ಹೀಗೂ ಒಂದು ಲವ್ ಸ್ಟೋರಿ..

ಹೀಗೂ ಒಂದು ಲವ್ ಸ್ಟೋರಿ..

ಭಾನುವಾರ ಬೆಳಗ್ಗೆ ಆರೂವರೆ ಗಂಟೆ. ನನ್ನ ಮೊಬೈಲ್ ರಿಂಗಣಿಸಿದಾಗ ನಿದ್ದೆ ಕಣ್ಣಲ್ಲೇ ತಲೆದಿಂಬು ಪಕ್ಕದಲ್ಲಿರಿಸಿದ ಮೊಬೈಲ್ ತೆಗೆದು ನೋಡಿದೆ.


Surya calling....


ಅರೇ...ಈ ಚಳಿಗೆ ಹತ್ತೂವರೆ ಗಂಟೆಯಾದರೂ ಹಾಸಿಗೆ ಬಿಟ್ಟು ಏಳದಿರುವ ಈ ಮನುಷ್ಯ ಯಾಕಪ್ಪಾ ಇಷ್ಟು ಬೆಳಗ್ಗೆ ನನಗೆ ಕಾಲ್ ಮಾಡುತ್ತಿದ್ದಾನೆ? ಎಂದು ನನಗೆ ಅಚ್ಚರಿಯಾದುದುರಲ್ಲಿ ವಿಶೇಷವೇನಿಲ್ಲ. ಯಾಕೆಂದರೆ ನಿನ್ನೆ ರಾತ್ರಿ ನಾವಿಬ್ಬರೂ ಫೋನ್್ನಲ್ಲಿ ಹದಿನೈದು ನಿಮಿಷ ಹರಟಿದ ನಂತರವೇ ನಿದ್ದೆ ಹೋದದ್ದು. ಅಚಾನಕ್ ನನಗೆ ಬೆಳಗ್ಗೆ ಕಾಲ್ ಮಾಡಬೇಕಾದ ಅಗತ್ಯವೇನಾದರೂ ಬಂತು?


ಹಲೋ ಅಂದೇ...." ವಿನೀ...ನೀನು ಇವತ್ತು ಫ್ರೀ ಇದ್ದೀಯಾ? ಯಾಕೆ?


ಹೇಳು.. ನೀ ಫ್ರೀ ಆಗಿದ್ದರೆ ನನಗೊಂದು ಹೆಲ್ಪ್ ಬೇಕಿತ್ತು.


ನನ್ನಿಂದ ನಿನಗೆ ಹೆಲ್ಪ್? :) ಏನು ಹೇಳು ಮಾರಾಯಾ..


ಅದೂ...ನಂಗೊಂದು ವ್ಯಾಲೆಂಟೈನ್ಸ್ ಡೇ ಗಿಫ್ಟ್ ಖರೀದಿಸಬೇಕಿತ್ತು. ಅದಕ್ಕೆ ನನ್ನ ಜೊತೆ ಬರ್ತೀಯಾ?


ಹೂಂ..ಯಾರಿಗೆ?


ನನ್ನ ಗರ್ಲ್್ಫ್ರೆಂಡ್್ಗೆ ಮತ್ಯಾರಿಗೆ?


ಯಾರವಳು?


ಅದೂ...ಒಬ್ಬಳು ಹುಡುಗಿ....


ಹುಡುಗಿ ಅಂತಾ ನಂಗೊತ್ತು.. ಅವಳು ಯಾರು ಅಂತಾ ಹೇಳು...


ಅದೆಲ್ಲಾ ಆಮೇಲೆ ಹೇಳ್ತೇನೆ. ಇವತ್ತು ಸಂಜೆ ಐದು ಗಂಟೆಗೆ ಜಯನಗರ 4ನೇ ಬ್ಲಾಕ್ ಬರ್ತಿದ್ದೇನೆ. ಅಲ್ಲೇ ಯಾವುದಾದರೂ ಗಿಫ್ಟ್ ಶಾಪ್್ನಿಂದ ಒಂದು ಒಳ್ಳೆಯ ಗಿಫ್ಟ್ ನಂಗೆ ಆಯ್ಕೆ ಮಾಡಲು ಸಹಾಯ ಮಾಡ್ಬೇಕು ಆಯ್ತಾ...


ಹೂಂ...ಆಯ್ತು ಬಿಡು...ಐದು ಗಂಟೆಗೆ ಜಯನಗರ ತಲುಪಿದ ಕೂಡಲೇ ನಂಗೆ ಮೆಸೇಜ್ ಮಾಡು. ಕಾಂಪ್ಲೆಕ್ಸ್ ಬಳಿ ಬರ್ತೇನೆ ಎಂದು ಹೇಳಿದಾಗ ಅವ ಫೋನಿಟ್ಟ.


 ಸೂರ್ಯ ಮತ್ತು ನಾನು ಕಾಲೇಜು ಗೆಳೆಯರು. ಒಂದೇ ಕ್ಲಾಸಿನಲ್ಲಿ ಅಲ್ಲದಿದ್ದರೂ ನಮ್ಮದು ಒಂದೇ ಬ್ಯಾಚ್. ನನ್ನ ಬೆಸ್ಟ್ ಫ್ರೆಂಡ್ ಅಂದ್ರೆ ಅವನೇ. ಕಾಲೇಜಿನಿಂದ ಆರಂಭವಾದ ಈ ಗೆಳೆತನ ಕಾಲೇಜು ಮುಗಿದು ನಾಲ್ಕೈದು ವರ್ಷಗಳಾದರೂ ಮುಂದುವರಿದಿದೆ. ಅಂದ ಮಾತ್ರಕ್ಕೆ ನಾವಿಬ್ಬರೂ ಎಷ್ಟೋ ಬಾರಿ ಜಗಳವಾಡಿಕೊಂಡಿದ್ದೇವೆ. ಜಗಳವಾಡಿ ಮುನಿಸಿಕೊಂಡರೂ ಆ ಕೋಪ ಕೇವಲ ಹತ್ತೇ ನಿಮಿಷ. ಮತ್ತೆ ನಾವಿಬ್ಬರೂ ಒಂದೇ.. ಅಂತಹ ಅನ್ಯೋನ್ಯತೆ. ನಾವು ಜೊತೆಯಾಗಿ ಹರಟುವುದನ್ನು ಕಂಡಾಗ ನಮ್ಮ ಇತರ ಸ್ನೇಹಿತರೆಲ್ಲರೂ ಏನೂ ಲೈನಾ? ಅಂತಾ ಚುಡಾಯಿಸಿದ್ದೂ ಇದೆ. ಆದ್ರೆ ನಮ್ಗೊತ್ತು ನಮ್ಮಿಬ್ಬರ ಟೇಸ್ಟ್ ಬೇರೆಯೇ ಅಂತಾ. ಈ ಪ್ರೀತಿ ಪ್ರೇಮ ಅಂತಾ ಸುಮ್ನೇ ಯಾಕೆ ಗೆಳೆತನವನ್ನು ಹಾಳು ಮಾಡಿಕೊಳ್ಬೇಕು? ಕಾಲೇಜು ಟೈಮ್್ನಲ್ಲಿ ಲವ್ ಮಾಡ್ಬೇಕು ಅಂತಾ ನಮ್ಮಿಬ್ಬರ ಮನಸ್ಸಲ್ಲಿ ಆಸೆ ಇತ್ತು. ಸೂರ್ಯನ ವಿಷಯ ಹೇಳಬೇಕಾದರೆ ಅವ ತುಂಬಾನೇ ಚ್ಯೂಸಿ. ಯಾವ ಹುಡುಗಿಯೂ ಅವನಿಗೆ ಬೇಗನೆ ಪಸಂದ್ ಆಗಲ್ಲ. ಪ್ರೀತಿಸುವ ಹುಡುಗಿಯ ಆಯ್ಕೆ ಬಹು ಮುಖ್ಯ. ಅದನ್ನೆಲ್ಲಾ ಆಲೋಚಿಸಿಯೇ ಅವಳನ್ನು ಲವ್ ಮಾಡ್ಬೇಕು. ಇದಲ್ಲದಿದ್ದರೆ ಸುಮ್ನೇ ಟೈಂಪಾಸ್್ಗಾಗಿ ಲವ್ ಮಾಡುವುದು ನಂಗಿಷ್ಟವಿಲ್ಲ. ಪ್ರೀತಿಸಿದ್ರೆ ಅವಳನ್ನು ಬಾಳ ಸಂಗಾತಿಯನ್ನಾಗಿಸಿ ಕೊನೆಯವರೆಗೂ ಪ್ರೀತಿಸುತ್ತಲೇ ಇರಬೇಕು ಎಂದು ಲವ್ ವಿಷಯ ಮಾತಾಡಿದ್ರೆ ದೊಡ್ಡ ಭಾಷಣ ಬಿಗಿಯುತ್ತಿದ್ದ. 


ಆ ಕಾಲೇಜು ಲೈಫ್ ಹಾಗೇ ಮುಗಿದದ್ದೇ ಗೊತ್ತಾಗಿಲ್ಲ. ಮತ್ತೆ ಹೊಟ್ಟೆ ಪಾಡಿಗಾಗಿ ಕೆಲಸ. ಅವನಿಗೆ ಹೇಳಲಿಕ್ಕೆ ಒಂದೊಳ್ಳೆಯ ಕೆಲಸವಿದೆ. ಆದ್ರೂ ಅವನ ಮನಸ್ಸು ಕದ್ದ ಹುಡುಗಿ ಯಾರವಳು? ಎಂದು ನನ್ನ ಮನಸ್ಸಲ್ಲಿ ಚಿಂತೆ ಕಾಡುತ್ತಿತ್ತು. ಅಲ್ಲಾ... ನಾನ್ಯಾಕೆ ಚಿಂತೆ ಮಾಡ್ಬೇಕು ಎಂದು ಒಂದು ಘಳಿಗೆ ಯೋಚಿಸಿದರೂ...ಮನಸ್ಸಲ್ಲಿ ಏನೋ ತಳಮಳ. ನಿಜ..ನಾನು ಸೂರ್ಯನನ್ನು ಪ್ರೀತಿಸುತ್ತಿದ್ದೇನಾ? ಕಾಲೇಜಿನಲ್ಲಿ ಇದ್ದದ್ದು ಗೆಳೆತನವೇನೋ ಹೌದು. ಆದರೆ ಈಗ? ಈ ಬೆಂಗಳೂರೆಂಬ ಮಹಾನಗರದಲ್ಲಿ ನನ್ನ ಎಲ್ಲಾ ಕಷ್ಟ ಸುಖಗಳಿಗೆ ಸಾಥ್ ನೀಡಿದವನು ಅವನು. ಸೂರ್ಯ, ಎಲ್ಲಾ ಹುಡುಗಿಯರಿಗೂ ಬಾಯ್್ಫ್ರೆಂಡ್ ಇದ್ದಾರೆ. ನನಗೂ ಒಬ್ಬ ಬೇಕು ಅಂತಾ ಅನಿಸುತ್ತಿದೆ ಎಂದು ಹೇಳಿದಾಗ..ನಾನಿದ್ದೇನಲ್ಲಾ? ನಾನು ಹುಡುಗ ಅಲ್ವಾ ಅಂದ್ರೆ ಬಾಯ್, ನಿನ್ನ ಫ್ರೆಂಡ್..ಬಾಯ್ ಫ್ರೆಂಡ್ ಅಂತಾ ಹೇಳ್ತಿದ್ದನವ. ಹಾಗಲ್ಲ..ಐ ಮೀನ್ ಲವರ್ ಅಂತಾ ಮತ್ತೊಮ್ಮೆ ಹೇಳಿದಾಗ.. ಆಯ್ತು ಹುಡುಕೋಣ....ಅವನಾಗ್ಬಹುದಾ? ಇವನಾಗಬಹುದಾ? ಅಂತಾ ಅಲ್ಲಿರುವ ಕಂಡ ಕಂಡವರನೆಲ್ಲಾ ತೋರ್ಸಿ ನನಗೆ ಕೋಪ ಬರಿಸ್ತಾನೆ. ನಾನು ಬೇಜಾರಾದಾಗೆಲ್ಲಾ ನನ್ನ ಮುಖದಲ್ಲಿ ನಗುತರಿಸಲು ಯತ್ನಿಸುತ್ತಾನೆ. ಹಾಗೇ ಹರಟುತ್ತಾನೆ...ಕೆಲವೊಮ್ಮೆ ಬೈತಾನೆ...ಮರುಕ್ಷಣದಲ್ಲೇ ಸಮಾಧಾನ ಮಾಡ್ತಾನೆ. ಅಂತೂ he is a lovely guy.. 


ಹಾಗೇ ಹೀಗೆ ಅಂತಾ ಸಂಜೆ 5 ಗಂಟೆ ಆದದ್ದೇ ಗೊತ್ತಾಗಿಲ್ಲ.


I reachd whr r u? ಅವನದ್ದೇ ಮೆಸೇಜ್..


wait..m coming ಅಂತ ರಿಪ್ಲೈ ಮಾಡಿ ನಾನು ಅವಸರವಸರವಾಗಿ ಕಾಂಪ್ಲೆಕ್ಸ್ ನತ್ತ ಸಾಗಿದೆ. ದೂರದಿಂದಲೇ ನೋಡಿದೆ. ರೆಡ್ ಟೀ ಶರ್ಟ್ ಧರಿಸಿ ಅವ ನಿಂತಿದ್ದ. ನನ್ನನ್ನು ನೋಡಿದ ಕೂಡಲೇ ..ಹಾಯ್ ವಿನೀ..ಬೇಗ ಬಾ....ಗಿಫ್ಟ್ ಬೇಗ ಸೆಲೆಕ್ಟ್ ಮಾಡ್ಬೇಕು.


ಹೂಂ ಎಂದು ನಾನು ಅವನನ್ನೇ ಹಿಂಬಾಲಿಸಿದೆ. ಅಂತೂ ಇಂತೂ ಒಂದು ಗಿಫ್ಟ್ ಸೆಂಟರ್್ಗೆ ಹೋದೆವು. ಅರೇ...ಅಲ್ಲಿ ವ್ಯಾಲೆಂಟೆನ್ಸ್ ಡೇ ಗಿಫ್ಟ್ ಖರೀದಿಸಲು ಬಂದವರನ್ನು ನೋಡಿ ಅಬ್ಬಾ ಇಷ್ಟೊಂದು ಲವರ್ಸ್ ಇಲ್ಲಿದ್ದಾರಾ? ಅಂತಾ ಅನಿಸಿತು. ಸೂರ್ಯ ಯಾವುದೋ ಗಿಫ್ಟ್್ನ್ನು ಹಿಡಿದು ನೋಡುತ್ತಿದ್ದ. ಮತ್ತೆ ಅದು ಬೇಡವೆಂಬಂತೆ ಯಥಾಸ್ಥಾನದಲ್ಲಿರಿಸುತ್ತಿದ್ದ. ಆಗಲೇ ನನ್ನ ಕಣ್ಣಿಗೆ ಬಿದ್ದ ಚಿಕ್ಕದೊಂದು ಗಿಫ್ಟ್್ನ್ನು ಎತ್ತಿ ಸೂರ್ಯ ಇದು ಹೇಗಿದೆ ನೋಡು ಎಂದು ತೋರಿಸಿದೆ. ಅವನಿಗೂ ಅದು ಇಷ್ಟವಾಯ್ತು. ಕೂಡಲೇ ಪ್ಯಾಕ್ ಮಾಡಿಸಿ ಬಿಲ್ ಕೊಟ್ಟು ಹೊರಗೆ ಬಂದೆವು. ಇನ್ನು ನಾನು ಹೊರಡಲಾ? ನಿನ್ನ ಕೆಲಸ ಮುಗಿಯಿತಲ್ವಾ ಎಂದೆ.


ವಿನೀ..ನಿಲ್ಲು...ಒಂದು ನಿಮಿಷ.


ಏನು?


ಅದೂ..


ಅವ ಏನೋ ಹೇಳ್ಬೇಕು ಅಂತಾ ಇದ್ದಂತೆ ಕಾಣುತ್ತಿತ್ತು. ಇವನಿನ್ನು ನನಗೆ ಸರ್್ಪ್ರೈಸ್ ಏನಾದರೂ ಕೊಡಲು ಯೋಚನೆ ಮಾಡ್ತಾ ಇದ್ದಾನಾ? ಅವನ ಮನಸ್ಸಲ್ಲಿ ಬೇರೆ ಹುಡುಗಿ ಇದ್ದಾಳೆ ಎಂಬುದು ನಿಜನಾ? ಕೇಳಿದ ಕಥೆ, ನೋಡಿದ ಮೂವಿಗಳಲ್ಲಿರುವಂತೆ ಕೊನೆಯ ಕ್ಷಣದಲ್ಲಿ ನಿಜವಾದ ಪ್ರೇಯಸಿ ನೀನೆ ಅಂತಾ ನನ್ನ ಮುಂದೆ ಬಂದು ಆ ಗಿಫ್ಟ್ ನನಗೆ ಕೊಟ್ಟು ಐ ಲವ್ ಯೂ ಅಂತಾ ಹೇಳುವ ಸೀನ್ ಇಲ್ಲಿ ಕ್ರಿಯೇಟ್ ಆಗ್ಬಹುದು ಎಂದು ನಾನು ಅಂದುಕೊಂಡೆ.


ಹೇಯ್...ಏನು ಯೋಚನೆ ಮಾಡ್ತಾ ಇದ್ದೀಯಾ?


ಏನೂ ಇಲ್ಲ...


ಹೇ ವಿನೀ...(ಆ ಕರೆ ತುಂಬಾ ರೊಮ್ಯಾಂಟಿಕ್ ಆಗಿತ್ತು)...ನಾನು ನಿಜವಾಗ್ಲೂ....


ಹೇಳು ಸೂರ್ಯ..


ಬೇಡ ಬಿಡು...ಅದೆಲ್ಲಾ...


ಏನು? ಹೇಳು ಪ್ಲೀಸ್...


ನಂಗೆ ಹೀಗೆ ಪ್ರೀತಿ ಪ್ರೇಮ ಅಂತಾ ನಿನ್ನ ನೆನಪಲ್ಲೇ ಕಾಲ ಕಳೆಯೋಕೆ ಮನಸ್ಸಿಲ್ಲ. ಲೈಫ್ ಅಂದ್ರೆ ಎಂಜಾಯ್ ಮಾಡ್ಬೇಕು. ಅದಕ್ಕೇ ಬಣ್ಣ ಬಣ್ಣದ ಚಿಟ್ಟೆಗಳನ್ನರಸುತ್ತಾ, ಅವರನ್ನು ಬುಟ್ಟಿಗೆ ಹಾಕುವ ಸಲುವಾಗಿ ಇಂತದೆಲ್ಲಾ ನಾಟಕ ಮಾಡ್ಬೇಕಾಗಿ ಬರುತ್ತದೆ. ನೋಡು ನಮ್ಮ ಆಫೀಸಿನಲ್ಲೇ ಹೊಸ ಹುಡುಗಿಯೊಬ್ಬಳು ಸೇರಿದ್ದಾಳೆ. ಅವಳಿಗೆ ಈ ಗಿಫ್ಟ್ ಕೊಟ್ಟು ಪ್ರೇಮ ನಿವೇದನೆ ಮಾಡಬೇಕು ಅಂತಾ ಇದ್ದೀನಿ. ಮತ್ತೆ ಒಂದಿಷ್ಟು ಸುತ್ತಾಟ, ಮಜಾ ಉಡಾಯಿಸಿದ ಮೇಲೆ...ಮತ್ತೊಂದು... 


ಅವ ಹೇಳ್ತಾನೇ ಇದ್ದ, ಆದರೆ ನಾನು ಇಂತಹಾ ಕೆಟ್ಟ ಚಾಳಿಯಿರುವ ಹುಡುಗನನ್ನು ಪ್ರೀತಿಸಿದೆನಲ್ವಾ? ಅಂತಾ ನನ್ನನ್ನು ನಾನೇ ಹಳಿಯತೊಡಗಿದೆ. ಸದ್ಯ, ಅವನಲ್ಲಿ ನನ್ನ ಮನದ ಇಂಗಿತವನ್ನು ತಿಳಿಸುವ ಮುನ್ನವೇ ನನಗೆ ಅವನ ನಿಜ ಬಣ್ಣ ತಿಳಿಯಿತಲ್ಲ ಎಂಬ ಸಮಾಧಾನದಿಂದ ಬೇಗನೆ ಹಾಸ್ಟೆಲ್್ನತ್ತ ಹೆಜ್ಜೆ ಹಾಕಿದೆ. ಅವ ಹಿಂದಿನಿಂದ ವಿನೀ...ಅಂತಾ ಕೂಗಿ ಕರೆಯುತಲಿದ್ದರೂ ನನಗೆ ತಿರುಗಿ ನೋಡಬೇಕೆಂದು ಅನಿಸಲಿಲ್ಲ.

Rating
No votes yet

Comments