ದ್ಯಾಡೇಬ್ರಶ್ Vs ಬೇವಿನಕಡ್ಡಿ

ದ್ಯಾಡೇಬ್ರಶ್ Vs ಬೇವಿನಕಡ್ಡಿ

ಚಳಿ ಕಮ್ಮಿಯಾಗುತ್ತಾ ಬಂತು..

ಈಗ ಯಾವ ಸೀಸನ್?

..

..ಮದುವೆ ಸೀಸನ್!

ಇನ್ನು ೩-೪ ತಿಂಗಳು ನಾನು busy!

ಮದುವೆಗೆ ಸಂಬಂಧಿಸಿ ನಿಶ್ಚಯ ಇತ್ಯಾದಿ ಎಲ್ಲಾ ಸಮಾರಂಭಗಳಲ್ಲಿ ಇರಲೇಬೇಕಾದ, (ಇದ್ದಾಗ ಲೆಕ್ಕಕ್ಕಿಲ್ಲದ) ಇರದಿದ್ದರೆ ದೊಡ್ಡ issue ಆಗುವ (ನ)ಗಣ್ಯರ ಪಟ್ಟಿಯಲ್ಲಿದ್ದೇನೆ.

ಮದುವೆಗೆ ಹೊರಡುವಾಗ ನಾನು ವೆರಿ ವೆರಿ ಸಿಂಪ್‌ಲ್. ಒಂದು ಕ್ಯಾರಿಬ್ಯಾಗ್‌ನಲ್ಲಿ ೨ ಟೀಶರ್ಟ್, ಒಂದು ಪಂಚೆ, ಟವಲ್,ಸೋಪು ಇಷ್ಟಿದ್ದರೆ ಆಯಿತು. ಜೀನ್ಸ್‌ಪ್ಯಾಂಟ್ ಹಾಕಿರುತ್ತೇನಲ್ಲಾ- ಅದರಲ್ಲಿ ಬೇಕಿದ್ದರೆ ವಾರಗಟ್ಲೆ ಸುಧಾರಿಸುತ್ತೇನೆ.

ಅರ್ಧಾಂಗಿ ಇಲ್ಲದೇ ಮದುವೆಗೆ ಹೋಗುವುದುಂಟೋ?

  more luggage more comfort ತತ್ವದಲ್ಲಿ ಆಕೆಗೆ ನಂಬಿಕೆ.

ಅದೇನು ತುಂಬಿಸುತ್ತಾಳೋ ಗೊತ್ತಿಲ್ಲ, ಕೇವಲ-ಭರ್ತಿ ೩ ಸೂಟುಕೇಸ್‌ಗಳಿಲ್ಲದೇ ಆಕೆ ಹೊರಡುವುದಿಲ್ಲ. ಒಂದು ಸಲ ಮದುವೆಮನೆಯವರು " ಹೋ,ಗಣೇಶ್ರೇ.. ನೀವಾ.. ನಾವೆಲ್ಲೋ ಹಮಾಲಿ ಅಂತ ತಿಳಿದೆವು"ಅಂದ್ರು. ಅನ್ಲಿ ಬಿಡಿ.

ಹೆಣಬಾರದ ಸೂಟ್‍ಕೇಸ್ ಹೊತ್ತರೂ ಪರವಾಗಿಲ್ಲ, ಮಾರನೇ ದಿನ ಬೆಳಗ್ಗೆ ೫-೫ ನಿಮಿಷಕ್ಕೊಮ್ಮೆ ಹೋಗಿ -"ಚಾರ್ಜರ್ ತಂದಿದ್ಯಾ", "ಕೂಂಬ್ ಇದ್ಯಾ", "ಕರ್ಚೀಪ್ ಇದ್ಯೇನೇ"... ಎಂದು ಕೇಳಿದಾಗೆಲ್ಲಾ, ಮ್ಯಾಜಿಕ್ ಬಾಕ್ಸ್ ಓಪನ್ ಮಾಡಿದಂತೆ ಸೂಟ್ಕೇಸ್‌ನಿಂದ ಒಂದೊಂದಾಗಿ ತೆಗೆದುಕೊಡುವಾಗ ಹೆಂಡತಿ ಬಗ್ಗೆ ಹೆಮ್ಮೆ...

ಇದೆಲ್ಲಾ ಸಣ್ಣ ಸಣ್ಣ ವಿಷಯ.. ಆದರೆ ಇದೇ ಕೆಲವೊಮ್ಮೆ ವಿಪರೀತಕ್ಕೋಗುವುದು. ಒಮ್ಮೆ ಒಂದು ಸಮಾರಂಭದಲ್ಲಿ :-

ಜೋರಾಗಿ ಅಳುವ ಶಬ್ದ ಕೇಳಿ ಓಡಿ ಹೋಗಿ ನೋಡಿದ್ರೆ- ಹಲ್ಲುಜ್ಜಲು ಟೂತ್‌ಬ್ರಶ್ ಇಲ್ಲ ಎಂದು ಒಬ್ಬ ಹುಡುಗ ಅಳುತ್ತಿದ್ದ!

"‌ಒಂದು ಕೆಲಸನೂ ಸರಿಯಾಗಿ ಮಾಡುವುದಿಲ್ಲ..." "ಏನು ಮಾಡುವುದು,ಅರ್ಜೆಂಟ್‌ನಲ್ಲಿ ಮರೆತು ಹೋಯಿತು. ಒಂದು ಬ್ರಶ್ ತನ್ರೀ" " ಈ ಹಳ್ಳಿಯಲ್ಲಿ ಇಷ್ಟು ಹೊತ್ತಿಗೆ...ನನ್ನ ಕರ್ಮ..." "ಇಷ್ಟೆಲ್ಲ ಹೇಳುವವರು ಹೊರಡುವಾಗ ನೀವೆ ತೆಗೆದಿಡಬೇಕಿತ್ತು.." "ನಂಗೇ ಹೇಳ್ತಿಯೇನೆ.. *%*" "**%%**" ಚರ್ಚೆ ಬಾಯಿಂದ ಕೈಗೆ ತಲುಪುವುದರಲ್ಲಿತ್ತು. " ಇಷ್ಟೇ ತಾನೆ.. ನಿನಗೆ ಫಸ್ಟ್‌ಕ್ಲಾಸ್, use and throw ಟೂತ್‌ಬ್ರಶ್ ಕೊಡುತ್ತೇನೆ ಬಾ" ಎಂದು ಹುಡುಗನನ್ನು ಕರಕೊಂಡು ಹೊರಬಂದೆ.

"ನೋಡು, ನಿನ್ನ ಹೆಸರೇನು..ದೀಪಕ್...ನೋಡು ದೀಪು, ಹಲ್ಲಿನೆಡೆಯಲ್ಲಿರುವ ಕೊಳಕನ್ನು ಬ್ರಶ್ ತೆಗೆಯುವುದು.ಬ್ರಶ್‌ನೆಡೆಯಲ್ಲಿರುವ ಕೊಳಕು, ನೀರಿಂದ ತೊಳೆದರೂ ಪೂರ್ತಿ ಹೋಗುವುದಿಲ್ಲ. ನಾನು ಮಾವಿನೆಲೆಯಲ್ಲಿ,ಇಲ್ಲಾ ಗೇರು ಎಲೆಯಲ್ಲಿ, ಇಲ್ಲಾ ಬೇವಿನಕಡ್ಡಿಯಲ್ಲಿ ಹಲ್ಲುಜ್ಜುವುದು ಎಂದು ಹೇಳಿ ಬೀದಿಬದಿಯಲ್ಲಿದ್ದ ಬೇವಿನಮರದಿಂದ ಕಿರುಬೆರಳು ಗಾತ್ರದ ರೆಂಬೆ ತೆಗೆದು, ಅದನ್ನು ೪"-೪"ನ ಎರಡು ತುಂಡುಮಾಡಿ, ನೀರಲ್ಲಿ ತೊಳೆದು ಅವನಿಗೊಂದು ಕೊಟ್ಟೆನು.

"ಪೇಸ್ಟ್‌ನಲ್ಲಿ ಹಲ್ಲುಜ್ಜುವಾಗ ಅದು ಹೊಟ್ಟೆಯೊಳಗೆ ಹೋಗದಂತೆ ಜಾಗ್ರತೆಯಿಂದಿರಬೇಕು. ಇದು ಕಹಿ ಇದ್ದರೂ ಹೊಟ್ಟೆಗೆ ಹೋದರೆ ಅಮೃತ. ಈ ಬ್ರಶ್‌ಗೆ ಪೇಸ್ಟ್ ಹಾಕುವ ಅಗತ್ಯವೇ ಇಲ್ಲ. ಇದರ ರಸವೇ ಪೇಸ್ಟ್. ನೋಡು ಈಗ ನಾನು ಮಾಡಿದ ಹಾಗೆ ಮಾಡು."ಎಂದೆ.

ಕಡ್ಡಿಯ ತುದಿಯನ್ನು ಗಟ್ಟಿಯಾಗಿ ಕಚ್ಚಿ ಬ್ರಶ್ ತರಹ ಮಾಡಿ ಅವನಿಗೆ ತೋರಿಸಿದೆ. ಆತನೂ ಮಾಡಿದ-ಕಡ್ಡಿ ಹೇಗಿತ್ತೋ ಹಾಗೇ ಇತ್ತು. "ಜೋರಾಗಿ ಕಚ್ಚು. ನಿನ್ನ ಅಮ್ಮ ಮಾಡಿದ ಮೈಸೂರು ಪಾಕ್ ಕಚ್ಚುವಂತೆ.."... ಊಹೂಂ... "ಕೊನೆಯ ಹಲ್ಲುಗಳ ಮೇಲಿಟ್ಟು ಕಚ್ಚು" ಎಂದೆ. ಅಲ್ಲಿ ಬೇವಿನ ಕಡ್ಡಿ ಇಡುತ್ತಾ "ದ್ಯಾಡೇ.." ಎಂದ. "ದ್ಯಾಡೆ ಅಲ್ಲಾ..ದವಡೆಹಲ್ಲು ಅದು" ಅಂದೆ.

ನೋಡಿದರೆ ದ್ಯಾಡೇನೂ ಅಲ್ಲ, ದವಡೇನೂ ಅಲ್ಲ...

ಅವನ ಡ್ಯಾಡಿ! ಅಲೆಕ್ಸಾಂಡರ್ ಚಕ್ರವರ್ತಿ ಕತ್ತಿ( ಇಲ್ಲಿ ಟೂತ್‌ಬ್ರಶ್) ಎತ್ತಿಕೊಂಡು ಬರುವಂತೆ ಬಂದನು. ಯಾರದೋ ಬೈಕಲ್ಲಿ ಅಂಗಡಿಗೆ ಹೋಗಿ, ಬ್ರಶ್ ತೆಗೆದುಕೊಂಡು ಬಂದುದನ್ನು ಯಾವುದೋ ದೇಶ ಗೆದ್ದು ಬಂದಂತೆ ಮಗನ ಬಳಿ ವಿವರಿಸುತ್ತಿದ್ದ!

ಈಗ ನಾನು ಮಾಡಿದ ಪಾಠದ ಅಗ್ನಿಪರೀಕ್ಷೆ- ಹುಡುಗ ಬೇವಿನಕಡ್ಡಿಯಲ್ಲಿಯೇ ಹಲ್ಲುಜ್ಜುವನೋ ಅಥವಾ ದ್ಯಾಡೇ ಬ್ರಶ್‌ನಲ್ಲೋ?

ಹ್ಹಹ್ಹ...ನಾನೇ ಗೆದ್ದೆ!!!

ಹುಡುಗನಿಗೆ ನಾನು ಬೇವಿನ ಮಹತ್ವ ವಿವರಿಸಿ ಹೇಳಿದ್ದು ಚೆನ್ನಾಗಿ ತಲೆಗೆ ಹೊಕ್ಕಿತ್ತು. ಆತ ತಂದೆ ತಂದ ಬ್ರಶ್‌ನ್ನು...................

ಎಸೆದೇ ಬಿಟ್ಟಾಆಆಆಆಆಆಆಆಆಆಆ!!!!!!

ಸಂತೋಷ ಯಾವಾಗಲೂ ಕ್ಷಣಿಕ..

ಆ ಬ್ರಶ್ ಹುಡುಗನ ಇಷ್ಟದ ಕಲರ್/ಬ್ರಾಂಡ್ ಆಗಿರಲಿಲ್ಲ...............

ಕೋಪ ನೆತ್ತಿಗೇರಿತು..ಅವನಪ್ಪನಿಗಲ್ಲ... ನನಗೆ...

ಮಗನಿಗೂ, ಈ ತರಹ ಬೆಳೆಸಿದ ಆ ಅಪ್ಪನಿಗೂ ಎರ್ಡು ಬಿಗಿಯುವ ಎಂದು ಬೇವಿನ ಗೆಲ್ಲು ಕಟ್ ಮಾಡಲು ಹೋದೆ. ಬೇವಿನ ಮರದಡಿಗೆ ಬರುತ್ತಿದ್ದಂತೆ ನನ್ನ ಕೋಪವೂ ಕಮ್ಮಿಯಾಯಿತು. ಸಮಾಧಾನದಿಂದ ಕುಳಿತು,ಕೈಯಲ್ಲಿದ್ದ ಬೇವಿನಕಡ್ಡಿಯಿಂದ ಹಲ್ಲುಜ್ಜುತ್ತಾ, ಅಪ್ಪ ಮಗನ ಡ್ರಾಮ ನೋಡುತ್ತಿದ್ದೆ.

-ಗಣೇಶ.

Rating
No votes yet

Comments