'ನನ್ನ ಪ್ರೀತಿಯ ಭಾರತ' - ಜಿಮ್ ಕಾರ್ಬೆಟ್ ಪುಸ್ತಕ

'ನನ್ನ ಪ್ರೀತಿಯ ಭಾರತ' - ಜಿಮ್ ಕಾರ್ಬೆಟ್ ಪುಸ್ತಕ

ಜಿಮ್   ಕಾರ್ಬೆಟ್    ವನ್ಯಪ್ರಾಣಿಗಳ  ಕುರಿತು   ಬಹಳ  ಪುಸ್ತಕಗಳನ್ನು  ಬರೆದಿದ್ದು ಜನಪ್ರಿಯರಾಗಿದ್ದಾರೆ  .     'ನನ್ನ   ಪ್ರೀತಿಯ ಭಾರತ'  ಪುಸ್ತಕದಲ್ಲೂ  ಅಡವಿಯ ಪ್ರಾಣಿಗಳ ಬಗ್ಗೆ  ಬರೆದಿರುವರಾದರೂ  ಈ  ಪುಸ್ತಕದ ಮುಖ್ಯ ವಸ್ತು  ನಮ್ಮ ದೇಶದ ಹಳ್ಳಿಗಾಡಿನ  ಜನರು. ಭಾರತದ ದೀನದಲಿತರ ಸರಳ ಜೀವನ , ಅವರ ಸಹಜ ಪ್ರಾಮಾಣಿಕತೆ , ನಿಷ್ಠೆ  , ಮಾನವೀಯತೆಗಳಿಗೆ ಮಾರುಹೋದ    ಕಾರ್ಬೆಟ್   ತಮ್ಮ ಜೀವನದ ಕೆಲವು ಘಟನೆಗಳ  ಮೂಲಕ   ತುಂಬ ಸಹಾನುಭೂತಿಯಿಂದ ಮತ್ತು  ಪ್ರೀತಿಯಿಂದ ಅವರ ಬದುಕನ್ನು    ಚಿತ್ರಿಸಿದ್ದಾರೆ .   

ಸಮರ್ಥ ಬೇಟೆಗಾರರಾದ ಅವರು ಜನರನ್ನು ಮತ್ತು ಪ್ರಾಣಿಗಳನ್ನು       ಪ್ರೀತಿಸಿದರು. ಮನುಷ್ಯರ  ರಕ್ತದ ರುಚಿಕಂಡು  ಮನುಷ್ಯರ  ಮೇಲೆರಗುವ  ನರಭಕ್ಷಕಪ್ರಾಣಿಗಳನ್ನು    ಮಾತ್ರ   ಕೊಲ್ಲಲಾರಂಭಿಸಿದರು. ಪ್ರಾಣಿಗಳನ್ನು ಕೊಲ್ಲಲೇಬೇಕಾಗಿ ಬಂದಾಗಲೂ   ಅವುಗಳಿಗೆ ನೋವಾಗದಂತೆ  ಕ್ಷಣಮಾತ್ರದಲ್ಲಿ ಕೊಲ್ಲಬೇಕು ಎಂಬುದು ಅವರ ನೀತಿ.

ಅವರು  ಈ  ಪುಸ್ತಕದ  ಅರ್ಪಣೆಯಲ್ಲಿ   ಹೇಳುತ್ತಾರೆ-  ನಾನು  ಬದುಕಿ ಬಾಳಿದ ಭಾರತದಲ್ಲಿ  ಶೇಕಡ ೯೦  ಮಂದಿ  ಸರಳಸ್ವಭಾವದವರು, ಪ್ರಾಮಾಣಿಕರು, ಧೈರ್ಯವಂತರು ಹಾಗೂ  ನಿಷ್ಠಾವಂತರಾಗಿದ್ದು   ಕಷ್ಟಪಟ್ಟು  ದುಡಿಯುವವರು . ದೇವರಲ್ಲಿ   ಮತ್ತು ಅಧಿಕಾರದಲ್ಲಿರುವ  ಯಾವುದೇ ಸರಕಾರಕ್ಕೆ  ಇವರ ಪ್ರಾರ್ಥನೆಯೆಂದರೆ   ತಮ್ಮ ಜೀವ ಮತ್ತು ಆಸ್ತಿಪಾಸ್ತಿಗಳ    ರಕ್ಷಣೆಯೊಂದಿಗೆ  ತಮ್ಮ  ದುಡಿಮೆಯ  ಫಲ ದ  ಅನುಭೋಗಕ್ಕೆ  ಅವಕಾಶ  ಕೋರುವುದಷ್ಟೇ , ನಿಸ್ಸಂಶಯವಾಗಿ ಬಡವರಾಗಿರುವ,  'ಹಸಿವಿನಿಂದ  ಕಂಗಾಲರಾಗಿರುವ ಭಾರತದ  ಜನಕೋಟಿ ' ಎಂದೇ  ಕರೆಯಲ್ಪಡುವ ಈ ಜನರ ನಡುವೆ ನಾನು ಜೀವನ ನಡೆಸಿದ್ದೇನೆ. ನಾನು ಪ್ರೀತಿಸುವ ಇವರನ್ನು  ಕುರಿತು ಹೇಳಲು   ಈ ಕೃತಿಯಲ್ಲಿ   ಪ್ರಯತ್ನಿಸಿದ್ದೇನೆ.ನನ್ನ  ಆತ್ಮೀಯರಾದ ಭಾರತ ಬಡಜನತೆಗೆ  ಈ ಕೃತಿಯನ್ನು   ವಿನೀತನಾಗಿ ಅರ್ಪಿಸುತ್ತೇನೆ.'




ಈ    ಪುಸ್ತಕದಿಂದ ಕೆಲವು ಭಾಗ ಗಳನ್ನು    ನಿಮಗೆ ಕೊಟ್ಟಿದ್ದೇನೆ.

ಭಾರತದಲ್ಲಿ  , ಅದರಲ್ಲೂ   ನಾವು  ವಾಸಿಸುವ ಭಾಗದಲ್ಲಿ   ,  ಹೆಂಗಸರು  ತಮ್ಮ ಗಂಡಂದಿರ ಹೆಸರು ಹೇಳುವುದಿಲ್ಲ. ಮಕ್ಕಳಾಗುವುದಕ್ಕೆ ಮುಂಚೆ   'ನಮ್ಮ ಗಂಡಸರು'  ಎಂದೂ     ಆಮೇಲೆ  ಮೊದಲನೆಯ ಮಗುವನ್ನು  ಹೆಸರಿಸಿ   'ಆ ಮಗುವಿನ ತಂದೆ  '  ಎಂದೂ  ಕರೆಯುತ್ತಾರೆ. ಮೋತಿಗೆ ಈಗ ಮೂರು ಮಕ್ಕಳು   ಅವರಲ್ಲಿ ಪುಣ್ವನೇ  ದೊಡ್ದವನು.  ಆದುದರಿಂದ  ಹೆಂಡತಿಗೆ  ಮೋತಿ 'ಪುಣ್ವನ ತಂದೆ'.  ಹಳ್ಳಿಯಲ್ಲಿ  ಇತರರಿಗೆ  ಮೋತಿಯ ಹೆಂಡತಿ   'ಪುಣ್ವನ ತಾಯಿ'.

 ಉಳಿದೆಲ್ಲ  ಕೆಲಸಗಳ ಜತೆಗೆ   ನ್ಯಾಯ ನೀಡುತ್ತಿದ್ದ   ಒಬ್ಬ  ಬ್ರಿಟಿಷ್  ಅಧಿಕಾರಿ  ಆಂಡರ್ಸನ್  ಎಂಬವರ ಬಗ್ಗೆ    , ಅಲ್ಲಿನ ಒಂದು ಪ್ರಕರಣ ಸಹಿತ ವಾಗಿ    ಒಂದು ಅಧ್ಯಾಯ ಇದೆ. ಇವರು     ಕೂಲಂಕಷ ವಿಚಾರಿಸಿ   ಸರಿಯಾಗಿ ತೀರ್ಪು ಕೊಡುತ್ತಿದ್ದರಿಂದ   ಜನರ ಗೌರವಕ್ಕೆ ಪಾತ್ರರಾಗಿದ್ದರು. ಇವರು ಹಾಕಿದ  ದಂಡವನ್ನು ತೆರುತ್ತಿದ್ದರು . ಇವರು ವಿಧಿಸಿದ ಸೆರೆವಾಸವನ್ನು  ಅನುಭವಿಸಲು  ಹತ್ತಿರದ ಸೆರೆಮನೆಗೆ   ಹೋಗಿ ದಾಖಲೂ  ಆಗುತ್ತಿದ್ದರು!.  

 ಇಲ್ಲಿ   ಒಂದು   ಪ್ರಕರಣ ಇದೆ. ನೋಡಿ.  
ಚಾದಿ ಎಂಬುವನ ಹೆಂಡತಿ  ತಿಲ್ನಿ ಎಂಬುವಳ  ಜತೆಗೆ  ಕಾಳು ಎಂಬಾತ ಸ್ನೇಹ ಬೆಳೆಸಿ    ತಿಲ್ನಿ  ಕಾಳು   ಎಂಬವನ ಜತೆಗೆ  ಹೋಗಿ ಇದ್ದುಬಿಟ್ಟಿದ್ದಳು .  ಕಾಳು ತನ್ನ ಹೆಂಡತಿಯನ್ನು ಅಪಹರಿಸಿದ್ದಾನೆ ಎಂದು   ಚಾದಿಯ  ದೂರು .  ಈ  ಪ್ರಸಂಗದ  ವಿಚಾರಣೆಯ  ಸಮಯದಲ್ಲಿ ಏನೇನು ಆಗುತ್ತದೆ  ನೋಡೋಣ.  ಕಾಳು  ಈ ಆಪಾದನೆಗೆ ಉತ್ತರವಾಗಿ ತಾನು ಅವಳನ್ನು ಅಪಹರಿಸಿಲ್ಲ  ಎಂದೂ   ಆದರೆ  ಅವಳು ತನ್ನ  ಗುಡಿಸಲಿನಲ್ಲಿ ಇರುತ್ತಿದ್ದಾಳೆ  ಎಂದೂ  ತಿಳಿಸುತ್ತಾನೆ. ಅವಳನ್ನು ಅವಳ  ಗಂಡನಿಗೆ  ಒಪ್ಪಿಸಲು  ಸಿದ್ಧನಿದ್ದೀಯಾ ಎಂಬ ಪ್ರಶ್ನೆಗೆ ಅವಳು ಅವಳಾಗೇ    ಬಂದಿದ್ದಾಳೆ . ಗಂಡನ  ಬಳಿ  ಮರಳುವಂತೆ ತಾನು ಬಲಾತ್ಕರಿಸುವುದು ಸಾಧ್ಯವಿಲ್ಲ  ಎಂದು  ಅವನ ಹೇಳಿಕೆ. ಆಗ   ಆಂಡರ್ಸನ್    ಅವಳನ್ನೇ   ವಿಚಾರಿಸುತ್ತಾರೆ.
ಅವಳು  'ನನ್ನ  ಗಂಡ   ಕಡುಲೋಭಿ , ಕೊಳಕ , ನನಗೇನನ್ನೂ    ಕೊಟ್ಟಿಲ್ಲ , ಕಾಳು  ಏನೇನೆಲ್ಲ  ಕೊಟ್ಟಿದ್ದಾನೆ.    ಗಂಡ ಚಾದಿಯ  ಬಳಿಗೆ ವಾಪಸು  ಹೋಗಲು  ಏನೇ   ಆಕರ್ಷಣೆ ಯೂ  ತನ್ನನ್ನು ಪ್ರೇರೇಪಿಸದು'  ಎಂದು   ಹೇಳುತ್ತಾಳೆ .
ಚಾದಿ  ಏನನ್ನುತ್ತಾನೆ  ?  - 'ನ್ಯಾಯಕ್ಕಾಗಿ ನಿಮ್ಮ ಹತ್ತಿರ ಬಂದಿದ್ದೇನೆ.   ಒಂದು ವೇಳೆ   ಅವಳನ್ನು ನನ್ನ   ಬಳಿ ಬಂದು ಇರುವಂತೆ   ಮಾಡಲಾಗದಿದ್ದರೆ   ನನಗೆ ಪರಿಹಾರ  ಕೊಡಿಸಬೇಕು'.    
ಅವನ ಅಪೇಕ್ಷೆ   ನೂರ ಐವತ್ತು ರೂಪಾಯಿ.  ನೆರೆದ ಜನ   'ಅವನು ಬಹಳ   ಬೇಡುತ್ತಿದ್ದಾನೆ','ವಿಪರೀತ ಜಾಸ್ತಿ' , 'ಅವಳು ಅಷ್ಟು    ಬೆಲೆ ಬಾಳುವದಿಲ್ಲ '  ಎಂದೆಲ್ಲ   ಉದ್ಗರಿಸುತ್ತಾರೆ.
ಕಾಳುವನ್ನು   'ನೂರೈವತ್ತು ರೂಪಾಯಿ ಕೊದಲು ಒಪ್ಪುತ್ತೀಯಾ' ಅಂತ ಕೇಳಿದರೆ , ಅವನು ' ಎಲ್ಲರಿಗೂ ಗೊತ್ತಿರುವಂತೆ  ಚಾದಿ  ತಿಲ್ನಿಗೆ   ಮದುವೆ ಸಮಯದಲ್ಲಿ  ನೂರು ರೂಪಾಯಿ ಮಾತ್ರ ಕೊಟ್ಟಿದ್ದಾನೆ .  ಆಗ ಅವಳು ಇನ್ನೂ  ಕನ್ಯೆಯಾಗಿದ್ದಳು, ಈಗ   ಹಾಗಿಲ್ಲದೆ ಇರುವುದರಿಂದ  ಹೆಚ್ಚೆಂದರೆ  ತಾನು ಐವತ್ತು  ರೂಪಾಯಿ ಕೊಡಲು  ಸಿದ್ಧ'  ಎಂದು ಹೇಳಿದ.  ಕೊನೆಗೆ   ಆಂಡರ್ಸನ್    ತಿಲ್ನಿಯ ಬೆಲೆ  ಎಪ್ಪತ್ತೈದು ರೂಪಾಯಿ ಎಂದು ನಿಗದಿ ಮಾಡಿ  ಚಾದಿಗೆ  ಈ ಹಣ  ಕೊಡುವಂತೆ   ಕಾಳುವಿಗೆ ಅಪ್ಪಣೆ ಮಾಡಿದರು.    ಕಾಳು ತನ್ನ   ಬಳಿ ಇದ್ದ ಹಣ ಎಣಿಸಲಾಗಿ ಇದ್ದದ್ದು ೫೨  ರೂಪಾಯಿ.  ಕೊನೆಗೆ ಅವನ ಗೆಳೆಯರು ಸಹಾಯಕ್ಕೆ ಬಂದು  ಉಳಿದ ಹಣ ಸೇರಿಸಿ  ಚಾದಿಗೆ   ಕೊಟ್ಟು   ಎಣಿಸಿಕೊಳ್ಳಲು ಹೇಳಲಾಯಿತು. ಅವನು ಅದನ್ನು ಎಣಿಸಿ   ಸರಿಯಾಗಿದೆ ಎಂದ.

ಇಷ್ಟು   ಹೊತ್ತಿಗೆ    ಇನ್ನೊಬ್ಬ ಹೆಂಗಸು ಎದ್ದು ನಿಂತು 'ಮಾನ್ಯರೇ , ನನಗೆ ಏನು ಹೇಳುತ್ತೀರಿ? ' ಎಂದು ಕೇಳಿದಳು . ಅವಳು   ಕಾಳುವಿನ ಹೆಂಡತಿ. ಕಾಯಿಲೆಯವಳು,  ಕಾಳು  ಈಗ ಬೇರೊಬ್ಬಳ  ಜತೆ ಇರುವುದರಿಂದ  ತನಗೆ ಮನೆ ಇಲ್ಲವಾಗಿ  , ತನಗೆ ಬೇರೆ ನೆಂಟರಿಷ್ಟರೂ   ಇಲ್ಲದೆ , ಖಾಯಿಲೆಯಿಂದಾಗಿ ಕೆಲಸ  ಮಾಡಲೂ   ಆಗದೆ , ನೋಡಿಕೊಳ್ಳುವವರೂ ಇಲ್ಲದೆ  ,  ಹಸಿವು ನಿರ್ಲಕ್ಷ್ಯಗಳಿಂದ ತಾನು ಸಾಯಬೇಕಾಗುವುದೆಂದು ಹೇಳಿದಳು.  ಈ  ಹೊಸ ತೊಡಕನ್ನು ಬಿಡಿಸುವುದು ಹೇಗೆ ?
ಆಗ   ತಿಲ್ನಿ      ಓಡಿಬಂದು ಅವಳನ್ನಪ್ಪಿಕೊಂಡು  ' ಅಳಬೇಡ , ಅಕ್ಕ  ,  ಅಳಬೇಡ. ನಿನಗೆ  ಮನೆ  ಇಲ್ಲವೆನ್ನಬೇಡ , ನನ್ನ ಗುಡಿಸಲನ್ನು  ನಿನ್ನೊಂದಿಗೆ ಹಂಚಿಕೊಳ್ಳುತ್ತೇನೆ. ನಿನ್ನನ್ನು   ನಾನು ನೋಡಿಕೊಳ್ಳುತ್ತೇನೆ. ಕಾಳು  ನನಗೆ ಕೊಡುವುದರಲ್ಲೆಲ್ಲಾ  ಅರ್ಧಭಾಗ  ನಿನಗೆ  ಕೊಡುತ್ತೇನೆ, ನನ್ನ  ಮನೆಗೆ  ಬಾ'  ಎಂದು  ಈ  ತೊಡಕನ್ನು ಬಗೆಹರಿಸಿದಳು.  ಅಂದಿನ ಕಾರ್ಯಕಲಾಪ   ಇಷ್ಟಕ್ಕೆ   ಮುಗಿಯಿತೇ ?  ಇಲ್ಲ  .
   ಆಗ   ಚಾದಿ   ಆಂಡರ್ಸನ್   ಬಳಿ ಬಂದು ತನ್ನ ಅರ್ಜಿ  ಹಿಂತಿರುಗಿಸಿ ಕೇಳಿಕೊಂಡು  ಅದನ್ನು ಪಡೆದು  ಹರಿದುಹಾಕಿದ . ಎಪ್ಪತ್ತೈದು  ರೂಪಾಯಿಗಳ  ಗಂಟನ್ನು  ತೆಗೆದು -'ಕಾಳು ಮತ್ತು ನಾನು ಒಂದೇ  ಹಳ್ಳಿಯವರು . ಅವನು ಈಗ  ಇಬ್ಬರಿಗೆ ಅನ್ನ ಹಾಕಬೇಕು. ಅದರಲ್ಲಿ ಒಬ್ಬರಿಗೆ ವಿಶೇಷ  ಆಹಾರ  ಒದಗಿಸಬೇಕು. ಅವನಿಗೆ ಹಣ  ಬೇಕು. ಆದುದರಿಂದ ಮಾನ್ಯರೇ ,  ಈ ಹಣ  ಅವನಿಗೆ ಹಿಂದಿರುಗಿಸಲು  ನನಗೆ ಅಪ್ಪಣೆ ನೀಡಿ' ಎಂದ.

ಮತ್ತೊಂದೆಡೆ   ಜಿಮ್        ಅಡವಿಯಲ್ಲಿ  ದಾರಿ ತಪ್ಪಿಸಿಕೊಂಡ   ಮಕ್ಕಳು  ಎಪ್ಪತ್ತೇಳು  ಗಂಟೆಯ ನಂತರ  ಕೊಂಚವೂ   ತೊಂದರೆ ಇಲ್ಲದೆ   ಪತ್ತೆಯಾಗುವುದನ್ನು ಹೇಳುತ್ತ , ಒಂದು ತಿಂಗಳ   ಪ್ರಾಯದ ಆಡಿನ ಮರಿಯೊಂದು  ಹುಲಿಯ  ಹತ್ತಿರವೇ  ಮೂಗು ತಗಲುವ ಹಾಗೆ ನಿಂತಿದ್ದು ,  ಹುಲಿಯು   ಮರಳಿ ಹೋದದ್ದನ್ನು ಹೇಳುತ್ತ    ಹೀಗೆ ಹೇಳುತ್ತಾರೆ - ( ಅದು ಎರಡನೇ  ಮಹಾಯುದ್ಧದ   ಸಮಯ) ಬ್ರಿಟಿಷ್   ಅಧಿಕಾರಿಗಳು  ಎದುರಾಳಿಗಳನ್ನು   ಅವರು 'ಅರಣ್ಯ ನಿಯಮ'ವನ್ನು ಜಾರಿಗೆ ತರುತ್ತಿರುವುದಾಗಿ ಆಪಾದಿಸಿದ್ದರು.  ಸೃಷ್ಟಿಕರ್ತ  ವನ್ಯಮೃಗಗಳ ಅನುಸರಣೆಗೆ  ವಿಧಿಸುವ ನಿಯಮವನ್ನೇ  ಮನುಷ್ಯನಿಗೂ  ವಿಧಿಸಿದ್ದರೆ ಯುದ್ಧಗಳೇ  ಆಗುತ್ತಿರಲಿಲ್ಲ.  ಏಕೆಂದರೆ  ಅರಣ್ಯಗಳಲ್ಲಿ ಅನೂಚಾನವಾಗಿ    ಬಳಕೆಯಲ್ಲಿರುವ ಪದ್ಧತಿಯಂತೆಯೇ  ಅತಿಶಕ್ತನಾದ ಮನುಷ್ಯ  ಅಶಕ್ತನಾದವನ ಬಗ್ಗೆ ಅನುಕಂಪವನ್ನು ತೋರುತ್ತಿದ್ದ.


ಇನ್ನೊಂದು ಅಧ್ಯಾಯದಲ್ಲಿ    ಜಿಮ್  ಕಾರ್ಬೆಟ್   ಚಮರಿ ಎಂಬ  ಹರಿಜನರಲ್ಲಿ ಅತ್ಯಂತ ಕೆಳವರ್ಗಕ್ಕೆ  ಸೇರಿದವನ ವಿಷಯ ಬರೆಯುತ್ತಾರೆ . ಮೊದಲಿಗೆ  ಅವನು ಇವರ ಹತ್ತಿರ ಕೆಲಸ ಕೇಳಿಕೊಂಡು ಬಂದಾಗ  ಕೆಲಸ ಕೊಡುತ್ತಾರೆ.   ನಂತರ ಅವನನ್ನು    ಮೇಸ್ತ್ರಿಯನ್ನಾಗಿ ಮಾಡುತ್ತಾರೆ . ಅವನು ತುಂಬ ಪ್ರಾಮಾಣಿಕವಾಗಿ ಕಷ್ಟಪಟ್ಟು    ಕೆಲಸ  ಮಾಡುತ್ತಿದ್ದ .  ಅವನ ಕೆಳಗೆ  ಬಹಳ ಜನ ಕೆಲಸಮಾಡುತ್ತಿದ್ದರು. ಯಾರ ಮನಸ್ಸನ್ನೂ  ಅವನು ನೋಯಿಸುತ್ತಿರಲಿಲ್ಲ. ಅವನ ಅಧಿಕಾರವನ್ನೂ  ಯಾರೂ  ಎಂದೂ ಪ್ರಶ್ನಿಸಲಿಲ್ಲ.  ಅವನ ಪ್ರಾರಂಭದ ವೇತನ ೧೫  ರೂಪಾಯಿ ನಂತರ  ನಲವತ್ತಕ್ಕೇರಿತು.  ಭಾರತದಲ್ಲಿ   ಒಬ್ಬರಿಗೆ ಸಲ್ಲುವ  ಗೌರವ  ಅವರ ವೇತನ ಮತ್ತು ಅದನ್ನು  ವಿನಿಯೋಗಿಸುವ ರೀತಿಯನ್ನು ಅವಲಂಬಿಸಿರುತ್ತದೆ. ಹೆಚ್ಚು   ವೇತನದಿಂದಾಗಿ   ಚಮರಿ  ನನಾ ಜಾತಿ ಕೋಮಿನವರಿಂದ  ಗೌರವಿಸಲ್ಪಡುತ್ತಿದ್ದ.   ಅದನ್ನು   ವಿನಿಯೋಗಿಸುತ್ತಿದ್ದ   ರೀತಿಯಿಂದಾಗಿ  ಆತ  ಇನ್ನೂ  ಹೆಚ್ಚು  ಗೌರವಕ್ಕೆ   ಪಾತ್ರನಾಗಿದ್ದ .  ಹಸಿವೆ  ಎಂದರೇನೆಂದು  ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಚಮರಿ  ತಾನು ಯಾರಿಗಾದರೂ ಸಹಾಯ ಮಾಡಲು ಸಾ ಧ್ಯವಿದ್ದರೆ , ತಾನು ತೊಂದರೆಪಟ್ಟಿದ್ದಂತೆ , ಅವರುಗಳೂ    ತೊಂದರೆಗೊಳಗಾಗದಂತೆ   ನೋಡಿಕೊಳ್ಳುವುದು  ತನ್ನ  ಕರ್ತವ್ಯವೆಂದು  ಭಾವಿಸಿದ್ದ. ತನ್ನ  ಖರ್ಚನ್ನು ತನ್ನ ಮೊದಲಿನ ಜೀವನದ  ಮಟ್ಟಕ್ಕೆ   ತಕ್ಕಂತೆ  ಇರುವುದಕ್ಕೆ    ಸೀಮಿತವಾಗಿಟ್ಟುಕೊಂಡಿದ್ದನು. ಅವನ ಮನೆಗೆ  ಬಂದವರೆಲ್ಲರೂ  ಅವನ ಊಟದಲ್ಲಿ ಪಾಲ್ಗೊಳ್ಳಬಹುದಿತ್ತು.  ಜಾತಿಯ ಕಾರಣದಿಂದ  ಅವನ ಹೆಂಡತಿಯ ಕೈಯಡುಗೆ   ಉಣ್ಣದಿದ್ದವರಿಗೆ  ಅಡುಗೆ ಮಾಡಿಕೊಳ್ಳಲು     ಬೇಕಾದ  ಎಲ್ಲ  ಸಾಮಾನುಗಳನ್ನು    ಒದಗಿಸುತ್ತಿದ್ದನು.

ಕೊನೆಗೆ  ಅವನ  ಆರೋಗ್ಯ  ಹದಗೆಟ್ಟು  ತೀರಿಕೊಳ್ಳುವಾಗ   ಎಲ್ಲ  ಕೋಮಿನ ಜನರು  ಅವನ ಸುತ್ತ ಸೇರಿದ್ದರು. ಸಾಯುವ ಮೊದಲು  ಕಾರ್ಬೆಟ್ ರನ್ನು ನೋಡಿ    'ಮಹಾರಾಜರೇ  ನನ್ನನ್ನು     ಪರಮೇಶ್ವರನು ಕರೆಯುತ್ತಿದ್ದಾನೆ , ನಾನು ಹೋಗಬೇಕು'  ಎಂದು ಹೇಳಿದನು.  ತನ್ನ ಎರಡೂ   ಕೈಗಳನ್ನು  ಸೇರಿಸಿ  , ತಲೆ  ಬಗ್ಗಿಸಿ  'ಪರಮೇಶ್ವರಾ , ನಾನು ಬರುತ್ತಿದ್ದೇನೆ' ಎಂದು ಹೇಳಿದನು .  ನಂತರ  ಜೀವ ಹಾರಿಹೋಯಿತು.
ಅಲ್ಲಿದ್ದ ಎಲ್ಲ  ಕೋಮಿನ ಸುಮಾರು ನೂರು ಜನರು ಚಮರಿ ಆಡಿದ ಕೊನೆಯ ಮಾತುಗಳನ್ನು   ಕೇಳಿದರು.  ಅವರಲ್ಲಿ   ಒಬ್ಬ ಅಪರಿಚಿತ   ಇದ್ದನು.   ಆತನ  ಹಣೆಯ ಮೇಲೆ  ಜಾತಿ ಸೂಚಕ  ಶ್ರೀಗಂಧ ದ ನಾಮವಿತ್ತು. ಆತ   ತೀರಿಕೊಂಡವನ ಹೆಸರು ಕೇಳಿದ.  ಕಾರ್ಬೆಟ್   'ಅವನು ಚಮರಿ'  ಎಂದು ಹೇಳಿದಾಗ   'ನಾನು ಕಾಶಿಯಲ್ಲಿರುವ  ಮಹಾವಿಷ್ಣು ದೇವಾಲಯದ ಅರ್ಚಕ . ಮುಖ್ಯ ಪುರೋಹಿತರದ ನನ್ನ ಯಜಮಾನರು  ಈತನು ಮಾಡುತ್ತಿದ್ದ   ಒಳ್ಳೆಯ   ಕಾರ್ಯಗಳನ್ನೆಲ್ಲ   ಕೇಳಿ  ಈತನನ್ನು    ಪತ್ತೆ ಮಾಡಿ ದೇವಾಲಯಕ್ಕೆ ಕರೆತರಲು  ನನ್ನನ್ನು  ಕಳಿಸಿದ್ದರು. ಚಮರಿಯ ದರ್ಶನ ಮಾಡಲು  ಅವರು  ಬಯಸಿದ್ದರು.    ಈಗ  ನಾನು ಹಿಂದಿರುಗಿ   ಚಮರಿ  ಇನ್ನಿಲ್ಲವಾದುದನ್ನೂ   , ಅವನು ಸಾಯುವ ಮುನ್ನ ಹೇಳಿದ್ದನ್ನೂ     ಅವರಿಗೆ ತಿಳಿಸುತ್ತೇನೆ ' ಎಂದು  ಹೇಳಿ  , ಹಾಕಿಕೊಂಡಿದ್ದ   ಪಾದರಕ್ಷೆಗಳನ್ನು ತೆಗೆದು , ಆ ಬ್ರಾಹ್ಮಣಪುರೋಹಿತ   ಚಮರಿಯ ಕಾಲಬಳಿ ಬಂದು  ,  ಸತ್ತುಹೋಗಿದ್ದ   ಆ ಹರಿಜನ ಜಾತಿಯ  ಅಂತ್ಯಜನಿಗೆ  ಪ್ರಣಾಮ ಮಾಡಿದರು.

ಚಮರಿಗೆ ಆದಂತಹ  ಶವಸಂಸ್ಕಾರ  ಆ ಪ್ರದೇಶದಲ್ಲಿ  ಬೇರೆ ಯಾರಿಗೂ ಎಂದೆಂದಿಗೂ  ಆಗುವುದಿಲ್ಲ.  ಎಲ್ಲ  ಜಾತಿಪಂಥಗಳವರು ಮೇಲುಕೀಳೆನ್ನದೆ , ಬಡವಬಲ್ಲಿದರೆನ್ನದೆ, ಹಿಂದು ಮಹಮ್ಮದೀಯ ಹರಿಜನ ಕ್ರಿಶ್ಚಿಯನ್  ಎಂಬ ಬೇಧಭಾವವಿಲ್ಲದೆ   ಆತನ  ಕೊನೆಯ ದರ್ಶನ  ಪಡೆದು ತಮ್ಮ ಗೌರವ ಸೂಚಿಸಲು  ಬಂದರು .
'ಅವನು  ಸತ್ತ ಮೇಲೆ  ಹೋಗಿರಬಹುದಾದ   ಜಾಗಕ್ಕೆ  ಹೋಗುವ  ಸುಯೋಗ ನನಗೆ  ದೊರಕಿದ್ದೇ  ಆದರೆ ನಾನು ತೃಪ್ತಿಪಡುತ್ತೇನೆ' ಎಂದು ಕಾರ್ಬೆಟ್  ಹೇಳುತ್ತಾರೆ.  


ಈ  ಒಳ್ಳೆಯ  ಪುಸ್ತಕ  ನೀವು ಓದಬಯಸಿದರೆ   ಅದು ಇಲ್ಲಿದೆ.  http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010067834   
 


 
 





Rating
No votes yet

Comments