ಇದು ಹತ್ತಿಯಲ್ಲಾ...ಆದ್ರೆ..

ಇದು ಹತ್ತಿಯಲ್ಲಾ...ಆದ್ರೆ..

ನನ್ನನ್ನು ನಾನೇ ಹೊಗಳಿಕೊಳ್ಳಲು ಮನಸ್ಸಿಲ್ಲ. ಹಾಗೆಂದು ಸತ್ಯ ಹೇಳದಿರುವುದೂ ತಪ್ಪಾಗುತ್ತದೆ. ಆದ್ದರಿಂದ ಹೇಳುತ್ತಿದ್ದೇನೆ : ೩೫ ವರ್ಷಕ್ಕೂ ಮೊದಲು...... ಸ್ಕೂಲ್ ತರಗತಿಗಳಾದ ಮೇಲೆ, ಕತ್ತಲಾಗುವುದಕ್ಕೂ ಮೊದಲು, ನನ್ನ ಟೀಮು ಹಾಗೂ ಪಕ್ಕದ ಬೀದಿಯ ಟೀಮಿಗೂ ನಡುವೆ ೧೦-೧೦ ಓವರ್‌ನ ಕ್ರಿಕೆಟ್ ಮ್ಯಾಚ್ ದಿನವೂ ನಡೆಯುತ್ತಿತ್ತು. ಟೀಮಿನ ೫ ಬೌಲರ್‌ಗಳು ಎರಡೆರಡು ಓವರ್ ಬೌಲ್ ಮಾಡಬೇಕು. ಮ್ಯಾಚ್ ಆರಂಭವಾಗುವ ಮೊದಲು, ಎರಡೂ ಟೀಮಿನ ನಡುವೆ ಆಟಗಾರರನ್ನು ಕೊಡುಕೊಳ್ಳುವಿಕೆ(ಹಣಕ್ಕಲ್ಲ) ನಡೆಯುತ್ತಿತ್ತು. ಈವಾಗ ಇದನ್ನೇ ಸ್ವಲ್ಪ ಮಾರ್ಪಾಡಿಸಿ ೨೦-೨೦ / IPL / ಬಿಡ್ಡಿಂಗ್ ಎಂದೆಲ್ಲಾ ಕರೆಯುತ್ತಾರೆ. ಮೋದಿಯನ್ನು ಹೊಗಳಿಹೊಗಳಿ ಹಣ ಎಣಿಸುತ್ತಿದ್ದಾರೆ. ನನ್ನನ್ನು ೨೦-೨೦ಯ ಪಿತಾಮಹ ಎಂದು ಕರೆಯಬೇಕಾಗಿಲ್ಲ. ವಿಷಯ ಎಲ್ಲರಿಗೂ ಗೊತ್ತಿರಲಿ ಎಂದು ಹೇಳಿದೆ ಅಷ್ಟೇ.. ಈಗಿನ ೨೦-೨೦ಯಲ್ಲಿ ಕೆಲ "ಯುವ" ಆಟಗಾರರ ಗಮನವೆಲ್ಲಾ ಪೆವಿಲಿಯನ್ ಕಡೆ ಹೇಗೆ ಇರುತ್ತಿತ್ತೋ, ನಮ್ಮ ೧೦-೧೦ ನಲ್ಲೂ ಹುಡುಗರ ಗಮನ ಬೇರೆ ಕಡೆ ಹೋಗುತ್ತಿತ್ತು!! ಹಾಗೆ ಅವರನ್ನು ಸೆಳೆಯುತ್ತಿದ್ದುದೇ-- ಅಜ್ಜನ ಗಡ್ಡ! ಎಲ್ಲಿಂದಲೋ ಗಾಳಿಯಲ್ಲಿ ತೇಲುತ್ತಾ ಬಂದಾಗ-ಕೆಲವರು ಅದನ್ನು ಹಿಡಿಯಲು ಪ್ರಯತ್ನಿಸಿದರೆ, ಕೆಲವರು ಅದನ್ನು ಊದಿ ಊದಿ ಇನ್ನೂ ಮೇಲಕ್ಕೆ ಹಾರಿಸುತ್ತಿದ್ದರು. ಮೇಲೆ ಮೇಲೆ ಹಾರಿಸಿ ಅದು ಕಣ್ಮರೆಯಾಗುವವರೆಗೂ ಅದನ್ನು ಬೆನ್ನಟ್ಟುತ್ತಿದ್ದರು. ನಂತರ ಅವರನ್ನೆಲ್ಲಾ ಬೈದು ಒಟ್ಟು ಸೇರಿಸಿ ಆಟ ಮುಂದುವರಿಸಬೇಕಾಗುತ್ತಿತ್ತು. ನಮ್ಮ ಆಟವನ್ನು ಕೆಡಿಸಲು ಈ ಅಜ್ಜನಗಡ್ಡವನ್ನು ಬಿಡುತ್ತಿರುವ ಮರ ಯಾವುದೆಂದು ಇಬ್ಬರೂ ಕ್ಯಾಪ್ಟನ್‌ಗಳು ಸುತ್ತಲೂ ಹುಡುಕಾಡಿದೆವು......... ಸಿಕ್ಕಲೇ ಇಲ್ಲ. ೩೫ ವರ್ಷಗಳ ನಂತರ (ನಮ್ಮ ತನಿಖಾ ಆಯೋಗಗಳಂತೆ) ತನಿಖೆ ಮುಗಿಸಿ ಈವಾಗ ಅದರ ವರದಿ ತಯಾರಾಗಿದೆ-ಸದನದಲ್ಲಿ ಅಲ್ಲ ಸಂಪದದಲ್ಲಿ ಮಂಡಿಸುತ್ತಿರುವೆ- ಅದು ಮರವಲ್ಲ!! Asclepias curassavica ಎಂಬ shrub. ಅದರ ಫಲ ಕಾಗೆಯಕೊಕ್ಕಿನ ತರಹ ಇರುವುದರಿಂದ ಅದನ್ನು ಸಂಸ್ಕೃತದಲ್ಲಿ "ಕಾಕ ತುಂಡೀ" (ತುಂಡ=ಕೊಕ್ಕು) ಎನ್ನುವರು. ಬಣ್ಣಬಣ್ಣದ ಸುಂದರ ಪುಷ್ಪಗಳು. ಫಲದೊಳಗೆ ಹೊರಗೆ ಹಾರಲು ಪ್ಯಾರಚ್ಯೂಟ್ ವ್ಯವಸ್ಠೆಯಿರುವ ಅನೇಕ ಬೀಜಗಳು-ಇವೇ ನಾವಾಗ ಕರೆಯುತ್ತಿದ್ದ ಅಜ್ಜನಗಡ್ಡಗಳು! -ಗಣೇಶ.

Rating
No votes yet

Comments