ಮಿಸ್ಟೇಕನ್ ಐಡೆಂಟಿಟಿ (ಮೂರನೆಯ ಹಾಗೂ ಕೊನೆಯ ಕಂತು)

ಮಿಸ್ಟೇಕನ್ ಐಡೆಂಟಿಟಿ (ಮೂರನೆಯ ಹಾಗೂ ಕೊನೆಯ ಕಂತು)

ಮಿಸ್ಟೇಕನ್ ಐಡೆಂಟಿಟಿಮಿಸ್ಟೇಕನ್ ಐಡೆಂಟಿಟಿ ಎರಡನೇ ಕಂತು ಇಂದ ಮುಂದುವರೆದಿದೆ 

ರೋಗಿಯ ಗಂಡ : ಡಾ. ಮಧುಲಿಕಾ ಅವರನ್ನು ನೋಡಬೇಕು (ಅವರು ಜೆನೆಟಿಕ್ ವಿಭಾಗದ ಮುಖ್ಯಸ್ತರು)

ನಾನು: (ರೋಗಿಯ ಓ.ಪಿ.ಡಿ. ಕಾರ್ಡ್ ಓದಿ, ರೋಗಿಗೆ ಡಾ. ಮಧುಲಿಕಾ ಅವರನ್ನು ನೋಡಬೇಕಾದ ಅಗತ್ಯವಿಲ್ಲ ಎಂದು ನಿರ್ಧರಿಸಿ) ನೀವು ನಾಳೆ ೧೦:೩೦ ರಿಂದ ೧೨:೩೦ ರ ನಡುವೆ ನಿಮ್ಮ ರಕ್ತದ ಟೆಸ್ಟಿಂಗ್ ಅನ್ನು ೧೦೯ ಕೋಣೆಯಲ್ಲಿ ಮಾಡಿಸಿ. ಅದರ ರಿಪೋರ್ಟ್ ಬಂದ ಮೇಲೆ ಅದನ್ನು ಸ್ತ್ರೀ ರೋಗ ತಜ್ಞರಿಗೆ ತೋರಿಸಿ.

ರೋಗಿ: ನೀವೇ ಡಾ. ಮಧುಲಿಕಾ ಏನು?

ನನ್ನ ಧ್ವನಿ ಕೀರಲಾಗಿರುವುದರಿಂದ ನಾನು ಫೋನಿನಲ್ಲಿ ಮಾತನಾಡುವಾಗ ಕೆಲವರು ನನ್ನನ್ನು ಹೆಂಗಸೆಂದು ತಪ್ಪಾಗಿ ತಿಳಿದ ಪ್ರಸಂಗಳು ಇವೆ. ಆದರೆ ನನ್ನ ವಿಭಿನ್ನ ಅನುಭವಗಳಲ್ಲಿ ಕೂಡ ನನ್ನನ್ನು ನೋಡಿಯೂ ಹೆಂಗಸೆಂದು ತಪ್ಪು ತಿಳಿದದ್ದು ಈ ರೋಗಿ ಮಾತ್ರ! ಡಾ. ಮಧುಲಿಕಾ ಎಂಬುದು ಒಬ್ಬ ಹೆಂಗಸಿನ ಹೆಸರೆಂದು ನನಗೆ ನಿಮಗೆ ತಿಳಿದಂತೆ ಆ ರೋಗಿಗೆ ತಿಳಿದಿಲ್ಲದಿರಬಹುದು ಬಿಡಿ.

ಇದನ್ನು ಬರೆಯುತ್ತಿರುವಾಗ ನನ್ನ ಸಹೋದ್ಯೋಗಿಯೊಬ್ಬಳು ನೆನಪಾಗುತ್ತಾಳೆ. ಪ್ಯಾಂಟ್ ಶರ್ಟ್ ತೊಟ್ಟು, ಬಾಬ್ ಕಟ್ ಮಾಡಿದ್ದ ಅವಳನ್ನು ಹುಡುಗಿಯರ ಹಾಸ್ಟೆಲಿನ ಸೆಕ್ಯುರಿಟಿ ಗಾರ್ಡ್ (ಅಲ್ಲಿ ಹುಡುಗರ ಪ್ರವೇಶಕ್ಕೆ ಕೆಲವು ನಿರ್ಬಂಧನೆಗಳಿವೆ) ಒಳಗೆ ಹೋಗದಂತೆ ತಡೆದಿದ್ದ! ಈ ವಿಷಯ ಬಂದ ಮೇಲೆ ಈ ನಗೆಹನಿ ಹೇಳದೆ ಇರಲು ನನ್ನಿಂದ ಸಾಧ್ಯವಿಲ್ಲ, ಕೇಳಿ: ಒಂದೆಡೆ ಹುಡುಗರ ಹಾಸ್ಟೆಲ್ ಮತ್ತು ಹುಡುಗಿಯರ ಹಾಸ್ಟೆಲ್ ಪಕ್ಕದಲ್ಲೇ ಇದ್ದವು. ಅಲ್ಲಿನ ಮುಖ್ಯಸ್ತರು ಆದೇಶ ಹೊರಡಿಸಿದರು, 'ಇನ್ನು ಮುಂದೆ ಹುಡುಗರು ಹುಡುಗಿಯರ ಹಾಸ್ಟೆಲ್ ಪ್ರವೇಶ ಮಾಡಕೂಡದು. ಮೊದಲ ಬಾರಿ ಈ ನಿರ್ಬಂಧನೆಯನ್ನು ಮುರಿಯುವವರಿಗೆ ಐವತ್ತು ರೂಪಾಯಿಗಳ ದಂಡ ವಿಧಿಸಲಾಗುವುದು. ಮತ್ತೆ, ಅದೇ ತಪ್ಪನ್ನು ಮಾಡಿದಲ್ಲಿ ನೂರು ರೂಪಾಯಿಗಳ ದಂಡ ವಿಧಿಸಲಾಗುವುದು.' ಹುಡುಗನೊಬ್ಬ ಕೇಳಿದ್ದನಂತೆ, "ಸರ್, ಸೀಸನ್ ಪಾಸ್ ಗೆ ಎಷ್ಟಾಗುತ್ತೆ?"

ಹೋಗಲಿ, ನಾನು ಹೇಳ ಹೊರಟಿದ್ದು ಅದಲ್ಲ ... ಹೀಗೆ ನಾನೇನಲ್ಲವೋ ಅದಾಗಿ ತೋರ್ಪಡುವ ಯಾವುದೋ ಗುಣಗಳು ನನ್ನಲ್ಲಿರಬೇಕು. ಅರೆ ಬರೆ ತಮಿಳು ಮಾತನಾಡಿದ್ದರಿಂದ ತಮಿಳರವನೆಂದೂ, ಹಿಂದಿಯಲ್ಲಿ ಆಕ್ಸೆಂಟ್ ಇಲ್ಲದ್ದರಿಂದ ಉತ್ತರ ಭಾರತದವನೆಂದೂ, ಕುಳ್ಳಗಿದ್ದುದರಿಂದ ಕಡಿಮೆ ವಯಸ್ಸಿನವನೆಂದೂ ಜನ ತಪ್ಪಾಗಿ ತಿಳಿದದ್ದು ವಿಶೇಷವೇನಲ್ಲ ಎಂಬುದು ನನಗೆ ಗೊತ್ತು. ಈ ಲೇಖನದ ಮೊದಲಿನ ಕಂತುಗಳಿಗೆ ಬಂದ ಪ್ರತಿಕ್ರಿಯೆಗಳಿಂದ ಇದು ಎಲ್ಲರ ಜೀವನದಲ್ಲೂ ನಡೆಯುತ್ತದೆ ಎಂಬುದು ಗೊತ್ತಾಗುತ್ತದೆ. ಆದ್ರೆ ನನಗೆ ಆಶ್ಚರ್ಯ ತಂದ ವಿಷಯವೆಂದರೆ ನಾನು ಹೋದಲ್ಲೆಲ್ಲ ಇಂಥ ಸಂದರ್ಭಗಳು (ಬಸ್ನಲ್ಲಿ ಕಂಡಕ್ಟರ್, ಅಂಗಡಿಯಲ್ಲಿ ಸೇಲ್ಸ್ಮಾನ್ ಇತ್ಯಾದಿ) ಎಡಬಿಡದೆ ಆಗುತ್ತಿರುವುದು.

ಇದಕ್ಕೆ ನಾನು ನನ್ನ ಉಡಿಗೆ - ತೊಡಿಗೆಗಳಿಗೆ ಹೆಚ್ಚು ಧ್ಯಾನ ನೀಡದಿರುವುದು ಒಂದು ಕಾರಣವಾಗಿರಬಹುದು. किं वाससा इत्यत्र विचारणीयं वासः प्रधानं खलु योग्यतायै । पीताम्बरं वीक्ष्य ददौ स्वकन्यां दिगम्बरं वीक्ष्य विषं समुद्रः ॥ ಎಂಬಂತೆ ನನ್ನ ಉಡಿಗೆ ನೋಡಿ ಕೆಲವೆಡೆ ನನ್ನನು ತಪ್ಪು ತಿಳಿದಿರಬಹುದು. ಇನ್ನು ಕೆಲವರು ನನ್ನ body language ಇಂದ ಮೋಸ ಹೋಗಿರಬಹುದು. ಹೇಗಿದ್ದರೂ ನನ್ನನ್ನು ತಪ್ಪು ತಿಳಿದವರ ಕುರಿತು ನಾನು ತಪ್ಪು ತಿಳಿಯುವುದಿಲ್ಲ (ಬೇಸರಿಸುವದಿಲ್ಲ) ಬಿಡಿ.

ಸರಿ; ಈ ನಗೆಹನಿಯೊಂದಿಗೆ ಈ ಲೇಖನ ಮುಗಿಸುತ್ತೇನೆ. ಒಮ್ಮೆ ಆಲ್ಬರ್ಟ್ ಐನಸ್ಟೀನ್ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದರಂತೆ. ಯಾವುದೊ ನಿಲ್ದಾಣದಲ್ಲಿ ದಿನಪತ್ರಿಕೆ ಕೊಂಡರಂತೆ. ಆದರೆ, ಅವರು ತಮ್ಮ ಕನ್ನಡಕವನ್ನು ತಮ್ಮೊಡನೆ ಒಯ್ದಿರಲಿಲ್ಲವಾದರಿಂದ, ತಮ್ಮ ಸಹಪ್ರಯಾಣಿಕರೊಬ್ಬರನ್ನು, 'ರೀ, ಸ್ವಲ್ಪ ಇವತ್ತಿನ ತಲೆಬರಹಗಳನ್ನು ಓದಿ ಹೇಳ್ತೀರಾ?' ಎಂದು ಪತ್ರಿಕೆಯನ್ನು ಅವರತ್ತ ಚಾಚಿದರಂತೆ. ಅದಕ್ಕೆ ಆ ಮಹನೀಯರು, 'ಇಲ್ಲ ಸ್ವಾಮೀ, ನನ್ನಿಂದಾಗಲ್ಲ. ನಾನೂ ನಿಮ್ಮಂತೆ ಅನಕ್ಷರಸ್ತ" ಅಂದರಂತೆ.

(ಸಾಕು ಅನ್ನಿಸ್ತು; ಮುಗಿಸಿದ್ದೇನೆ)

P.S. ಮೊದಲಿನ ಕಂತುಗಳನ್ನು ಓದಿಲ್ಲದೆ ಇದ್ದಲ್ಲಿ, ದಯವಿಟ್ಟು ಅವನ್ನೂ ಓದಿ ಪ್ರತಿಕ್ರಿಯಿಸಿ. ಈ ಬರಹವನ್ನಂತೂ ಪ್ರತಿಕ್ರಿಯೆಗಳ ಆಸೆಯಿಂದಲೇ ಬರೆದಿದ್ದೇನೆ!  

ಮಿಸ್ಟೇಕನ್ ಐಡೆಂಟಿಟಿ

ಮಿಸ್ಟೇಕನ್ ಐಡೆಂಟಿಟಿ ಎರಡನೇ ಕಂತು  

 

Rating
No votes yet

Comments