ಹವ್ಯಕರೇ ಉದಾಹರಣೆಯಾದರೇಕೆ??

ಹವ್ಯಕರೇ ಉದಾಹರಣೆಯಾದರೇಕೆ??

ಇಂದು  ಬೆಳಗ್ಗೆ ಹಾಸ್ಟೆಲ್  ತಿಂಡಿ ಮುಗಿಸಿ ಪೇಪರ್ ಓದುತ್ತಿದ್ದೆ. ಪಕ್ಕದಲ್ಲೇ ಕುಳಿತವಳು ಸಂಯುಕ್ತ ಕರ್ನಾಟಕ ಓದುತ್ತಿದ್ದಳು. ನಿನ್ನದು ಓದಿ ಆದ ನಂತರ ನನಗೆ ಕೊಡು ಎಂದು ಬುಕ್ ಮಾಡಿದೆ. ಒಮ್ಮೆಲೇ ಅವಳು ನೀವು ಹವ್ಯಕರೇ ಅಲ್ವಾ ಅಂತ ಕೇಳ್ಬೇಕಾ.. ಹ್ಮ್ಮ್ ಅಂದೆ. ಏನು ಹೀಗೆ ಕೇಳಿದಳಲ್ಲ, ಎಂದು ಅವಳನ್ನೊಮ್ಮೆ ದಿಟ್ಟಿಸಿ ನೋಡಿದೆ. ಆಗ ಅವಳು”ಅಲ್ಲ ನಿಮ್ಮಲ್ಲಿ ಪೇಪರ್ ಅಲ್ಲೆಲ್ಲ ಬರೋವಷ್ಟರ ಮಟ್ಟಿಗೆ ಹುಡುಗಿಯರು ಕಡಿಮೆಯಾಗಿದಾರಾ ಅಂದಳು. ಏನು ಉತ್ತರಿಸದೆ ಪ್ರಶ್ನಾರ್ಥಕವಾಗಿ ಅವಳನ್ನೇ ನೋಡಿದೆ. ಪೇಪರ್ ಕೈಗಿತ್ತು ಹೋದಳು.

ಓಹ್!! ನೋಡಿದರೆ,” ವಧು ಬೇಕಾಗಿದ್ದಾರೆ” ಎಂದು ದೊಡ್ಡದಾಗಿ ಬರೆದಿತ್ತು ಶ್ರೀಮತಿ ಕೆ.ಎಚ್.ಸಾವಿತ್ರಿಯವರ ಜೀವನ್ಮುಖಿ ಕಾಲಂನಲ್ಲಿ!! ಅಲ್ಲಿ ಹವ್ಯಕರಲ್ಲಿ ವಧುಗಳಿಗೆ ಕೊರತೆ ಎನ್ನೋ ಉದಾಹರಣೆಗಳು. ಹವ್ಯಕರೇ ಏಕೆ ಉದಾಹರಣೆಯಾಗುತ್ತಿದ್ದಾರೆ? ಬೇರೆಯವರಲ್ಲಿ ಉದಾಹರಣೆಗಳಿಲ್ಲವೇ?ಕಾರಣಗಳು ಕಾಣುತ್ತಿರುವುದೆಲ್ಲ ಹವ್ಯಕರಲ್ಲೇ ಜಾಸ್ತಿಯಾಗಿದೆಯೇ? ಎನ್ನೋ ಪ್ರಶ್ನೆಗಳು. ೨ ವರುಷಗಳ ಹಿಂದೆಯೇ ಈ ಟಿವಿ ಹೆಡ್ಲೈನ್ ಅಲ್ಲಿ “ಹವ್ಯಕರಲ್ಲಿ ವಧುಗಳ ಕೊರತೆ, ವರರಿಗೆ ಮದುವೆಯ ಚಿಂತೆ” ಎಂದು ದೊಡ್ಡದಾಗಿ ಕೊಟ್ಟಿದ್ದರು. ಮತ್ತೊಮ್ಮೆ ಸಾಪ್ತಾಹಿಕ ವಿಜಯದಲ್ಲೂ ಪುಟವೆಲ್ಲ ಇದೇ ವಿಷ್ಯ!ಹೀಗೆ ಮನೆ ಮಾತಾಗುವ ಮಟ್ಟಕ್ಕಿಳಿಯಿತೇ?

ಈ ಹವ್ಯಕರಲ್ಲಿ ವರದಕ್ಷಿಣೆ ಪದ್ಧತಿ ಇಲ್ಲ. ತಂದೆ ತಾಯಿಯರಿಗೆ ಮದುವೆ ಖರ್ಚನ್ನು ನಿಭಾಯಿಸಿದರಾಯಿತು. ಏನೂ ಬೇಡಿಕೆಗಳಿಲ್ಲದೆ ಹುಡುಗಿಯುರನ್ನು ಮನೆ ಸೊಸೆಯನ್ನಾಗಿ ಮಾಡಿಕೊಳ್ಳುತ್ತಾರೆ. ಇನ್ನೊಂದು ಇವರಲ್ಲಿ ಕಲಿಯದ ಹುಡುಗಿಯರೇ ಇಲ್ಲ. ಹೆಚ್ಚಿನವರೂ ಡಿಗ್ರಿ ಪೂರ್ಣ ಮಾಡಿರುತ್ತಾರೆ. ಹೆತ್ತವರೂ ಮದುವೆಗೆ, ಮೊದಲಾಗಿ ಹುಡುಕುವುದು ಡಾಕ್ಟರ್, ಇಂಜಿನಿಯರ್ ಗಳನ್ನೇ.. ಅದೂ ಹಳ್ಳಿಗಳಲ್ಲಿ ಇರುವವರಾಗದು. ಬೆಂಗಳೂರು, ಮಂಗಳೂರು ಹೀಗೇ ಬೇಕು!. ಇಲ್ಲಿ ಜಾತಕ ಹೊಂದಬೇಕು, ಅಂತಸ್ತು ಹೊಂದಬೇಕು. ಹೈಟ್, ವೈಟ್ , ಕಲರ್ ಎಲ್ಲಾ ಮೊದಲಿಗೆ ಹುಡುಕುತ್ತಾರೆ. ಮತ್ತೆ ಮತ್ತೆ ಸ್ವಲ್ಪ ಇದರ ಬಗ್ಗೆ ಗಮನ ಕಡಿಮೆಯಾಗುತ್ತದೆ. ಹುಡುಗಿಯರ ತಂದೆ ತಾಯಂದಿರು ಮನದಲ್ಲಿ ಮೂಡಿಸುವ ಕಲ್ಪನೆಯೇ ಅಂತಹದ್ದು. ಅಂಥವರನ್ನು ಮದುವೆಯಾಗಿ ಸಿಟಿಯಲ್ಲಿದ್ದರೇನೇ ನಿನಗೆ ಸುಖ ಜೀವನ. ಇಲ್ಲದಿದ್ದಲ್ಲಿ ನಮ್ಮ ಹಾಗೇ ಕಷ್ಟ ಪಡಬೇಕು. ಚೆನ್ನಾಗಿ ಓದಿದರೆ ನಮಗೆ ಅಂತಸ್ತಿಲ್ಲದಿದ್ದರೂ ಅದೆಲ್ಲವಿರುವ ಮನೆ ಸಿಗುತ್ತದೆ.. ಹೀಗೆ ಸಾಗುತ್ತದೆ ಉಪದೇಶಗಳು.ಎಲ್ಲಾ ಓದಿಸಿರುವ ತಂದೆ ತಾಯಂದಿರ ಹಿಂದೆ ಹೀಗೊಂದು ಸ್ವಾರ್ಥವಿದ್ದೇ ಇರುತ್ತದೆ!.ಮತ್ತೆ ಅತ್ತೆ, ಮಾವ ಇಲ್ಲದ ಮನೆಯಾದರೆ ಒಳ್ಳೆಯದು. ಇಬ್ಬರೇ ಬೇಕಾದ ಹಾಗೆ ಹಾಯಾಗಿರಬಹುದು. ಬೆಂಗಳೂರಿನಲ್ಲಿರೋ ಹುಡುಗರನ್ನ ಹುಡುಕುವುದರಲ್ಲಿ ಇದೇ ಮಖ್ಯ ಕಾರಣವಾಗಿರಬಹುದು. ಅತ್ತೆ ಮಾವನವರು ಊರು ಬಿಟ್ಟು ಬರೋಲ್ಲ. ಬೆಂಗಳೂರಿನ ಮನೆಯಲ್ಲಿ ಇಬ್ಬರದೇ ಕಾರುಬಾರು!.

ಹಾಗೆಂದು ಓದಿರುವ ಹುಡುಗರಲ್ಲಿ, ಅನೇಕರು ಅವರಾಗಿಯೇ ಹುಡುಗಿಯನ್ನು ಹುಡುಕೋ ಸಾಹಸಕ್ಕೇ ಕೈ ಹಾಕ್ಕೋಲ್ಲ! ತಂದೆ ತಾಯಿ ಹೇಳಿದ್ದಕ್ಕೆ ಯೆಸ್! ಹೀಗೊಂದಾಯಿತು.. ಹುಡುಗ ಎಂ.ಬಿ.ಎ..ಡಿಪ್ಲೊಮ ಕಲಿತ ಹುಡುಗಿಯ ಬಗ್ಗೆ ಕೇಳಿದರು. ಮಾತುಕತೆ ಮುಂದುವರಿಸಲಿಲ್ಲ, ಯಾಕೆ ಗೊತ್ತೇ ಅವ್ರಿಬ್ಬರೇ ಹೆಣ್ಣುಮಕ್ಕಳು. ಮನೆಯಲ್ಲಿ ಗಂಡು ಮಕ್ಕಳಿರಲಿಲ್ಲವೆಂದಂತೆ! ಓದಿರುವ ಹುಡುಗ ಇಂಥಾ ಬೇಡಿಕೆಗಳೆಲ್ಲ ಇಡುವುದೇ?ಅಲ್ಲಾ..  ಇದು ಅವನಿಗೆ ತಿಳಿಯದೇ ಮಾಡಿರುವ ಹೆತ್ತವರ ಲೆಕ್ಕಾಚಾರವೇ?? ಈ ರೀತಿಯೆಲ್ಲ ಹುಡುಕಿದರೆ ಮೊದಲೇ ಹುಡುಗಿಯರು ಕಡಿಮೆಯಿರುವಲ್ಲಿ ಸಿಗುವುದಾದರೂ ಹೇಗೆ??

ಮತ್ತೊಂದು,  ಹಳ್ಳಿಯಲ್ಲಿ ವಾಸ. ಅವರ ಮಗಳು ಮಾಡಿದ್ದು ಎಂ.ಎ.! ಇಂಜಿನಿರ್ ಕಲಿತು  ಕೃಷಿಯಲ್ಲಿ ಆಸಕ್ತಿಯಿದ್ದು ಊರಿಗೆ ಕಾಲಿಟ್ಟ ಹುಡುಗರ ಸಂಭಂದಗಳೂ ಬಂದರೂ, ಕೊಡದ, ಬೆಂಗಳೂರಿನ ಭ್ರಮೆಯಲ್ಲಿ ಡಿಪ್ಲೊಮ ಇಂಜಿನಿರ್ ಗೆ ಮದುವೆ ಮಾಡಿದರು. ಈಗ  ಅವರ ಮಗನ ಮದುವೆಯ ಸರದಿ.. ಎಲ್ಲರೊಂದಿಗೂ ಬೇಸರ  ತೋಡಿ ಕೊಳ್ಳುವಂತಾಗಿದೆ. ಹುಡುಗ ಕಲಿಕೆಯಲ್ಲಿ ಮುಂದಿದ್ದ ಎಂ. ಎಸ್ಸಿ ಅಗ್ರಿಕಲ್ಚ್ರ್ ಮಾಡಿ ತೋಟ ಎಂದು ಊರಲ್ಲೇ ಸೆಟಲ್ ಆದವ! ಎಷ್ಟೇ ಇದ್ದರೂ, ಮಗನಿಗೆ ಹುಡುಗಿ ಸಿಗುತ್ತಿಲ್ಲ, ಅತ್ತೆ ಮಾವನವರು ಇರಬಾರದಂತೆ, ನಾವೆಲ್ಲಿ ಹೋಗಲಿ?, ಬಿ.ಎ ಆದವರಿಗೂ ಬೇಡವಂತೆ!. ಹುಡುಗಿಯರನ್ನು ಕೊಡುತಿಲ್ಲವಲ್ಲಾ.. ಹಳ್ಳಿಯಾದರೇನಂತೆ, ಎಲ್ಲಾ ಸೌಕರ್ಯಗಳಿದೆ. ಆದರೂ ಏಕೆ ಹೀಗೆ ಎಂದು ಹೇಳಿಕೊಳ್ಳುವಂತಾಗಿದೆ. ಅದೇ ಅವರ ಮಗಳ ಮದುವೆ ವಿಚಾರದಲ್ಲಿ ಅವರು ಮಾಡಿದ್ದೇನು? ಅದನ್ನೇ ಬೇರೆಯವರು ಮಾಡುತ್ತಿದ್ದಾರೆ ಅಷ್ಟೆ!. ಅಲ್ಲೊಂದು ಸ್ವಲ್ಪ ಯೋಚಿಸುತ್ತಿದ್ದರೆ ಅವರ ಮಗನಿಗೂ ಹುಡುಗಿ ಸಿಗುತ್ತಿತ್ತು! ಅಣ್ಣನವರು ಅಪ್ಪ ಅಮ್ಮನ ಜೊತೆಗೆ ಊರಲ್ಲೇ ಇರುತ್ತಾರೆ. ತಮ್ಮನವರಿಗೆ ಮದುವೆಯಾಗುತ್ತಿದೆ!!

ಈಗಂತೂ ಈ ನಿರ್ಬಂಧ ಬೇಡಿಕೆಗಳಿಗೆಲ್ಲಾ ಬೇಸತ್ತ ಹುಡುಗರು ಇನ್ನೇನು ಮಾಡುವುದೆಂದು, ಬೇರೆ ಜಾತಿ, ಅನಾಥ ಆಶ್ರಮದ ಹುಡುಗಿಯರಾದರೂ ಆದೀತೆಂದು ಮದುವೆಯಾಗುತ್ತಿದ್ದಾರೆ!. ಹವ್ಯಕರಲ್ಲಿನ್ನೊಂದು,ಇಂಥಹ ಕಠಿಣ ಕಾಲದಲ್ಲೂ ಅದೇ ಭಾಷೆ,ಅದೇ ಜಾತಿ, ಬೇರೆ ಗೋತ್ರ(ಅದೇ ಗೋತ್ರ ಇದ್ದಲ್ಲಿ ಮದುವೆಯಾಗುವುದಿಲ್ಲ)ಇದ್ದರೂ ಒಪ್ಪಿರುವ ಮನಗಳಿಗೆ ಮದುವೆಯಾಗಲು ಬಿಡದವರು!. ಓದಿರುವ ಹುಡುಗಿಯರಿಗೆ ಹಳ್ಳಿ ಹುಡುಗನೇ ಇಷ್ಟವಾದರೂ, ಬೇರೆ ಉದ್ಯೋಗದವರಿಷ್ಟವಾದರೂ, ಮನೆಯಲ್ಲಿ ಹೇಳಿ ಒಪ್ಪಿಸಲು ನೋಡಿದರೆ, ನಿನಗೇನು ತಲೆ ಕೆಟ್ಟಿದೆಯೇ?. ಇಷ್ಟು ಓದಿ, ಅಂಥವನೇ ಬೇಕೆನ್ನುತ್ತಿದ್ದೀಯಲ್ಲಾ.. ಎನ್ನೋ ಸಹಸ್ರ ನಾಮ!! ಸಮಾಜ ಏನನ್ನುತ್ತೆ ಗೊತ್ತಾ ಎನ್ನೋ ಉಪದೇಶ!!

ಒಟ್ಟಾರೆ ಸಮಾಜದಲ್ಲಿ ಹುಡುಗಿಯರು ಕಡಿಮೆಯಾಗಿದ್ದಾರೇನೋ ನಿಜ!, ಆದರೆ ಇಲ್ಲೊಂದು ರೀತಿಯ ಬೇಡವಾದ ಬೆಳವಣಿಗೆ , ಈ ಹುಡುಗಿಯರ ಸಂಖ್ಯೆ ಕಡಿಮೆಯಾದುದನ್ನು ಎತ್ತಿ ಹಿಡಿಯುವಂತೆ ಮಾಡುತ್ತಿದೆ!.ಬದಲಾಗಬೇಕಿದೆ ಮನಸ್ಸಿನೊಳಗಣ ಈ ವಿಚಾರ ದೃಷ್ಟಿ!!. ಈಗ ಇಂಥಾ ವಿಚಾರ ಒಳಪುಟದಲ್ಲಿ ಬಂದಿದೆ, ಅದು ಮುಖಪುಟದಲ್ಲಿ ಉದಾಹರಣೆಯಾಗುವ ಮೊದಲೇ ಹವ್ಯಕರ ಮನ ಎಚ್ಚೆತ್ತುಕೊಳ್ಳಬೇಕಿದೆ..!!

-ನಲ್ಮೆಯಿಂದ

ದಿವ್ಯ

Rating
No votes yet

Comments