'ಆನು ದೇವಾ ...': ಜಾತಿ ವ್ಯವಸ್ಥೆ ಕುರಿತ ಹೊಸ ನೋಟದತ್ತ
'ಆನು ದೇವಾ ...': ಜಾತಿ ವ್ಯವಸ್ಥೆ ಕುರಿತ ಹೊಸ ನೋಟದತ್ತ
ಬಂಜಗೆರೆ ಜಯಪ್ರಕಾಶರ 'ಆನು ದೇವಾ ಹೊರಗಣವನು...' ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ಕೂಗು ಕೇಳಿ ಬರಲಾರಂಭಿಸಿದೆ. ಈ ಪುಸ್ತಕವನ್ನು ಒಂದು ಸೃಜನಶೀಲ ಸಂಶೋಧನ ಗ್ರಂಥವೆಂದು ಓದಿದ ಯಾರಿಗೂ, ಈ ಕೂಗೇಕೆ ಎಂಬುದೇ ಅರ್ಥವಾಗುತ್ತಿಲ್ಲ. ಏಕೆಂದರೆ, ಬಸವಣ್ಣ ಹುಟ್ಟಿನಿಂದ ಬ್ರಾಹ್ಮಣ ಎಂಬ ಬಗ್ಗೆ ಅಲ್ಲಲ್ಲಿ ಆಗಾಗ್ಗೆ ವ್ಯಕ್ತವಾಗುತ್ತಿದ್ದ ಅನುಮಾನಗಳನ್ನು ಹಳೆ ಮತ್ತು ಹೊಸ ಆಕರಗಳ ಆಧಾರದ ಮೇಲೆ ಪರಿಶೀಲಿಸುವ ಪ್ರಯತ್ನ ಮಾಡುವ ಈ ಪುಸ್ತಕ, ಆತ ಮಾದಿಗನಾಗಿದ್ದಿರಬಹುದಾದ ಸೂಚನೆಗಳನ್ನು ಮಾತ್ರ ನೀಡುತ್ತದೆ. ಬಸವಣ್ಣ ಜಾತಿ ವ್ಯವಸ್ಥೆಯ ವಿರುದ್ಧ ಭಾರತ ತನ್ನ ಇತಿಹಾಸದಲ್ಲೇ ಕಂಡರಿಯದಂತಹ ಬಹು ಆಯಾಮಗಳ ಆಂದೋಲನದ ನೇತೃತ್ವ ವಹಿಸಿದ್ದ ಮಹಾಪುರುಷ. ಆತ ಹುಟ್ಟಿನಿಂದ ಮಾದಿಗ ಜಾತಿಗೆ ಸೇರಿದವನಾಗಿದ್ದ ಎಂದು ಯಾರಾದರೂ ಸಾಧಿಸಿ ತೋರಿದರೆ, ಅದನ್ನು ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾದ ಅವನ ಅನುಯಾಯಿಗಳು ಸಿಡಿದೇಳುತ್ತಿದ್ದಾರೆ ಎಂದರೆ; ಅವರು 'ಮಾದಿಗ' ಶಬ್ದವನ್ನು ಒಂದು ಬೈಗುಳವೆಂದೇ ಅರ್ಥ ಮಾಡಿಕೊಂಡಿರುವುದರ ಹೊರತಾಗಿ ಬೇರೇನೂ ಕಾರಣ ಹೊಳೆಯದು. ಇದು ಬಸವಣ್ಣನಿಗೆ ಅವನ ಅನುಯಾಯಿಗಳೆಂದು ಹೇಳಿಕೊಳ್ಳುವವರು ಮಾಡಬಹುದಾದ ದೊಡ್ಡ ಅವಮಾನ. ಹೀಗೆ ಅವಮಾನ ಮಾಡುತ್ತಿರುವವರ ಸಾಲಿನಲ್ಲಿ 'ಈ ಪುಸ್ತಕದ ಲೇಖಕನ್ನು ಸುಟ್ಟು ಹಾಕಬೇಕು' ಎಂದರಚಿರುವ ಅಸಭ್ಯ ಸ್ವಾಮಿಯೊಬ್ಬನ ಕೂಗಿನ ಜೊತೆಗೆ ಪಾಟೀಲ ಪುಟ್ಟಪ್ಪನಂತವರು 'ರಾಜ್ಯದಲ್ಲಿ ಕಿಚ್ಚು ಹತ್ತಿ ಉರಿಯುವ' ಎಚ್ಚರಿಕೆ ನೀಡಿದ್ದಾರೆ. ಮೊದಲು ಸರ್ಕಾರ ಈ ಪ್ರಚೋದಕ ಹೇಳಿಕೆಗಳಿಗಾಗಿ ಈ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಇವರ ನಿಲುವಿನ ಜೊತೆ ಗುರುತಿಸಿಕೊಂಡಿರುವ ಇತರರಿಗೆ ವಿವೇಕ ಹೇಳಬೇಕಿದೆ. ಈ ವಿಷಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಗೃಹ ಮಂತ್ರಿ ಎಂ.ಪಿ. ಪ್ರಕಾಶರು ಅಭಿನಂದನಾರ್ಹರಾಗಿದ್ದು, ಮುಂದಿನ ದಿನಗಳಲ್ಲಿ ಅವರು ಯಾವ ಒತ್ತಡಕ್ಕೂ ಮಣಿಯದೆ ತಮ್ಮ ಸಾಂಸ್ಕೃತಿಕ ತಿಳುವಳಿಕೆ ಕೇವಲ ತೋರುಗಾಣಿಕೆಯದಲ್ಲ ಎಂಬುದನ್ನು ಕನ್ನಡ ಜನತೆಯ ಮುಂದೆ ಸಾಬೀತುಪಡಿಸಬೇಕಿದೆ.
ಹಾಗೇ, ಜಾತಿ ಮುಖಂಡರ ದಾಕ್ಷಿಣ್ಯಕ್ಕೆ ಒಳಗಾದದಂತೆ ತೋರುತ್ತಿರುವ ಕಲ್ಬುರ್ಗಿ, ಕಣವಿ, ಜಿ.ಎಸ್.ಸಿದ್ಧಲಿಂಗಯ್ಯ ಮುಂತಾದವರು; ಇದೇ ಜಾತಿ ಮುಖಂಡರು ಈ ಪುಸ್ತಕ ಅಂಬೇಡ್ಕರ್ ಮತ್ತು ಕುವೆಂಪು ಅವರನ್ನೂ ಅವಮಾನಿಸಿದೆ ಎಂದು ಅಪ್ಪಟ ಸುಳ್ಳು ಹೇಳುತ್ತಾ ಇತರ ಜಾತಿ ಸಮುದಾಯಗಳನ್ನೂ ಪ್ರಚೋದಿಸುತ್ತಿರುವುದರ ಹಿಂದಿನ ಸಣ್ಣತನವನ್ನು ಅರಿತು, ಈ ಸಂಕುಚಿತ ವಲಯದಿಂದ ಆದಷ್ಟು ಬೇಗ ಮುಕ್ತಗೊಂಡು ತಮ್ಮ ಘನತೆಯನ್ನು ಕಾಪಾಡಿಕೊಳ್ಳಬೇಕಿದೆ. ಜಾತಿ ವ್ಯವಸ್ಥೆ ಇತಿಹಾಸದ ಒತ್ತಡಗಳಿಗೆ ಸಿಕ್ಕಿ ತನ್ನ ನೆಲೆಗಳನ್ನೂ, ಸ್ವರೂಪವನ್ನು ಸದಾ ಬದಲಾಯಿಸಿಕೊಳ್ಳತ್ತಾ ಹೋಗುತ್ತಿರುವಾಗ, ಒಂದು ಕಾಲದ ಜಾತಿ ವ್ಯವಸ್ಥೆಯ ಒಳಸುಳಿಗಳ ಅಧ್ಯಯನವನ್ನು ಇನ್ನೊಂದು ಕಾಲದ ಜಾತಿ ವ್ಯವಸ್ಥೆಯ ಕಣ್ಣಿನಲ್ಲಿ ಅರ್ಥೈಸಿಕೊಳುತ್ತಾ ಹೋದರೆ, ಈಗಾಗಿರುವಂತೆ ಅಪಾರ್ಥಗಳೇ ಹೆಚ್ಚಾಗಿ ಹೊಮ್ಮುವ ಅಪಾಯವಿದೆ ಎಂಬುದೂ ಇವರ ಗಮನದಲ್ಲಿದ್ದರೆ ಒಳ್ಳೆಯದು. ಅಲ್ಲದೆ, ಈ ಗೌರವಾನ್ವಿತ ಸಾಹಿತಿ-ವಿದ್ವಾಂಸರು ಸಾಮಾಜಿಕ-ಸಾಂಸ್ಕೃತಿಕ ಸಂಶೋಧನೆಯ ಈ ಗ್ರಂಥವನ್ನು ಅದಕ್ಕೆ ತಕ್ಕ ಶೈಕ್ಷಣಿಕ ಗಾಂಭೀರ್ಯದೊಂದಿಗೆ ಓದಬೇಕೇ ಹೊರತು, ಕೇವಲ ಜಾತಿ ದೃಷ್ಟಿಯನ್ನಿಟ್ಟುಕೊಂಡಲ್ಲ ಎಂಬುದನ್ನು ತಮ್ಮ ಜಾತಿ ಮುಖಂಡರಿಗೆ ಮನದಟ್ಟು ಮಾಡಿಕೊಡುವುದು ಸದ್ಯದ ಗೊಂದಲದ ಸಂದರ್ಭದಲ್ಲಿ ತಮ್ಮ ಕರ್ತವ್ಯವೆಂದು ಭಾವಿಸಬೇಕಿದೆ. ಇವರಿಗೆ, ಈ ಪುಸ್ತಕದ ಬಗ್ಗೆ ಭಿನ್ನಾಭಿಪ್ರಾಯಗಳೇನಾದರೂ ಇದ್ದರೆ ಅದನ್ನು ವಿವರವಾಗಿ ತಮ್ಮ ಘನತೆಗೆ ತಕ್ಕ ವೇದಿಕೆಗಳಲ್ಲಿ ಜನತೆಯ ಮುಂದಿಟ್ಟು, ವೈಚಾರಿಕ ನೆಲೆಯಲ್ಲಿ ಈ ಪುಸ್ತಕದ ಮೌಲ್ಯಮಾಪನ ನಡೆಯಲು ದಾರಿ ಮಾಡಿಕೊಡಲಿ. ಏಕೆಂದರೆ, ಬಸವಣ್ಣ ಕೇವಲ ಒಂದು ಜಾತಿಯ ನಾಯಕನಾಗಿರದೆ, ಇಡೀ ಕನ್ನಡ ಸಮಾಜದ ನಾಯಕನಾಗಿದ್ದಾನೆ ಮತ್ತು ಇಂತಹ ವಿಷಯಗಳನ್ನು ಮೌಲಿಕವಾಗಿ ಚರ್ಚೆ ಮಾಡಬಲ್ಲಂತಹ ವಿದ್ವದ್ ವೇದಿಕೆಗಳು ಕರ್ನಾಟಕದಲ್ಲಿ ನಮ್ಮ ಅದೃಷ್ಟಕ್ಕೆ ಕೆಲವಾದರೂ ಇನ್ನೂ ಜೀವಂತವಿವೆ.
ಬಂಜಗೆರೆಯವರು ಈ ಪುಸ್ತಕವನ್ನು ರಚಿಸಿರುವುದು ಅವರೇ ಈ ಪುಸ್ತಕದಲ್ಲಿ ಹೇಳಿಕೊಂಡಿರುವಂತೆ, ಮಾದಿಗ ಜಾತಿಗೆ ಸೇರಿದ ಬೇರೆ ಬೇರೆ ಪ್ರದೇಶಗಳ ಇಬ್ಬರು ಕಿರಿಯ ಸ್ನೇಹಿತರು 'ಬಸವಣ್ಣ ನಮ್ಮ ಜಾತಿಗೆ ಸೇರಿದವನಂತೆ, ಹೌದೆ?' ಎಂದು ತಮ್ಮನ್ನು ಕೇಳಿದ ಪ್ರಶ್ನೆಯಿಂದ ಕುತೂಹಲಗೊಂಡು ನಡೆಸಿದ ಸಂಶೋಧನೆಯ ಆಧಾರದ ಮೇಲೆ. ಅವರು ಮೊದಲಿಗೆ ಈ ಪುಸ್ತಕದಲ್ಲಿ ಬಸವಣ್ಣ ಜನ್ಮಜಾತ ಬ್ರಾಹ್ಮಣನಾಗಿದ್ದು, ನಂತರ ಬಂಡೆದ್ದು (ಯಾಕೆಂದು ಯಾರಿಗೂ ಗೊತ್ತಿಲ್ಲ!) ಕೆಳ ಜಾತಿಗಳೊಂದಿಗೆ ಗುರುತಿಸಿಕೊಂಡು ಅವರ ಆತ್ಮಗೌರವದ ಹೋರಾಟದಲ್ಲಿ ತೊಡಗಿಸಿಕೊಂಡ ಎಂಬ ಜನಪ್ರಿಯ ಸತ್ಯ ಹೇಗೆ ಪಟ್ಟಭದ್ರ (ಜಾತಿ) ಹಿತಾಸಕ್ತಿಗಳ ಹುನ್ನಾರದ ಪರಿಣಾಮವಾಗಿರಬಹುದು ಎಂಬುದನ್ನು; 'ಇತಿಹಾಸವನ್ನು ಓದುವ ಮೊದಲು ಇತಿಹಾಸಕಾರನನ್ನು ಓದು' ಎಂಬ ಇತಿಹಾಸ ಶಾಸ್ತ್ರದ ಬೀಜ ವಾಕ್ಯವನ್ನು ವಿವಿಧ ನೆಲೆಗಳಲ್ಲಿ ವ್ಯಾಖ್ಯಾನಿಸುವ ಮೂಲಕ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಾರೆ. ಅಲ್ಲದೆ, ನಮ್ಮದೇ ಮಹಾಭಾರತ-ರಾಮಾಯಣಗಳ ಅನೇಕ ವಿವರಗಳು ಹಾಗೂ ಬುದ್ಧನ ಜೀವನ ಪ್ರಸಂಗಗಳನ್ನು ಕುರಿತ ಸ್ಥಾಪಿತ ನಂಬಿಕೆಗಳನೇಕವು ಕಾಲಾನುಕಾಲದ ಇತಿಹಾಸ ಸಂಶೋಧನೆಗಳ ಮೂಲಕ ಹೇಗೆ ಬುಡಮೇಲುಗೊಂಡಿವೆ. ಎಂಬುದನ್ನು ಸೋದಾಹರಣವಾಗಿ ವಿವರಿಸುತ್ತಾರೆ. ಜೊತೆಗೆ, ಇತ್ತೀಚಿನ ಇತಿಹಾಸದಲ್ಲೇ ಕನಕದಾಸರನ್ನು ಮಾಧ್ವ ಬ್ರಾಹಣನೆಂದು ನಂಬಿಸಿದುದನ್ನೂ;ವಿರುದ್ಧ ಸಾಕ್ಷ್ಯಗಳ ಎದುರಿನಲ್ಲೂ ಈಗಲೂ ಪುರಂದರ ದಾಸರನ್ನು ಬ್ರಾಹ್ಮಣನೆಂದೇ ಬಿಂಬಿಸುತ್ತಿರುವುದನ್ನು ಮತ್ತು ನಮ್ಮ ಕಾಲದಲ್ಲೇ ಅಂಬೇಡ್ಕರ್ ಹಾಗೂ ಕುವೆಂಪುರಂತಹ ಪ್ರತಿಭಾವಂತರ ಹುಟ್ಟಿನ ಮೂಲಗಳ ಬಗ್ಗೆ ಕೆಲವು ವಲಯಗಳಲ್ಲಿ ಕುಹಕವಾಡುವುದನ್ನೂ ನಮ್ಮ ಗಮನಕ್ಕೆ ತರುತ್ತಾರೆ.
ಹೀಗೆ ವಿಸ್ತಾರವಾಗಿ ಬಸವಣ್ಣನ ಮೂಲ ಜಾತಿ ಕುರಿತ ತಮ್ಮ ಸಂಶೋಧನೆಗೆ ಸಾಧುತ್ವವನ್ನೂ, ಸಮರ್ಥನೆಯನ್ನು ಒದಗಿಸಿಕೊಳ್ಳುವ ಲೇಖಕರು, ಬಸವಣ್ಣನ ಜೀವನ ಚರಿತ್ರೆಯನ್ನು ಈವರೆಗೆ ಕಟ್ಟಿಕೊಟ್ಟಿರುವ-ಅವನು ಜನ್ಮತಃ ಬ್ರಾಹ್ಮಣ ಎಂದು ಪ್ರಬಲವಾಗಿ ಪ್ರತಿಪಾದಿಸುವ ಡಾ|| ಎಂ. ಚಿದಾನಂದ ಮೂರ್ತಿಯವರೂ ಸೇರಿದಂತೆ-ಹಲವು ಸಂಶೋಧಕರ ಆಕರಗಳು ಹಾಗೂ ವ್ಯಾಖ್ಯಾನಗಳನ್ನು ಇತರ ಪೂರಕ ಮಾಹಿತಿ ಹಾಗೂ ಅವುಗಳ ವ್ಯಾಖ್ಯಾನಗಳ ಮೂಲಕ ಪುನಾರಚಿಸುತ್ತಾರೆ. ಈ ಪುನಾರಚನೆಗಳ ಆಧಾರದ ಮೇಲೆ, ಮುಖ್ಯವಾಗಿ ಬಸವಣ್ಣ ಜನ್ಮತಃ ಬ್ರಾಹ್ಮಣನಲ್ಲ ಹಾಗೂ ನಿರ್ದಿಷ್ಟವಾಗಿ ಆತ ಮಾದಿಗ ಜಾತಿಗೆ ಸೇರಿದವನು ಎಂಬುದನ್ನು ನಿರೂಪಿಸಲು ಪ್ರಯತ್ನಿಸುತ್ತಾರೆ. ಮೊದಲಿಗೆ ಬಸವಣ್ಣನಿಗೆ ಸಂಬಂಧಿಸಿದಂತೆ ಈವರೆಗೆ ಲಭ್ಯವಾಗಿರುವ ಎರಡೇ ಎರಡು ಶಾಸನಗಳ ಪಠ್ಯಗಳ ವಿಶ್ಲೇಷಣೆಯನ್ನು ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ನೆಲೆಗಳಲ್ಲಿ ಕೈಗೊಂಡು; ಆ ಶಾಸನದಲ್ಲಿ ಉಕ್ತವಾಗಿರುವ 'ಮುನಿಪ' ಸಂಸ್ಕೃತಿಯ ಕುರುಹುಗಳನ್ನು ಹಿಂಬಾಲಿಸಿ, ಅವು ಹೇಗೆ ಬಸವಣ್ಣನ ಜಾತಿ ಮೂಲವನ್ನು ಮಾದಿಗ ಕುಲ ಪರಂಪರೆಯತ್ತ ಬೊಟ್ಟು ಮಾಡುತ್ತವೆ ಎಂದು ಸೂಚಿಸುತ್ತಾರೆ. ನಂತರ ಕಲ್ಯಾಣ ಕ್ರಾಂತಿಯ ಕಾಲ ಹಾಗೂ ಅದರ ಚರಿತ್ರೆಯು ಕಾವ್ಯ-ಪುರಾಣಗಳ ರೂಪದಲ್ಲಿ ದಾಖಲಾದ ಕಾಲಗಳ ನಡುವಣ ಸುಮಾರು ಒಂದು-ಒಂದೂವರೆ ಶತಮಾನದ ಅಂತರದಲ್ಲಿ ಶುದ್ಧ ಸ್ಮಾರ್ತ ಶೈವರು ಹಾಗೂ ಆರಾಧ್ಯ ಬ್ರಾಹ್ಮಣರು ಬಸವಣ್ಣ ಕಟ್ಟಿದ್ದ ಲಿಂಗಾಯತ ಚಳುವಳಿಯನ್ನು ವೀರಶೈವೀಕರಣಗೊಳಿಸಿದ ಧಾರ್ಮಿಕ ರಾಜಕಾರಣದ ಹೊಳಹನ್ನು ಆಧಾರ ಸಹಿತ ನೀಡುತ್ತಾರೆ. ಇಂತಹ ರಾಜಕಾರಣದ ಪ್ರಭಾವ ವಲಯಕ್ಕೆ ಸಿಕ್ಕಿಯೇ, ಮುಂದೆ ರಚಿತಗೊಂಡ ಸಾಹಿತ್ಯದಲ್ಲಿ ಬಸವಣ್ಣ ಬ್ರಾಹ್ಮಣನೆಂದು ನಿರೂಪಿತವಾಗಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಕೊನೆಗೆ, ಇದೆಲ್ಲವುಗಳ ಆಧಾರದ ಮೇಲೆ, ಬಸವಣ್ಣನ ಕಾಲದಲ್ಲಿ ಕರ್ನಾಟಕದ ಆ ಪ್ರದೇಶದಲ್ಲ್ಲಿ ಪ್ರಬಲವಾಗಿದ್ದ ಅವೈದಿಕ ಆಗಮ ಶಾಸ್ತ್ರಾಚಾರಗಳಿಗಿದ್ದ (ಕಾಪಾಲಿಕ, ಕಾಳಾಮುಖ ಇತ್ಯಾದಿ) ಸಾಮಾಜಿಕ ಮಾನ್ಯತೆಯ ಹಿನ್ನೆಲೆಯಲ್ಲಿ, ಆತ ಮಾದಿರಾಜನ 'ಕರಸಂಜಾತ'ನಾದ 'ಸಿಸುಮಗ'ನಾಗಿದ್ದುದು ಹೆಚ್ಚು ನಂಬಲರ್ಹ ಸಂಗತಿಯಾಗಿರುತ್ತದೆ ಎಂಬ ತೀರ್ಮಾನಕ್ಕೆ ಬರುತ್ತಾರೆ. ಬಂಜಗೆರೆಯವರು ತಮ್ಮ ಈ ತೀರ್ಮಾನವನ್ನು ಮಂಡಿಸಿರುವುದು ಮುಖ್ಯವಾಗಿ ಈ ಮೂರು ಸಂಗತಿಗಳ ಆಧಾರದ ಮೇಲೆ:
1. ಬಸವ ಎಂಬ ಹೆಸರು ಮತ್ತು ಅದರ ಏಕವಚನ ಸಂಬೋಧನೆ ಸಂಪೂರ್ಣ ಬ್ರಾಹ್ಮಣೇತರ ಮೂಲದ್ದಾಗಿದೆ ಹಾಗೂ ಬಸವಣ್ಣ ಮಾದಾರ ಚೆನ್ನಯ್ಯನನ್ನು ತನ್ನ ಕುಲದ ಮೂಲಪುರುಷನೆಂದು ತನ್ನ ವಚನಗಳಲ್ಲಿ ಪದೇ ಪದೇ ಮತ್ತು ವಿವಿಧ ರೀತಿ-ನೀತಿಗಳಲ್ಲಿ ನಿವೇದಿಸಿಕೊಂಡಿದ್ದಾನೆ.
2. ಬಸವಣ್ಣನಿಗೆ ಹುಟ್ಟಿನಲ್ಲೇ ಶಿವದೀಕ್ಷೆಯಾಗಿತ್ತು ಎಂಬ ನಂಬಿಕೆ ಹಾಗೂ ಉಲ್ಲೇಖಗಳು ಆತ 'ದೇವರ ಮಗ'ನೆಂದು ಸೂಚಿಸುತ್ತಿದ್ದು; ಅದು, ಆತ ಆಗಮಶಾಸ್ತ್ರದ ಪ್ರಕಾರ ದೀಕ್ಷೆ ಪಡೆದ ನಂತರವಷ್ಟೇ ಆ ಕಾಲದ ಆಚಾರದಂತೆ 'ಬ್ರಾಹ್ಮಣ'ನಾಗಿ 'ಜಾತ್ಯಂತರ'ನಾದನೆಂಬುದನ್ನೂ ಹೇಳುತ್ತದೆ.
3. 'ಸಿಸು ಮಗ'ನನ್ನು ಪಡೆಯುವ ಆಗಮ ಯೋಗಾಚಾರ, ಮಾತೃಪ್ರಧಾನವಾದ ಮಾದಿಗ ಪರಂಪರೆಗೆ ಸೇರಿದ್ದೆಂಬುದನ್ನು ಸಾಂಸ್ಕೃತಿಕ ಅಧ್ಯಯನಗಳು ದೃಢಪಡಿಸುತ್ತವೆ. ಹಾಗೇ, ಮಾದಲಾಂಬಿಕೆಯ ತಾಯಿಯ ಮನೆ ಇಂತಹ ಯೋಗಾಚಾರದ ಅನೇಕ ಸಿದ್ಧರ ನೆಲೆಯಾಗಿತ್ತು ಎಂಬುದೂ ಚರಿತ್ರೆಯಿಂದ ತಿಳಿದು ಬರುತ್ತದೆ.
ಇದಕ್ಕೆ ಪೂರಕವಾಗಿ ಬಂಜಗೆರೆಯವರು ವಾಯುವ್ಯ ಕರ್ನಾಟಕದಲ್ಲಿ ಆಗ ಆರ್ಥಿಕ ಉತ್ಕರ್ಷಕ್ಕೆ ಬಂದಿದ್ದುವೆಂದು ಹೇಳಲಾದ ಕುಶಲಕರ್ಮಿ ಜಾತಿಗಳ ಎಡ ಹಾಗೂ ಬಲ ಪಣಕಟ್ಟುಗಳ ವಿಂಗಡಣೆ ಹಾಗೂ ಆ ವಿಂಗಡಣೆಯ ಪರಿಣಾಮದಿಂದುಂಟಾದ ಜನಿವಾರ ಸಹಿತವಾದ ಹೊಸ ಅಸ್ಪೃಶ್ಯ ಜಾತಿಗಳ ನಿರ್ಮಾಣ; ಕಲ್ಯಾಣ ಕ್ರಾಂತಿಯ ನಂತರ ನಡೆದ ಮಾದೇಶ್ವರ, ಗೋಣಿ ಬಸವೇಶ್ವರ, ಮಂಟೇಸ್ವಾಮಿ, ಮರುಳಸಿದ್ಧರ ನೇತೃತ್ವದ ಕೆಳ ಜಾತಿಗಳ ಆಂದೋಲನದ ಕತೆಗಳು; ಈ ಬಗ್ಗೆ ದೇವ ಚಂದ್ರನ 'ರಾಜಾವಳಿ ಕಥೆ' ನೀಡುವ ಸೂಚನೆಗಳು ಹಾಗೂ ಈಗಲೂ ಕಲ್ಯಾಣ ಕರ್ನಾಟಕದಲ್ಲಿ ಪ್ರಚಲಿತವಿರುವ 'ಬಾಲ ಬಸಪ್ಪ' ಪರಂಪರೆಯ ಮಾದಿಗ ಕುಲತ್ವ ಇತ್ಯಾದಿಗಳ ಕಡೆ ನಮ್ಮ ಗಮನ ಸೆಳೆಯುತ್ತಾರೆ. ಹಾಗೇ ಮನೆಯಿಂದ ಓಡಿಬಂದ ಬಸವಣ್ಣನಿಗೆ ಆಶ್ರಯ ನೀಡಿದನೆಂದು ಹೇಳಲಾದ ಜಾತವೇದಿ ಮುನಿಯ ಗುಡಿಗೆ (ಸಮಾಜದ)ಆಚೆಯವರ ಗುಡಿ ಎಂಬರ್ಥದಲ್ಲಿ, 'ಆಚೇಶ್ವರ ಗುಡಿ'ಯೆಂಬ ಹೆಸರಿರುವುದನ್ನೂ ಉಲ್ಲೇಖ ಮಾಡುತ್ತಾರೆ
ಬಸವಣ್ಣ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವನೆಂಬುದು ಐತಿಹಾಸಿಕವಾಗಿ ಸಾಧಿತವಾದ ಸತ್ಯವೇನಲ್ಲ. ಅದು ಜಾತಿ ಶ್ರೇಣೀಕರಣದಲ್ಲಿ ಆನಂದ ಪಡೆಯುತ್ತಿದ್ದ ಸಮಾಜದ ಪ್ರಭಾವ ವಲಯಕ್ಕೆ ಸಿಕ್ಕ ಬಸವ ಸಂಪ್ರದಾಯ ರೂಢಿಸಿಕೊಂಡ ಒಂದು ನಂಬಿಕೆ ಇರಬಹುದು. ಆತ ಎಡ ಪಣಕಟ್ಟಿನ ನಾಯಕತ್ವ ವಹಿಸಿದ್ದ ವಿಶ್ವಕರ್ಮ ಜಾತಿಗೆ ಸೇರಿದವನೆಂಬ ನಂಬಿಕೆ ವ್ಯಾಪಕವಾಗಿ ಕಲ್ಯಾಣ ಕರ್ನಾಟಕದಲ್ಲಿರುವುದನ್ನೂ, ಈ ಸಂಬಂಧ ಅನೇಕ ಸಂಶೋಧನ ಪ್ರಬಂಧಗಳು ಪ್ರಕಟವಾಗಿರುವುದನ್ನು ನಾವು ಗಮನಿಸಬಹುದು. ಈ ಎಲ್ಲ ಹಿನ್ನೆಲೆಯಲ್ಲಿ ಬಂಜಗೆರೆಯವರ ವಾದವನ್ನು ಪರಿಶೀಲಿಸಿದಾಗ, ಬಸವಣ್ಣ ಬ್ರಾಹ್ಮಣನೆಂಬ ನಂಬಿಕೆಗಿಂತ ಆತ ಬ್ರಾಹ್ಮಣನಲ್ಲವೆಂಬ ಅನುಮಾನವೇ ಹೆಚ್ಚು ವಿಶ್ವಸನೀಯವಾಗಿ ಕಾಣುತ್ತದೆ. ಆದರೆ ಆತ ಮಾದಿಗ ಜಾತಿಗೆ ಸೇರಿದ್ದವನು ಎಂಬುದನ್ನು ಖಚಿತಪಡಿಸುವಂತಹ ಪುರಾವೆಗಳನ್ನು ಲೇಖಕರು ಒದಗಿಸಿಲ್ಲವೆಂದೇ ಹೇಳಬೇಕಾಗುತ್ತದೆ.
ಅವರ ವಾದದ ಪ್ರಕಾರವೇ ಆತ 'ಸಿಸುಮಗ'ನಾಗಿ ಹುಟ್ಟಿ ಬಾಲಯೋಗಿದ್ದರೆ, ಆ ಪರಂಪರೆಯ ಬಗ್ಗೆ ಗೌರವ ಇಟ್ಟುಕೊಂಡೂ ಆತನಿಗೆ ಯಾವುದೇ ಜಾತಿಯನ್ನು ಆರೋಪಿಸುವುದು ಎಷ್ಟು ಸರಿ ಅಥವಾ ಸಂಗತ ಎಂಬ ಪ್ರಶ್ನೆಯೂ ಏಳುತ್ತದೆ. ಅಲ್ಲದೆ, ಬಸವಣ್ಣ ಹಾಗೆ ಮಾದಿಗನೇ ಆಗಿದ್ದರೆ ಮತ್ತು ಹುಟ್ಟಿನಿಂದ ಕ್ಷೌರಿಕನಾದರೂ ಕ್ಷತ್ರಿಯನಾಗಿ ಪಟ್ಟವೇರಿದ್ದ ಬಿಜ್ಜಳ, ತನ್ನ ತಂಗಿಯನ್ನು ಆತನಿಗೆ ಮದುವೆ ಮಾಡಿಕೊಡುವಂತಹ ಉದಾರವಾದ ಸಾಮಾಜಿಕ ವಾತಾವರಣ ಆಗ ಇದ್ದುದಾದರೆ; ಹರಳಯ್ಯ-ಮಧುವರಸರ ಮಕ್ಕಳ ಮದುವೆ ಬಗ್ಗೆ ಬಿಜ್ಜಳನೇಕೆ ಅಷ್ಟು ಕೆರಳ ಬೇಕು? ಹಾಗೇ, ಜೈನರು ಮತ್ತು ಬ್ರಾಹ್ಮಣರು ಆ ಪ್ರಮಾಣದ ರಾದ್ದಾಂತ ಸೃಷ್ಟಿಸಲು ಹೇಗೆ ಸಾಧ್ಯ? ಎಂಬ ಪ್ರಶ್ನೆಗಳು ಏಳುತ್ತವೆ.
ಇವಕ್ಕೆಲ್ಲ, ಮೊನ್ನೆ ಶಿವಮೊಗ್ಗದಲ್ಲಿ ನಡೆದ ಒಂದು ಸಂವಾದದಲ್ಲಿ ಜಯಪ್ರಕಾಶರು, ಬಿಜ್ಜಳ-ಬಸವಣ್ಣನ ಸಂಬಂಧ ಹಾಗೂ ಹರಳಯ್ಯ-ಮಧುವರಸರ ಮಕ್ಕಳ ಮದುವೆ ಕುರಿತಂತೆ ಇರುವ ಕಥೆಗಳು ಕಲ್ಪಿತವಾದವು; ಅವಕ್ಕೆ ಯಾವುದೇ ಚಾರಿತ್ರಿಕ ಆಧಾರಗಳಿಲ್ಲ ಎಂದು ಹೇಳುವ ಮೂಲಕ ಸ್ಪಷ್ಟೀಕರಣ ನೀಡಲು ಯತ್ನಿಸಿದರಾದರೂ, ಅವರ ಅಧ್ಯಯನದಲ್ಲಿ ಯಾವುದೋ ಒಂದು ಬಹು ಮುಖ್ಯ ಆಯಾಮ ಪರಿಶೀಲನೆಯಿಂದ ತಪ್ಪಿಸಿಕೊಂಡಂತಿದೆ ಎಂದೆನ್ನಿಸದಿರದು. ಆದರೆ ಈ ಯಾವ ಕೊರತೆಯೂ ಬಂಜಗೆರೆಯವರ ವಾದದ ಆಶಯವನ್ನು ಅನುಮಾನಸ್ಪದಗೊಳಿಸಲಾರದು. ಹಾಗೇ ಈ ಸಂಶೋಧನಾ 'ವಿವಾದ'ದಿಂದ ಪ್ರಯೋಜನವಾದರೂ ಏನು ಎಂದು ಕೇಳುವ ಕಳ್ಳ 'ಜಾತ್ಯತೀತ'ರ ಮಳ್ಳತನವೇನೂ ಮುಚ್ಚಿಹೋಗದು. ಈಗ ಜಯಪ್ರಕಾಶರು ಜರೂರಾಗಿ ಮಾಡಬೇಕಾದ ಕೆಲಸವೆಂದರೆ, ತಮ್ಮ ಸದ್ಯದ ಪುಸ್ತಕ ಕುರಿತು ಈವರೆಗೆ ನಡೆದಿರುವ ಚರ್ಚೆಗಳನ್ನು ಗಮನದಲ್ಲಿಟ್ಟುಕೊಡು, ಬದಲಾಗುತ್ತಿರುವ ಭಾರತದ ಜಾತಿ ವ್ಯವಸ್ಥೆಯ ಸ್ವರೂಪದ ಅಧ್ಯಯನದ ನೆಲೆಯಲ್ಲಿ ತಮ್ಮ ಈ ಪುಸ್ತಕವನ್ನು ವಿಸ್ತರಿಸಿ ಬರೆಯುವುದು.
ಅಂದ ಹಾಗೆ: ತಾವು ಅಧಿಕಾರಕ್ಕೆ ಬರುವ ಮೊದಲಿಂದಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಅತ್ತ ಕಡೆ ವಿಶೇಷ ಗಮನವನ್ನು ಹರಿಸದಿದ್ದ ನಮ್ಮ ಮುಖ್ಯ ಮಂತಿಗಳು ಈಗ ತಮ್ಮ ಅಧಿಕಾರಾವಧಿ ಮುಗಿಯುತ್ತಿರುವ ಹೊತ್ತಿನಲ್ಲಿ; ರೈತರ ಆತ್ಮಹತ್ಯೆ ಹೀಗೇ ಮುಂದುವರೆದರೆ, ತಾವು ಅವಧಿಗೆ ಮುನ್ನವೇ ರಾಜೀನಾಮೆ ಕೊಡುವೆ ಎಂದು ಹೇಳತೊಡಗಿದ್ದಾರೆ!
ಅಂತೂ ಮಗ ಅಪ್ಪನಿಂದ ಅಧಿಕಾರದಾಟದ ಎಲ್ಲ ವರಸೆಗಳನ್ನೂ ಚೆನ್ನಾಗಿ ಕಲಿತಂತಿದೆ!
Comments
ಉ: 'ಆನು ದೇವಾ ...': ಜಾತಿ ವ್ಯವಸ್ಥೆ ಕುರಿತ ಹೊಸ ನೋಟದತ್ತ
ಉ: 'ಆನು ದೇವಾ ...': ಜಾತಿ ವ್ಯವಸ್ಥೆ ಕುರಿತ ಹೊಸ ನೋಟದತ್ತ