ರಾಜ್ಕುಮಾರ್ ಎಂಬ ಪವಾಡ
ರಾಜ್ಕುಮಾರ್ ಎಂಬ ಪವಾಡ
ಐವತ್ತು ವರ್ಷಗಳ ಹಿಂದೆ ಕನ್ನಡ ರಾಜ್ಯೋದಯವಾದಾಗ ಕನ್ನಡಿಗರು ಕಂಡ ಕನಸುಗಳು ಹಲವಾರು. ಹರಿದು ಹಂಚಿಹೋಗಿದ್ದ ಕನ್ನಡದ ಜನ ನೂರಾರು ವರ್ಷಗಳ ನಂತರ ಮತ್ತೆ ಒಂದಾದ ಸಂದರ್ಭದಲ್ಲಿ ಕನ್ನಡದ ಹೆಸರಿನಲ್ಲಿ ಹೊಸ ಉತ್ಸಾಹ ತಾಳಿದರು. ಏಕೆಂದರೆ, ಕನ್ನಡವೆಂಬುದು ಆಗ ಕೇವಲ ಒಂದು ಭಾಷೆಯ ಹೆಸರು ಮಾತ್ರವಾಗಿರದೆ ಅದು, ಸಾವಿರಾರು ವರ್ಷಗಳ ಒಂದು ಸಾಮಾನ್ಯ ಸಂಸ್ಕೃತಿಯ ಸ್ಮೃತಿಕೋಶದ ಹಕ್ಕುದಾರಿಕೆಯುಳ್ಳ ಒಂದು ಭಾಷಾ ಸಮುದಾಯ ಮತ್ತೆ ಹೊಸ ಉತ್ಸಾಹದೊಡನೆ ಒಟ್ಟಾಗಿ, ಕನ್ನಡ ಬದುಕೆಂಬುದನ್ನು ಕಟ್ಟಿಕೊಳ್ಳುವ ಛಲದ ಪ್ರತೀಕವೂ ಆಗಿತ್ತು. ಈ ಉತ್ಸಾಹ, ಛಲಗಳಿಗೆ ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಮುಂತಾದ ಕ್ಷೇತ್ರಗಳಿಂದ ಒತ್ತಾಸೆಯಾಗಿ ಬಂದವರು ಹಲವು ಮಹನೀಯರು. ಈ ಮಹನೀಯರ ಸಾಲಿನಲ್ಲಿ ವಿಶಿಷ್ಟವಾಗಿ ನಿಲ್ಲುವ ಒಂದು ಮಹಾನ್ ವ್ಯಕ್ತಿತ್ವ ರಾಜ್ಕುಮಾರ್.
ವಿಶಿಷ್ಟ ಏಕೆಂದರೆ, ರಾಜ್ಕುಮಾರ್ ಬೇರೆ ಮಹನೀಯರಂತೆ ಒಂದು ಸಾಂಸ್ಕೃತಿಕ ಮಹತ್ವಾಕಾಂಕ್ಷೆಯಿಂದೇನೂ ಕನ್ನಡ ಜನಮನವನ್ನು ಪ್ರವೇಶಿಸಲಿಲ್ಲ. ಒಂದು ಸಾಮಾನ್ಯ ಸಾಮಾಜಿಕ, ಕೌಟುಂಬಿಕ ಹಿನ್ನೆಲೆಯಿಂದ ಬಂದ ಮೂರನೆಯ ತರಗತಿಯವರೆಗೆ ಮಾತ್ರ ಓದಿದ ಈ ಮುತ್ತುರಾಜ್, ಕರ್ನಾಟಕ ರಾಜ್ಯೋದಯ ಸಂದರ್ಭದ ಒಬ್ಬ ಸಾಮಾನ್ಯ ಕನ್ನಡಿಗನ ಪ್ರತೀಕ ಮಾತ್ರವಾಗಿದ್ದರು. ಆದರೆ ಮುಂದಿನ ಐವತ್ತು ವರ್ಷಗಳಲ್ಲಿ ಅವರು ಮುಟ್ಟಿದ ಎತ್ತರ, ಅವರನ್ನು ಕರ್ನಾಟಕದ ಒಂದು ದೊಡ್ಡ ಸಾಂಸ್ಕೃತಿಕ ಶಕ್ತಿಯನ್ನಾಗಿ ಮಾರ್ಪಡಿಸಿತ್ತು. ಆಧುನಿಕ ಕರ್ನಾಟಕ ಕಟ್ಟಿದವರು ಮೂರು ಶಕ್ತಿಗಳು: ಕುವೆಂಪು-ಕಾರಂತ-ರಾಜ್ಕುಮಾರ್. ಇವರಲ್ಲಿ ಒಬ್ಬೊಬ್ಬರೂ ಕನ್ನಡದ ಮನಸ್ಸಿಗೆ ಹೊಸ ಉದ್ದ-ಅಗಲ-ಎತ್ತರಗಳನ್ನು ಒದಗಿಸಿದರು.
ರಾಜ್ಕುಮಾರ್ ಒಬ್ಬ ಅಸಾಮಾನ್ಯ ಕಲಾವಿದ. ಆದರೆ ಈ ರೀತಿ ಅಸಾಮಾನ್ಯ ಕಲಾವಿದರೆಲ್ಲರೂ ರಾಜ್ಕುಮಾರ್ರಂತೆ ಒಂದು ಭಾಷಾ ಸಮುದಾಯದ ಅಸ್ಮಿತೆಯ ಸಂಕೇತವಾದದ್ದು ಕಡಿಮೆ. ಇದಕ್ಕೆ ಕಾರಣ, ರಾಜ್ಕುಮಾರ್ ಕೇವಲ ಅಸಾಮಾನ್ಯ ಕಲಾವಿದನಾಗಿ ಮಾತ್ರವಲ್ಲ, ಅಸಾಮಾನ್ಯ ಮನುಷ್ಯನಾಗಿ ಕೂಡಾ ಜನತೆಯ ಮನದಲ್ಲಿ ಬೆಳೆದದ್ದು. ನಿಜ, ಇದಕ್ಕೆ ಅವರು ಆರಿಸಿಕೊಂಡ ಚಲನಚಿತ್ರ ಮಾಧ್ಯಮದ ಜನಪ್ರಿಯತೆಯೂ ಕಾರಣವಾಯಿತು. ಆದರೆ ಅವರಂತೆ ಕನ್ನಡಕ್ಕೆ ಅರ್ಪಿಸಿಕೊಂಡ ನಟರು ಕಡಿಮೆ. ಕನ್ನಡಕ್ಕೆ ಅರ್ಪಿಸಿಕೊಂಡದ್ದು ಎಂದರೆ ಮತ್ತೆ ಭಾಷಾನಿಷ್ಠೆ ಮಾತ್ರವಲ್ಲ. ಅವರು ಕನ್ನಡ ಸಿನಿಮಾ ಭಾಷೆ ಮೂಲಕ ಕನ್ನಡ ಜನತೆಗೆ ಒಂದು ವಿಶಿಷ್ಟ ಅಭಿರುಚಿ ಹಾಗೂ ಮೌಲ್ಯ ಪ್ರಪಂಚವನ್ನು ಕಟ್ಟಿಕೊಟ್ಟರು. ಅವರ ಬಾಯಲ್ಲಿ ಕನ್ನಡ ಭಾಷೆ ಒಂದು ಹೊಸ ಶಕ್ತಿ ಹಾಗೂ ಶೋಭೆಯನ್ನು ಪಡೆದುಕೊಂಡಿತು. ಅರವತ್ತು-ಎಪ್ಪತ್ತರ ದಶಕದ ತಲೆಮಾರಿನ ಸಾಮಾನ್ಯ ಕನ್ನಡ ಜನೆತೆಗೆ ರಾಜ್ಕುಮಾರ್, ಕನ್ನಡ ಬದುಕಿನ ಅತ್ಯುತ್ತಮ ಮೌಲ್ಯಗಳ ಪ್ರತೀಕವಾಗಿದ್ದರು. ವಿಮರ್ಶೆಯಲ್ಲಿ ಅವುಗಳ ಮಿತಿ ಏನೇ ಇರಲಿ, ತಂದೆ-ಮಗ, ಗಂಡ-ಹೆಂಡತಿ, ಅಣ್ಣ-ತಮ್ಮ, ಅಣ್ಣ-ತಂಗಿ ಮುಂತಾದ ಕೌಟುಂಬಿಕ ಸಂಬಂಧಗಳಿಗೆ ಮತ್ತು ಸ್ನೇಹ, ದುಡಿಮೆ, ಮಾತು ಮುಂತಾದ ಸಾಮಾಜಿಕ ಮೌಲ್ಯಗಳಿಗೆ ತಮ್ಮ ಚಿತ್ರಗಳ ಮೂಲಕ ಒಂದು ಘನತೆ ತಂದುಕೊಟ್ಟರು. ರಾಜ್ಕುಮಾರ್ ಚಿತ್ರಗಳ ಮೌಲ್ಯಗಳೊಂದಿಗೆ, ಆದರ್ಶಗಳೊಂದಿಗೆ ಎರಡು-ಮೂರು ಕನ್ನಡದ ತಲೆಮಾರುಗಳು ಬೆಳೆದವು. ಹಾಗೇ ರಾಜ್ಕುಮಾರ್ ಕೂಡಾ ಕನ್ನಡದ ವಿವೇಕ, ವಿನಯ, ಪ್ರತಿಭೆ ಹಾಗೂ ಸ್ವಾಭಿಮಾನದ ಸಂಕೇತವಾಗಿ ಬೆಳೆದರು.
ಭಕ್ತಿ ಪ್ರಧಾನವಾದ ಬೇಡರ ಕಣ್ಣಪ್ಪ, ಭಕ್ತ ಕನಕದಾಸ, ಸಂತ ತುಕಾರಾಂ ಅಥವಾ ಮಂತ್ರಾಲಯ ಮಹಾತ್ಮೆ ಇರಲಿ, ಪುರಾಣ, ಇತಿಹಾಸ ಪ್ರಧಾನವಾದ ರಣಧೀರ ಕಂಠೀರವ, ಸತ್ಯಹರಿಶ್ಚಂದ್ರ, ಕಿತ್ತೂರು ಚೆನ್ನಮ್ಮ ಅಥವಾ ಶ್ರೀ ಕೃಷ್ಣದೇವರಾಯ ಇರಲಿ; ಸಾಮಾಜಿಕವಾದ ಅಣ್ಣ-ತಂಗಿ, ಕರುಣೆಯೇ ಕುಟುಂಬದ ಕಣ್ಣು, ಕಣ್ತೆರೆದು ನೋಡು, ನಾಂದಿ, ಮಣ್ಣಿನ ಮಗ, ಕಸ್ತೂರಿ ನಿವಾಸ, ಸಾಕ್ಷಾತ್ಕಾರ, ಅಥವಾ ಭಾಗ್ಯವಂತರು ದಂತಹ ಚಿತ್ರಗಳಿರಲಿ; ಮನರಂಜನಾ ಪ್ರಧಾನವಾದ ಜೇಡರ ಬಲೆ, ಶಂಕರ್ ಗುರು, ಭಾಗ್ಯದ ಲಕ್ಷ್ಮಿ ಬಾರಮ್ಮದಂತಹ ಚಿತ್ರಗಳಿರಲಿ, ಅವರು ತಮ್ಮ ಕಲಾ ಪ್ರೌಢಿಮೆಯ ಜೊತೆಗೆ ಸಾಂಸ್ಕೃತಿಕ ಎಚ್ಚರವನ್ನು ಮೆರೆದರು. ಕುವೆಂಪು-ಕಾರಂತರಿಲ್ಲದೆ ಕನ್ನಡ- ಕನ್ನಡ ಜನತೆ ಹೇಗೆ ಹೀಗಿರಲಾಗುತ್ತಿರಲಿಲ್ಲವೋ ಹಾಗೆ, ರಾಜ್ಕುಮಾರ್ ಇಲ್ಲದೆಯೇ ಕನ್ನಡ-ಕನ್ನಡ ಜನತೆ ಹೀಗಿದ್ದಂತೆ ಇರುತ್ತಿರಲಿಲ್ಲ. ಹಾಗಾಗಿ ರಾಜ್ಕುಮಾರ್ ಕರ್ನಾಟಕದ ಮಟ್ಟಿಗೆ ಇಪ್ಪತ್ತನೇ ಶತಮಾನದ ಉತ್ತರಾರ್ಧದ ಇತಿಹಾಸದ ಉಜ್ವಲ ತಾರೆಗಳಲ್ಲೊಬ್ಬರು.
ಆಧುನಿಕ ಕರ್ನಾಟಕದ ಇತಿಹಾಸದಲ್ಲಿ ಪವಾಡವೇನಾದರೂ ಸಂಭವಿಸಿದ್ದರೆ, ಆ ಪವಾಡ ರಾಜಕುಮಾರರೇ. ಏಕೆಂದರೆ ಅವರು ಬಂದ ಸಾಮಾಜಿಕ ಹಿನ್ನೆಲೆ ಹಾಗೂ ಪ್ರತಿಭೆ ಮತ್ತು ಜನಮನ್ನಣೆ- ಈ ಎರಡೂ ವಿಷಯಗಳಲ್ಲಿ ಅವರು ಮುಟ್ಟಿದ ಎತ್ತರ ಯಾರನ್ನಾದರೂ ಬೆಕ್ಕಸ ಬೆರಗಾಗಿಸುವಂತದು. ಹಾಗೆ ನೋಡಿದರೆ ಇದು ಪ್ರಜಾಪ್ರಭುತ್ವದ ವಿಜಯ; ಕನ್ನಡ ರಾಜ್ಯೋತ್ಸವದ ಯಶಸ್ಸಿನ ಸಂಕೇತವೂ ಹೌದು. ಇಂತಹ ರಾಜ್ಕುಮಾರ್ ಇನ್ನಿಲ್ಲ ಎಂದರೆ ನಂಬುವುದು ಕಷ್ಟ. ಅವರು ಕನ್ನಡದ ಸ್ಮೃತಿಕೋಶದ ಅವಿಭಾಜ್ಯ ಅಂಗ. ಹಾಗಾಗಿ ಅವರಿಗೆ ಸಾವಿಲ್ಲ.
ಅಂದಹಾಗೆ: ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿದ್ದ ಶಾಲೆಗಳ ಮಾನ್ಯತೆಯನ್ನು ರದ್ದು ಮಾಡುವ ತನ್ನ ನಿಧರ್ಾರವನ್ನು ಕರ್ನಾಟಕ ಸರಕಾರ ಹಿಂತೆಗೆದುಕೊಂಡಿದೆ. ಈ ಶಾಲೆಗಳು ತಮ್ಮ ತಪ್ಪಿಗಾಗಿ ಇಪ್ಪತ್ತೈದು ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗಿನ ದಂಡ ಕಟ್ಟಿದರೆ ಸಾಕಂತೆ! ಇವು ಮುಂದಿನ ಶೈಕ್ಷಣಿಕ ವರ್ಷದಿಂದ ಹಂತಾನುಹಂತವಾಗಿ ಕನ್ನಡ ಮಾಧ್ಯಮದಲ್ಲಿ ಬೋಧಿಸುವಂತೆ ಸೂಚಿಸಲಾಗಿದೆಯಂತೆ! ಯಾವುದೇ ಕಾರಣಕ್ಕೂ ಮಾನ್ಯತೆ ರದ್ದತಿಯನ್ನು ಹಿಂತೆಗೆದುಕೊಳ್ಳುವುದಿಲ್ಲವೆಂದು ಘೋಷಿಸಿದ್ದ ಪ್ರಾಥಮಿಕ ಶಿಕ್ಷಣ ಮಂತ್ರಿ ಬಸವರಾಜ ಹೊರಟ್ಟಿಯವರು ಈಗ, ಇದು ಸಂಪುಟದ ತೀರ್ಮಾನ; ಎಲ್ಲರೂ ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅಪ್ಪಣೆ ಕೊಡಿಸಿದ್ದಾರೆ. ಯಾಕೆ, ಸಂಪುಟದಲ್ಲಿ ಇವರೂ ಇರಲಿಲ್ಲವೇ? ಸಂಪುಟ ತೀರ್ಮಾನವನ್ನು ತಾವು ಒಪ್ಪಿಕೊಳ್ಳಲೇ ಬೇಕಾಗುವ ರಾಜಕೀಯ ಸ್ಥಿತಿಯಲ್ಲಿ ಇವರು ಇರುವುದಾದರೆ, ಕನ್ನಡದ ಬಗೆಗಿನ ವೀರಾವೇಶದ ಮಾತೇಕೆ? ಶೈಕ್ಷಣಿಕ ವಿಷಯದ ತೀರ್ಮಾನಗಳಲ್ಲೂ ಶಿಕ್ಷಣ ಮಂತ್ರಿಯವರ ಪಾತ್ರವೇ ಇಲ್ಲವೆಂದ ಮೇಲೆ ಶಿಕ್ಷಣ ಮಂತ್ರಿಯಾದರೂ ಯಾಕೆಬೇಕು?
ದಂಡಕ್ಕೊಳಗಾಗಿರುವ ಶಾಲೆಗಳು ಈಗ ದಂಡದ ವಿಷಯದಲ್ಲಿ ಚೌಕಾಸಿ ಆರಂಭಿಸಿವೆ. ಇದೂ ಕೂಡಾ ತನ್ನ ಕನ್ನಡ ಬದ್ಧತೆಯನ್ನು ಸಡಿಲಗೊಳಿಸಿರುವ ಸರಕಾರದ ಬಗ್ಗೆ ಜನತೆಯಲ್ಲಿ ಸಹಾನುಭೂತಿ ಹುಟ್ಟಿಸುವ ಹುನ್ನಾರವಾಗಿದ್ದರೂ ಆಶ್ಚರ್ಯವಿಲ್ಲ. ಏಕೆಂದರೆ ಈ ದಂಡ ಮೊತ್ತ ಈ ಶಾಲೆಗಳು ವಸೂಲು ಮಾಡುವ ಶುಲ್ಕಗಳ ಮುಂದೆ ಯಾವ ಲೆಕ್ಕ? ಅದೇನೇ ಇರಲಿ, ಚೌಕಾಸಿ ಯಾವುದೋ ಒಂದು ಮಟ್ಟದಲ್ಲಿ ಇತ್ಯರ್ಥವಾಗಲೇಬೇಕು. ಆನಂತರ ಮತ್ತೆ ಇಂಗ್ಲಿಷ್ ಮಾಧ್ಯಮ ಬೋಧನೆ, ಮಾನ್ಯತೆ ರದ್ದತಿ, ದಂಡ ವಸೂಲಿಯ ವ್ಯವಸ್ಥೆ ಇದ್ದೇಇದೆ! ಹೀಗೆ ಪ್ರತಿ ವರ್ಷ ಕಟ್ಟಬೇಕಾಗಿ ಬರಬಹುದಾದ ದಂಡವನ್ನೂ ಈಗಲೇ ಕಡಿಮೆಗೊಳಿಸಿಕೊಳ್ಳಲೆಂದೇ ಈ ಚೌಕಾಸಿ ನಡೆದಿದ್ದರೂ ಆಶ್ಚರ್ಯವಿಲ್ಲ! ಎಷ್ಟಾದರೂ ಸರಕಾರ ಮಕ್ಕಳ, ಪೋಷಕರ ಹಾಗೂ ಕನ್ನಡ ಹಿತ ಕಾಪಾಡಲಿಕ್ಕೆ ಪ್ರತಿವರ್ಷವೂ ಬದ್ಧ ತಾನೆ?
ಅಂತೂ ಹೊರಟ್ಟಿಯವರಿಗೆ ಕನ್ನಡದ ಕೆಲಸ ಒಳ್ಳೆ ಕಮಾಯಿಯ ಕೆಲಸವಾಗಿ ಮಾರ್ಪಟ್ಟಿದೆ. ಹೀಗಾಗಿ ಅವರು ನಮ್ಮ ಶಿಕ್ಷಣ ಮಂತ್ರಿಯಾಗಿ ಮುಂದುವರಿಯುವುದು ಅನಿವಾರ್ಯವಾಗಿದೆ.
Comments
ಉ: ರಾಜ್ಕುಮಾರ್ ಎಂಬ ಪವಾಡ