ಒಂದೆರಡು ಸಾಲಿನ ಕಥೆಗಳು ಭಾಗ-1

ಒಂದೆರಡು ಸಾಲಿನ ಕಥೆಗಳು ಭಾಗ-1

ಇವುಗಳ ಮೂಲ ಇರುವುದು ನನ್ನ ಬ್ಲಾಗ್ ನಲ್ಲಿ :- http://shivagadag.blogspot.com


ಬಹಳ ದಿನಗಳವರೆಗೆ ಬ್ಲಾಗ್ ಕಡೆ ತಲೆ ಹಾಕಿರಲಿಲ್ಲ.. ಹಾಗಂದ್ರೆ, ಬ್ಲಾಗ್ ಮೇಲೆ ಇಂಟರೆಸ್ಟ್ ಹೋಗಿದೆ ಅಂತಲ್ಲಾ..
ಬ್ಲಾಗ್ ಬರೆಯೋಕೆ ಟೈಮ್ ಆಗಿರಲಿಲ್ಲ ಅಷ್ಟೆ.. ಅವಾಗವಾಗ ಟ್ವಿಟರ್ ನಲ್ಲಿ ದಿನಕ್ಕೊಂದು ಸಾಲು ಬರೀತಿದ್ದೆ.. ಈ ಕೆಲಸದ ಮಧ್ಯೆ ಏನೂ ಬರೆಯಲು ಆಗಿಲ್ಲ.. ಇತ್ತೀಚೆಗೆ ನಂಗೆ ಇಷ್ಟುದ್ದ ಕಥೆಗಿಂದ ಒಂದೆರಡು ಸಾಲಿನಲ್ಲಿ ಏನಾದ್ರೂ ಹಾಳು ಮೂಳು ಬರೆಯೋದು ಇಷ್ಟವಾಗ್ತಾ ಇದೆ.. ಆದ್ರೂ ಬ್ಲಾಗ್ ನ ಬಿಡಲ್ಲ.. ಹಾಗೇ ಸುಮ್ನೆ ಬಸ್ಸಿನಲ್ಲಿ-ರೈಲಿನಲ್ಲಿ ಹೋಗಬೇಕಾದ್ರೆ ಮನಸ್ಸಿಗೆ ಅನ್ಸಿದ್ದನ್ನು ಎರಡು ಸಾಲಿನಲ್ಲಿ ಗೀಚಿ ನೋಡೋಣಾ ವಿಜಯ ಕರ್ನಾಟಕಕ್ಕೆ ಕಳಿಸಿದೆ.. ಅದನ್ನು ದಿ: 17-01-2010 ರ ವಿಜಯ ಕರ್ನಾಟಕದಲ್ಲಿ ಪ್ರಕಟಿಸಿದ್ದಾರೆ.. (ಅವರ ಧೈರ್ಯವನ್ನು ಮೆಚ್ಚಬೇಕು.. ಕಥೆಗಳನ್ನು ಓದಿ ಪೇಪರ್ ನವರನ್ನು ಬೈದುಕೊಂಡರೆ, ಓದಿ ಅರ್ಥವಾಗದೇ ಕನ್ ಫ್ಯೂಸ್ ಆಗಿ ಹುಚ್ಚು ಹಿಡಿದರೆ, ಖಂಡಿತವಾಗಿ ನಾನು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ..ಹಾಗೂ ಯಾವುದೇ ವೈದ್ಯಕೀಯ ವೆಚ್ಚವನ್ನು ಭರಿಸುವುದಿಲ್ಲ..) ಬ್ಲಾಗ್ ನಲ್ಲಿ ಹಾಕ್ತಿದೀನಿ.. ಓದಿ ನೋಡಿ....

1) ಪ್ರೇಮಿಗಳ ಮಧ್ಯೆ ವಿರಸ ಉಂಟಾಯಿತು. ಅವನು ಕೊಟ್ಟ ಉಡುಗೊರೆಗಳನ್ನೆಲ್ಲಾ ವಾಪಸ್ ಮಾಡಿ, ತಾನು ಕೊಟ್ಟಿದ್ದನ್ನು ಕೇಳಿದಳು...

ಅವಳು ಕೊಟ್ಟ ಮುತ್ತುಗಳ ಲೆಕ್ಕ ಸಿಗದೆ ಹುಡುಗ ಸೋಲೊಪ್ಪಿಕೊಂಡ.. ಹುಡುಗಿಯಕೆನ್ನೆ ಕೆಂಪಾಯಿತು.. ಅಲ್ಲಿಗೆ ವಿರಸದ ಕಥೆ ಮುಗಿಯಿತು.

2) ಅವಳಿಗೆ ಫೋನ್ ಮಾಡಲು ಕಾರಣ ಸಿಗದೆ ಒದ್ದಾಡಿ ಹೋದ.. ತಕ್ಷಣ ಮಿದುಳಿನಲ್ಲೊಂದು ಮಿಂಚು ಸುಳಿಯಿತು.. ಇವತ್ತು ಅವನ ಮುತ್ತಜ್ಜಿ ಬರ್ಥಡೇ ಅಂತೆ..

3) ಪ್ರೀತಿಸುವ ತಾಯಿ ಸತ್ತಾಗ ಭೋರೆಂದು ಅತ್ತಿದ್ದ.. ಬದುಕು ಕಲಿಸಿದ ತಂದೆ ಸತ್ತಾಗ, ಒಂದು ಹನಿ ಕಣ್ಣೀರು ಬರಲಿಲ್ಲ..ಅಪ್ಪ ಕಲಿಸಿದ್ದು ಸಾರ್ಥಕವಾಗಿತ್ತು.. ಗಂಭೀರನಾದ ಅವನಲ್ಲಿ ಮೌನವೇ ಮಾತಾಗಿತ್ತು..

4) ಯಾರ ಮಾತೂ ಕೇಳದ ಅವನು ಅವಳ ಮಾತು ಕೇಳಿ ಪರೀಕ್ಷೆ ಬರೆದ.. Rank ಬಂದ ದಿನವೇ ಒಪ್ಪಂದದ ಪ್ರಕಾರ ಮೂರು ಮುತ್ತುಗಳನ್ನು ಪಡೆದುಕೊಂಡ
5) ಬಸ್ಸಿನಲ್ಲಿ ಎಫ್.ಎಂ. ಕೆಳುತ್ತಿದ್ದವಳಿಗೆ ಪಕ್ಕದಲ್ಲಿ ಕುಳಿತವ ಏನೋ ಹೇಳಿದ.. ಅವಳು ದುರುಗುಟ್ಟಿಕೊಂಡು ನೋಡಿ ಸುಮ್ಮನಾದಳು ಸೀಟಿನಿಂದ ಎದ್ದ ಕೂಡಲೇ ಮೊಳೆಗೆ ಸಿಲುಕಿದ್ದ ಸೀರೆ ಹರಿಯಿತು

"ನಾನು ಮೊದಲೇ ಹೇಳಿದೆ" ಎಂದು ಅವನು ಪಿಸುಗುಟ್ಟಿದ್ದು ಕೇಳಿಸಿತು..


6) ಕಣ್ಣೆದುರಿಗೇ ಅಪ್ಪ ಸತ್ತಿದ್ದ, ಅಮ್ಮ ಸತ್ತಿದ್ದಳು.. ಪ್ರಾಣ ಸ್ನೇಹಿತ ಸತ್ತಿದ್ದ.. ಇವಾಗ ಮಗ ಸತ್ತಿದಾನೆ.. ಈ ಹಾಳು ಸಮಾಜ ಕಣ್ಣೀರಾಕಲು ಬಿಡುತ್ತಿಲ್ಲ.. ಗಂಡಸರು ಅಳಬಾರದಂತೆ... "ಅಳುವ ಗಂಡಸನ್ನು ನಂಬಬೇಡ, ನಗುವ ಹೆಣ್ಣನ್ನು ನಂಬಬೇಡ" ಎಂಬ ಮಾತೇನಾದರೂ ಕೆಲಸ ಮಾಡುತ್ತಿದೆಯೇ? ಅಥವಾ ಅಳುವುದು ಹೆಣ್ಣುಮಕ್ಕಳಿಗೆ ಮಾತ್ರ ಟೆಂಡರ್ ಆಗಿದೆಯೇ?.

7) ಸ್ಕೂಲಲ್ಲಿ ಭೇಟಿಯಾದರು, ಜೊತೆಯಲ್ಲಿ ಆಡಿದರು, ಓದಿದರು, ಕಾಲೇಜು ಮೆಟ್ಟಿಲು ಹತ್ತಿದರು, ಪ್ರೀತಿಸಿಕೊಂಡರು, ಮದುವೆಯಾದರು..ಮಕ್ಕಳು-ಮೊಮ್ಮಕ್ಕಳಾದರೂ ಇವರ ಮದುವೆ ಆಸೆ ತೀರಿಲ್ಲ...ಇವರು ಮತ್ತೆ ಮದುವೆಯಾಗಲು ಹೊರಟಿದ್ದಾರೆ...ಕಂಗ್ರಾಟ್ಸ್ ಹೇಳಿ ಪ್ಲೀಸ್... ಅವರ ಷಷ್ಠಿ ಪೂರ್ತಿ ಚನ್ನಾಗಿರಲಿ ಅಂತಾ..

8) ಪೆನ್ನು ತಗೊಂಡೆ, ಪೇಪರ್ ತಗೊಂಡೆ, ಒಳ್ಳೆ ಸ್ಥಳ ಹುಡುಕಿ ಏಕಾಂತದಲ್ಲಿ ದಿನವೆಲ್ಲ ಕಳೆದರೂ ಅವಳ ವಿಷಯವನ್ನು ಬಿಟ್ಟು ಬೇರೆಯದನ್ನು ಬರೆಯಲು ಮನಸ್ಸು ಒಪ್ಪುತ್ತಿಲ್ಲ.. ಬಲವಂತ ಮಾಡಿದೆ.. ಮನಸ್ಸಿಗೆ ಜ್ವರ ಬಂತು.!!.

9) ಅವಳಿಗಾಗಿ ಕಷ್ಟಪಟ್ಟು, ತರಬೇತಿ ಪಡೆದೆ, ನದಿಯಲ್ಲಿದ್ದ ಚಿಪ್ಪುಗಳನ್ನು ಹೆಕ್ಕಿ ತಂದು, ಲಕ್ಷಾಂತರ ಬಂಡವಾಳ ಹಾಕಿ, ಕೃಷಿಕನಾಗಿ ಶಸ್ತಚಿಕಿತ್ಸೆ ಮಾಡಿ, ಕೆರೆಯ ನೀರಿನಲ್ಲಿ ಬಚ್ಚಿಟ್ಟು, ಹದಿನಾಲ್ಕು ತಿಂಗಳು ಕಾದ ನಂತರ ಅದರಲ್ಲಿದ್ದ ಸುಂದರವಾದ ಮುತ್ತೊಂದನು ಅವಳಿಗೆ ಪ್ರೆಸೆಂಟ್ ಮಾಡಿದೆ.. ನನಗೆ ಬೇಡವೆಂದು ವಾಪಸ್ ಮಾಡಿದ್ದಾಳೆ.. ನಾನು ಕೇಳಿದ್ದೇ ಬೇರೆ ಅಂತಾ ಕೆನ್ನೆ ತೋರಿಸಿದ್ದಾಳೆ...

10) ಕುಡಿದು ಬಿದ್ದ ಹಳೇ ಪ್ರಿಯಕರನನ್ನು ನೋಡಿ ನಕ್ಕಳು. ಅವನಿಗೆ ಅರ್ಥವಾಗಲಿಲ್ಲ. ಪ್ರೀತಿಸಿದ ಐದು ವರ್ಷ ಜೊತೆಯಲ್ಲಿ ಇರುವುದಕ್ಕಿಂತ ಐದು ನಿಮಿಷ ಏಕಾಂತದಲ್ಲಿ ಕಳೆದಿದ್ದರೆ, ನಿನ್ನ ಸ್ಥಿತಿ ಹೀಗಿರುತ್ತಿರಲಿಲ್ಲ ಎಂದಳು. ಮತ್ತೆ ಅರ್ಥವಾಗಲಿಲ್ಲ. ಕುಡಿಯುವುದು ಮುಂದುವರಿಸಿದ. ಅವಳು ಗಂಡ ಮಕ್ಕಳೊಂದಿಗೆ ಸುಖವಾಗಿದ್ದಳು.

11) ಹಳಬ ಪ್ರೀತಿಸುತ್ತಿದ್ದ. ಹೊಸಬ ಪ್ರೀತಿಸುತ್ತಿದ್ದಾನೆ. ಅವನ ಬಳಿ ದುಡ್ಡು ಕಾರು ಇರಲಿಲ್ಲ. ಇವನ ಬಳಿ ಇದೆ. ಅವನು ಜೊತೆಯಲ್ಲಿ ಸಿನಿಮಾ ನೋಡುವುದು ಬೇಡ ಅನ್ನುತ್ತಿದ್ದ. ಇವನು ಬರೀ ಸಿನಿಮಾಗೆ ಕರೆಯುತ್ತಾನೆ. ಅವನು ಮದುವೆಯಾಗೋಣ ಅನ್ನುತ್ತಿದ್ದ. ಇವನಿಗೆ ಈಗಾಗಲೇ ಮದುವೆ ಆಗಿದೆ. ಇಬ್ಬರಿಂದಲೂ ಮೋಸವಾಗಿದೆ. ಅವನು ಮದುವೆಯಾಗದೇ ಮೋಸ ಮಾಡಿದ. ಇವನು ಮದುವೆ ಮಾಡಿಕೊಂಡು ಮೋಸ ಮಾಡಿದ. ಹಾಗಾದರೆ ಹುಡುಗಿ?


ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ.

Rating
No votes yet

Comments