ಮದುವೆಯಾಗಿ ಸಾಧಿಸುವುದಾದರೂ ಏನು??

ಮದುವೆಯಾಗಿ ಸಾಧಿಸುವುದಾದರೂ ಏನು??

ಮೊನ್ನೆ ಮೈಸೂರಿನಲ್ಲಿದ್ದ ಚಿಕ್ಕಪ್ಪನ ಮಗಳ ಹಾಸ್ಟೆಲ್ ಗೆ ಹೋಗಿದ್ದೆ. ಅವಳು ಅಲ್ಲೇ ಕಂಪೆನಿಯೊಂದರಲ್ಲಿ ವರ್ಕ್ ಮಾಡುತ್ತಿದ್ದಳು. ಈ ಮದುವೆಯೆಂಬ ಕ್ಯೂ ನಲ್ಲಿ ನಮ್ಮಿಬ್ಬರನ್ನು ನಿಲ್ಲಿಸಿದ್ದರು. ದೊಡ್ಡವರಿಗೆ ಯೋಚಿಸಲು ಬೇರೇನಿದೆ? ಇದು ಬಿಟ್ಟರೆ!?? ನಮ್ಮ ಮಾತುಕತೆಗಳ ನಡುವೆ ಈ ಮದುವೆಯ ವಿಷಯವೂ ಹರಿದಾಡಿತು. ಕೇಳಿದೆ ಅವಳಲ್ಲಿ “ಮದ್ವೆಗೆ ರೆಡಿನಾ..? ಹುಡುಗ್ರು ಕೇಳ್ತಿದಾರಂತೆ”.. ಅಂದೆ. ಅದಕ್ಕವಳು “ನಿನ್ನದಾಗ್ಲಿ.. ಮತ್ತೆನೇ ನಂದು, ಆದ್ರೂ ಯೋಚಿಸ್ಬೇಕು!”ಅಂತೆಲ್ಲಾ ಹೇಳುತ್ತಾ. ಒಂದು ಪ್ರಶ್ನೆ ಮುಂದಿಟ್ಟಳು..

“ಮದುವೆಯಾಗಿ ಸಾಧಿಸುವುದಾದರೂ ಏನು?? ” ಈ ಪ್ರಶ್ನೆ ಕೇಳಿದಾಗ “ನನಗೇನು ಗೊತ್ತು ಇನ್ನೂ ಮದುವೆನೇ ಅಗಿಲ್ಲ.. ಆದವ್ರನ್ನ ಕೇಳ್ಬೇಕಪ್ಪ” ಅಂದು ಪ್ರಶ್ನೆಯಿಂದ ಎಸ್ಕೇಪ್ ಆದೆ. ಮತ್ತೆ ಮದುವೆ ಮಾತು ಅಲ್ಲಿಗೆ ಸ್ಟಾಪ್ ಆಯ್ತು! ಅಲ್ಲಿಂದ ಶುರುವಾಯ್ತು. ಆ ಪ್ರಶ್ನೆ ನನ್ನ ತಲೆಯೆಲ್ಲಾ ಕೊರೀತಿದೆ. ಯಾಕಾಗ್ಬೇಕು? ಆಗಿ ಸಾಧಿಸುವುದೇನು? ಬರುವಾಗ ೩ ಗಂಟೆ ಬಸ್ಸಲ್ಲಿ ಇದೇ ಯೋಚನೆ, ಹಾಗೊಂದು ಮದುವೆ, ಮದುವೆ ಅಂತ ಹೇಳ್ತಿರ್ತಾರಲ್ಲ ಆಗಿ ಸಾಧಿಸುವುದಾದರೂ ಏನು?

ಮನಸ್ಸು ಅಪ್ಪ ಅಮ್ಮನ್ನೇ ಎಕ್ಸಾಮ್ಪಲ್ ತಕ್ಕೊಂದು ಯೋಚಿಸೋಕೆ ಪ್ರಾರಂಭಿಸಿತು.ಅವ್ರಿಬ್ರು ಮದ್ವೆಯಾಗಿ ನಾವಿಬ್ರು ಹುಟ್ಟಿದೆವು.ಇದು ಸಾಧನೆಯಾ? ಅಲ್ವಲ್ಲಾ.. ಮತ್ತೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದು, ಇದು ಸಾಧಿಸಿದ್ದಾ? “ಮುಹು” ಅಲ್ಲ! ಯಾಕಂದ್ರೆ ವಿದ್ಯಾಭ್ಯಾಸ ಮದುವೆ ಆಗದೇನು ಕೊಡಿಸೋ ಮನಸ್ಸಿದ್ದರೆ ಓದಿಸಬಹುದು. ಮತ್ತೆ ಅಜ್ಜ ಮದುವೆ ಮಾಡಿ  ತಲೆಲಿದ್ದ ಭಾರ ಇಳಿಸಿದ್ದು! ಒಂದು ಜನ ಕಡಿಮೆ ಆಯಿತಲ್ಲ? ಇದಾಗಿರಬಹುದೇ?.ಆದರೆ, ಮನೆ ಅಜ್ಜನ ತಲೆಲಿ ಭಾರ ಜಾಸ್ತಿ ಆಯ್ತಲ್ಲ! ಜನ ಒಂದು ಹೆಚ್ಚಾಯ್ತು! ಮತ್ತೇನು ಮದುವೆ ಅಂತ ಅಮ್ಮನಿಗೊಂದಿಷ್ಟು ಒಡವೆ ಜಾಸ್ತಿ ಆಯ್ತು.. ಇದು ಉತ್ತರವಲ್ಲ, ಯಾಕೆಂದರೆ, ಮದುವೆಯಾಗದೆಯೆ ನಾವೇ ದುಡಿದು ಪಡೆದು ಒಡವೆ ಮಾಡಿಸ್ಕೋಬಹುದು. ಒಂದು ಸಮಾರಂಭಕ್ಕಾಗಿಯೇ? ಊಟಕ್ಕಾಗಿಯೇ? ಮನಸ್ಸಿನ ಭಾವನೆಗಳನ್ನ ಹಂಚಿ ಕೊಳ್ಳುವುದಕ್ಕಾಗಿಯೇ? ಮದುವೆಯಾಗುವಲ್ಲಿ ವರೆಗೆ ಯಾರ ಜೊತೆ ಹಂಚಿದರು? ಹಂಚಿದರೂ ಅದು ಸಾಧನೆಯೇ? ಮತ್ತೇತಕ್ಕೀ ಮದುವೆ??

ನನ್ನ ಹಾಸ್ಟೆಲ್ ಗೆ ಬಂದ ನಂತರವೂ ತಲೆಯಲ್ಲಿದೇ ಕೊರೆತ!! ಅಲ್ಲ ಓದು ಮುಗಿಯುವ ಮೊದಲೇ ಕೆಲ್ಸಕ್ಕೆ ಸೇರೋ ಮೊದ್ಲೇನೆ.. ಮದುವೆ ಮದುವೆ ಅಂತಾರಲ್ಲ.. ಆಗಿ ಸಾಧಿಸುವುದಾದರೂ ಏನು..? ಅಪ್ಪನಿಗೆ ರಿಂಗಾಯಿಸಿದೆ.. ಅದೇ ಪ್ರಶ್ನೆ.. ಅದೇನೋ ಮಾತೆಲ್ಲೋ ಬೇರೆ ಕಡೆ ತೂರಿಸಿ ಹಾರಿಸಿ ಬಿಟ್ಟರು. ಅಮ್ಮನಲ್ಲಿ.. ಸಾಧನೆ.. ನನ್ಗೊತ್ತಿಲ್ಲ. ಮದ್ವೆ ಮಾಡಿಸಿದ್ರು.. ಆದ್ವಿ! ಇವತ್ತು ಊರಿಗೆ ಫೋನಾಯಿಸಿದ್ದೆ.. ಚಿಕ್ಕಮ್ಮನಲ್ಲಿ ಮಾತಾಡುತ್ತಾ ನೇರವಾಗಿ ಕೇಳಿದೆ ಮದುವೆಯಾಗಲು ಒತ್ತಡ ಹಾಕ್ತೀರಲ್ಲ  ನೀವೆಲ್ಲ ಆಗಿ ಏನು ಸಾಧಿಸಿದ್ರಿ? ಏನೂ ಸಾಧಿಸ್ಲಿಲ್ಲ ದೋಸೆ ಹುಯ್ದಿದ್ದು, ಆಡುಗೆ ಮಾಡಿದ್ದು! ಮದುವೆಗೆ ಮುಂಚಿನ ಜೀವನವೇ ಚೆನ್ನಾಗಿತ್ತೆಂದರು.  ಅಜ್ಜಿಗೆ ಫೋನ್ ಕೊಡಿ ಎಂದು ಹೇಳಿ ಅಜ್ಜಿ ಜೊತೇನೂ ಮಾತಾಡುತ್ತಾ ಇದೇ ಪ್ರಶ್ನೆ ಇಟ್ಟೆ. ಪಾಪ! ಅಜ್ಜಿಗೋ ಏನು ಹೇಳ್ಬೇಕಪ್ಪಾ ಇವಳಿಗೆ ಎಂಬ ಗೊಂದಲ ಯಾಕೆಂದ್ರೆ.. ಕಣ್ಣೆದುರೇನೇ ಇವಳ ಮದುವೆ ನೋಡ್ತೀನೋ ಇಲ್ವೋ ಎಂದು ಅಜ್ಜಿದೇ ಫೋರ್ಸು! ಈಗ ಅಜ್ಜಿಯೂ ಮೌನವಾದರು. “ಅಜ್ಜೀ..” ಪುನಃ ಕರೆದೆ.. ಆಗ… “ಏನು ಸಾಧಿಸ್ಲಿಲ್ಲ. ಒಂದು ಚೈನು ಸಿಕ್ಕಿತು ಅಷ್ಟೆ” ಎಂದರು.

ಇದೇ ಪ್ರಶ್ನೆಯನ್ನ ಫ್ರೆಂಡ್ಸ್ ಅಲ್ಲೂ ಕೇಳಿದ್ದೆ, ಅವಳು ಬೆಳಂಬೆಳಗ್ಗೆ ಆನ್ ಲೈನ್ ಸಿಕ್ಕಿ ಅದೇ ಕುಟ್ಟಬೇಕೇ.. ಸಿಕ್ತೇನೇ ಆನ್ಸರ್? ಅಂತೆ!! ಅಯ್ಯೋ ಎಲ್ಲಾ ಕೇಳಾಯ್ತು.. ಪ್ರಶ್ನೆ ಪ್ರಶ್ನೆಯಾಗಿಯೇ ಇದೆ..ಈಗ ನಿಮಗೂ ಅದೇ ಪ್ರಶ್ನೆ.. ಮದುವೆಯಾಗಿ ಸಾಧಿಸುವುದಾದರೂ ಏನು? ಹಾಗೆಂದು ಮದುವೆಯಾಗಬಾರದೆಂದು ಸೂಚಿಸುವ ಪ್ರಯತ್ನವಲ್ಲ, ಒಂದಲ್ಲ ಒಂದು ದಿನ ಆಗಲೇ ಬೇಕು. ಆದರೂ ಈ ಪ್ರಶ್ನೆಗೇಕೋ ಉತ್ತರ ಹುಡುಕಬೇಕೆಂದು ಅನಿಸುವುದಿಲ್ಲವೇ??

-ನಲ್ಮೆಯಿಂದ

ದಿವ್ಯ

Rating
No votes yet

Comments