ನನ್ನ ಆ ಅಪರಿಚಿತ ಅಭಿಮಾನಿ ಇನ್ನಿಲ್ಲ!!!

ನನ್ನ ಆ ಅಪರಿಚಿತ ಅಭಿಮಾನಿ ಇನ್ನಿಲ್ಲ!!!

ಸಖೀ,


ಕಳೆದೆರಡು ತಿಂಗಳಿಂದ ಜಂಗಮ ದೂರವಾಣಿಯಲಿ ಸಂದೇಶಗಳ ರವಾನಿಸುತ್ತಿದ್ದಾಕೆ


ಅಪರಿಚಿತ ಅಭಿಮಾನಿ ಆಗಿಯೇ ಉಳಿದು ಸದಾ ನನ್ನ ಕವನಗಳ ಕೊಂಡಾಡುತ್ತಿದ್ದಾಕೆ


 


ಇಹಲೋಕ ತ್ಯಜಿಸಿ ಅದಾಗಲೇ ಎರಡು ದಿನಗಳಾಗಿವೆ ಎಂಬ ಸುದ್ದಿ ಬಂದಿದೆ ಇಂದು


ನನ್ನ ಕಿವಿಗಳ ನಂಬಲಾಗದೇ ಮಾತು ಹೊರಡದೇ ಯೋಚಿಸಿದೆ ಸುಮ್ಮನೇ ನಿಂದು


 


ಯಾರಾಕೆ, ಅದ್ಯಾಕೆ ನನ್ನ ಮನದ ಕದ ಬಡಿದು ಕಿಟಕಿಯಲಿ ಇಣುಕಿ ಮರಳಿದಳವಳು


ನಾನಿನ್ನು ಈ ಜೀವನ ಪೂರ್ತಿ ನೆನೆ ನೆನೆದು ಕೊರಗುವಂತೆ ಮಾಡಿ ಹೋದಳವಳು


 


ಮುಖವ ನಾ ಕಂಡಿಲ್ಲ, ಮಾತೊಂದನೂ ಆಡಿಲ್ಲ, ಬರಿಯ ಸಂದೇಶಗಳೇ ಪರಿಚಯ


ಅಂದಿದ್ದಳಾಕೆ, ಕಾಯುತ್ತಿರಿ ಸದ್ಯವೇ ಬರಬಹುದು ಮಾತನಾಡುವ ಸುವರ್ಣ ಸಮಯ


 


ಮಾತಿಲ್ಲ ಕತೆಯಿಲ್ಲ ಹೋಗುವಾಗ ಹೋಗುತ್ತೇನೆಂಬ ಸುಳಿವು ನೀಡದೆಯೇ ಹೋದಳು


ಎಲ್ಲಾ  ಸಂದೇಶಗಳನ್ನು ಅಳಿಸಿಯಾಗಿದೆ ಮನದಲಿನ್ನು ಬರೀ ನೆನಪಾಗಿಯೇ ಉಳಿವಳು


 


ಆಕೆಗೆನ್ನ ದೂರವಾಣಿ ಸಂಖ್ಯೆ ನೀಡಿದವರಾದರೂ ಏನು ಪರಿಚಯ ನೀಡಿಯಾರು ನನಗೆ


ಇನ್ನು ಏನ ನೀಡಿದರೂ ನಿಜದಿ ಏನು ಮತ್ತು ಹೇಗೆ ಪ್ರಯೋಜನ ಹೇಳು ಅವುಗಳಿಂದೆನಗೆ


 


ಅಗಲಿದ ಆಕೆಯಾತ್ಮಕ್ಕೆ ಚಿರ ಶಾಂತಿಯ ನೀಡಿರೆಂದು ಕೋರುವೆ ನಾನು ಆ ಭಗವಂತನಲ್ಲಿ


ಇನ್ನೆಂದೂ ಈ ತೆರನಾದ ಆಟ ನಡೆಯದಿರಲಿ ದೇವ ಎನ್ನುವೆ ಮುಂದಿನ ಜೀವನ ಕಾಲದಲ್ಲಿ!!!


**************************************************


 


- ಆತ್ರಾಡಿ ಸುರೇಶ ಹೆಗ್ಡೆ


ಆಕೆಯ ಬಗ್ಗೆ ಇಲ್ಲಿ ಬರೆದಿದ್ದೆ:


http://sampada.net/blog/asuhegde/11/11/2009/22477

Rating
No votes yet

Comments