“ ಕ್ಷುದ್ರಂ ಹೃದಯ ದೌರ್ಬಲ್ಯಮ್ ತ್ಯಕ್ತ್ವೋತ್ತಿಷ್ಠ ಪರಂತಪ”

“ ಕ್ಷುದ್ರಂ ಹೃದಯ ದೌರ್ಬಲ್ಯಮ್ ತ್ಯಕ್ತ್ವೋತ್ತಿಷ್ಠ ಪರಂತಪ”

ಹೊಳೆನರಸೀಪುರದಲ್ಲಿ ನಡೆದ ಭಗವದ್ಗೀತಾ ಅಭ್ಯಾಸವರ್ಗ

 

ದಿನಾಂಕ ೧೧.೦೧.೨೦೧೦ ರಂದು ಹೊಳೆ ನರಸೀಪುರದಲ್ಲಿ ಪ್ರೌಢಶಾಲಾ ಶಿಕ್ಷಕರಿಗಾಗಿ ಅಭಿಗವದ್ಗೀತಾ ಕಾರ್ಯಗಾರವು ನಡೆಯಿತು

 

 

 

ದಿನಾಂಕ ೪.೦೧.೨೦೧೦ ರಂದು ಬೇಲೂರಿನಲ್ಲಿ ನಡೆದ ಭಗವದ್ಗೀತಾ ಕಾರ್ಯಾಗಾರದ ಒಂದು ನೋಟ

ಹಾಸನದ ಸಂಸ್ಕೃತಮ್ ನಲ್ಲಿ ಪುಟ್ಟಮಕ್ಕಳಿಗೊಂದು ಭಗವದ್ಗೀತಾ ಕೇಂದ್ರ

ಹಾಸನನದ ಶ್ರೀ ಸತ್ಯಮೂರ್ತಿಯವರ ಮನೆಯಲ್ಲೊಂದು ಭಗವದ್ಗೀತಾ ಕೇಂದ್ರ

ಹಾಸನ ಜಿಲ್ಲೆಯ ಹರಿಹರಪುರದಲ್ಲಿ ದಿನಾಂಕ ೩೧.೧೨.೨೦೦೯ ರಂದು ಸೋಂದಾ ಸ್ವರ್ಣವಲ್ಲೀ ಪೀಠಾಧೀಶರಾದ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಭಗವದ್ಗೀತಾ ಅಭಿಯಾನವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.

-------------------------------------------------------------------------------

ಸ್ವಾಮೀಜಿಯವರ ಉಪನ್ಯಾಸವನ್ನು ಭಕ್ತಿಭಾವದಿಂದ ಆಲಿಸುತ್ತಿರುವ ಹರಿಹರಪುರದ ಮುರಾರ್ಜಿ ದೇಸಾಯಿ ಶಾಲೆಯ ಮಕ್ಕಳು

-----------------------------------------------------------------------------------

ಇಂದು  ವೈಜ್ಞಾನಿಕವಾಗಿ ದೇಶವು ಪ್ರಗತಿ ಸಾಧಿಸಿದೆ. ಕ್ಷಣಮಾತ್ರದಲ್ಲಿ ಪ್ರಪಂಚದ ಯಾವಮೂಲೆಯನ್ನಾದರೂ ಸಂಪರ್ಕಿಸುವ, ಕೆಲವು ಗಂಟೆಗಳಲ್ಲಿ  ಪ್ರಪಂಚದ ಯಾವ ಮೂಲೆಗಾದರೂ ತಲುಪುವ ಅದ್ಭುತ ವ್ಯವಸ್ಥೆ ವಿಜ್ಞಾನದಿಂದ  ಲಭ್ಯವಾಗಿದೆ. ಆಹಾರ ಉತ್ಪಾದನೆಯಲ್ಲಿ ಕ್ರಾಂತಿ ನಡೆದಿದೆ. ಜನರಿಗೆ ಅಗತ್ಯವಾದ ರಸ್ತೆ, ನೀರು, ವಿದ್ಯುತ್ ಎಲ್ಲಾ ಸೌಕರ್ಯಗಳು ಜನರನ್ನು ತಲುಪಿವೆ. ಅನ್ಯಾನ್ಯ ಗ್ರಹಗಳಿಗೂ ಮನುಷ್ಯ ಹೋಗಿ ಬಂದಿದ್ದಾನೆ. ಟಿ.ವಿ. ಕಂಪ್ಯೂಟರ್ ಗಳು ಎಲ್ಲಾ ಮನೆಗಳನ್ನೂ ತಲುಪಿ ಮನುಷ್ಯನ ಜೀವನದ ದಿಕ್ಕನ್ನೇ ಬದಲಿಸಿವೆ.

ಇಷ್ಟೆಲ್ಲವನ್ನೂ ವಿಜ್ಞಾನವು ಸಾಧಿಸಿದ್ದರೂ ಮನುಷ್ಯನು ಏನನ್ನೋ ಕಳೆದುಕೊಂಡು ತೊಳಲಾಡುತ್ತಿರುವುದು ಗೋಚರವಾಗುತ್ತಿದೆ. ಸಮಾಜದಲ್ಲಿರಬೇಕಾದ  ಶಾಂತಿ,ನೆಮ್ಮದಿಯು ದೂರವಾಗಿದೆ. ಕೊಲೆ, ಸುಲಿಗೆ, ಅತ್ಯಾಚಾರ, ಬ್ರಷ್ಟಾಚಾರ ಗಳಂತಹ ಸಮಾಜ ಕಂಟಕ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸುದ್ಧಿಯನ್ನು ಪ್ರತಿದಿನವೂ ಪತ್ರಿಕೆಗಳಲ್ಲಿ ಕಾಣಬಹುದಾಗಿದೆ.ಯಾವ ನೆಲದಲ್ಲಿ ಋಷಿಮುನಿಗಳು ಜನಿಸಿ ನೂರಾರು  ವರ್ಷಗಳು ತಪಸ್ಸನ್ನಾಚರಿಸಿ ಮನುಷ್ಯನಿಗೆ ಸನ್ಮಾರ್ಗದಲ್ಲಿ ಬದುಕಲು ಜೀವನಕ್ರಮವನ್ನು ತೋರಿಸಿಕೊಟ್ಟರೋ, ಯಾವ  ನಮ್ಮ ರಾಜ್ಯದಲ್ಲಿ “ ಮುತ್ತು ರತ್ನಗಳನು ಬಳ್ಳದಿಂದ ಅಳೆದು ಮಾರಿದ” ಎಂಬ ಕವಿವಾಣಿಯು  ಸಂಮೃದ್ಧತೆಯನ್ನು ಸಾರುತ್ತದೋ ಅದೇ ನೆಲದಲ್ಲಿ ಇಂದು ಮನುಷ್ಯನ ಬದುಕು ಹೇಗೆ ಸಾಗಿದೆ! ? 

ಎಲ್ಲೆಲ್ಲೂ ನೈತಿಕ ಮೌಲ್ಯಗಳ ಕುಸಿತ, ಚಿತ್ರ ಮಾಧ್ಯಮಗಳ ದುಷ್ಪ್ರಭಾವಕ್ಕೆ ಒಳಗಾಗಿರುವ ಯುವ ಪೀಳಿಗೆಯು ಹಾದಿತಪ್ಪುವ ಚಿಂತಾ ಜನಕ ಸ್ಥಿತಿ! ಮಕ್ಕಳ ಮನಸ್ಸಿನಮೇಲೆ ದುಷ್ಪ್ರಭಾವ! ಹೊಡೆದಾಟ-ಬಡಿದಾಟ, ಕೊಲೆ ದೃಷ್ಯಗಳು, ಕಾಮ ಪ್ರಚೋದಕ ದೃಷ್ಯಗಳಿಂದ ಮಕ್ಕಳ ಮನಸ್ಸು ವಿಕಾರವಾಗುತ್ತಿದೆ. ಪ್ರೀತಿ,ವಾತ್ಸಲ್ಯ, ಕರುಣೆ ,ಮಮಕಾರ ಮುಂತಾದ ಸದ್ಗುಣಗಳು ಮರೆಯಾಗುತ್ತಿವೆ. ಮಕ್ಕಳಲ್ಲಿ  ರಾಕ್ಷಸೀಗುಣಗಳು ಹೆಚ್ಚುತ್ತಾ  ತಂದೆತಾಯಿಗಳು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ. ಶಾಲಾ ಬಾಲಕನೊಬ್ಬ ಮತ್ತೊಬ್ಬ ಬಾಲಕನನ್ನು ಬಂದೂಕಿನಿಂದ ಗುಂಡುಹಾರಿಸಿಕೊಲ್ಲುವ ಸುದ್ಧಿ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಯಾವ ದೇಶದಲ್ಲಿ ಹೆತ್ತವರನ್ನು “ಮಾತೃದೇವೋ ಭವ, ಪಿತೃ ದೇವೋ ಭವ” ಎಂದು ದೇವರಂತೆ ಕಾಣುತ್ತಿದ್ದೆವೋ ಅದೇ ದೇಶದಲ್ಲಿ ವಯಸ್ಸಾದ ತಂತೆ ತಾಯಿಗಳು ವೃದ್ಧಾಶ್ರಮ ಸೇರುವಂತಹ ದಯನೀಯ ಸ್ಥಿತಿಯನ್ನು ಕಾಣುತ್ತೇವೆ.

ನಮ್ಮ ಸಾಂಸ್ಕೃತಿಕ ಪರಂಪರೆ ನಶಿಸುತ್ತಿದೆ, ದೇಶದಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿದೆ. ಮತ್ತೊಂದೆಡೆ ಮತಾಂತರದ ಅವಾಂತರ.ಜಾತಿ-ಜಾತಿ ಗಳ ಮಧ್ಯೆ ಸಂಘರ್ಷ, ಮಾನವೀಯ ಮೌಲ್ಯಗಳು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿದೆ.ಮತ್ತೊಂದು ಚಿಂತಾಜನಕ ಸ್ಥಿತಿ ಎಂದರೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು! ಪರೀಕ್ಷೆಯಲ್ಲಿ ೯೫% ನಿರೀಕ್ಷಿಸಿದ್ದ ವಿದ್ಯಾರ್ಥಿಗೆ ೯೦% ಅಂಕಗಳು ಬಂದಿದ್ದೇ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಪ್ಪ-ಅಮ್ಮ ಯಾವುದೋ ಚಿಕ್ಕ ಕಾರಣಕ್ಕೆ  ತಿಳುವಳಿಕೆ ಹೇಳಿದ್ದೇ ಕಾರಣ ಆತ್ಮಹತ್ಯೆ ನಡೆದಿದೆ!! ಪ್ರೀತಿ-ಪ್ರೇಮ ಗಳ ಹೆಸರಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆದಿದೆ.

ಇಂತಹ ಸ್ಥಿತಿಯಲ್ಲಿ ಇದಕ್ಕೆಲ್ಲಾ ಪರಿಹಾರ ವಿಲ್ಲವೇ?ಖಂಡಿತವಾಗಿಯೂ ಇದೆ. ಇಷ್ಟೆಲ್ಲಾ ಆತಂಕಗಳಿಗೆ ಪರಿಹಾರವು ನಮ್ಮ ಸಂಸ್ಕೃತಿ-ಪರಂಪರೆಯಲ್ಲಿಯೇ ಇದೆ. ಇಡೀ ವಿಶ್ವವು ನೆಮ್ಮದಿಗಾಗಿ ಭಾರತದ ಕಡೆ ನೋಡುತ್ತಿರುವ ಈ ಸಂದರ್ಭದಲ್ಲಿ ನಮ್ಮ ಎಳೆಯ ಪೀಳಿಗೆಗೆ ನಮ್ಮ ಸಂಸ್ಕೃತಿಯ ನಿಜವಾದ ಪರಿಚಯ ಮಾಡಿಕೊಡುವುದೊಂದೇ ಪರಿಹಾರ ಮಾರ್ಗವಾಗಿದೆ. ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ-ಶ್ರೀಕೃಷ್ಣ ಪರಮಾತ್ಮನು ನೀಡಿದ ಗೀತೋಪದೇಶದಲ್ಲಿ ಇಡೀ ಜಗತ್ತಿನ ಸಮಸ್ಯೆಗಳಿಗೆ ಪರಿಹಾರವಿದೆ, ಸಮಾಧಾನವಿದೆ. ಅರ್ಜುನನನ್ನು ನೆಪಮಾಡಿಕೊಂದು ನಮ್ಮೆಲ್ಲಾ ಆತಂಕಗಳಿಗೆ ಪರಿಹಾರವನ್ನು  ಭಗವದ್ಗೀತೆಯೆಲ್ಲಿ  ಶ್ರೀ ಕೃಷ್ಣನು ಹೇಳಿದ್ದಾನೆ. ಹಾಗಾದರೆ ಭಗವದ್ಗೀತೆಯಲ್ಲಿ ಏನಿದೆ ಎಂಬುದನ್ನು ಸರಳವಾಗಿ ಇಲ್ಲಿ ತಿಳಿಯೋಣ.

ಗೀತೋಪದೇಶ:

ಕೌರವರು- ಪಾಂಡವರ ನಡುವೆ ನಡೆದ ಜೂಜಾಟದಲ್ಲಿ ಪಾಂಡವರು ಸೋಲುತ್ತಾರೆ.ಕರಾರಿನಂತೆ ಪಾಂಡವರು ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸಕ್ಕಾಗಿ ಕಾಡಿಗೆ ಹೋಗುತ್ತಾರೆ.ಕರಾರಿನಂತೆಯೇ ರಾಜ್ಯವು ಕೌರವರ ಪಾಲಾಗುತ್ತದೆ. ಆದರೆ ವನವಾಸ,  ಅಜ್ಞಾತವಾಸ ಮುಗಿಸಿ ಪಾಂಡವರು ಹಿಂದಿರುಗಿದಾಗ ಅವರ ರಾಜ್ಯವನ್ನು ಹಿಂದಿರುಗಿಸಬೇಕಾದದ್ದು ಕೌರವರ ಧರ್ಮವಾಗಿತ್ತು. ಆದರೆ ಕೌರವರು ರಾಜ್ಯವನ್ನು ಹಿಂದಿರುಗಿಸದ ಕಾರಣ ಮಹಾಭಾರತ ಯುದ್ಧಕ್ಕೆ ಕಾರಣವಾಯ್ತು. ಧರ್ಮದ ಪರವಾಗಿದ್ದ ಶ್ರೀ ಕೃಷ್ಣನು ಅರ್ಜುನನ ರಥಕ್ಕೆ ಸಾರಥಿಯಾದ. ಅರ್ಜುನನ ಮಾತಿನಂತೆ ರಣಾಂಗಣಕ್ಕೆ ಶ್ರೀ ಕೃಷ್ಣನು ರಥವನ್ನು ತೆಗೆದುಕೊಂಡು ಹೋಗಿ ಎರಡೂ ಸೈನ್ಯಗಳ ನಡುವೆ ನಿಲ್ಲಿಸುತ್ತಾನೆ. ಶತ್ರು ಸೈನ್ಯವನ್ನು ಅರ್ಜುನ ನೋಡುತ್ತಾನೆ. ಅಲ್ಲಿ ತನ್ನ ಗುರುಗಳಾದ ಕೃಪಾಚಾರ್ಯರು, ದ್ರೋಣಾಚಾರ್ಯರು ಹಾಗೂ ಇರುವವರೆಲ್ಲಾ ಸೋದರ ಸಂಬಂಧಿಗಳೇ!! ಇವರನ್ನೆಲ್ಲಾ ನೋಡಿದ ಅರ್ಜುನನಿಗೆ ಎದೆಯು ಝಲ್  ಎಂದಿತು, ಮೈನಲ್ಲಿ ನಡುಕ  ಉಂಟಾಯ್ತು. ಕಣ್ಣೆದೆರಿರುವರೆಲ್ಲಾ ಅವನ ಸಂಬಂಧಿಗಳೇ!! ಅರ್ಜುನನು ಯೋಚಿಸುತ್ತಾನೆ-“ ನಾನು ಬಹು ದೊಡ್ದ ತಪ್ಪು ಮಾಡುತ್ತಿದ್ದೇನೆ, ಅನ್ಯಾಯವಾಗಿ ನನ್ನ ಬಂಧುಗಳನ್ನೆಲ್ಲಾ ಕೊಂದು ಅವರ ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿದ್ದೇನೆ. ಅವರ ಪತ್ನಿಯರೆಲ್ಲಾ ವಿಧವೆಯರಾಗುವುದನ್ನು ನಾನು ಕಣ್ಣಾರೆ ನೋಡಬೇಕಲ್ಲಾ!!” ಹೀಗೆ ಯೋಚಿಸುತ್ತಾ ವ್ಯಾಕುಲಕ್ಕೆ ಒಳಗಾಗಿ ಶಸ್ತ್ರವನ್ನು ಕೆಳಗಿಟ್ಟು ಕುಸಿದುಬಿಡುತ್ತಾನೆ. ಆಗ ಅರ್ಜುನನಿಗೆ ಉಂಟಾಗಿದ್ದ ಶೋಕ-ಮೋಹಗಳನ್ನು ತೆಗೆದುಹಾಕಲು ಶ್ರೀ ಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶವೇ ಭಗವದ್ಗೀತೆ.

ಇದನ್ನು ಸರಳವಾಗಿ ಅರ್ಥೈಸಲು ವೇದಾಂತ ಭಾರತೀ ಸಂಸ್ಥೆಯು ಪ್ರಕಟಿಸಿರುವ “ಗೀತೆಯ ಬೆಳಕು” ಪುಸ್ತಕದಲ್ಲಿ ಎರಡು ನಿದರ್ಶನಗಳನ್ನು ನೀಡಿ ವಿವರಿಸಲಾಗಿದೆ. ಅವನ್ನು ನೋಡೋಣ.

ವಸಿಷ್ಠ ಮಹರ್ಷಿಗಳಿಗೆ ಅತ್ಯಂತ ಸದ್ಗುಣಿಯಾದ “ ಶಕ್ತಿ” ಎಂಬ ಮಗನಿದ್ದನು. ಯಾವುದೋ ಕಾರಣಕ್ಕೆ ಶಕ್ತಿಯು ಅಕಾಲ ಮರಣಕ್ಕೆ ತುತ್ತಾದನು. ಆಗ ಪುತ್ರ ಶೋಕದಿಂದ ದು:ಖಿತರಾದ ವಸಿಷ್ಟರು ಅತ್ಯಂತ ವ್ಯಾಕುಲಿತರಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳಲು “ ವಿಶಾಪ” ಎಂಬ ನದಿಗೆ ಹಾರುತ್ತಾರೆ. ಆದರೆ ಆ ನದಿಯಾದರೋ ಇಂತಹ ಜ್ಞಾನಿಗಳನ್ನು ಸಾಯಲು ಬಿಡಬಾರದೆಂದು ದಡಕ್ಕೆ ತಂದುಬಿಡುತ್ತದೆ.

ಮತ್ತೊಂದು ಘಟನೆ. ಒಂದುರಾಜ್ಯ. ಅಲ್ಲಿನ ರಾಜಭಟರು  ಒಬ್ಬ ತರುಣನನ್ನು  ಅಲ್ಲಿನ ನ್ಯಾಯಾಧೀಶರೆದುರು ತಂದು ನಿಲ್ಲಿಸಿ ಹೇಳುತ್ತಾರೆ “ ಸ್ವಾಮೀ, ಈತ ಬಲು ದುಷ್ಟ. ಈತನು ಅವನ ಮಿತ್ರನೊಡನೆ ಸೇರಿ  ಅನೇಕ ಲೂಟಿಗಳನ್ನೂ, ಕಳ್ಳತನವನ್ನೂ ಮಾಡಿದ್ದಾನೆ. ಸ್ತ್ರೀಯರ ಮೈ ಮೇಲಿನ ಆಭರಣಗಳನ್ನು ಕಸಿದಿದ್ದಾನೆ. ಇವನಿಗೆ ಉಚಿತವಾದ ಶಿಕ್ಷೆ ಕೊಡಿ”  ಅಪರಾಧಿಯನ್ನು ನೋಡಿದ ನ್ಯಾಯಾಧೀಶರ ಕಣ್ಣು ಕೆಂಪಾಗುತ್ತದೆ ರಾಜ ಭಟರಿಗೆ ಹೇಳುತ್ತಾರೆ “ ಇಂತವನನ್ನು ಸುಮ್ಮನೆ ಬಿಡಬಾರದು.  ಈತ ಗೆದ್ದಲು ಹುಳುವಿನಂತೆ, ಈತನನ್ನು ಸುಮ್ಮನೆ ಬಿಟ್ಟರೆ ಇಡೀ ತರುಣ ಸಮುದಾಯವೇ ಇವನಿಂದ ಕೆಟ್ಟು ಹೋಗುತ್ತದೆ, ಆದ್ದರಿಂದ ಇವನಿಗೆ ಘೋರ……..” ಘೋರ ಶಿಕ್ಷೆಯನ್ನೇ ವಿಧಿಸಬೇಕೆಂದು ಹೇಳುವಷ್ಟರಲ್ಲೇ  ರಾಜಭಟರು ಮತ್ತೊಬ್ಬ ಅಪರಾಧಿಯನ್ನು ಹಿಡಿದು ತರುತ್ತಾರೆ. ಆತನನ್ನು ನೋಡಿದ ನ್ಯಾಯಾಧೀಶರ ಮುಖ  ಬಿಳಿಚಿಕೊಳ್ಳುತ್ತದೆ ,ಹೇಳುತ್ತಾರೆ “ ಈ ತರುಣರನ್ನು ನೋಡಿದರೆ ಇವರುಗಳು ಶ್ರೀಮಂತರ ಮನೆಯಿಂದ ಬಂದವರಂತೆ ಕಾಣುತ್ತಾರೆ.ಇವರು ಯಾವುದೋ  ಕೆಟ್ಟಗಳಿಗೆಯಲ್ಲಿ ಇಂತಹ ಹೀನ ಕೃತ್ಯವನ್ನು  ಮಾಡಿದ್ದಾರೆ. ಇವರುಗಳನ್ನು ನೋಡಿದರೆ  ಈಗಾಗಲೇ ಪಶ್ಚಾತ್ತಾಪ ಪಟ್ಟವರಂತೆ ಕಾಣುತ್ತಾರೆ. ಇವರನ್ನು ಶಿಕ್ಷೆ ವಿಧಿಸಿ  ಸೆರೆಮನೆಗೆ ಕಳಿಸಿಬಿಟ್ಟರೆ ಅಲ್ಲಿನ ಕೊಲೆಗಡುಕರ ಸಹವಾಸದಲ್ಲಿ ಇವರು ದೊಡ್ದ ಕೊಲೆಗಾರರೇ ಆಗಬಹುದು. ಆದ್ದರಿಂದ ಇದು ಇವರ ಮೊದಲ ಅಪರಾಧವಾದ್ದರಿಂದ ಇವರನ್ನು ಕ್ಷಮಿಸಿ ಬಿಡುತ್ತೇನೆ” ಎಂದು ಬಿಟ್ಟರು. ಆ ಎರಡನೆಯ ಅಪರಾಧಿ ಬೇರೆ ಯಾರೂ ಅಲ್ಲ, ಸ್ವತ: ನ್ಯಾಯಾಧೀಷರ ಮಗನೇ ಆಗಿರುತ್ತಾನೆ!!

ಈ ಎರಡೂ ಘಟನೆಗಳನ್ನು ವಿಮರ್ಶಿಸಿದಾಗ ನಮಗೆ ಗೋಚರ ವಾಗುವುದೇನು? ಆತ್ಮಹತ್ಯೆಯು ಮಹಾ ಪಾಪವೆಂದು ತಿಳಿದಿದ್ದ ವಸಿಷ್ಟ ಮಹರ್ಷಿಗಳೂ ಕೂಡ ಪುತ್ರಶೋಕದಿಂದ ಮಹಾಪಾಪಕರವಾದ ಆತ್ಮಹತ್ಯೆಗೆ ಪ್ರಯತ್ನಿಸಿದರು. ಸ್ವತ: ನೂರಾರು ಜನರಿಗೆ ನ್ಯಾಯ ಕೊಡಬೇಕಾದ ನ್ಯಾಧೀಶರೂ ಕೂಡ ಪುತ್ರ ವ್ಯಾಮೋಹಕ್ಕೆ ಒಳಗಾಗಿ ಮಗನಿಗೆ ಶಿಕ್ಷೆ ನೀಡದೆ ನ್ಯಾಯಕ್ಕೆ ವಂಚನೆ ಮಾಡಿದರು. ಅಂದರೆ ಪುತ್ರ ಶೋಕ-ವ್ಯಾಮೋಹಗಳು ಇಂತಹ ಜ್ಞಾನಿಗಳಿಂದಲೇ ಮಾಡಬಾರದ ಕೆಲಸವನ್ನು ಮಾಡಿಸಿತು.

ಈ ಘಟನೆಗಳ ನೆರಳಲ್ಲಿ  ಅರ್ಜುನನ ಮನಸ್ಥಿತಿಯನ್ನು  ವಿಮರ್ಶಿಸೋಣ. ಅರ್ಜುನನಾದರೋ ರಣರಂಗದಲ್ಲಿ ಹೇಡಿಯಂತೆ ವರ್ತಿಸಲು ಕಾರಣವೇನು? ಹಾಗಾದರೆ ರಣರಂಗಕ್ಕೆ ಹೋಗಿದ್ದಾದರೂ ಏಕೆ? ಈ ಹಿಂದೆ ಅವನು ಇಂತಹ ಅದೆಷ್ಟು ಯುದ್ಧಗಳನ್ನು ಮಾಡಿಲ್ಲವೇ? ಇವನು ಯುದ್ಧಮಾಡಿದಾಗಲೆಲ್ಲಾ ಮಡಿದ ಶತ್ರುಗಳ ಪತ್ನಿಯರು ವಿಧವೆಯಾದರು ತಾನೇ? ಅವರ ಮಕ್ಕಳು ಅನಾಥರಾದರು ತಾನೇ?  ಆಗ ಇಲ್ಲದಿದ್ದ ಕರುಣೆ ಈಗೇಕೆ  ಮೂಡಿಬಂತು? ತನ್ನ ಕಣ್ಣೆದುರಿರುವ ತನ್ನ ಬಂಧುಗಳನ್ನು ನೋಡಿದಾಗ ಅರ್ಜುನನಿಗೆ ಸ್ವಜನ ವ್ಯಾಮೋಹ ಆವರಿಸಿ ಅರ್ಜುನನನ್ನು ದಾರಿ ತಪ್ಪಿಸಿತು. ಕೌರವರು ಬಂಧುಗಳೇ ಹೌದು. ಅವರು ಮಾಡಿದ್ದು ಅಧರ್ಮ.ಅಧರ್ಮದ ವಿರುದ್ಧ ಹೋರಾಡಬೇಕಾದುದು ಕ್ಷತ್ರಿಯ ಧರ್ಮ. ಅರ್ಜುನನ ಸ್ವಜನ ವ್ಯಾಮೋಹ ಎಷ್ಟು ವ್ಯಾಕುಲತೆಗೆ ಈಡುಮಾಡಿತ್ತೆಂದರೆ  ಯುದ್ಧವನ್ನು ಮಾಡದಿದ್ದರೆ ಅರ್ಜುನನನ್ನು ಧರ್ಮಬ್ರಷ್ಟನಾಗುತ್ತಿದ್ದ. ಅನ್ಯಾಯದ ಮೇಲುಗೈ ಆಗುತ್ತಿತ್ತು. ಆಗ ಶ್ರೀ ಕೃಷ್ಣಪರಮಾತ್ಮನು ಅರ್ಜುನನಿಗೆ ಧರ್ಮದ ಉಪದೇಶಮಾಡಬೇಕಾಯ್ತು. ಅರ್ಜುನನಲ್ಲಿದ್ದ ಶೋಕ ಮೋಹಗಳನ್ನು ಕಿತ್ತು ಹಾಕಬೇಕಾಯ್ತು. ಇದೇ ಭಗವದ್ಗೀತೆ.

ಇಲ್ಲಿ ಅರ್ಜುನನು ನೆಪಮಾತ್ರ. ಪ್ರಪಂಚದ ಜನರಿಗೆ ಆವರಿಸಿರುವ ಶೋಕ-ಮೋಹಗಳನ್ನು ಹೋಗಲಾಡಿಸಲು ಗೀತೋಪದೇಶವು ಸಹಕಾರಿಯಾಗಿದೆ. ಜೀವನದಲ್ಲಿ ಘಟಿಸುವ ಅನೇಕ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ. ಆದ್ದರಿಂದ  ಸೋಂದಾ ಸ್ವರ್ಣವಲ್ಲೀ ಮಠದ ಪೀಠಾಧಿಪತಿಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ರಾಜ್ಯಮಟ್ಟದ ಅಭಿಯಾನವೊಂದನ್ನು ತೆಗೆದುಕೊಂಡಿದ್ದಾರೆ. ಗೀತೆಯ ಹದಿನಾಲ್ಕನೇ ಅಧ್ಯಾಯವನ್ನು ಹಿರಿಯ ಪ್ರಾಥಮಿಕಶಾಲಾಮಕ್ಕಳಿಗೂ ಹದಿನೈದನೆಯ ಅಧ್ಯಾಯವನ್ನು ಪ್ರೌಢಶಾಲಾಮಕ್ಕಳಿಗೂ ಕಲಿಸುವ ಈ ಅಭಿಯಾನದ ಘೋಷವಾಕ್ಯವೇ  “ ಕ್ಷುದ್ರಂ ಹೃದಯ ದೌರ್ಬಲ್ಯಮ್  ತ್ಯಕ್ತ್ವೋತ್ತಿಷ್ಠ ಪರಂತಪ”  ಅರ್ಥ “ ತುಚ್ಛವಾದ ಹೃದಯ ದೌರ್ಬಲ್ಯವನ್ನು ತ್ಯಜಿಸಿ  ಏಳು, ಹೋರಾಡು”

ಶ್ರೀ ಕೃಷ್ಣನ ಈ ಕರೆಯು ಇಂದಿನ ನಿದ್ರಾವಸ್ಥೆಯಲ್ಲಿರುವ ಸಮಾಜಕ್ಕೆ ಅಗತ್ಯವಾಗಿ ಬೇಕಲ್ಲವೇ? ಆತ್ಮಸ್ಥೈರ್ಯವನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಸಂಜೀವಿನಿಯಲ್ಲವೇ?

 

-ಹರಿಹರಪುರ ಶ್ರೀಧರ್

 

 

Rating
Average: 5 (1 vote)

Comments