ಕೈಲಾಸಂ ಬರಹ - ಮಾದರಿ
ಕೈಲಾಸಂ ಚತುರೋಕ್ತಿ - ಕೆಲ ಮಾದರಿಗಳು
* ಹಾರ್ಮಣಿ (Harmonium) ಬಾರ್ಸೋ ಕೈ ಹಾಲ್ಕಾಸೀತೇ?
* ನಮ್ನಾಗತ್ತೆಗೆ ಮೀಸೆ ಬಂದ್ರೆ .... ಚಿಕ್ಕಪ್ಪಾಂತ ಕೂಗಬಹುದು
* ಸಾಕೋದನ್ ಅರಿತಾತ ಸಾವಿರಜನಕ್ ತ್ರಾತ
* ಈ ಭೂಮೀಲಿ ಜೀವಿಸೋಕೆ ದೇವರಿಗೆ ಕೊಡೋ ಬಾಡಿಗೆ , ಸುತ್ತ ಮುತ್ತಲೂ ಇರೋ ಜನರಿಗೆ ಉಪಯೋಗವಾಗಿರೋದೇ...
* ಬೆದರ್ಕೊಂಡು ಬದ್ಕಿರೋದಕ್ಕೆ ಬದ್ಲಾಗೀ ಬ್ರೇವ್ ಆಗಿ ಬೆಂಕೀಲೀ ಬೀಳೋದ್ ಮೇಲೋ....
* ’Matrimony’ ಈಗಿನ ಕಾಲದಲ್ಲಿ matter of money’ ಆಗೋಗಿದೆ.
ಕೈಲಾಸಂ ಬರವಣಿಗೆಯ ಶೈಲಿ
(ನಾಟಕ : ಟೊಳ್ಳು ಗಟ್ಟಿ)
.....ಈಗಿನ್ಕಾಲ್ದಲ್ಲಿ ನಮ್ಮನೆಗ್ಳಲ್ಲಿ ಗಂಡ್ಮಗೂ ಹುಟ್ಟುತ್ಲೂನೂವೇ ಪಂಚಾಕ್ಷರಿ ಜಪ ಒಂದು ಪ್ರಾರಂಭಿಸಿಬಿಡ್ತೇವು..... ಮುಂ..ದ..ಕ್ಬ..ರ್‍ಬೇ..ಕು ಮುಂದಕ್ಬರ್‍ಬೇಕೂ ಅಂತ. .....ಮುಂದಕ್ಬರ್‍ಬೇಕೂ ಅಂದ್ರೇನೋ ದೇವರ್‍ಗೇ ಬೆಳ್ಳಂಬೆಳಕು. ಆ ಮಗನ್ನೋ ಎಂಟು ವಯಸ್ಸಾಗೋವರಿಗೂನೂ ಈ ಜಪ್ದಲ್ಲಿ ಅದ್ದೀ ಅದ್ದೀ ನೆನೆಸಿ, ಓದಿ ಪ್ಯಾಸ್ಮಾಡೋದಕ್ಕೆ ಸಾಗಿಸಿ ಬಿಡ್ತೇವು. ಸ್ಕೂಲಿನಲ್ಲಿ ಚೀನಾದೇಶದ ಚರಿತ್ರೆ! ಜಾರ್ಜಿಯಾದ ಜನಸಂಖ್ಯೆ! ಸೈಬೀರಿಯಾದ ಸಸ್ಯಾದಿಗಳು! ಅಬ್ಸೀನಿಯಾದ ಆಭರಣಗಳು! ಇವೇ ಮುಂತಾದ ನಮ್ಜನಗಳಿಗೆ ಖುದ್ದು ಉಪಯೋಗವಾಗುವ ವಿಷಯಗಳನ್ನ ವರ್ಷದ ಹನ್ನೆರಡ್ತಿಂಗ್ಳಲ್ಲಿ ಹನ್ನೊಂದುತಿಂಗ್ಳು ಜಜ್ಜೀ, ಜಜ್ಜೀ, ತುರುಕಿ..... ಈ ಅಮೋಘವಾದ ವಿಚಾರಗಳು ಮಕ್ಕಳ ಮನಸ್ಸಿಗೆ ನಾಟಿದೆಯೋ ಇಲ್ಲವೋ ಎಂಬ ಶಂಕೆಹುಟ್ಟಿ, ಅದು ಪರಿಹಾರ್‍ವಾಗೋದಕ್ಕೆ ಪರೀಕ್ಷೆ ಅಂತಿಡ್ತಾರೆ ಹನ್ನೆರಡ್ನೇ ತಿಂಗ್ಳಲ್ಲಿ. ಪರೀಕ್ಷೆ ದಿನ ಮನೇಲಿ ಗಲಭೆಯೋ ಗಲಭೆ! ಎಂಟೂವರೆ ಘಂಟೆಗಾಗ್ಲೇ ಊಟ..... ಹುಡ್ಗನಿಗೆ! ಪುಷ್ಕಳ್ವಾಗ್ತಿಂದ್ಬಿಟ್ಟು..... ನಮ್ಹುಡ್ಗ ದೇವರಿಗೆ ನಮಸ್ಕಾರ ಮಾಡ್ಬಿಟ್ಟು, ಅಮ್ಮನ ಬಾಯಿಂದ ಹರಸಿಕೊಂಡು..... ಅಜ್ಜೀ ಕೈಯಿಂದ ಹಣೇಗೆ ವಿಭೂತೀ ಇಡ್ಸಿಕೊಂಡು, ಹೊರ್ಡ್ತಾನೆ ನೋಡಿ ದಿಗ್ವಿಜಯಕ್ಕೆ! ಅಲ್ಲಿ ಅವನಿಗೆ ಸ್ವಾಗತ ಕೊಟ್ಟು..... ಖೈದಿಗಳಿಕ್ಕೊಡೋ ಹಾಗೆ ಒಂದ್ನಂಬರ್‍ಕೊಟ್ಟು..... ಮೇಜಿನ್ಮುಂದೆ ಕೂಡಿಸಿ.....ಪ್ರಶ್ನೆ ಕಾಗ್ದಾಂತ ಕೊಡ್ತಾರಿವನ್ಕೈಲಿ! ಅದನ್ನ ..... ನಮ್ಮುಡ್ಗ ..... ಎದ್ನಿತ್ಗೊಂಡು..... ಕಣ್ಗೊತ್ಗೊಂಡು.....ಆ ಪೇನಾನ..... ಆ ಮಸೀಲಿ ಅದ್ಕೊಂಡು ಸೂಜಿ ಚುಚ್ಚೋಜಾಗ್ದಲ್ಲಿ ಶ್ರೀ ಅಂತ ಬರೆದ್ಬಿಟ್ಟು ಪ್ರಾರಂಭಿಸ್ತಾನ್ನೋಡಿ ಆ ಬರೀ ಕಾಗದಗಳ್ಮೇಲೆ ವಾಂತಿ ಮಾಡೋದಕ್ಕೆ ! ಆ ಹಿಂದಿನ್ಹನ್ನೊಂದು ತಿಂಗಳೂ..... ಜಜ್ಜಿ ಜಜ್ಜೀ ಕುತ್ಗೇವರೆಗೂ ತುರಕ್ಕೊಂಡ ಸಮಾಚಾರಗಳನ್ನೆಲ್ಲಾ..... ಆ ಮೂರು ಘಂಟೆಗಳೊಳಗೆ ಬಕಬಕಬಕಾಂತ ಬಕಾಸುನ್ಹಾಗೆ ವಾಂತಿ ಮಾಡ್ಬಿಡ್ತಾನೆ ! ಎಷ್ಟಕ್ಕಷ್ಟು ವಾಂತಿಮಾಡ್ತಾನೋ ಅಷ್ಟಕ್ಕಷ್ಟು ಗಟ್ಟಿಗಾಂತ್ಹೆಸ್ರು ! ಇದೇ ಫಸ್ಟ್ ಕ್ಲಾಸ್ ಅನ್ನೋದು ! ..... ಇವನ್ತಲೇತಿರ್ಗಿ ಬ್ರಹ್ಮನಿಗಪ್ನಾನೇ..... ಸರಸ್ವತೀ ನನ್ಸೊಸೇಂತ ತಿಳ್ಕೊಂಬಿಡ್ತಾನೆ!......
(ಕೈಲಾಸಂ ಇದನ್ನು ಬರೆದ್ದು ಸುಮಾರು ೮೦ ವರ್ಷಗಳ ಹಿಂದೆ. ಇವತ್ತಿಗೂ ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಪರಿಸ್ಥಿತಿ ಏನೂ ಬದಲಾದಂತೆ ಕಾಣುವುದಿಲ್ಲ!!)
(ಮುಂಬಯಿಯ ನಮ್ಮ ಕನ್ನಡ ಸಂಸ್ಥೆ ಕೆಲ ತಿಂಗಳ ಕೆಳಗೆ ಹೊರತಂದ ಕೈಲಾಸಂ ವಿಶೇಷ ಸಂಚಿಕೆಗೆ ಸಂಕಲಿಸಿದ್ದು)
Comments
ಉ: ಕೈಲಾಸಂ ಬರಹ - ಮಾದರಿ
ಉ: ಕೈಲಾಸಂ ಬರಹ - ಮಾದರಿ
In reply to ಉ: ಕೈಲಾಸಂ ಬರಹ - ಮಾದರಿ by venkatesh
ಉ: ಕೈಲಾಸಂ ಬರಹ - ಮಾದರಿ
ಉ: ಕೈಲಾಸಂ ಬರಹ - ಮಾದರಿ