ಪ್ರವಾಸ ಕಥನ
ನಾವು ಬೆಳಿಗ್ಗೆ ೬.೩೦ಗೆ ಹೊರಟು ಎಡಿಯೂರು ಮೂಲಕ ತುರುವೇಕೆರೆಗೆ ೧೦ ಘಂಟೆಗೆ ತಲುಪಿದೆವು. ಮಧ್ಯದಲ್ಲಿ ಬೆಳಗಿನ ಉಪಹಾರಕ್ಕಾಗಿ ಶೋಧ ನಡೆಸಿದ್ದರಿಂದ ಇಷ್ಟು ತಡವಾಯಿತು..... :-). ಇಂದಿನ ತುರುವೇಕೆರೆಯ ಮುಂಚಿನ ಹೆಸರು "ಶ್ರೀ ಸರ್ವಜ್ಞ ವಿಜಯ ನರಸಿಂಹಪುರ" ಎಂದು ಹೊಯ್ಸಳರ ದೊರೆ ೩ನೇ ನರಸಿಂಹನ ಕಾಲದಲ್ಲಿ ಇತ್ತು. ಇದು ಚತುರ್ವೇದ ಪಾರಂಗತರೂ ಮತ್ತು ಮಹಾಜನರಿಂದ ಕೂಡಿದ್ದ ಅಗ್ರಹಾರವಾಗಿತ್ತು.ಇಲ್ಲಿ ಹೊಯ್ಸಳರ ಕಾಲದ ಕ್ರಿ.ಶ ೧೨೫೮ರಲ್ಲಿ ಕಟ್ಟಿದ ಶ್ರೀ ಚನ್ನಕೇಶವನ ದೇವಸ್ಥಾನ ಇದೆ. ಇದೀಗ ೧೯೯೧ರ ನಂತರ ಹಂತ ಹಂತವಾಗಿ ಜೀರ್ಣೋದ್ಧಾರವಾಗಿದೆ.
ಈ ಏಕಕೂಟ ದೇವಾಲಯದ ನಿರ್ಮಾಣ ಮಾಡಿ ತನ್ನ ಪಿತೃಗಳಿಗೆ ಸದ್ಗತಿ ದೊರೆಯಲೆಂದೂ ಮತ್ತು ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗಲೆಂದೂ ಅಗ್ರಹಾರದಲ್ಲಿದ್ದ ಕೋಟೆ ಶಂಕರದೇವ ಎಂಬ ಬ್ರಾಹ್ಮಣನಿಗೆ ಊರಿನ ಮಹಾಜನರ ಸಮ್ಮುಖದಲ್ಲಿ ದಾನ ಮಾಡುತ್ತಾನೆ. ಈ ದಾನವನ್ನು ಸ್ವೀಕರಿಸಿದ್ದಕ್ಕೆ ಸಾಕ್ಷಿಯಾಗಿ ಐದು ಜನರ ಸಹಿ ಇರುವ ದಾನ ಶಾಸನ ಈ ದೇವಾಲಯದ ಕಂಬದಲ್ಲಿದೆ. ದೇವಸ್ಥಾನಕ್ಕಾಗಿ ದತ್ತಿ ಕೊಟ್ಟ ಹಳ್ಳಿಗಳ ವಿವರಗಳೂ ಇವೆ. ಈ ಊರಿನಲ್ಲಿದ್ದ ಯಥೇಚ್ಛವಾದ ಗೋ ಮತ್ತು ಜಲ ಸಂಪತ್ತಿನ ಸಂಕೇತವಾಗಿ "ಧೇನುಪುರಿ" (ಅಂದರೆ ತುರು + ಕೆರೆ) ಎಂದೂ ಕರೆದು, ಅದು ಈಗ ಆಡು ಭಾಷೆಯಲ್ಲಿ "ತುರುವೇಕೆರೆ" ಆಗಿದೆ.
ಈ ದೇವಾಲಯವು ಹೊಯ್ಸಳ ಶೈಲಿಯ ನಕ್ಷತ್ರಾಕಾರದ ಪ್ರಾಕಾರ ಹೊಂದಿದೆ. ಇದರ ನಿರ್ಮಾಣ ಕಾಲ ಮತ್ತು ವೈಭವವನ್ನು ವಿವರಿಸುವ ಶಾಸನಗಳು ಇಲ್ಲಿವೆ.
ತುರುವೇಕೆರೆಯಲ್ಲಿ ನಾವು ಒಟ್ಟು ೩ ದೇವಸ್ಥಾನಗಳನ್ನು ನೋಡಿದೆವು. ಎರಡನೆಯದು ಮೂಲ ಶಂಕರ ದೇವಸ್ಥಾನ. ಇದು ಈಗ ಒಂದು ಮೂಲೆಯಲ್ಲಿ ಇರುವಂತೆ ಕಾಣುವುದರಿಂದ, ಇದಕ್ಕೆ ಮೂಲೆ ಶಂಕರ ಆಲಯ ಎಂದೂ ಹೆಸರು ಬಿದ್ದೋಗಿದೆ..
ಈ ದೇವಾಲಯವನ್ನು ಜಕ್ಕಣ್ಣಾಚಾರಿಯ ಮಗ ಭಕ್ಕಣ್ಣ ಕೆತ್ತಿದ್ದನೆಂಬ ಸಾಕ್ಷಿಗೆ ಅಲ್ಲಲ್ಲಿ ನಾವು ’ಭ’ ಅಕ್ಷರ ಕೆತ್ತಿರುವುದನ್ನು ಕಾಣಬಹುದು. ಇದು ಗಂಗಣ್ಣ ನಾಯಕ ಎಂಬ ಪಾಳೆಯಗಾರನ ಕಾಲದಲ್ಲಿ ಕಟ್ಟಲ್ಪಟ್ಟ ದೇವಾಲಯವೆಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಈ ದೇವಾಲಯದ ಗೋಪುರ ಶೈಲಿ ನಮಗೆ ಪಟ್ಟದಕಲ್ಲು ಮತ್ತು ಐಹೊಳೆಯಲ್ಲಿ ಕಾಣ ಸಿಗುತ್ತದಂತೆ. ತುರುವೇಕೆರೆಯ ಇತಿಹಾಸ ಅಥವಾ ಕಥೆ ಹೇಳಲು ನಮಗೆ ಅಲ್ಲಿ ಯಾವುದೇ ತರಹದ ಪುಸ್ತಕವಾಗಲೀ, ವಿಚಾರವಾಗಲಿ ಲಭ್ಯವಿಲ್ಲ. ಇದೆಲ್ಲ ಅರ್ಚಕರು ಹೇಳಿದ ವಿಚಾರಗಳನ್ನು ನಾನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ಇದು ಮುಜರಾಯಿ ಇಲಾಖೆಗೆ ಸಂಬಂಧ ಪಟ್ಟಿಲ್ಲ. ಆದ್ದರಿಂದ ಈ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಲೀ, ನಿತ್ಯ ಪೂಜೆಗಾಗಲೀ ಸರಕಾರದಿಂದ ಯಾವುದೇ ತರಹದ ಸಹಾಯವಿಲ್ಲ. ದೇವಸ್ಥಾನದ ಪಕ್ಕದಲ್ಲಿ ಕೆರೆ ಇದೆ. ಆರಿದ್ರಾ ನಕ್ಷತ್ರದಲ್ಲಿ ಸೂರ್ಯ ವೃಷಭ ರಾಶಿ ಪ್ರವೇಶ ಮಾಡಿದಾಗ ಸೂರ್ಯನ ಕಿರಣ ಕೆರೆಯ ನೀರಿನ ಮೇಲೆ ಬಿದ್ದಾಗ, ಅದು ಕಿಂಡಿಯ ಮೂಲಕ ಈಶ್ವರನ ಮೇಲೆ ಬೀಳುತ್ತದಂತೆ. ಇಲ್ಲಿ ಕಾರ್ತೀಕ ಮಾಸದಲ್ಲಿ ಒಂದು ತಿಂಗಳು ಉತ್ಸವ ರೀತಿಯಲ್ಲಿ ಪೂಜೆ ನಡೆಯುತ್ತದೆ. ಸ್ವಾಮಿ ಅಚಲಾನಂದರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಚಿಕ್ಕ ಸಾಲಿಗ್ರಾಮ ಹಾಗೂ ವಿಠಲನ ಮೂರ್ತಿ ಸಿಕ್ಕುತ್ತದೆ. ಅದರ ಜೊತೆಗೆ ಇಲ್ಲಿ ಬೇರೆ ಬೇರೆಯವರು ಆಗಾಗ ಕೊಟ್ಟ ಸಾಲಿಗ್ರಾಮಗಳು ಒಟ್ಟು ೧೦೮ ಇವೆ. ಅಚಲಾನಂದರ ವಂಶಸ್ಥರೇ ಒಬ್ಬೊಬ್ಬರು ಒಂದೊಂದು ದಿನ ಪೂಜೆ ಮಾಡುತ್ತಾರೆ. ಇಲ್ಲಿ ಸಪ್ತಮಾತೃಕೆಯರ ಪ್ರತಿಮೆಯೂ ಇದೆ. ದೇವಸ್ಥಾನದ ಹೊರಗಡೆ ಪ್ರಾಕಾರದಲ್ಲಿ ಕಿಡಿಗೇಡಿ ಜನಗಳು ಕಲ್ಲುಗಳಿಂದ ಕುಟ್ಟಿ, ಅನೇಕ ಕಡೆ ಹಾಳು ಮಾಡಿದ್ದಾರೆ. ಸ್ವಲ್ಪ ದಿನಗಳ ಮೊದಲು ಈ ದೇವಸ್ಥಾನದ ಜಗುಲಿ, ಇಸ್ಪೀಟು ಆಡುವವರ ಜಾಗವಾಗಿತ್ತಂತೆ. ಈಗ ಭಕ್ತರ ಸಹಾಯದಿಂದಲೇ ಈ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದೆ..
ಎರಡನೆಯ ದೇವಸ್ಥಾನ ಗಂಗಾಧರೇಶ್ವರ ಸ್ವಾಮಿ ಮತ್ತು ಅದೇ ಪ್ರಾಕಾರದಲ್ಲಿರುವ ಭವಾನಿ ದೇವಿಯ ಗುಡಿ.... ಹೊರಗಡೆ ಗಂಗಾಧರೇಶ್ವರನ ಮುಂದೆ ದೊಡ್ಡ ನಂದಿ ಇದೆ. ಸಾಲಿಗ್ರಾಮ ಶಿಲೆಯದು.
ಇದನ್ನು ಬಟ್ಟೆಯಿಂದ ಸ್ವಚ್ಛಗೊಳಿಸಿ, ಕೈನಲ್ಲಿ ಉಜ್ಜುತ್ತಾ ಹೋದರೆ, ಕಲ್ಲು ಹೊಳಪು ಬರುತ್ತದೆ. ಸುಂದರವಾದ ಕೆತ್ತನೆ....ಈ ದೇವಸ್ಥಾನ ದ್ರಾವಿಡ ಶೈಲಿಯದು ಮತ್ತು ಅಣ್ಣಯ್ಯ ನಾಯಕ ಎಂಬ ಪಾಳೆಯಗಾರ ಕಟ್ಟಿಸಿದ್ದು. ಅಣ್ಣಯ್ಯ ನಾಯಕ ಮತ್ತು ಅವನ ಹೆಂಡತಿಯ ವಿಗ್ರಹಗಳು ಗರುಡ ಗಂಭದ ಮೇಲೆ ಇವೆ. ಇಲ್ಲಿ ಗಂಗಾಧರೇಶ್ವರನ ವಿಗ್ರಹದಲ್ಲಿ ನಾಗಾಭರಣ, ಗಂಗಾದೇವಿ, ಸೂರ್ಯ ಮತ್ತು ಚಂದ್ರರನ್ನು ಕಡೆದಿದ್ದಾರೆ. ಪದ್ಮಾಸನದಲ್ಲಿ ಶಿವನ ತಲೆಯ ಮೇಲೆ ಕುಳಿತ ಗಂಗೆ., ಗಂಗೆ ಹರಿದು ಬರುತ್ತಿರುವ ಕುರುಹಾಗಿ, ನೀರಿನ ಸಾಲಿನಂತೆ ಶಿವನ ತಲೆಯ ಮೇಲೆ ಕೆತ್ತಲಾಗಿದೆ. ಲಲಾಟದಲ್ಲಿ ಈಶ್ವರನ ಗುಂಗುರು ಕೂದಲು.. ಅತ್ಯಂತ ಅಪೂರ್ವವಾಗಿದೆ. ಉತ್ಸವ ಮೂರ್ತಿಗಳಾದ ಶಿವ ಪಾರ್ವತಿಯರ ಜೊತೆ ದಾಕ್ಷಾಯಿಣಿಯ ವಿಗ್ರಹವೂ ಇದೆ. ಇನ್ನೊಂದು ವಿಶೇಷವೆಂದರೆ ಶಿವನ ಉತ್ಸವ ಮೂರ್ತಿಯ ಕಾಲಿನಲ್ಲಿ ಕಣ್ಣು ಕೆತ್ತಿರುವುದು... ಪ್ರಾಕಾರದಲ್ಲಿ ಭವಾನಿ ದೇವಿಯ ಗುಡಿಯಲ್ಲಿ ದೇವಿಯನ್ನು ೫ ಅಡಿ ಎತ್ತರದ ಶಿಲೆಯಲ್ಲಿ ಕೆತ್ತಲಾಗಿದೆ.
ಪೀಠದಲ್ಲಿ ಸಿಂಹವನ್ನು ಕೆತ್ತಿರುವುದರಿಂದ ದೇವಿಯನ್ನು "ದುರ್ಗೆ" ಎಂದೂ ಕರೆಯುತ್ತಾರೆ. ದೇವಸ್ಥಾನದ ಪೂರ್ವದಿಕ್ಕಿನಲ್ಲಿರುವ ಮಂಟಪದಲ್ಲಿ ಬಳಪದ ಕಲ್ಲಿನ ಬೃಹತ್ತ್ ಗಂಟೆಯಿದೆ.
ಈ ಬೃಹತ್ತ್ ಗಂಟೆಯನ್ನು ಹೊಡೆದಾಗ, ಲೋಹದ ಗಂಟೆಯ ತರಂಗಗಳು ಕೇಳಿಸುತ್ತದೆ. ಒಟ್ಟಿನಲ್ಲಿ ಅನೇಕ ವಿಶೇಷಗಳನ್ನೊಳಗೊಂಡ ದೇವಾಲಯ....
ಮೂರನೆಯ ದೇವಾಲಯ "ಬೇಟೆರಾಯ ಸ್ವಾಮಿ"ಯದ್ದು. ಕಥೆಯೇನೆಂದರೆ ಬದರಿಕಾಶ್ರಮ ವಾಸಿಗಳಾದ ಶ್ರೀ ಚಂದ್ರಚೂಡಮುನಿಗಳು ಮತ್ತು ಇತರರು ತೀರ್ಥಯಾತ್ರೆಯನ್ನು ಕೈಗೊಂಡಿದ್ದಾಗ, ತಪಸ್ಸಿಗಾಗಿ ಆರಿಸಿಕೊಂಡ ಜಾಗವೇ ಈಗಿನ ತುರುವೇಕೆರೆಯೆಂದು ಪ್ರತೀತಿ. ಅವರ ತಪಸ್ಸಿಗೆ ಮೆಚ್ಚಿ, ಅವರ ಪ್ರಾರ್ಥನೆಯಂತೆ ಶ್ರೀ ಹರಿ ಇಲ್ಲಿಯೇ ನೆಲೆಸಿದನಂತೆ. ಮಾಯಾವಿ ರಾಕ್ಷಸರು ಮೃಗರೂಪದಿಂದ ಜನರನ್ನು ಹಿಂಸೆಗೊಳಿಸುತ್ತಿದ್ದಾಗ ಮಹಾವಿಷ್ಣು ಅಶ್ವಾರೂಢನಾಗಿ ಬಂದು ರಾಕ್ಷಸರನ್ನು ಸಂಹರಿಸಿದ್ದರಿಂದಲೇ ಸ್ವಾಮಿಗೆ ಬೇಟೆರಾಯನೆಂಬ ಹೆಸರು ಬಂತು. "ಪಕ್ಷಿವಾಹನ ಮಡು" (ಬ್ರಹ್ಮ ತೀರ್ಥ)ವಿನಲ್ಲಿದ್ದ ಸ್ವಾಮಿಯನ್ನು, ಶ್ರೀ ಹರಿಯ ಪ್ರೇರಣೆ ಮೇರೆಗೆ, ಹೆಬ್ಬಾರು ಚೌಡಯ್ಯ ಎಂಬುವರು ೧೧೯೪ರಲ್ಲಿ ಪ್ರತಿಷ್ಠಾಪಿಸಿದ್ದಾರೆ. ತುರುವೇಕೆರೆಯು ಹೊಯ್ಸಳ ಬಲ್ಲಾಳರ ಅಧಿಪತ್ಯದಲ್ಲಿತ್ತು. ಈ ವಂಶದ ೧೦ನೇ ದೊರೆಯಾದ ಇಮ್ಮಡಿ ವೀರ ನರಸಿಂಗರಾಯ ಮತ್ತು ರಾಣಿ ಲೋಕಾಂಬಿಕೆಯವರು ತಮ್ಮ ಹತ್ತಿರವಿದ್ದ ಉತ್ಸವ ಮೂರ್ತಿಗಳನ್ನು ದೇವಸ್ಥಾನಕ್ಕೆ ಕೊಟ್ಟು ಸುತ್ತಮುತ್ತಲಿನ ಹತ್ತು ಗ್ರಾಮಗಳನ್ನೂ ದತ್ತಿ ಕೊಟ್ಟಿದ್ದರು. ಆದರೆ ಈಗ ದೇವಸ್ಥಾನಕ್ಕೆ ಯಾವ ಸಹಾಯವೂ ಇಲ್ಲ. ಬರೀ ಇಲ್ಲಿಗೆ ಬರುವ ಭಕ್ತರ ದೇಣಿಗೆಯಿಂದ ದೇವಸ್ಥಾನದ ಪೂಜೆ ಹಾಗೂ ಜೀರ್ಣೋದ್ಧಾರ ನಡೆಯುತ್ತದೆ. ಬೇಟೆರಾಯ ಸ್ವಾಮಿಯ ದೇವಾಲಯದ ಪ್ರಾಕಾರದಲ್ಲೇ ಶ್ರೀ ಲಕ್ಷ್ಮಿಯ ಗುಡಿಯೂ ಇದೆ. ಸ್ವಾಮಿಯು ಅತ್ಯಂತ ಮನೋಹರ ಮೂರ್ತಿಯಾಗಿದೆ. ತುರುವೇಕೆರೆಯಲ್ಲಿ ಊಟ ಉಪಹಾರಗಳ ವ್ಯವಸ್ಥೆ ಇಲ್ಲದಿರುವುದರಿಂದ, ನಾವು ಹೋಗುವಾಗಲೇ ತೆಗೆದುಕೊಂಡು ಹೋಗಬೇಕು ಇಲ್ಲದಿದ್ದರೆ, ಅಲ್ಲಿನ ಅರ್ಚಕರಿಗೆ ದೂರವಾಣಿ ಕರೆ ಮಾಡಿ ಮುಂಚೆಯೇ ತಿಳಿಸಿದರೆ, ತಮ್ಮ ಮನೆಯಲ್ಲೇ ಊಟದ ವ್ಯವಸ್ಥೆ ಮಾಡಿಕೊಡುತ್ತಾರೆ. ನಾವು ಅರ್ಚಕರ ಮನೆಯಲ್ಲಿ ಪುಳಿಯೋಗರೆ, ಮೊಸರನ್ನ ತಿಂದು ನೇರವಾಗಿ ತರೀಕೆರೆ ತಾಲ್ಲೂಕಿನಲ್ಲಿರುವ "ಅಮೃತಾಪುರ" ನೋಡಲು ಹೊರಟೆವು.
ಅಮೃತಾಪುರ ದೇವಸ್ಥಾನ ಕೂಡ ಹೊಯ್ಸಳ ಶೈಲಿಯದು. ಇದು ನಕ್ಷತ್ರಾಕಾರದಲ್ಲಿದ್ದು, ಇದಕ್ಕೆ ಪ್ರದಕ್ಷಿಣಾ ಪಥ ಇಲ್ಲಿ ಇಲ್ಲ. ದೇವಾಲಯವು ವಿಶಾಲವಾದ ರಂಗ ಮಂಟಪ, ನವರಂಗ, ಸುಖನಾಸಿ ಮತ್ತು ಗರ್ಭ ಗುಡಿಗಳನ್ನು ಹೊಂದಿದೆ. ಒಟ್ಟು ೫೨ ಕಂಭಗಳು ಇವೆ ಮತ್ತು ವಿಶೇಷವೆಂದರೆ ಒಂದರಂತೆ ಇನ್ನೊಂದಿಲ್ಲದಿರುವುದು. ಇಲ್ಲಿನ ಕವಿಯಾದ ಜನ್ನ ವಿವರಿಸಿರುವಂತೆ ದೇವಾಲಯವನ್ನು ಹೊಯ್ಸಳ ರಾಜನಾದ ಎರಡನೇ ವೀರ ಬಲ್ಲಾಳನ ದಂಡನಾಯಕನಾದ ಅಮೃತನಾಯಕನ ನೆನಪಿಗಾಗಿ ಕ್ರಿ.ಶ.೧೧೯೬ರಲ್ಲಿ ನಿರ್ಮಿಸಲ್ಪಟ್ಟಿತು. ಮೂಲ ದೇವರು ಅಮೃತೇಶ್ವರ ಸ್ವಾಮಿ.
ವಾಸ್ತು ಶಿಲ್ಪದ ಜ್ವಲಂತ ಉದಾಹರಣೆ ಈ ದೇವಾಸ್ಥಾನ. ಮುಖ್ಯ ಗೋಪುರದ ಶೈಲಿಯ ಚಿಕ್ಕ ಚಿಕ್ಕ ಗೋಪುರಗಳು ಒಟ್ಟು ೨೫೦ ಇವೆ. ಪ್ರದಕ್ಷಿಣೆ ಹೊರಟರೆ ಸಾಕು ನಾವು ರಾಮಾಯಣ, ಮಹಾಭಾರತ ಮತ್ತು ಭಾಗವತದ ದೃಶ್ಯಾವಳಿಗಳನ್ನು ನೋಡುತ್ತಾ ಮೈ ಮರೆಯಬಹುದು. ಕುಂಭಕರ್ಣನ ನಿದ್ರಾ ಭಂಗ ಮಾಡುವ ಚಿತ್ರ, ಯುದ್ಧದ ಚಿತ್ರಣ, ಆಂಜನೇಯ ಬಾಲ ಸುತ್ತಿ,
ದಶ ಶಿರ ರಾವಣನ ಮುಂದೆ ಕುಳಿತಿರುವ ಚಿತ್ರ.... ಹಾಗೇ ಭಾಗವತದಲ್ಲಿ, ಕೃಷ್ಣನ ಜನನಕ್ಕೆ ಮುಂಚೆ ಕಂಸ ಸೆರೆಮನೆಯ ಬಾಗಿಲಲ್ಲಿ ಕಾವಲಿಗೆ ನಿಲ್ಲಿಸಿದ್ದ ಕತ್ತೆಯ ಚಿತ್ರ... ಮುಂದಿನ ಕಲ್ಲಿನಲ್ಲಿ ವಾಸುದೇವ ಕತ್ತೆಯ ಕಾಲು ಹಿಡಿದಿರುವುದು, ವಾಸುಕಿ ಕೃಷ್ಣನಿಗೆ ಛತ್ರಿಯಂತೆ ತುಂಬಿ ಹರಿಯುವ ಹೊಳೆ ದಾಟಿಸುವ ಚಿತ್ರ.... ಒಂದೆರಡಲ್ಲ... ಮಹಾಭಾರತದ ಕಾಂಡವ ವನದ ದಹನದ ಚಿತ್ರದಲ್ಲಿ ಉರಿಯುತ್ತಿರುವ ಅಗ್ನಿ ಜ್ವಾಲೆಗಳನ್ನೂ ಕೂಡ ನೋಡಬಹುದು... ನಿಜವಾಗಲೂ ಮೈ ಮನ ಮರೆಯಲು, ಇತಿಹಾಸದಲ್ಲಿ ಕಳೆದು ಹೋಗಲು ಅತ್ಯಂತ ಪ್ರಶಸ್ತವಾದ ಜಾಗ.
೩೨ ವರ್ಷಗಳ ಮೊದಲು ನೋಡಿದಾಗ ಬರಿಯ ಬಯಲಲ್ಲಿ, ಒಂಟಿಯಾಗಿ, ಯಾವ ರಕ್ಷಣೆಯೂ ಇಲ್ಲದೆ ದೇವಸ್ಥಾನ ನಿಂತಿತ್ತು. ಆದರೆ ಈಗ ಅದಕ್ಕೆ ಸುತ್ತಲೂ ಗೋಡೆ ಕಟ್ಟಿ, ಹಸಿರು ಹುಲ್ಲು ಬೆಳೆಸಿ, ದೇವಸ್ಥಾನದ ರಕ್ಷಣೆ ಮಾಡಲಾಗಿದೆ. ಇಲ್ಲಿ ಮಧ್ಯ ಮಧ್ಯ ಖಾಲಿ ಬಿಟ್ಟ ಕಲ್ಲುಗಳನ್ನೂ ನಾವು ನೋಡಬಹುದು. ಅಲ್ಲಿಯ ಗೈಡ್ ಪ್ರಕಾರ, ಈ ಜಾಗಗಳನ್ನು ಶಿಲ್ಪಿಗಳು, ತಮಗಿಂತ ಹೆಚ್ಚು ತಿಳಿದವರು, ಪರಿಣಿತರು, ತಮ್ಮ ಕಲ್ಪನೆಯನ್ನು ಕೆತ್ತಲು ಬಿಟ್ಟ ಜಾಗಗಳಂತೆ. ಈ ದೇವಾಲಯಕ್ಕೆ ಮೂರು ಹೆಬ್ಬಾಗಿಲು. ಬ್ರಹ್ಮ ದ್ವಾರ, ವಿಷ್ಣು ದ್ವಾರ ಮತ್ತು ಶಿವ ದ್ವಾರವೆಂದು.
ಇಲ್ಲಿ ಅಷ್ಟ ದಿಗ್ಪಾಲಕರು ತಮ್ಮ ತಮ್ಮ ವಾಹನಗಳ ಜೊತೆ, ಅಶ್ವಿನಿ ದೇವತೆಗಳು, ಇಂದ್ರ ಐರಾವತದೊಂದಿಗೆ ಪ್ರತಿಷ್ಠಿತರಿದ್ದಾರೆ. ನಾಟ್ಯವಾಡುತ್ತಿರುವ ನಟರಾಜ.... ಒಂದೊಂದೂ ಅದ್ಭುತವಾದ ಕೆತ್ತನೆ, ಹೋಲಿಸಲಾಗಲೀ, ವರ್ಣಿಸಲಾಗಲಿ, ಶಬ್ದಗಳಿಗೆ ನಿಲುಕದಂತಿವೆ.
ಈ ವೈಭವಗಳನ್ನೆಲ್ಲಾ ನೋಡಿ ದಂಗಾಗಿ ಒಳಗೆ ಹೋದರೆ, ಈಶ್ವರ ಲಿಂಗ, ಅಗ್ನಿ ಸಾಲಿಗ್ರಾಮ ಕಲ್ಲಿನದು. ಇದನ್ನು ನೇಪಾಳದಿಂದ ತರಲಾಯಿತೆಂದು ಪ್ರತೀತಿ, ಆದ್ದರಿಂದ ಇಲ್ಲಿ ಲಿಂಗ ಗುಂಡಗೆ ಕಡೆದ ಆಕಾರದಲ್ಲಿಲ್ಲ. ಪ್ರಾಕೃತಿಕವಾಗೇ ಇದೆ. ಜನವರಿ ೧೪ರಂದು ಸೂರ್ಯನ ಮೊದಲ ಕಿರಣಗಳು ಲಿಂಗದ ಮೇಲೆ ಬಿದ್ದು ಪ್ರಜ್ವಲಿಸುವುದಂತೆ. ಈಶ್ವರನ ಬಲ ಭಾಗದಲ್ಲಿ ಉರಿಯುತ್ತಿರುವ ನಂದಾ ದೀಪವು ಶತಮಾನಗಳಿಂದಲೂ ಉರಿಯುತ್ತಿದೆಯಂತೆ. ಈಶ್ವರನ ಗರ್ಭಗುಡಿಯ ಹೊರಗೆ ಸುಮಾರು ೬ ಅಡಿಯ ಕುಳಿತಿರುವ ಮುದ್ದಾದ ಸರಸ್ವತಿಯ ವಿಗ್ರಹ ನಮ್ಮನ್ನು ಮೋಡಿ ಮಾಡತ್ತೆ.
ಕೈಯಲ್ಲಿ ವೀಣೆ ಇಲ್ಲದಿರುವುದೇ ಇಲ್ಲಿಯ ವಿಶೇಷ. ಪುಸ್ತಕ ಹಿಡಿದಿರುವ ಸರಸ್ವತಿ ಅತ್ಯಂತ ವೈಭವವಾದ ಕಲೆಯಾಗಿ ಅರಳಿದೆ. ಮುದ್ದಾದ ನಗು ಮೊಗ.. ತುಂಬಾ ಚೆನ್ನಾಗಿದೆ. ಇಲ್ಲಿ ಪೂಜೆ ಮಾಡಿ ಅಲ್ಲಿಗೆ ಭೇಟಿ ಕೊಟ್ಟ ಎಲ್ಲ ಹೆಣ್ಣು ಮಕ್ಕಳಿಗೂ ದೇವಿಗೆ ಅರ್ಪಿಸಿದ, ಹಸಿರು
ಬಳೆಗಳು ಮತ್ತು ಮಡಿಲಕ್ಕಿ ಪ್ರಸಾದವೆಂದು ಒಂದು ಬೊಗಸೆ ಅಕ್ಕಿ ಕೊಡುತ್ತಾರೆ..... ದೇವಾಲಯದ ಸುತ್ತಲೂ ಇರುವ ಹಸಿರು ಹೊನ್ನ ಸಿರಿ, ಇಡೀ ವಾತಾವರಣವನ್ನೇ ಮನೋಹರವನ್ನಾಗಿಸಿದೆ. ನಾವು ಅಲ್ಲಿಗೆ ಹೋದಾಗ ಅದು ಸೂರ್ಯಾಸ್ತದ ಸಮಯವಾಗಿತ್ತು.
ಅಸ್ತಮ ಸೂರ್ಯನ ಹಿನ್ನೆಲೆಯಲ್ಲಿ ಕಲಾ ವೈಭವ ಅಪರೂಪದ ದೃಶ್ಯವಾಗಿತ್ತು....
ಮನಸ್ಸು ತುಂಬಿಕೊಂಡು ನೇರವಾಗಿ ಭದ್ರಾವತಿ ತಲುಪಿದೆವು. ಬೆಳಿಗ್ಗೆ ಎದ್ದು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟೆವು. ಇದೂ ಕೂಡ ಹೊಯ್ಸಳ ಶೈಲಿಯದೇ ೧೩ನೇ ಶತಮಾನದಲ್ಲಿ ನಿರ್ಮಾಣಗೊಂಡಿತೆಂದು ತಿಳಿದು ಬರತ್ತೆ. ಮುಜರಾಯಿ ಇಲಾಖೆಗೆ ಸೇರಿದ್ದರೂ ಇಲ್ಲಿ, ಭಕ್ತರ ಸಹಾಯದಿಂದ ಈಗ ಸ್ವಲ್ಪ ಸ್ವಚ್ಛತೆಯ ಕೆಲಸ ನಡೆದಿದೆ. ಆದರೆ ದೇವಾಲಯದ ಹೊರಗೆ ಇರುವ ಕೆತ್ತನೆಯ ಅನೇಕ ಮೂರ್ತಿಗಳು ಭಗ್ನಗೊಂಡಿವೆ. ಚೆನ್ನಾಗಿರುವ ಇನ್ನು ಕೆಲವು... ವಿಘ್ನೇಶ್ವರ, ಸರಸ್ವತಿ, ಆಂಜನೇಯ, ಮಹಾವಿಷ್ಣು ವಿಗ್ರಹಗಳು, ಸ್ಥಳೀಯರು ಹಚ್ಚಿಡುವ ಎಳ್ಳೆಣ್ಣೆ ಹಣತೆಗಳಿಂದ ಜಿಡ್ಡುಗಟ್ಟಿ, ಕೊಳೆಯಾಗಿ ಅಸಹ್ಯವಾಗಿದೆ. ಒಳಗೆ ಚನ್ನಕೇಶವ, ಗೋಪಾಲಕೃಷ್ಣ, ಬೆಣ್ಣೆ ಗಣಪತಿ ಮತ್ತು ಶಾರದಾಂಬೆ ಇದ್ದಾರೆ. ಇಲ್ಲಿಯೂ ಶಾರದೆಯ ಕೈಯಲ್ಲಿ ವೀಣೆ ಇಲ್ಲದೆ, ಪುಸ್ತಕ ಇದೆ.... ಶೃಂಗೇರಿ ಬಿಟ್ಟರೆ ಇಲ್ಲಿಯ ಶಾರದೆಯೇ ಸುಂದರವಾಗಿರುವುದೆಂಬ ಪ್ರತೀತಿ.....
ನಾವು ವಾಪಸ್ಸು ಬೆಂಗಳೂರಿಗೆ ಹೊರಟು ದಾರಿಯಲ್ಲಿ ತಿಪಟೂರು ತಾಲ್ಲೂಕಿನಲ್ಲಿರುವ "ಹತ್ಯಾಳ ಬೆಟ್ಟ"ದಲ್ಲಿ ಉಗ್ರ ನರಸಿಂಹನ ದೇವಸ್ಥಾನ ನೋಡಿದೆವು. ಬೆಟ್ಟದ ಮೇಲೆ ಮುಕ್ಕಾಲು ದೂರ ವಾಹನ ಹೋಗತ್ತೆ. ಸ್ವಲ್ಪ ದೂರ ಮೇಲೆ ಹತ್ತಬೇಕು. ಸುಂದರವಾದ ವಿಗ್ರಹ. ಹಿರಣ್ಯಕಶಿಪುವನ್ನು ತೊಡೆಯ ಮೇಲೆ ಹಾಕಿಕೊಂಡು ಉದರ ಸೀಳಿರುವ ಮೂರ್ತಿಯಂತೆ. ಸ್ವಯಂಭು ಎನ್ನುತ್ತಾರೆ ಮತ್ತು ವಿಗ್ರಹದಲ್ಲಿ ನರಸಿಂಹನ ಉಗುರುಗಳನ್ನೂ ನೋಡಬಹುದೆನ್ನುತ್ತಾರೆ. ಆದರೆ ಭಾನುವಾರವಾದ್ದರಿಂದ ಸ್ವಲ್ಪ ಜನ ಜಂಗುಳಿಯೂ ಇತ್ತು ಮತ್ತು ಚೆನ್ನಾಗಿ ತುಂಬ ಹೂವು ಹಾಕಿ ಅಲಂಕಾರ ಮಾಡಿಬಿಟ್ಟಿದ್ದರು. ಹಾಗಾಗಿ ನಮಗೆ ಬೆಳ್ಳಿಯ ಮುಖವಾಡ ಧರಿಸಿದ್ದ ಸ್ವಾಮಿಯ ದರ್ಶನ ಮಾತ್ರವಾಯಿತು. ಪಕ್ಕದಲ್ಲೆಲ್ಲಾ ಗಣಿಗಾರಿಕೆ ಭರದಿಂದ ನಡೆಯುತ್ತಿದೆ. ಇಲ್ಲಿರುವ ಪ್ರಾಕೃತಿಕ ಸೌಂದರ್ಯಕ್ಕೆ ಯಾವಾಗ ಕೊಡಲಿ ಬೀಳತ್ತೋ ಎಂದು ಯೋಚಿಸುತ್ತಾ ಅಲ್ಲಿಂದ ಹೊರಟು,
ಉಗ್ರಂ ವೀರಂ ಮಹಾವಿಷ್ಣುಂ, ಜ್ವಲಂತಂ ಸರ್ವತೋಮುಖಂ
ನೃಸಿಂಹಂ ಭೀಷಣಂ ಭದ್ರಂ, ಮೃತ್ಯುಂ ಮೃತ್ಯುಂ ನಮಾಮ್ಯಹಂ
ಎಂದೆನ್ನುತ್ತಾ ಬೆಂಗಳೂರು ತಲುಪಿದೆವು.
Comments
ಉ: ಪ್ರವಾಸ ಕಥನ