗಿ ಅರಳುತ್ತವಲ್ಲವೆ?
ನಿಜಕ್ಕೂ ಇದು ಅಚ್ಚರಿಯ ಸಂಗತಿಯೇ. ಇಲ್ಲಿ ನನ್ನ ಹೃದಯ ಹಳೆಯ ನೆನಪುಗಳನ್ನು ಕೆದಕಿದರೆ ಅಲ್ಲೆಲ್ಲೋ ಇರುವ ನಿನ್ನ ಹೃದಯದೊಳಗೆ ನೆನಪುಗಳು ಮಿಸುಕಾಡುತ್ತವೆ. ಮನಸ್ಸು ಕಾಲನ ಹಿಂದೆ ಜಾರುತ್ತ ಜಾರುತ್ತ, ಉತ್ತರದ ಈ ನಗರದ ಹಸಿರುಕ್ಕುವ ಬೀದಿಗಳಲ್ಲಿ ಓಡುತ್ತ, ಕಂಪೌಂಡ್ ನೆಗೆದು, ಬಾಗಿಲು ತಳ್ಳಿ ಧಾವಿಸಿ ಬಂದು ಹೃದಯ ಸೇರುತ್ತವೆ. ಭಾವನೆಗಳು ಸುನಾಮಿಯಾಗಿ ನೆನಪುಗಳು ಕಣ್ಣೀರಾಗಿ ಹನಿಯುತ್ತವೆ. ತಂತ್ರಜ್ಞಾನದ ಎಲ್ಲ ವಿಸ್ಮಯಗಳನ್ನು ದಾಟಿ ನೆನಪುಗಳು ಮತ್ತೆ ಭಾವನೆಗಳಾಗುತ್ತವೆ. ಎಲ್ಲ ನಿಯಮಗಳನ್ನು ಮುರಿದು ಕಾಲ ಹಿಂದಕ್ಕೋಡಿ, ಹಳೆಯ ದಿನಗಳು ಮತ್ತೆ ಪ್ರತ್ಯಕ್ಷವಾಗುತ್ತವೆ.
ಅದಕ್ಕೆಂದೇ ಚಳಿ ತುಂಬಿದ ಈ ರಾತ್ರಿಯ ಕಾವಳಿನಲ್ಲಿ ನೆನಪುಗಳ ಅಗ್ಗಿಷ್ಟಿಕೆ ಹೊತ್ತಿಸಿ ಇವನ್ನೆಲ್ಲ ಬರೆಯುತ್ತಿದ್ದೇನೆ. ನನಗೆ ಗೊತ್ತು, ಅಲ್ಲೆಲ್ಲೋ ಇರುವ ನೀನು ಇದನ್ನು ಓದಿ ಕಣ್ಣಿರಾಗುತ್ತೀ. ನಿನ್ನ ಮನಸ್ಸೂ ಹಿಂದಕ್ಕೆ ಹೋಗುತ್ತದೆ. ಹಳೆಯ ದಿನಗಳನ್ನು ಕಣ್ಣ ಮುಂದೆ ತಂದುಕೊಳ್ಳುತ್ತ ಹೊಸ ವರ್ಷದ ಸೂರ್ಯನ ಎಳೆ ಬಿಸಿಲಿನಲ್ಲಿ ಮನಸ್ಸು ಯಾತ್ರೆ ಹೊರಡುತ್ತದೆ. ಅದಕ್ಕೇ ಹೇಳಿದ್ದು: ಮರೆಯಾಗಿದ್ದನ್ನು ನೆನಪಿಸಿಕೊಂಡು, ದಕ್ಕದ್ದಕ್ಕೆ ದುಃಖಿಸಿಕೊಂಡು, ವರ್ತಮಾನದ ವಾಸ್ತವದ ನಡುವೆ ಭೂತಕಾಲದ ಸವಿಯಲ್ಲಿ ಮುಳುಗಿ ಹೋಗುವ ನಾವು ನಿಜಕ್ಕೂ ಹುಚ್ಚರೇ ಎಂದು.
ಇರಲಿ. ಬದುಕು ಇರುವುದೇ ಹಾಗೆ. ವರ್ತಮಾನದ ಮರಕ್ಕೆ ಭೂತಕಾಲವೇ ಬೇರು. ಕನಸುಗಳೇ ಭವಿಷ್ಯತ್ತು. ನಾವೆಲ್ಲ ಬದುಕಿದ್ದೇ ಹೀಗೆ. ಬದುಕುವುದೇ ಹೀಗೆ. ಆದ್ದರಿಂದಲೇ ಆಗಾಗ ನೆನಪುಗಳನ್ನು ಕೆದಕಿಕೊಳ್ಳುತ್ತೇವೆ. ವಾಸ್ತವದ ಬಿಸಿಯನ್ನು ಕಳೆದು ಹೋದ ದಿನಗಳ ತಂಪಿನಲ್ಲಿ ತಣಿಸುತ್ತೇವೆ. ಮನದಾಳದಲ್ಲಿ ಕಂಪನವಾಗದಿದ್ದರೆ ನೆನಪುಗಳ ಸುನಾಮಿ ಎದ್ದೀತೆ? ದಡಕ್ಕೆ ಅಪ್ಪಳಿಸಿ ವಾಸ್ತವವನ್ನು ಕೊಚ್ಚಿ ಹಾಕದೆ ಹೋದೀತೆ? ಹೌದು. ನಾವೆಲ್ಲ ಒಡಲಲ್ಲಿ ನೆನಪುಗಳ ತೀವ್ರ ತಾಕಲಾಟ ಹೊಂದಿರುವ ಮೌನ ಸಾಗರಗಳು. ಒಂದಿನ ತಾಕಲಾಟ ಮೇರೆ ಮೀರುತ್ತದೆ. ಸಾಗರ ಉಕ್ಕುತ್ತದೆ. ನೆನಪುಗಳು ಸುನಾಮಿಯಾಗಿ ದೂರದ ತೀರದಲ್ಲಿರುವ ಎಲ್ಲರನ್ನೂ ತಲುಪುತ್ತವೆ.
ಈ ಬರಹ ನಿನ್ನನ್ನು ತಲುಪಿದ್ದು ಹೀಗೆ.
ವರ್ಷದ ಕೊನೆಯ ದಿನಗಳ ಮಂಕು ಸೂರ್ಯನ ಬೆಳಕಿನಲ್ಲಿ ಹಳೆಯ ನೆನಪುಗಳನ್ನು ಆರಲು ಹಾಕಿದ್ದೇನೆ. ಜತೆಯಾಗಿ ಓದಿದ ದಿನಗಳು ಮನದಂಗಳದ ತುಂಬ ಹರಡಿಕೊಂಡಿವೆ. ಯಾವುದನ್ನು ಮೊದಲು ನೆನೆಯಲಿ? ಯಾವುದನ್ನು ನೆನೆಯದೇ ಇರಲಿ? ಮೊದಲ ದಿನದ ದಿಗಿಲು, ನಂತರದ ದಿನಗಳ ಪುಳಕಗಳ ಜತೆಗೆ ಜತೆಯಾಗಿ ನಲಿದ ಸಾವಿರಾರು ನೆನಪುಗಳು ಅಲೆಅಲೆಯಾಗಿ ಉಕ್ಕುತ್ತಿವೆ. ಕಾರಣವಿಲ್ಲದೇ ನಗುತ್ತಿದ್ದ ನೆನಪುಗಳ ಬುತ್ತಿ ಗಂಟು ಕರಗುವುದಾದರೂ ಹೇಗೆ ಹೇಳು!
ಇರಲಿ. ಆ ಬುತ್ತಿ ಗಂಟು ಕರಗುವುದೇ ಬೇಡ. ಜೀವನಯಾತ್ರೆ ದಣಿವು ಮೂಡಿಸಿದಾಗೊಮ್ಮೆ ಬುತ್ತಿ ಗಂಟು ಇಳುವಿಕೊಳ್ಳೋಣ. ಅಲ್ಲೇ ನೆರಳಿನಲ್ಲಿ ಕೂತು ಬಿಚ್ಚೋಣ. ಅದರ ಮಡಿಕೆಯೊಳಗಿನಿಂದ ನೆನಪುಗಳನ್ನು ಒಂದೊಂದಾಗಿ ಬಿಚ್ಚಿ ಸವಿಯೋಣ. ಸವಿಯುತ್ತ ಸವಿಯುತ್ತ ಮರೆತು ಕಟ್ ಅಂತ ಖಾರ ಕಡಿದರೆ ಅಲ್ಲೇ ಪಕ್ಕದಲ್ಲಿದ್ದ ಸಿಹಿಯನ್ನು ಬಾಯಿಗೆ ಹಾಕಿಕೊಳ್ಳೋಣ. ಉಪ್ಪಿನಕಾಯಿ ನೆಕ್ಕಿಕೊಂಡು ರಸ ಉಕ್ಕಿಸಿಕೊಳ್ಳೋಣ. ದಣಿವಾರುವವರೆಗೆ ನೆನಪುಗಳ ಭೋಜನ ಸಾಗಲಿ. ಎಂದೂ ಕರಗದ ಈ ಬುತ್ತಿ ಗಂಟು ಯಾವಾಗಲೂ ಜತೆಯಲ್ಲಿರಲಿ.
ಹೊಸ ವರ್ಷದ ಎಳೆ ಬಿಸಿಲಿನಲ್ಲಿ ಕೂತು ಇದನ್ನೆಲ್ಲ ಓದುತ್ತಿರುವ ನಿನಗೆ ಮತ್ತೇನು ಹೇಳಲಿ? ಹೋದ ವರ್ಷ ಏನೇನು ಕನಸು ಕಂಡಿದ್ದೆಯೋ ನೀನು. ಎಷ್ಟು ಈಡೇರಿದವೋ! ಎಷ್ಟು ಮತ್ತೆ ಕನಸುಗಳಾಗಿಯೇ ಉಳಿದವೋ! ಇರಲಿ. ಈ ವರ್ಷಕ್ಕೆಂದು ಒಂದಿಷ್ಟು ನಿರ್ಧಾರಗಳನ್ನು ತೆಗೆದುಕೋ. ನಿನ್ನ ಸಾಧನೆಗಳ ಪಟ್ಟಿ ಮಾಡು. ಅದರ ಜತೆಗೇ ಸೋಲುಗಳ ಪಟ್ಟಿಯೂ ಇರಲಿ. ಸಾಧನೆಗಳನ್ನು ಕಂಡು ಸಂತಸ ಪಡು. ಸೋಲುಗಳನ್ನು ಈ ವರ್ಷದ ನಿರ್ಧಾರಗಳ ಪಟ್ಟಿಗೆ ಸೇರಿಸು. ಈ ವರ್ಷ ಇವನ್ನೆಲ್ಲ ಗೆಲ್ಲುತ್ತೇನೆ. ಇನ್ನಷ್ಟು ಮಾಗುತ್ತೇನೆ. ಮತ್ತಷ್ಟು ಬೆಳೆಯುತ್ತೇನೆ ಎಂದು ಭರವಸೆ ತಂದುಕೋ. ನಂತರ ಸೋಲು-ಸಾಧನೆಗಳ ಪಟ್ಟಿಯನ್ನು ನೆನಪಿನ ಬುತ್ತಿ ಗಂಟಿಗೆ ಸೇರಿಸಿ, ಕಟ್ಟಿ, ಮರೆತುಬಿಡು.
ಅರೆ! ಕಾಫಿ ಆರಿತೇನೋ. ನೆನಪುಗಳು ನಿನ್ನ ಕಣ್ಣೀರು ಉಕ್ಕಿಸಿದವೇನೋ. ಇರಲಿ ಬಿಡು ಜೀವವೇ. ಹೊಸ ವರ್ಷಕ್ಕೆ ಇದಕ್ಕಿಂತ ಸುಂದರವಾದ ಶುಭಾಶಯ ಏನು ಹೇಳಲಿ? ಆರುವ ಮುನ್ನ ಹೀರಿದ ಕಾಫಿಯೇ ನಿನ್ನ ಸಾರ್ಥಕ ಬದುಕು. ಅದನ್ನು ಮನಃಪೂರ್ವಕ ಸವಿ. ಕುಡಿದ ಕಾಫಿ ಕರಗಿ ಹೋಗಬಹುದು. ಆದರೆ, ಕುಡಿದಾಗಿನ ಸುಖ ಒಂದು ಸುಂದರ ನೆನಪು.
ಅಂತಹ ಸುಂದರ ನೆನಪುಗಳು ನಿನ್ನವಾಗಲಿ. ರುಚಿಯಾದ ಕಾಫಿಯಂತೆ, ಎಳೆ ಸೂರ್ಯನ ಬಿಸಿಯಂತೆ, ಸೊಗಸಾದ ಬರಹದಂತೆ, ಹೊಸ ವರ್ಷ ನಿನ್ನನ್ನು ಸುಖವಾಗಿಡಲಿ. ಹೊಸ ಸವಾಲುಗಳು ಬರಲಿ, ಅವನ್ನು ಎದುರಿಸುವ ಶಕ್ತಿಯೂ ಇರಲಿ. ನೀನು ಎಲ್ಲೇ ಇರು, ಹೇಗೇ ಇರು, ನೆನಪುಗಳ ಬುತ್ತಿಗಂಟನ್ನು ಸಮೃದ್ಧವಾಗಿಸುತ್ತಿರು.
ಏಕೆಂದರೆ ಕೊನೆಗೆ ನಿನ್ನ ಬಳಿ ಉಳಿಯುವುದು ಅದೊಂದೇ!
- ಚಾಮರಾಜ ಸವಡಿ
Comments
ಉ: ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ...
In reply to ಉ: ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ... by manju787
ಉ: ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ...