ಪುಟ್ಟ ಕ(ವ್ಯ)ಥೆಗಳು

ಪುಟ್ಟ ಕ(ವ್ಯ)ಥೆಗಳು

 " ಹಾಡು " ಪುಸ್ತಕ ಬಿಡುಗಡೆಯ ಸಮಾರಂಭದ ಬಗ್ಗೆಯ ವರದಿ ಓದುತ್ತಿದ್ದಂತೆ ಕಣ್ಣಲ್ಲಿ ನೀರು ಬಂತು. ತಾನು  ನೆನ್ನೆ ಹೋಗಬೇಕಿತ್ತಲ್ಲವೇ?  ನೆನ್ನೆ ಕೇಳಿದ್ದಕ್ಕೆ ಸಾಹಿತ್ಯದ ಗಂಧ ಗಾಳಿಯೂ ಇಲ್ಲದ ಗಂಡ ನಕ್ಕು "ಮಾಡೋದಿಕ್ಕೆ ಕೆಲಸ ಇಲ್ಲ .ಅದೇ ಸಮಯಾನಾ ಬೇರೆ ಯಾವುದಕ್ಕಾದರೂ ಹಾಕಿದರೆ ಒಂದಷ್ಟು ಕಾಸಾದರೂ ಸಂಪಾದಿಸಬಹುದು " ಎಂದಿದ್ದ . ಹೀಗೆ ಎಷ್ಟೊಂದು  ಅಮೂಲ್ಯ ಕ್ಷಣಗಳನ್ನು ಕಿತ್ತು ಹಾಕಿದ ಗಂಡನ ಬಗ್ಗೆ ರೋಷ ಹೆಚ್ಚಿತು. ತನ್ನ ಅಭಿರುಚಿಗೆ ತಡೆಯಾಗಿರುವ ಗಂಡ ಮಗು ಏನೂ ಬೇಡ ಎಂದುಕೊಳ್ಳುವ ಹೊತ್ತಿಗೆ ಮಗು ಸೆರಗು ಹಿಡಿದೆಳೆಯಿತು.  ರೋಷ ಇಂಗಿ ಹೋಯಿತು .ಕಣ್ಣೊರೆಸಿಕೊಂಡು ಗಂಡನಿಗೆ  ತಿಂಡಿ ಕೊಡಲು ಸಿದ್ದಳಾದಳು.


****************************** 


ಎಂದಿನಂತೆ ಇಂದೂ ಅಮ್ಮ ಬೈದು ಕಳಿಸಿದ್ದರು . "ಕೆಲಸ ಇಲ್ಲ ಕಾರ್ಯ ಇಲ್ಲ ಬರೀ ಇಂಟರ್‌ವ್ಯೂ ಹೋಗಿ ಬಂದ್ರೆ ಸಾಲದು . ಗೆಲ್ಲಬೇಕು."ರಾತ್ರಿಯೂ ತಿಂದಿರಲಿಲ್ಲ  ಯಥಾಪ್ರಕಾರ ತಿಂಡಿ ತಿನ್ನದೆ ಬಂದಿದ್ದಾಗಿತ್ತು. ಲಾಲ್‌ಭಾಗ್‌ನಿಂದ   ಎಮ್ ಜಿ ರೋಡಿನವರೆಗೆ ನಡೆದೇ ಸಾಗಬೇಕು. ನಡೆದೂನಡೆದೂ ಸುಸ್ತಾಗುತ್ತಿತ್ತು . ಅಂದದ ಯೌವ್ವನ ಭರಿತ ದೇಹವನ್ನು ಕಿತ್ತು ತಿನ್ನುವಂತಾ ನೋಟಗಳ ಬಾಣವನ್ನು ಎದುರಿಸುತ್ತ ಬರುತ್ತಿದ್ದಂತೆ ಟಾಟ ಸುಮೋದಲ್ಲಿ ಬಂದವನೊಬ್ಬ ಡ್ರಾಪ್ ಕೊಡುತ್ತೇನೆ ಎಂದ . ಅದನ್ನೇ ಕಾದವಳಂತೆ ಹತ್ತಿದೆ. ಅವನ ಕಣ್ಣಲ್ಲಿ ನನ್ನ ಬಗ್ಗೆ ಅದೇನೋ ಕಾಳಜಿ ಕಂಡುಕೊಂಡೆ. ಎಮ್ ಜಿ ರೋಡಿನ ಹೋಟೆಲ್ ಒಂದರಲ್ಲಿ ತಿಂಡಿ ಕೊಡಿಸಿದ . ತಿಂಡಿ ತಿಂದು ಹೊರಗೆ ಬಂದೆ ಇಂಟರ್‍ವ್ಯೂ ಮರೆತೆ ಹೋಗಿತ್ತು. ಅವನ ನಲ್ಮೆಯ ಮಾತುಗಳ ಬಲೆಯಲ್ಲಿ ಬೀಳುತ್ತಿದ್ದ ನಾನು ಟಾಟ ಸುಮೋ ಎತ್ತ ಹೋಗುತ್ತಿದೆ ಎಂಬುದನ್ನೂ ಕಂಡುಕೊಳ್ಳದವಳಾದೆ ಜೊತೆಗೆ ನನ್ನ ಬದುಕಿನ ದಿಕ್ಕನ್ನೂ ಸಹಾ.


****************************** 


"ಅಪ್ಪಾ ಬರ್ತ್ಜಿದಾರಂತೆ " ಪುಟ್ಟಹುಡುಗಿ ಅಣ್ಣನ ಕಿವಿಯಲ್ಲಿ ಉಸುರಿದ್ದಳು. ಹುಡುಗನ ಮೊಗದಲ್ಲಿ ಸಂತಸ. ಅಮ್ಮ ಸತ್ತ ನಂತರ ತಮ್ಮಿಬ್ಬರನ್ನು ಬಿಟ್ಟು ಹೋಗಿದ್ದ ಅಪ್ಪ ಇವತ್ತು ಬರ್ತಿದ್ದಾರೆಂದರೆ ತಮ್ಮ ಕಷ್ಟವೆಲ್ಲಾ ದೂರವಾಯಿತೆಂದೇ ಲೆಕ್ಕ.  ತಾನೂ ಈ ಕೂಲಿ ಕೆಲ್ಸ ಬಿಟ್ಟು ತಂಗಿಯ ಜೊತೆ ಸ್ಕೂಲಿಗೆ ಹೋಗಬಹುದು.ಹುಡುಗ ಆದಿನ ಕೂಲಿಗೆ ಹೋಗಲಿಲ್ಲ. ಹುಡುಗಿ ತನಗೆ ಬರುವಂತೆ ಪಾಯಸದ ಅಡಿಗೆ  ಮಾಡಿದಳು ಸಂಜೆ ಆಯಿತು ಅಪ್ಪ ಬರಲಿಲ್ಲ ಕಾದೂ ಕಾದು ಸಾಕಾಗಿ ಹುಡುಗಿ ಮಲಗಿದಳು. ಹುಡುಗ ಕಣ್ಣಿಗೆ ಎಣ್ಣೆ ಬಿಟ್ಟವನಂತೆ ರೆಪ್ಪೆ ಬಡಿಯದೆ ಕಾಯುತ್ತಿದ್ದ. ಕೊನೆಗೂ ಅಪ್ಪ ಬಂದ .ಬಂದವನೇ ಮಗನನ್ನೂ ಮಾತಾಡಿಸಲಿಲ್ಲ. ಮಗಳನ್ನೂ ನೋಡಲಿಲ್ಲ. ಆಮ್ಮ ಸತ್ತಾಗಿನಿಂದಲೂ ಬೀಗ ಹಾಕೇ ಇದ್ದ ಅಲ್ಮಾರ ತೆರೆದ . ಅಲ್ಲಿದ್ದ ಎಲ್ಲವನ್ನೂ ಒಂದು ಬ್ಯಾಗಿಗೆತುಂಬಿಕೊಂಡವನೇ ತನ್ನನ್ನೆ ನೋಡುತ್ತಿದ್ದ ಹುಡುಗನಿಗೆ ಚಾಕಲೇಟ್ ಕೊಟ್ಟು "ಶ್ " ಎಂದು ಹೊರಟೇ ಹೋದ. ಹುಡುಗ ಬೆಪ್ಪಾಗಿ ಹೋಗಿದ್ದ.ಬೆಳಗ್ಗೆ ಅಪ್ಪ ಬಂದಿದ್ರಾ ಎಂದು ಕೇಳಿದ ತಂಗಿಗೆ ಇಲ್ಲ ಎಂದು ಹೇಳಿ ಕೂಲಿ ಕೆಲಸಕ್ಕೆ ಸಿದ್ದನಾದ


****************************** 


 


 


 


 


 


 

Rating
No votes yet

Comments