"ಒಲವಿನ ಟಚ್" "ನಲಿವಿನ ಟಚ್" ಈ ಹೆಸರುಗಳೇ ಬೇಕಿದ್ದವೇ ನಿಮಗೆ?

"ಒಲವಿನ ಟಚ್" "ನಲಿವಿನ ಟಚ್" ಈ ಹೆಸರುಗಳೇ ಬೇಕಿದ್ದವೇ ನಿಮಗೆ?

ಶನಿವಾರ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ


ಹೋಗದೇ ಇರಲಾಗಲಿಲ್ಲ ಕೊಡಬೇಕಿತ್ತು ಬೆಲೆ ಅವರ ಆ ಆಮಂತ್ರಣಕ್ಕೆ


 


ಕಂಡು ಕೈಕುಲಿಕಿದರೆ ಹೆಸರ ನೆನಪಿಸಲು ತೊಡಗಿದರು ಶ್ರೀವತ್ಸ ಜೋಶಿ


ನಾನಂದೆ "ನಾ ಆಸು" ಅದಕೆ ಅವರು ನಕ್ಕು ತೋರಿಸಿಕೊಂಡರು ಖುಷಿ


 


ಉಪಾಹಾರ ಲಘು ಎಂದು ಅರಿತು ಮನೆಯಲ್ಲೇ ನಾ ತಿಂದು ಹೋಗಿದ್ದೆ


ಆದರೆ ಅದು ಲಘು ಆಗಿರದೆ ಭರ್ಜರಿಯೇ ಆಗಿದ್ದುದನ್ನು  ನಾನು ಕಂಡಿದ್ದೆ


 


ಕಾಫಿಯ ಸವಿ ಸವಿಯುತ್ತಾ ಬಂದು ನಮಸ್ಕರಿಸಿದರು ನಮ್ಮ ಹರಿ ನಾಡಿಗ


ನಮ್ಮನ್ನಲ್ಲಿ ಸೇರಿದರು ವಿದೇಶವಾಸೀ ಅನಿಲ ಜೋಶಿ ಮತ್ತವರ ಸಂಗಡಿಗ


 


ಮೂರು ದಿಗ್ಗಜರ ಸಮ್ಮುಖದಲ್ಲಿ ಆಸೀನನಾದೆ ನಾ ಸಭೆ ಆರಂಭವಾದಾಗ


ಹಿರಣ್ಣಯ್ಯ -ಕಾಯ್ಕಿಣಿ -ವಿ.ಭಟ್ಟ ದಿಗ್ಗಜರಲ್ಲವೇ ಅವರವರ ಕ್ಷೇತ್ರದಲ್ಲಿ ಈಗ


 


ಜೋಶಿ ದಂಪತಿಗಳಿಗಲ್ಲಿ ಸನ್ಮಾನ ಜೊತೆಗೆ ಪುಷ್ಪಮಾಲೆಗಳ ವಿನಿಮಯ


ಪುಸ್ತಕಗಳ ಲೋಕಾರ್ಪಣೆಯ ನಂತರ ಲೇಖಕರ ಗುಣಗಾನದ ಸಮಯ


 


ಜಯಂತ ಕಾಯ್ಕಿಣಿ ಮತ್ತು ಹಿರಣ್ಣಯ್ಯನವರ ಹಾಸ್ಯಭರಿತ ಮಾತ ಸುಗ್ಗಿ


ವಿಶ್ವೇಶ್ವರ ಭಟ್ಟರೂ ಬರುವಂತೆ ಮಾಡಿದರು ನಗು, ನಡು ನಡುವೆ ನುಗ್ಗಿ


 


ಇಳಿಸಿದ ದರದಲಿದ್ದ ಪುಸ್ತಕಗಳ ಮೇಲೆ ಪಡೆದು ಜೋಶಿಯವರ ಸಹಿಯ


ನಕ್ಕು ಕುಲುಕಿದೆ ವಿ.ಭಟ್ಟ, ಕಾಯ್ಕಿಣಿ ಮತ್ತು ಹಾಲ್ದೊಡ್ಡೇರಿಯವರ ಕೈಯ


 


ಜೋಶಿಯವರೇ ನಿಮ್ಮ ಪರಾಗ ಸ್ಪರ್ಶವೆಂಬ ಬರಹಗಳ ಸಂಕಲನಗಳಿಗೆ


"ಒಲವಿನ ಟಚ್" "ನಲಿವಿನ ಟಚ್" ಈ ಹೆಸರುಗಳೇ ಬೇಕಿದ್ದವೇ ನಿಮಗೆ


 


"ಸ್ಪರ್ಶ" ಇದರ ಕಂಪನ್ನು ನೀವೊಮ್ಮೆ ಯೋಚಿಸಿ ನೋಡಿ ಜೋಶಿಯವರೇ


"ಒಲವಿನ ಸ್ಪರ್ಶ" "ನಲಿವಿನ ಸ್ಪರ್ಶ" ಇವನ್ನೂ ನಾವೆಲ್ಲಾ ಮೆಚ್ಚುವವರೇ


 


ಆಂಗ್ಲಪದಗಳನ್ನು ಕನ್ನಡದಲ್ಲಿ ಬರೆದು ಸಿಗುವ ಆನಂದ ಅದೆಂತಹುದು ಹೇಳಿ


ಆಂಗ್ಲರು ಕನ್ನಡ ಪದಗಳ ಶೀರ್ಷಿಕೆ ನೀಡಿದ್ದಿದ್ದರೆ ಒಮ್ಮೆ ನೆನಪು ಮಾಡಿ ಹೇಳಿ


 


ನಿಮ್ಮ ಕನ್ನಡಾಭಿಮಾನವ ನಾ ಪ್ರಶ್ನಿಸುತ್ತಿಲ್ಲ ಇಲ್ಲಿ ಶ್ರೀವತ್ಸ ಜೋಶಿಯವರೇ


ಕನ್ನಡ ಚಿನ್ನಕ್ಕೆ ಆಂಗ್ಲ ಒಪ್ಪದ ಅಗತ್ಯ ಇಲ್ಲವೆಂದು ನೀವೂ ಅರಿಯದಿರುವಿರೇ?


******************************************


 


- ಆತ್ರಾಡಿ ಸುರೇಶ ಹೆಗ್ಡೆ


 

Rating
No votes yet

Comments