ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ

ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ

ನೆನಪಿನ ಮತ್ತೊಂದು ಕೊಂಡಿ ಕಳಚಿತು.

ನಿರೀಕ್ಷಿತವಾಗಿದ್ದರೂ, ಕೆ.ಎಸ್‌. ಅಶ್ವತ್ಥ ಅವರ ಸಾವು ವಿಚಿತ್ರ ವ್ಯಾಕುಲತೆ ಉಂಟು ಮಾಡುತ್ತಿದೆ. ಅವರನ್ನು ನಾಯಕರನ್ನಾಗಿ ಆರಾಧಿಸದಿದ್ದರೂ, ಅದರಾಚೆಯ ಜೀವಂತ ವ್ಯಕ್ತಿಯನ್ನಾಗಿ ನಾವೆಲ್ಲ ನೋಡಿದ್ದೆವು. ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅವರ ಪ್ರತಿಭೆಗೆ ಮಾರು ಹೋಗಿದ್ದೆವು. ಅವರು ಮುಖ್ಯ ವ್ಯಕ್ತಿಯಾಗಿ ಚರ್ಚೆಯಾಗುತ್ತಿರಲಿಲ್ಲ. ತುಂಬಿದ ಮನೆಯಲ್ಲಿ ತನ್ನ ಪಾಡಿಗೆ ತಾನು ಒಂದೆಡೆ ಕೂತ ಹಿರಿಯನಂತೆ, ನೆನಪಿನ ಅವಿಭಾಜ್ಯ ಅಂಗವಾಗಿದ್ದರು. ಈಗ ಆ ಸ್ಥಳ ಖಾಲಿ ಖಾಲಿ. ಒಂದು ಬನಿಯನ್‌, ಒಂದು ಲುಂಗಿ ಹಾಕಿಕೊಂಡ ನಮ್ರ ಮುಖದ, ವಿನಂತಿಸುವ ಕಂಗಳ ಅಶ್ವತ್ಥ ಈಗಿಲ್ಲ.

ಸುಮ್ಮನೇ ಕೂತು ನೆನಪಿಸಿಕೊಂಡರೂ ವಿವಿಧ ಪಾತ್ರಗಳ ಅಶ್ವತ್ಥ ಮುಖ ಕಣ್ಮುಂದೆ ಬರುತ್ತದೆ. ನಾನು ತುಂಬ ಇಷ್ಟಪಟ್ಟ ಸಿನಿಮಾಗಳಲ್ಲಿ ಕೆ. ಬಾಲಚಂದರ್‌ ನಿರ್ದೇಶನದ ಎರಡು ರೇಖೆಗಳು ಚಿತ್ರವೂ ಒಂದು. ಅದರಲ್ಲಿ ಅಸಹಾಯಕ ಮೇಷ್ಟ್ರ ಪಾತ್ರದಿಂದ, ನಿಷ್ಠುರ-ನಿಷ್ಕರುಣಿ ತಂದೆಯಾಗಿ ಅಶ್ವತ್ಥ ಅಭಿನಯ ಇವತ್ತಿಗೂ ಅಚ್ಚಳಿಯದಂತಿದೆ. ತನ್ನ ಮಗಳಿಗೆ ವಂಚಿಸಿ, ಅವಳ ಮಡಿಲಿಗೊಂದು ಮಗು ಕರುಣಿಸಿ, ಹೇಳದೇ ಕೇಳದೇ ಹೋಗಿ ಇನ್ನೊಂದು ಮದುವೆಯಾದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿದ ಪಾತ್ರವಾಗಿ ಅಶ್ವತ್ಥ ಅಭಿನಯ ಅದ್ಭುತ. ಕುವೆಂಪು ಅವರನ್ನು ಆರಾಧಿಸುವ ಮೇಷ್ಟ್ರು ಪೈಪ್‌ ಸೇದುವ ಕುಲೀನ ವರ್ಗದ ವ್ಯಕ್ತಿಯಾಗಿ ಬದಲಾಗುತ್ತಾರೆ. ವಿನಯದ ಜಾಗದಲ್ಲಿ ನಿಷ್ಠುರತೆ, ನಮ್ರತೆಯ ಸ್ಥಾನದಲ್ಲಿ ಅಂತಸ್ತಿನ ಹಮ್ಮು ಸೇರಿಕೊಳ್ಳುವ ಪರಿಯೇ ಅದ್ಭುತ.



ಯಾವುದೇ ಪಾತ್ರವಿರಲಿ, ಅದಕ್ಕೆ ಅಶ್ವತ್ಥ ಅವರಂತೆ ಜೀವ ತುಂಬಿದ ಇನ್ನೊಬ್ಬ ಪೋಷಕನಟ ಅಪರೂಪ. ನುರಿತ ನಟ-ನಟಿಯರನ್ನೇ ಮರೆಸುವಂತೆ ಸೊಗಸಾಗಿ ಅಭಿನಯಿಸುತ್ತಿದ್ದ ಅಶ್ವತ್ಥ ಮನೆಯ ಹಿರಿಯನಂತೆ, ಸದ್ದಿಲ್ಲದೇ ಹಿಂದೆ ಕೂತವರು. ಕಿರಿಯರ ಆರ್ಭಟದ ಎದುರು, ನಾಯಕ-ನಾಯಕಿಯರ ಜನಪ್ರಿಯತೆಯ ಎದುರು ಗಮನಕ್ಕೆ ಬಾರದವರು. ಇವತ್ತು ಕೂತು ಆ ಹಳೆಯ ಚಿತ್ರಗಳನ್ನು ನೆನಪಿಸಿಕೊಂಡರೆ, ಅರೆ ಕ್ಷಣ ಅಚ್ಚರಿಯಾಗುತ್ತದೆ. ಅಪಾರ ಪ್ರತಿಭೆ ಇದ್ದರೂ ಮಹತ್ವಾಕಾಂಕ್ಷೆ ತೋರದೇ ತಮ್ಮ ಪಾಡಿಗೆ ತಾವು ನಟಿಸುತ್ತ ಹೋದವರು ಅಶ್ವತ್ಥ. ಸಿನಿಮಾ ಲೋಕದ ರಂಗಿನ ಜಾಲದಾಚೆ ತಮ್ಮ ಪಾಡಿಗೆ ತಾವು ಬದುಕಿದರು. ಅಸಮಾಧಾನವಾದಾಗ ತೋರಿಸಿದರು. ಬೇಸರವಾದಾಗ ಆಡಿ ಹೊರಹಾಕಿದರು. ಒಂದು ಹಂತಕ್ಕೆ ನಟನೆ ಸಾಕು ಎಂದು ಮೈಸೂರು ಸೇರಿಕೊಂಡ ಅಶ್ವತ್ಥ, ಹಲವಾರು ಅನಿವಾರ್ಯತೆಗಳಿಂದ ಮತ್ತೆ ಬಣ್ಣ ಹಚ್ಚಿದರು.

ಆದರೆ, ಈ ಅಸಮಾಧಾನ, ಬೇಸರ ಎಂದಿಗೂ ತಮ್ಮ ಪಾತ್ರಗಳ ಮೇಲೆ ಬೀಳದಂತೆ ನೋಡಿಕೊಂಡರು. ವಿವಾದದಿಂದ ದೂರ ಉಳಿಯಲು ಯತ್ನಿಸುತ್ತಿದ್ದ ಅಶ್ವತ್ಥ ಬರಬರುತ್ತ ಅಂತರ್ಮುಖಿಯಾದರು. ಮುಖ್ಯವಾಹಿನಿಗಳಿಂದ ದೂರ ಉಳಿದರು. ಯಾರ ನೆರವಿಗೂ ಆಶಿಸದ, ಯಾರ ಮುಂದೆಯೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳದ ಚಿತ್ರರಂಗದ ಹಿರಿಯ, ಬದುಕಿನಲ್ಲಿ ಕೂಡ ಅದೇ ಹಿರಿತನ ತೋರಿದರು.

ಅನಿರೀಕ್ಷಿತವಲ್ಲದ ಸಾವಾಗಿದ್ದರೂ ಅಶ್ವತ್ಥ ಇನ್ನಿಲ್ಲ ಎಂಬ ವಾಸ್ತವ ಪದೆ ಪದೆ ಚುಚ್ಚುತ್ತದೆ. ಕ್ಷಣಿಕ ಯಶಸ್ಸಿನ ಮೋಹಕ್ಕೆ ಮನಸೋತ ಜಗತ್ತಿನಲ್ಲಿ ಇಂಥ ಹಿರಿಯರು ಇನ್ನಿಷ್ಟು ಕಾಲ ಇರಬೇಕಿತ್ತು ಎಂದು ಮನಸ್ಸು ಆಸೆಪಡುತ್ತದೆ.

ಹೋಗಿ ಬನ್ನಿ ಚಾಮಯ್ಯ ಮೇಷ್ಟ್ರೇ. ನಿಮ್ಮ ಶಿಷ್ಯ ರಾಮಾಚಾರಿ ಈಗ ಅಲ್ಲೇ ಇದ್ದಾನೆ. ಇಬ್ಬರೂ ಜೊತೆಯಾಗಿರಿ. ಸುಖವಾಗಿರಿ. ನೆನಪಿಸಿಕೊಳ್ಳಲು ನಮಗೆ ಸಾವಿರಾರು ಸುಂದರ ಚಿತ್ರಣಗಳನ್ನು ಕಟ್ಟಿಕೊಟ್ಟಿದ್ದೀರಿ. ಅವೆಲ್ಲ ನೆನಪಿನ ಸಮೃದ್ಧ ಗಣಿ. ಅದಕ್ಕಾಗಿ ನಾವೆಲ್ಲ ನಿಮಗೆ ಋಣಿ.

- ಚಾಮರಾಜ ಸವಡಿ

(ಚಿತ್ರ ಕೃಪೆ: ಚಿತ್ರಲೋಕ ಡಾಟ್‌ ಕಾಮ್‌)

Rating
No votes yet

Comments