ಮೂರ್ತಿ ಅನಾವರಣ, ಅಸೂಯೆ ಅನಂತ !

ಮೂರ್ತಿ ಅನಾವರಣ, ಅಸೂಯೆ ಅನಂತ !

ಮೂರ್ತಿ ಅನಾವರಣ, ಅಸೂಯೆ ಅನಂತ

                                                                                                          - ವಾಙ್ಮಯಿ, ಬಿಜಾಪುರ.

[ಸಣ್ಣ ಟಿಪ್ಪಣಿ: ನನ್ನ ಆತ್ಮೀಯರೊಬ್ಬರು ಬರೆದ ಈ ಲೇಖನ ಮೊದಲು ವಿಕ್ರಮ ವಾರಪತ್ರಿಕೆಯಲ್ಲಿ ಎರಡು ವಾರಗಳ ಹಿಂದೆ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಆಗಲೇ ಇದನ್ನು ಪೊಸ್ಟ್ ಮಾಡೋಣವೆಂದುಕೊಂಡೆ. ಆದರೆ ಭೈರಪ್ಪ - ಅನಂತಮೂರ್ತಿ ಸುತ್ತಮುತ್ತ ಸಾಕಷ್ಟು ಚರ್ಚೆ ಸಂಪದದಲ್ಲಿ ನಡೆದದ್ದರಿಂದ ಸುಮ್ಮನಾದೆ. ಮತ್ತೆ ಈಗೇಕೆ? ಡಿ. ಎಸ್. ನಾಗಭೂಷಣರ ಪಕ್ಕಾ ಸಮಾಜವಾದಿ ಧಾಟಿಯ ಲೇಖನ 'ಇಂದು ಕಡಿದಾಳು..'ವಿನಲ್ಲಿ ಹೆಸರಿಸುವ ಕೆಲವು 'ಪ್ರಖರ ಬುದ್ಧಿಜೀವಿ' ವ್ಯಕ್ತಿಗಳು ಹಾಗೂ ಘಟನೆ ಈ ಲೇಖನದಲ್ಲಿಯೂ ಬರುವದರಿಂದ ಒಟ್ಟಾರೆ ಚರ್ಚೆಗೆ ಹೊಸ ಆಯಾಮ ದೊರೆತರೆ ಅನುಕೂಲವೆಂಬ ಹಂಬಲ. - ಜೈಗುರುಜಿ]

ಮನೇಕಾ ಗಾಂಧಿ ಪ್ರಾಣಿಗಳನ್ನು ಪಳಗಿಸಿ ಸರ್ಕಸ್ ನಲ್ಲಿ ಅವುಗಳಿಂದ ಕಸರತ್ತು ಮಾಡಿಸಿರುವದಕ್ಕೆ ತಡೆ ಹಾಕಿಸಿದರು. ನಿಜ, ಆದರೆ ಆ ಪ್ರಾಣಿಗಳ ತಿಪ್ಪರಲಾಗ ಹೊಡೆಯುವ ಗುಣ ಇಂದು ಚಿಂತಕರು, ಬುದ್ಧಿಜೀವಿಗಳು ಕಲಿತಿರುವದರಿಂದ ಸರ್ಕಸ್‌ನಂತಹ ಮನರಂಜನೆಗೇನೂ ಕೊರತೆ ಇಲ್ಲ. ಆದೂ ಪುಕ್ಕಟೆ ಶಿವಾ !

ಕಳೆದ ಕೆಲವು ತಿಂಗಳುಗಳಲ್ಲಿಯೇ ನಮ್ಮಲ್ಲಿಯ ಜ್ಞಾನಪೀಠಿಗಳಿಬ್ಬರಿಂದ ಅಂಗೈ ತೋರಿಸಿ ಅವಲಕ್ಷಣಗೇಡಿಯಾಗಿರುವಂತಹ ಕನಿಷ್ಟ ಮೂರು ಪ್ರಸಂಗಗಳನ್ನು ನೆನಪಿಸಬಹುದು. ಸಣ್ಣ ಪುಟ್ಟ ಪ್ರಸಂಗಗಳಂತೂ ಸಾಕಷ್ಟಿವೆ. ಎಡಪಂಥಿಯರಿಗೆ ಅತ್ಯಂತ ಪ್ರಿಯವಾದ ಗುದ್ದೋಡು (hit and run) ತಂತ್ರವನ್ನು ಜ್ಞಾನಪೀಠಿಗಳಿಬ್ಬರೂ ಉಪಯೋಗಿಸಿದರು. ಆದರೆ ಅಮೇಲಿನ ಸಾಹಿತಿಗಳ ಆಕ್ರೋಶ ಮತ್ತು ಸಾಮಾನ್ಯ ಓದುಗರ ಒಟ್ಟಾಭಿಪ್ರಾಯಕ್ಕೆ ಮಣಿದು, ಬಾಯಿಗೆ ಬೀಗ ಜಡಿದುಕೊಂಡು ತಮ್ಮ ವಿಚಾರಧಾರೆಗೆ ತಿಪ್ಪರಲಾಗ ಹೊಡೆಸಿದರು. ಈ ಪ್ರಸಂಗಗಳನ್ನು ನೆನೆಯುವದು, ಭವಿಷ್ಯದ ದೃಷ್ಟಿಯಿಂದ ಅವರ ಕುಟಿಲತೆಯನ್ನು ಅರ್ಥಮಾಡಿಕೊಳ್ಲಲು ಸಹಾಯಕರ.

ಅನಂತಮೂರ್ತಿ ಮತ್ತು ಬೆತ್ತಲೆ ಜಗತ್ತು :

ವಿಜಯ ಕರ್ನಾಟಕದ ಅಂಕಣಕಾರ ಪ್ರತಾಪಸಿಂಹ ತಮ್ಮ ಅಂಕಣದಲ್ಲಿ ಹದಗೆಟ್ಟಿರುವ ವಿಶ್ವವಿದ್ಯಾನಿಲಯಗಳು, ಅಲ್ಲಿನ ರಾಜಕೀಯ, ಹಗರಣಗಳು ಇತ್ಯಾದಿಗಳ ಬಗ್ಗೆ ಬರೆದರು. ಅದರಲ್ಲಿ ಮುಖ್ಯವಾಗಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಪಾಠ ಮಾಡುತ್ತಿರುವ 'ಮಹಾನ್ ಚಿಂತಕರು ಮತ್ತು ಪ್ರಖರ ಬುದ್ಧಿಜೀವಿಗಳಾದ' ಪ್ರೊ.ರಾಜೆಂದ್ರ ಚೆನ್ನಿ, ಪ್ರೊ. ವಿ ಎಸ್ ಶ್ರೀಧರ್, ನಗರಿ ಬಾಬಯ್ಯ, ಎಸ್ ಪಟ್ಟಾಭಿ ಸೋಮಯಾಜಿ ಇತ್ಯಾದಿಗಳು ಟೀಚ್ ಮಾಡುವ ಬದಲು ಬರೇ ಸವಕಲು ಸಿದ್ಧಾಂತಗಳ್ನ್ನು ಪ್ರೀಚ್ ಮಾಡುತ್ತಿದ್ದಾರೆ ಎಂದು ಜರೆದರು ( ಪೂರ್ಣ ಲೇಖನ ನೋಡಿ : ಬೆತ್ತಲೆ ಜಗತ್ತು ಭಾಗ ೪, ಪುಟ ೧೯೭). ತತಕ್ಷಣವೇ ಮೂರ್ತಿಗಳಿಂದ ಪ್ರತಿಕ್ರಿಯೆ ಬಂತು ಪತ್ರಿಕೆಗೆ "ನಿಮ್ಮ ಅಂಕಣಕಾರ ಪ್ರತಾಪಸಿಂಹರ ಲೇಖನದ ತುಂಬಾ ಸುಳ್ಳುಗಳು ತುಂಬಿವೆ, ಇದು ರಾಜಕೀಯ ಪ್ರೇರಿತವಾಗಿದೆ. ನನ್ನ ಹಳೆಯ ವಿದ್ಯಾರ್ಥಿಗಳಾದ ಪಟ್ಟಾಭಿ ಸೋಮಯಾಜಿ ಮತ್ತು ಶ್ರೀಧರ್ ಹಾಗೂ ಕನ್ನಡ ನಾಡಿನ ಒಂದು ಉತ್ತಮ ಮನಸ್ಸಾದ ರಾಜೆಂದ್ರ ಚೆನ್ನಿಯವರ ಬಗ್ಗೆಯೂ ಸುಳ್ಳುಗಳೆ ತುಂಬಿಕೊಂಡಿವೆ. ಇಂತಹ ಕ್ರಿಯಾಶಾಲಿಗಳು ಮತ್ತು ಚಿಂತಕರ ಬಗ್ಗೆ ಸುಳ್ಳು ಬರೆಯುವದನ್ನು ಕಂಡು ಸುಮ್ಮನಿರುವದು ಅನೈತಿಕ, ಆ ಕಾರಣ ಬರೆಯುತ್ತಿದ್ದೇನೆ" ಎಂದರು.

ಪ್ರತಾಪಸಿಂಹ ಕೂಡ ಅಂಕಣಕಾರನ ಜವಾಬ್ದಾರಿಯಂತೆ ಸರಿಯಾದ ಪ್ರತ್ಯುತ್ತರ ಕೊಟ್ಟರು. "ಚಿಂತಕ ಅನಂತಮೂರ್ತಿಯವರು ಬರಿ ಸುಳ್ಳು ಅಂತ ಬರೆದಿದ್ದಾರೆ. ಯಾವುದು ಸುಳ್ಳು ಅಂತ ನಿಖರವಾಗಿ ಹೇಳಿಲ್ಲ. ಅವರ ಶಿಷ್ಯೋತ್ತಮರ ಪ್ರತ್ಯಕ್ಷ ದರ್ಶನ ನನಗಿದೆ ಹಾಗೂ 'ಕನ್ನಡ ನಾಡಿನ ಒಂದು ಉತ್ತಮ ಮನಸ್ಸಿನ' ಇನ್ನೊಂದು ರೂಪದ ಚೆನ್ನಾದ ಪರಿಚಯವಿದೆ. ನಾನು ಹೇಳುವದಿಷ್ಟೆ. ಯಾವುದೇ ವೇದಿಕೆಯಲ್ಲಿ ಮುಖಾಮುಖಿಯಾಗಿ, ಅಂಕಣದಲ್ಲಿ ಬರೆದಿರುವ ಅಭಿಪ್ರಾಯ, ವ್ಯಕ್ತಿ ಮತ್ತು ವಿಚಾರಗಳ ಬಗ್ಗೆ ಚರ್ಚಿಸಲು ಸಿದ್ಧನಿದ್ದೇನೆ" ಎಂದು ಉತ್ತರ ಬರೆದಾಗ ಅನಂತಮೂರ್ತಿಯವರು ನಿರುತ್ತರ ಕುಮಾರರಾದರು. ಹೆಚ್ಚಿಗಿನ್ನೇನು ಮಾದಲು ಸಾಧ್ಯ. ಪಂಥಾಹ್ವಾನ ಒಪ್ಪಿ ಚಿಕ್ಕವರೆದುರು ಸೋತರೇ? ಛೇ..ಛೇ ಎಂತಹ ಅವಮಾನವಲ್ಲವೇ? ಅದಕ್ಕೆ ಮೌನಕ್ಕೆ ಶರಣಾದರು. ಅವರಿಗೆ ಇನ್ನೂ ಸ್ವಲ್ಪ ಪೌರುಷ ತುಂಬುವಂತೆ, ರೋಷ ಉಕ್ಕುವಂತೆ ಮಾಡಲು ಶತಾವಧಾನಿ ಡಾ. ಆರ್. ಗಣೇಶರವರೂ ಮತ್ತು ಇನ್ನಿತರ ಓದುಗರು ಪಂಥಾಹ್ವಾನ ಒಪ್ಪಿ ಎಂದು ಪರಿ ಪರಿಯಾಗಿ ಬೇಡಿಕೊಂಡರು. ಆದರೆ ಮೂರ್ತಿಗಳು ಮಾತ್ರ 'ಮೌನ ವೃತ'ಕ್ಕೆ ಭಂಗ ತರಲಿಲ್ಲ. ಬೆತ್ತಲೆ ಜಗತ್ತಿನ ಮುಖಾಂತರ ನಗ್ನ ಸತ್ಯ ಹೊರಬಿತ್ತು ಅರ್ಥಾತ್ ನಿರುತ್ತರ ಕುಮಾರರು ತಿಪ್ಪರಲಾಗ ಹಾಕಿದರು !

ಶೇರ್-ಎ-ಕಾರ್ನಾಡ್ :

ಕರ್ನಾಟಕದ ಸಚಿವರಾದ ಶಂಕರಮೂರ್ತಿಯವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ "ಟಿಪ್ಪು ಕನ್ನಡ ಪ್ರೇಮಿಯಾಗಿರಲಿಲ್ಲ, ಅವನು ಆಡಳಿತ ಭಾಷೆಯನ್ನಾಗಿ ಕನ್ನಡದ ಬದಲು ಪರ್ಷಿಯನ್ ಜಾರಿಗೆ ತಂದ" ಎಂದುಸುರಿದರು. ಇಷ್ಟೆ ಸಾಕಾಗಿತ್ತು ನಮ್ಮ ಎಡಬಿಡಂಗಿ ಫಂಡಮೆಂಟಲಿಸ್ಟ್ ಸೆಕ್ಯುಲರವಾದಿಗಳಿಗೆ, ಶಂಕರಮೂರ್ತಿಯವರನ್ನು ಹರಿದು ತಿನ್ನುವ ಸೀಳು ನಾಯಿಗಳಂತೆ ಮುಗಿಬಿದ್ದರು. ಬೇಕಾದ್ರೆ ಶಿವಾಜಿ, ರಾಣಾ ಪ್ರತಾಪ, ರಾಜಾ ಶ್ರೀ ಕೃಷ್ಣದೇವರಾಯರ ಬಗ್ಗೆ ಏನಾದರೂ ಅನ್ನಲಿ, ಆಡಲಿ, ಬಯ್ಯಲಿ ಆದರೆ ಅದೇ ಟಿಪ್ಪು ಬಗ್ಗೆ ಅನ್ನುವದೆಂದರೆ? ಛೇ ಛೇ ..ಅದೆಂತಹ ಘೋರ ಅಪರಾಧ? ಯಥಾ ಪ್ರಕಾರ ಇನ್ನೊಬ್ಬ ಜ್ಞಾನಪೀಠಿ ಗಿರೀಶ ಕಾರ್ನಾಡ್ ಮತ್ತವರ ಒಡ್ಡೋಲಗ "ಶಂಕರಮೂರ್ತಿಯ ತಲೆ ಸರಿಯಿಲ್ಲ, ಅವರು ಕೋಮುವಾದಿ, ದೇಶದ್ರೋಹಿ, ಅವರನ್ನು ಸಂಪುಟದಿಂದ ಕೈ ಬಿಡಬೇಕು" ಇತ್ಯಾದಿ ಎಲ್ಲಾ ಆರೋಪ ಹೊರಿಸಿ, ಶೇರ್-ಎ-ಕಾರ್ನಾಡ್ ಉಗ್ರ ಚಳುವಳಿಯ ಬೆದರಿಕೆಯನ್ನೂ ಹಾಕಿದರು. ಬಹುಷಃ ವಿಜಯ ಕರ್ನಾಟಕ ಮತ್ತು ಭೈರಪ್ಪನವರ ಸಕಾಲಿಕ ಮಧ್ಯ ಪ್ರವೇಶವಾಗದಿದ್ದರೆ ಶಂಕರಮೂರ್ತಿ ಪರಿಸ್ಥಿತಿ ಏನಾಗುತ್ತಿತ್ತೋ ಆ ಮಹಾದೇವನೇ ಬಲ್ಲ!

ಈ ಎಡಬಿಡಂಗಿಗಳು ತಮ್ಮ ಮಹಾನ ನಾಯಕರಾದ ಶೇರ್-ಎ-ಕಾರ್ನಾಡ್‌ರ ದಾಳಿ ನಡೆಸುತ್ತಿರುವಾಗಲೇ ಭೈರಪ್ಪನವರು ದಾಖಲೆಗಳ ಸಮೇತ ಟಿಪ್ಪುವಿನ ನಿಜ ಸ್ವರೂಪವನ್ನು ಬಯಲಿಗೆಳೆದರು ಹಾಗೂ ಶಂಕರಮೂರ್ತಿ ಹೇಳಿದ್ದು ಸರಿ ಎಂದು ಸಾರಿ ನುಡಿದರು. ಅಕಟಾಕಟಾ ಈ ಭೈರಪ್ಪಗೆಷ್ಟು ಧೈರ್ಯ ನಮ್ಮನ್ನು ಎದುರು ಹಾಕಿಕೊಳ್ಳಲು? ಅದೂ ಒಬ್ಬಂಟಿಯಾಗಿ ಎಂದು ಕಾರ್ನಾಡ್ ಪಡೆ ಭೈರಪ್ಪನವರ ಮೇಲೆಯೇ ಯುದ್ಧ ಸಾರಿದರು. ಭೈರಪ್ಪನವರು ಬರದದೆಲಾ ಕಳಪೆ ಸಾಹಿತ್ಯ, ಅವರ ವಂಶ ವೃಕ್ಷ ಅತ್ಯಂತ ಸಾಮಾನ್ಯ ಕೃತಿ ಇನ್ನು ಏನೇನೂ ಟಿಪ್ಪು ವಿಷಯಕ್ಕೆ ಸಂಬಂಧವಿಲ್ಲದ ಪ್ರಲಾಪ ಶುರುವಿಟ್ಟುಕೊಂಡರು. ಕಾರ್ನಾಡ್ ಪಡೆಯ ಅಟಾಟೋಪಕ್ಕೆ, ಹುಚ್ಚು ವರ್ತನೆಗೆ ಸುಮ್ಮನಿರದ ಭೈರಪ್ಪ ಕೂಡ ಟಿಪ್ಪುವಿನ ಜೊತೆಗೆ ಟಿಪ್ಪುವನ್ನು ವೈಭವಿಕರಿಸಿ ಸುಳ್ಳು ಇತಿಹಾಸವನ್ನೇ ನಾಟಕವೆಂದು ಬರೆದಿರುವವರ ಹೂರಣವನ್ನು ಬಯಲಿಗೆಳೆದರು. ಖ್ಯಾತ ಸಂಶೋಧಕ ಎಂ ಚಿದಾನಂದಮೂರ್ತಿ, ಇತಿಹಾಸಕಾರ ಸೂರ್ಯನಾಥ್ ಕಾಮತ್ ಮತ್ತು ಅನೇಕರು ಭೈರಪ್ಪನವರಿಗೆ ಧನಿಗೂಡಿಸಿದಲ್ಲದೇ, ಭೈರಪ್ಪ ಹೇಳಿದ್ದು ನಿಜವೆಂದು ನಿಜವೆಂದು ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ ವಿ. ಕ ಕೂಡ ಓದುಗರ ಪ್ರತಿಕ್ರಿಯೆಯನ್ನು ಕೇಳಿತು. ಅಸಂಖ್ಯ ಓದುಗರು "ಕಾರ್ನಾಡ್ ನಿಜ ಬಣ್ನ ಬಯಲಾಗಿದೆ, ಅವರಿನ್ನು ಸುಮ್ಮನಿರುವದು ಲೇಸು" ಎಂದು ಪ್ರತಿಕ್ರಿಯಿಸಿದಾಗ ಬಹುಷಃ ಜ್ಞಾನಪೀಠಿ ಗಿರೀಶ ಕಾರ್ನಾಡ್ ದಂಗಾಗಿ ಹೋದರೆನಿಸುತ್ತೆ. ಪಾಪ ಇನ್ನೂವರೆಗೂ ಅವರ ಬಾಯಿಂದ ಆ ವಿಷಯವಾಗಿ ಮಾತೇ ಹೊರಟಿಲ್ಲ! ವಿಚಾರಿಸಿ, ಈ ಕಾರ್ನಾಡ್ ಪಡೆಯ ವಿಚಾರವಾದ ಮತ್ತು ನೈತಿಕ ಶಕ್ತಿ ಎಷ್ಟು ಟೊಳ್ಳಾಗಿರುತ್ತೆ ಅಂತ. ಶೇರ್-ಎ-ಮೈಸೂರ್ ಬಗ್ಗೆ ಹುಲಿಯಂತೆ ಗರ್ಜಿಸಿದ್ದ ಜ್ಞಾನಪೀಠಿ ಇಲಿಯಂತೆ ಸುಮ್ಮನಾಗಿ ತಮ್ಮ ಬಿಲವನ್ನು ಸೇರಿದರು.

ಅನಂತಮೂರ್ತಿಯ ಅನಾವರಣ :

ಇನ್ನೊಬ್ಬರ ತಪ್ಪುಗಳಿಂದ ಪಾಠ ಕಲಿಯುವವನು ಜಾಣನಂತೆ. ಆದರೆ ಜ್ಞಾನಪೀಠಿ ಚಿಂತಕ ವಿಮರ್ಶಕ ಬುದ್ಧಿಜೀವಿ ಸೆಕ್ಯುಲರವಾದಿ ಇತ್ಯಾದಿ ಅನೇಕ ಬಿರುದಾಂಕಿತ ಶ್ರೀಯುತ ಯು. ಆರ್. ಅನಂತಮೂರ್ತಿಯವರು ತಮ್ಮ ತಪ್ಪುಗಳಿಂದಲೇ ಪಾಠ ಕಲಿಯುತ್ತಿಲ್ಲ. ಇದಕ್ಕೇನನ್ನಬೇಕು? ಮತ್ತೊಮ್ಮೆ ಭೈರಪ್ಪನವರ ವಿಷಯಕ್ಕೆ (ಭೈರಪ್ಪನವರ ಜೊತೆಗಲ್ಲ ಮತ್ತೆ, ಅಷ್ಟು ಪಾಠ ಕಲಿತಿದ್ದಾರೆನಿಸುತ್ತೆ!) ಕುಸ್ತಿ ಬಿದ್ದು ಮಣ್ಣು ಮುಕ್ಕಿ, ಸೋತು ಸುಣ್ಣವಾಗಿ, ಸಾಹಿತ್ಯಿಕ ಸಮಾರಂಭಗಳಿಗೆ ಹಾಜರಾಗುವದಿಲ್ಲವೆಂದು ಸಂನ್ಯಾಸತ್ವ ಘೋಷಿಸಿದ್ದಾರೆ.

ತಮ್ಮ ಶಿಷ್ಯಗಣದಲ್ಲಿಯೇ ಅರೆಬೆಂದವರೊಬ್ಬರಿಂದ ತಮ್ಮ ಮೂಗಿನ ನೇರಕ್ಕೆ 'ಆವರಣ'ದ ಬಗ್ಗೆ ಪುಸ್ತಿಕೆಯೊಂದನ್ನು (ಪುಸ್ತಕವೆಂದು ಕರೆಯಲು ಮನಸ್ಸು ಒಪ್ಪುತ್ತಿಲ್ಲ) ಬರೆಸಿ ಅದರ ಬಿಡುಗಡೆಯ ಸಂದರ್ಭದಲ್ಲಿ ಭೈರಪ್ಪನವರ ಬಗ್ಗೆ ತಮ್ಮಲ್ಲಿದ್ದ ಸಿಟ್ಟು, ಅಸೂಯೆ, ಮಾತ್ಸರ್ಯವನ್ನು ಕೂಡ ಅವತ್ತು ಕಾರಿಕೊಂಡಿದ್ದಾರೆ. ಕೇವಲ ಆವರಣವನ್ನು ಕೇಂದ್ರದಲ್ಲಿಟ್ಟುಕೊಂಡು ಮಾತನಾಡಿದ್ದರೆ ಅವರನ್ನೊಬ್ಬ ಜ್ಞಾನಪೀಠಿ ಚಿಂತಕ ವಿಮರ್ಶಕ ಎಂದು ಒಪ್ಪಬಹುದ್ದಿತ್ತೇನೋ? ಆದರೆ ಅವೆಲ್ಲಾ ಸಭ್ಯತೆಗಳ ಆವರಣವನ್ನು ದಾಟಿ ಭೈರಪ್ಪನವರನ್ನು ಕೇಂದ್ರದಲ್ಲಿಟ್ಟುಕೊಂಡು ಹರಿಹಾಯುವದು, ದಾಳಿಮಾಡುವದು ಅನುಚಿತವಲ್ಲವೇ? ಆದರೆ ಅದೇಕೇ ಬುದ್ಧಿಜೀವಿಗಳಿಗೆ ಹಾಗನಿಸುವದಿಲ್ಲ ಎಂದು ಅಚ್ಚರಿಯಾಗುತ್ತದೆ. ಅಥವಾ ಅದಕ್ಕೆ ಅವರನ್ನು ಬುದ್ಧಿಜೀವಿಗಳೆನ್ನುವದೋ?

ಆವರಣದ ಮಾರಾಟ, ಜನಪ್ರಿಯತೆ ಮತ್ತು ಆ ರೀತಿ ಯೋಚಿಸುವವರ ಸಂಖ್ಯೆ ಕಂಡರೆ ಅವರಿಗೆ ದಿಗಿಲಂತೆ. ಅದಲ್ಲದೇ ಭೈರಪ್ಪ ಕನ್ನಡ ಸಾಹಿತ್ಯಲೋಕವಲ್ಲದೆ, ಭಾರತೀಯ ಇತರ ಭಾಷೆಗಳಲ್ಲಿಯೂ ಕೂಡ ಫೇಮಸ್ ಆಗಿರುವದು ಇವರಿಗೆ ಸಂತಸದ ವಿಷಯವಲ್ಲ ಬದಲು ಅದೊಂದು ಸಮಸ್ಯೆ. (ದಟ್ಸ್ ಕನ್ನಡದಲ್ಲಿರುವ ಭಾಷಣದ ಧ್ವನಿ ಸುರುಳಿ ಕೇಳಿ ನೋಡಿ, ಬಾಲಿಶ ಚಿಂತನೆ ಕಂಡು ನಗು ಬರುತ್ತೆ!). ಅವತ್ತು ಸಮಾರಂಭದಲ್ಲಿ ಅವರ 'ನೆಚ್ಚಿನ ವಿಷಯಗಳಾದ' ಕೋಮುವಾದ, ಬಿ ಜೆ ಪಿ, ಮೋದಿ, ಗುಜರಾತ್ ಮುಂತದವುಗಳ ಬಗ್ಗೆ ಅಪ್ಪಣೆ ಕೊಡಿಸಿದ್ದಾರೆ. ಅವರು ಶಿಷ್ಯ ಕೋಟಿ ಮೆಚ್ಚಿ ವಾಹ್ ವಾಹ್ ಎಂದು ಚಪ್ಪಾಳೆ ತಟ್ಟಿದ್ದಾರೆ. ಇಷ್ಟಕ್ಕೆ ಅವರು ಮಾತಿಗೆ ಬ್ರೇಕ್ ಹಾಕಿದ್ದರೆ ಅವರು ಜಾಣರಾಗುತ್ತಿದ್ದರು. ಆದರೆ ಅದೃಷ್ಟ ಸರಿಯಾಗಿಲ್ಲವೆಂದರೆ ಅವರೇನು ಮಾಡಿಯಾರು? ಅಷ್ಟಕ್ಕೇ ತಿಳಿದುಕೊಂಡು ಸುಮ್ಮನಾದರೆ ಅವರ ಬುದ್ಧಿಜೀವಿ ಪಟ್ಟ ಸಾರ್ಥಕವಾಗುವದೇ? ಖಂಡಿತಾ ಇಲ್ಲ. ಅದಕ್ಕೇ ಮತ್ತೊಂದು ಬಾಂಬ್ ಹಾಕಿದ್ದಾರೆ. ಮಾತಿನ ಓಘದಲ್ಲಿ, ನಸುನಗುತ್ತಾ "ಭೈರಪ್ಪ ಕಾದಂಬರಿಕಾರರಲ್ಲ, ಅವರೇನಿದ್ದರೂ ಒಬ್ಬ ಡಿಬೇಟರ್ (ಚರ್ಚಾಪಟು)" ಎಂದು ಫರ್ಮಾನು ಹೊರಡಿಸಿದ್ದಾರೆ! ಇದಲ್ಲವೇ ನಿಜವಾದ 'ಬುದ್ಧಿಜೀವಿ'ಯ (ಅವ)ಲಕ್ಷಣ?

ತಮ್ಮ ತಮ್ಮೊಳಗೆ ಭೈರಪ್ಪನವರನ್ನು ತೆಗಳಿ ಖುಷಿ ಪಡಬಹುದೆಂದು ಕೊಂಡಿದ್ದರೇನೋ? ಆದರೇನು ಪ್ರಚಾರಕ್ಕಾಗಿ ಪತ್ರಕರ್ತರೆಂಬ 'ಪೀಡೆ'ಗಳನ್ನು ಕರೆಸಿರುತ್ತಾರಲ್ಲ. ಅವರು ಶಬ್ದಶ: 'ಸರಿಯಾದ ಪ್ರಚಾರ'ವನ್ನೇ ಕೊಟ್ಟಿದ್ದಾರೆ. ಅವರ ಭಾಷಣದ ಮುಖ್ಯಾಂಶ ಕನ್ನಡ ಪತ್ರಿಕೆಗಳಲ್ಲಿ ವರದಿಯಾದೊಡನೆ ಸಾಹಿತಿಗಳ ಆಕ್ರೋಶ ಅನಂತಮೂರ್ತಿಯವರನ್ನು ಮೈಮ್ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ. ಸಾಹಿತಿಗಳ ಸಾತ್ವಿಕ ಸಿಟ್ಟಿಗಿಂತಲೂ ಓದುಗ ದೊರೆಗಳ ಸಿಟ್ಟು ನಿಜಕ್ಕೂ ಮೂರ್ತಿಗಳಿಗೆ ದಂಗು ಬಡಿಸಿರಬೇಕು. ಜ್ಞಾನಪೀಠದ ಕುರ್ಚಿಯ ಕಾಲುಗಳು ನೆಲದಲ್ಲಿ ನಾಲ್ಕಿಂಚು ಕುಸಿದಂತಾಗಿ ಬೆಚ್ಚಿಬಿದ್ದರೆನಿಸುತ್ತದೆ. ಎಲ್ಲಾ ಕನ್ನಡ ಪತ್ರಿಕೆಗಳಲ್ಲಿಯೂ ಮತ್ತು ಕೆಲವು ಆಂಗ್ಲ ಪತ್ರಿಕೆಗಳಲ್ಲಿಯೂ ಮೂರ್ತಿಗಳ ದಿಗಿಲುಗೊಳ್ಳುವ ವಿಮರ್ಶಾ ಪಾಂಡಿತ್ಯಕ್ಕೆ, ಟೀಕೆ-ಟಿಪ್ಪಣಿಗಳಿಗೆ ಕಟುಟೀಕೆಗಳ ಸುರಿಮಳೆಯಾಯಿತು. ಈ ಟೀಕೆಗಳ ಮಧ್ಯೆ ಜನರಿಗೆ, ಸಾಹಿತ್ಯಾಸಕ್ತರಿಗೆ ಅನಂತಮೂರ್ತಿಯವರ ನಿಜವಾದ ಮುಖವಾಡದ ಅನಾವರಣವಾಯಿತು. ಪಾಪ ಮೂರ್ತಿಗಳು ಮಾತ್ರ ಹೈರಾಣಾದರು. ಏನು ಮಾಡುವದು? "ಮಾಡಿದ್ದುಣ್ಣೋ ಮಹಾರಯ"! ಗಾಜಿನ ಮನೆಯಲ್ಲಿದ್ದವರು ಇನ್ನೊಬ್ಬರ ಮನೆಯ ಮೇಲೆ ಕಲ್ಲೆಸೆಯುವ ಕೆಲಸ ಮಾಡಬಾರದೆಂಬ ಸೂಕ್ಷ್ಮ ಬುದ್ಧಿಜೀವಿಗಳಿಗೇಕೇ ತೋಚುವದಿಲ್ಲ?

ಅಂತಿಮ ಪರಿಣಾಮ :

ಈ ಸಧ್ಯಕ್ಕಂತೂ ಎಲ್ಲ ಓದುಗರ "ಪ್ರೀತ್ಯಾದರ"ಗಳಿಂದ ಗಾಬರಿಯಾಗಿ ಅನಂತಮೂರ್ತಿ ಇನ್ನು ಮೇಲೆ ಯಾವುದೇ ಸಭೆ-ಸಮಾರಂಭಗಳಲ್ಲಿ, ಮುಖ್ಯವಾಗಿ ಸಾಹಿತ್ಯಿಕ ಸಮಾರಂಭಗಳಲ್ಲಿ(ವೈಚಿತ್ರ್ಯ ನೋಡಿ!) ಭಾಗವಹಿಸುವದಿಲ್ಲವೆಂದು ಭೀಷ್ಮ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ. ಪತ್ರಕರ್ತರಿದ್ದ ಸಮಾರಂಭದ ಕಡೆಗಂತೂ ತಲೆ ಹಾಕಿ ಮಲಗುವದಿಲ್ಲವಂತೆ! ಮಜಾ ನೋಡಿ, ಅವರಿಗೆ ಈಗಲೂ ತಾವು ಮಾಡಿದ್ದು ತಪ್ಪು ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳಲು ಆಗುತ್ತಿಲ್ಲ. ಆದರೆ ಅದು ತಪ್ಪು ಎಂದು ಅವರಿಗೆ ಖಂಡಿತವಾಗಿ ಮನದಟ್ತಾಗಿದೆ ಅನ್ಸುತ್ತೆ. 'ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದನಂತೆ' ಎಂಬ ಮಾತಿನಂತೆ ಪಲಾಯನವಾದದ ಹಾದಿ ಹಿಡಿದು 'ಸಂನ್ಯಾಸತ್ವ' ಸ್ವೀಕರಿಸುತ್ತಿದ್ದಾರೆ ವಿನಃ ಸೋಲೋಪ್ಪುತ್ತಿಲ್ಲ! ಈ 'ಅರ್ಜುನ ಸಂನ್ಯಾಸತ್ವ' ಎಷ್ಟು ದಿನದ ನಾಟಕವೋ ಭವಿಷ್ಯವೇ ತೀರ್ಮಾನಿಸಬಲ್ಲುದು. ಅಂತೂ ಜ್ಞಾನಪೀಠಿಗಳೂ ತಮ್ಮ ನಿಂತ ಕಾಲ ಇನ್ನೊಮ್ಮೆ ತಿಪ್ಪರಲಗಾಟಿ ಹೊಡೆದು ಜನರಿಗೆ ಮನರಂಜನೆ ನೀಡಿದ್ದಾರೆ. ಅವರಿಗೆ 'ಅನಂತ' ಧನ್ಯವಾದಗಳು.

- ವಾಙ್ಮಯಿ, ಬಿಜಾಪುರ.

Rating
No votes yet

Comments