ಇಹಲೋಕದ ಹಾಡು ಮುಗಿಸಿದ ಸುಗಮ ಸಂಗೀತ ಗಾನ ಗಾರುಡಿಗ ಸಿ. ಅಶ್ವಥ್

ಇಹಲೋಕದ ಹಾಡು ಮುಗಿಸಿದ ಸುಗಮ ಸಂಗೀತ ಗಾನ ಗಾರುಡಿಗ ಸಿ. ಅಶ್ವಥ್

ಹಿಂದೆ ಎಲ್ಲೋ ಓದಿದ ನೆನಪು. ನಾಗಮಂಡಲ ಚಿತ್ರದ "ಈ ಹಸಿರು ಸಿರಿಯಲಿ" ಹಾಡನ್ನು ಸಂಗೀತ ಕಟ್ಟಿಯವರು ಮೊದಲ ಸಲ ಹಾಡಿದಾಗ, ಸಿ ಅಶ್ವಥ್ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರಂತೆ. ಅವರ ಹಾಡಿನಲ್ಲಿದ್ದ ಹಲವು ತಪ್ಪುಗಳನ್ನು ಹುಡುಕಿ, ತಿದ್ದಿ, ಅದ್ಭುತವಾದ ಹಾಡೊಂದನ್ನು ಕನ್ನಡಿಗರಿಗೆ ಕೊಟ್ಟು, ಕಟ್ಟಿಯವರ ಪ್ರತಿಭೆಯನ್ನು ಎತ್ತಿ ಹಿಡಿದವರು ಸಿ ಅಶ್ವಥ್. ತಪ್ಪಾಗಿ ಸ್ವರ ಎತ್ತಿದ ಯಾರೆ ಆಗಲಿ, ಅಶ್ವಥ್ ಅವರ ಟೀಕೆಯನ್ನು ಸಹಿಸಿಕೊಳ್ಳಲೇ ಬೇಕಾಗುತ್ತಿತ್ತು. ಹಲವಾರು ಗಾಯಕ/ಗಾಯಕಿಯರು ಅಶ್ವಥ್ ಅವರ ನಿರ್ದೇಶನದಲ್ಲಿ ಹಾಡಲು ಹೆದರುತ್ತಿದ್ದರಂತೆ! ಅಶ್ವಥ್ ರವರ (ಆರೋಗ್ಯಕರವಾದ) ಟೀಕೆಗಳ ಉದ್ದೇಶ ಮಾತ್ರ ಇಷ್ಟೇ: ಒಬ್ಬ ಗಾಯಕನಲ್ಲಿ ಹುದುಗಿರುವ ಪ್ರತಿಭೆಯನ್ನು ಎತ್ತಿ ಹಿಡಿಯುವುದು.

ಧೂಳು ಹಿಡಿದು ಹಾಳಾಗಿ ಹೋಗಿದ್ದ ಹಲವಾರು ಜಾನಪದ ಗೀತೆಗಳಿಗೆ ತಮ್ಮ ಕಂಚಿನ ಕಂಠದಿಂದ ಜೀವ ತುಂಬಿದ್ದ ಅಶ್ವಥ್ ಇಂದು ತಮ್ಮ ಜೀವನವೆಂಬ ಹಾಡನ್ನು ಮುಗಿಸಿದ್ದಾರೆ. ಕನ್ನಡ ಸುಗಮ ಸಂಗೀತಕ್ಕೆ, ಕನ್ನಡಿಗರಿಗೆ ಇದೊಂದು ತುಂಬಲಾರದ ನಷ್ಟ. ಕರ್ನಾಟಕದಲ್ಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸಹ ಕನ್ನಡದ ಜಾನಪದ ಗೀತೆಗಳನ್ನು ಭಾವತುಂಬಿ ಹಾಡಿ ಕನ್ನಡಿಗರನ್ನು ಆನಂದಿಸಿದ್ದಾರೆ. "ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ಒಂದು ಕಾಲದಲ್ಲಿ Scorpion, Sting, Deep Purple, the sprawling, Bryan Adams, ಇನ್ನಿತರ ಪಾಶ್ಚಿಮಾತ್ಯ ಸಂಗೀತಗಾರರಿಂದ ಮಾತ್ರ ಕಿಕ್ಕಿರಿದಿರುತ್ತಿತ್ತು. ಅಲ್ಲಿ "ಕನ್ನಡವೇ ಸತ್ಯ" ಎಂಬ ಧ್ವನಿ ಎತ್ತಿ, ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷರನ್ನು ದಿಙ್ಮೂಢರನ್ನಾಗಿಸಿದ ಹೆಮ್ಮೆ ಅಶ್ವಥ್ ಅವರದು [The Hindu]". "ಕನ್ನಡವೇ ಸತ್ಯ", "ಎಲ್ಲೋ ಹುದುಕಿದೆ ಇಲ್ಲದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ", "ಸೋರುತಿಹುದು ಮನೆಯ ಮಾಳಿಗಿ", "ತವರಲ್ಲ ತಗಿ ನಿನ್ನ ತಂಬೂರಿ - ಸ್ವರ", "ಉಳುವ ನೇಗಿಲ ಯೋಗಿ", "ಗುಪ್ತ ಗಾಮಿನಿ, ನನ್ನ ಶಾಲ್ಮಲ", ಇತ್ಯಾದಿ ಹಾಡುಗಳು ಕನ್ನಡಿಗರನ್ನು ಅನಂತ ಕಾಲ ಆನಂದಿಸುತ್ತಲೇ ಇರುತ್ತವೆ.

ಸಿ. ಆಶ್ವಥ್ ಅವರಿಗೆ ಸಂಗೀತ ಕಾರ್ಯಕ್ರಮಕ್ಕೆ ಹೋದ ಕಡೆಗಳೆಲ್ಲೇಲ್ಲಾ ಅಭೂತಪೂರ್ವ ಸ್ವಾಗತ ದೊರೆಯುತ್ತಿತ್ತು. ಕರ್ನಾಟಕದಲ್ಲಿ, ಗಡಿನಾಡಿನಲ್ಲಿ, ಕಡಲಾಚೆಯಲ್ಲಿರುವ ಸಹಸ್ರಾರು ಕನ್ನಡಿಗರು ಈ ಶ್ರೇಷ್ಟ ಕಲಾವಿದನಿಗೆ ಮನ್ನಣೆ ನೀಡಿದ್ದಾರೆ, ಗೌರವಿಸಿದ್ದಾರೆ. ನಮ್ಮ ತಲೆಮಾರಿನ ಶ್ರೇಷ್ಟ ಗಾಯಕರಲ್ಲಿ ಒಬ್ಬರಾದ ಆಶ್ವಥ್ ನಮ್ಮನ್ನಗಲಿದ್ದು ಕನ್ನಡ ಸಂಗೀತಕ್ಕೆ ತುಂಬಲಾರದ ನಷ್ಟ. ಸುಗಮ ಸಂಗೀತದಲ್ಲಿ ಅವರು ಗಿಟ್ಟಿಸಿದ ಸ್ಥಾನವನ್ನು ಮತ್ತಾರು ಪಡೆಯಲಾರರು. ಅವರ ಸಂಗೀತ ಅಮರ. ಮತ್ತೆ ಹುಟ್ಟಿ ಬರಲಿ ಅಶ್ವಥ್!

ಸಿ. ಅಶ್ವಥ್ ಅವರ ಕೆಲವು ಹಾಡುಗಳು (Click on the Link):

  1. ಸೋರುತಿಹುದು ಮನೆಯ ಮಾಳಿಗಿ
  2. ಗುಪ್ತಗಾಮಿನಿ
  3. ನೇಗಿಲ ಯೋಗಿ
  4. ಕೋಡಗನ ಕೋಳಿ ನೊಂಗಿತ್ತ
  5. ಅಶ್ವಥ್ ನಿರ್ದೇಶನದ ಈ ಹಸಿರು ಸಿರಿಯಲಿ - ನಾಗಮಂಡಲ
  6. Zee TV ಸಂಗೀತ ಸಂಜೆಯಲ್ಲಿ ಹಾಡಿದ ಹಾಡುಗಳು
  7. ಮತ್ತಷ್ಟು
Rating
No votes yet

Comments