ಇಂದು ಕಡಿದಾಳು ಶಾಮಣ್ಣ... ನಾಳೆ?

ಇಂದು ಕಡಿದಾಳು ಶಾಮಣ್ಣ... ನಾಳೆ?

ಇಂದು ಕಡಿದಾಳು ಶಾಮಣ್ಣ... ನಾಳೆ?

ಕಡಿದಾಳು ಶಾಮಣ್ಣ ನಕ್ಸಲೈಟ್... ಇದು ಹೋದ ವಾರದ ಜೋಕ್! ಈ ಮೂಲಕ ನಿಜವಾದ ಜೋಕ್ ಎನಿಸಿಕೊಂಡಿರುವುದು ನಮ್ಮ ರಾಜ್ಯದ ಪೋಲೀಸ್ ಇಲಾಖೆ. ಶಾಮಣ್ಣ ಶಾಂತವೇರಿ ಗೋಪಾಲಗೌಡರ ಅನುಯಾಯಿಯಾಗಿ ಸಮಾಜವಾದಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಆನಂತರ ರೈತ ಚಳುವಳಿಯ ಸಾತ್ವಿಕ ಮುಖವಾಗಿ ಕಾಣಿಸಿಕೊಂಡು ಅಪ್ಪಟ ಗಾಂಧಿವಾದಿ ಎನಿಸಿಕೊಂಡವರು. ಅಂತಹವರನ್ನು ನಕ್ಸಲೈಟೆಂದೋ, ನಕ್ಸಲೈಟರ ಹಿತೈಷಿಯೆಂದೋ ಪತ್ತೆ ಹಚ್ಚಿರುವುದು ನಮ್ಮ ಪೋಲೀಸ್ ಪತ್ತೇದಾರಿಕೆಯಲ್ಲಿನ ವೃತ್ತಿಪರತೆಯ ದಾರಿದ್ರ್ಯಕ್ಕೂ, ಈ ಸಾಹಸಮಯ ಪತ್ತೆಯನ್ನು ಯಾವುದೇ ಪರಿಶೀಲನೆಗೆ ಒಳಪಡಿಸದೆ ಸಾರ್ವಜನಿಕವಾಗಿ ಪ್ರಕಟಿಸಿರುವ ನಮ್ಮ ಪೋಲೀಸ್ ಇಲಾಖೆಯ ಒಟ್ಟಾರೆ ಮತಿಹೀನತೆಗೂ ಸಾಕ್ಷಿಯಾಗಿದೆ. ಈ ಹಿಂದೆ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಅವರನ್ನೂ, ನಕ್ಸಲೈಟ್ ಎಂದು ಗುರುತಿಸಲಾಗಿದೆ ಎಂಬ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇಂತಹ ಅಸಂಬದ್ಧತೆಗಳಿಗೆ ಕಾರಣ, ನಮ್ಮ ಪೋಲೀಸರ ರಾಜಕೀಯ ಪರಿಜ್ಞಾನ ಅಧೋಗತಿಯಲ್ಲಿರುವುದೇ ಆಗಿದೆ.

ಜನತೆಯನ್ನು ಸದಾ ಶತ್ರುಗಳಂತೆ ನೋಡುವ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಜನತೆಯಿಂದ ಶತ್ರುಗಳಂತೆ ಪರಿಗಣಿಸಲ್ಪಡುವ ದುರಂತಮಯ ವಿಷವ್ಯೂಹದಲ್ಲಿ ಸಿಕ್ಕಿಕೊಂಡಿರುವ ಪೋಲೀಸ್, ನಮ್ಮ ಪ್ರಜಾಪ್ರಭುತ್ವ ಈಗ ಕೆಲಸ ಮಾಡುತ್ತಿರುವ ಬೌದ್ಧಿಕ ಮಟ್ಟದ ಪ್ರತೀಕದಂತಿದೆ. ಆಳುವವರ ಮರ್ಜಿ ಕಾಯುವ ಕಾಯಕದ ಅಂಗವಾಗಿಯೇ ಕಾನೂನು ಮತ್ತು ಶಿಸ್ತಿನ ಪರಿಪಾಲನೆಯ ಉಸ್ತುವಾರಿ ನಡೆಸುತ್ತಿರುವ ಪಡೆಯೆಂದು ಸಾಮಾನ್ಯ ಜನತೆಯಿಂದ ಗುರುತಿಸಲ್ಪಟ್ಟಿರುವ ಪೋಲೀಸ್; ತನ್ನ ಹಲವು ಜನ ದಕ್ಷ ಹಾಗೂ ಪ್ರತಿಭಾವಂತ ಅಧಿಕಾರಿಗಳ ಮತ್ತು ಜನಪರ ಕಾಳಜಿಯ ಕೆಳ ಹಂತದ ಸಿಬ್ಬಂದಿಯ ಸೇವಾ ದಾಖಲೆಗಳ ಹೊರತಾಗಿಯೂ, ಇದುವರೆಗೆ ತನ್ನ ಚರಿತ್ರೆಯಲ್ಲಿ ಯಾವುದೇ ಕಾರ್ಯಾಚರಣೆಯ ಸಂಬಂಧವಾಗಿ ಜನರ ಒಟ್ಟಾರೆ ಮೆಚ್ಚುಗೆಗೆ ಅಥವಾ ಸಹಾನುಭೂತಿಗೆ ಪಾತ್ರವಾಗಿಲ್ಲವೆನ್ನುವ ಸಂಗತಿ, ಅದರ ಮೂಲ ಸಾಂಸ್ಥಿಕ ದೌರ್ಬಲ್ಯದ ಕಡೆ ಬೊಟ್ಟು ಮಾಡುತ್ತದೆ.

ತಾನೇ ಸಾಕಿಕೊಂಡಿರುವ ವೃತ್ತಿನಿರತ ಸುಳ್ಳು ಸಾಕ್ಷಿಗಳ ಮತ್ತು ಪೊಳ್ಳು ಮಾಹಿತಿದಾರರ ಮೂಲಕವೇ ಮೊಕದ್ದಮೆಗಳನ್ನು ನಡೆಸುವ ಹಾಗೂ ಗುಪ್ತಚರ ಕಡತಗಳನ್ನು ನಿರ್ಮಿಸುವ ದೀರ್ಘ ಪರಂಪರೆಯುಳ್ಳ ಪೋಲೀಸ್ ಈಗ, ಗಾಂಧಿವಾದ ಹಾಗೂ ನಕ್ಸಲಿಸಂ ಎಂಬ ಎರಡು ತಾತ್ವಿಕ ತುದಿಗಳ ನಡುವಣ ವ್ಯತ್ಯಾಸವೂ ಕಾಣದಷ್ಟು ಅಸೂಕ್ಷ್ಮವಾಗಿ ಹೋಗಿದೆ. ತನ್ನ ತತ್ಕಾಲೀನ ರಾಜಕೀಯ ಯಜಮಾನರು ಯಾರು ಎಂಬುದರ ಆಧಾರದ ಮೆಲೇ ಸಮಾಜದ ಶತ್ರುಗಳನ್ನು ಗುರುತಿಸುವ ಸಂಪ್ರದಾಯಕ್ಕೆ ಒಗ್ಗಿ ಹೋಗಿರುವ ನಮ್ಮ ಪೋಲೀಸ್ಗೆ ಗುಪ್ತಚರ ದಳದ ಮಟ್ಟಿಗಾದರೂ ರಾಜಕೀಯ ಶಿಕ್ಷಣದ ಅಗತ್ಯ ಕಂಡು ಬಂದಿಲ್ಲವೆಂದರೆ, ಅದರ ಶೈಕ್ಷಣಿಕ ದಾರಿದ್ರ್ಯ ಯಾವ ಮಟ್ಟ ಮುಟ್ಟಿದೆ ಎಂಬುದರ ಅರಿವಾದೀತು. ಈ ದಾರಿದ್ರ್ಯದಿಂದಾಗಿಯೇ, ಲೋಹಿಯಾ ಎಂಬ ಶಬ್ದ ತನ್ನ ಅಪರಿಚಿತತೆಯಿಂದಾಗಿಯೇ ಅವರಲ್ಲಿ ಅನುಮಾನಗಳನ್ನು ಹುಟ್ಟಿಸಿ, ಆ ಶಬ್ದದ ಒಡನಾಟವೇ ನಕ್ಸಲೈಟರ ಪಟ್ಟಿಗೆ ಕೆಲವರ ಹೆಸರು ಸೇರ್ಪಡೆಯಾಗಲು ಅರ್ಹತೆಯಾಗಿಬಿಟ್ಟಿದೆ. ಇದರ ಜೊತೆಗೆ, ಸ್ಥಳೀಯ ರಾಜಕೀಯ ಯಜಮಾನರುಗಳ ಅಥವಾ ಅವರ ಚೇಲಾಗಳ ಸೂಚನೆಗಳಿಗನುಸಾರ ಯಾರ್ಯಾರೋ ಏನೇನೋ ಆಗಿ ಪೋಲೀಸ್ ಕಡತ ಸೇರುವ ಅಸಂಬದ್ಧಗಳು ಹಾಗೂ ಅನಾಹುತಗಳು ಸೃಷ್ಟಿಯಾಗತೊಡಗಿವೆ.

ಚಿಕ್ಕಮಗಳೂರು ಜಿಲ್ಲೆ ನಕ್ಸಲ್ವಾದದ ನೆಲೆಯಾಗುವ ಮೊದಲು ಅದರ ಮಾರುವೇಷದ ರಾಜಕೀಯ ಪೂರ್ವಸಿದ್ಧತೆ ನಡೆದದ್ದು, ಅನೇಕ ರಾಜಕೀಯ ಹೋರಾಟಗಳ ಚರಿತ್ರೆ ಇರುವ ಮತ್ತು ಗ್ರಾಮೀಣ ಮಲೆನಾಡಿನ ವಿಶಾಲ ವಿದ್ಯಾರ್ಥಿ ಸಮೂಹದ ಹಾಗೂ ಹಲವು ಪ್ರಗತಿಪರ ಚಿಂತಕರ ನೆಲೆಯಾಗಿರುವ ಶಿವಮೊಗ್ಗದಲ್ಲಿ. ಕೋಮು ಸೌಹಾರ್ದ, ತುಂಗಾ ಉಳಿಸಿ, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಆದಿವಾಸಿಗಳ ಪುನರ್ವಸತಿ ಇತ್ಯಾದಿ ಚಳುವಳಿಗಳಲ್ಲಿ ನಾಲ್ಕಾರು ವರ್ಷಗಳ ಕಾಲ ಸಕ್ರಿಯವಾಗಿ ಭಾಗವಹಿಸಿದ ಶಿವಮೊಗ್ಗದ ಅನೇಕ ಜನ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು, ಈ ಚಳುವಳಿಗಳ ಹಿಂದಿನ ನಕ್ಸಲೀಯ ರಾಜಕಾರಣದ ಸುಳಿವು ಸಿಕ್ಕೊಡನೆ, ಸಹಜವಾಗಿಯೇ ಅವುಗಳೊಡನೆಯ ಸಂಪರ್ಕ ಕಡಿದುಕೊಂಡರು. ಇವರಲ್ಲಿ ಎದ್ದು ಕಾಣುವಂತಿರುವವರು, ಕುವೆಂಪು ವಿಶ್ವವಿದ್ಯಾಲಯದ ಜನಪ್ರಿಯ ಅಧ್ಯಾಪಕ ಹಾಗೂ ಪ್ರಖರ ಬುದ್ಧಿಜೀವಿ ಡಾ|| ರಾಜೇಂದ್ರ ಚೆನ್ನಿಯವರು. ಕನ್ನಡದ ಬಹು ಮುಖ್ಯ ಸಂಸ್ಕೃತಿ ಚಿಂತಕರೂ, ಸಾಹಿತ್ಯ ವಿಮರ್ಶಕರೂ ಆದ ಚೆನ್ನಿ, ಕಳೆದ ಹತ್ತಾರು ವರ್ಷಗಳಿಂದ ಶಿವಮೊಗ್ಗದಲ್ಲಿ ಸಂಘ ಪರಿವಾರದ ರಾಜಕಾರಣದ ವಿರುದ್ಧದ ಚಟುವಟಿಕೆಗಳಿಗೆ ಒಂದು ಬೌದ್ಧಿಕ ಆಯಾಮವನ್ನು ಒದಗಿಸುತ್ತಾ ಬಂದವರು. ಹೀಗಾಗಿ ಇವರನ್ನು ಆದಷ್ಟು ಬೇಗ ನಿವಾರಿಸಿಕೊಳ್ಳುವುದು ಸ್ಥಳೀಯ ಸಂಘ ಪರಿವಾರದ ಪುಢಾರಿಗಳಿಗೆ ಅತಿ ಅಗತ್ಯವಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಹಾಗಾಗಿಯೇ ಚೆನ್ನಿ ಈಗ ಪೋಲೀಸ್ ಕಡತಗಳಲ್ಲಿ ನಕ್ಸಲೈಟ್ ಬೆಂಬಲಿಗ!

ಹಾಗೇ, ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಪ್ರಗತಿಪರ ಚಟುವಟಿಕೆಗಳ ಮುಂಚೂಣಿಯಲ್ಲಿದ್ದುಕೊಂಡು, ಅವುಗಳಿಗೆ ಸಾಮಾನ್ಯ ಜನತೆಯ ಮಟ್ಟದಲ್ಲಿ ಒಂದು ವಿಶ್ವಾಸಾರ್ಹತೆ ಒದಗಿಸುತ್ತಿರುವ ಕಡಿದಾಳು ಶಾಮಣ್ಣ, ಸಂಘ ಪರಿವಾರದ ಸ್ಥಳೀಯ ಅಂಗ ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಹೀಗಾಗಿ, ತಮ್ಮ ಚಟುವಟಿಕೆಗಳ ವಿಸ್ತರಣೆಯ ದೃಷ್ಟಿಯಿಂದ ಶಾಮಣ್ಣನವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಸಂಘ ಪರಿವಾರದವರ ಸದ್ಯದ ಗುರಿಯಾಗಿರುವಂತೆ ತೋರುತ್ತದೆ. ಏಕೆಂದರೆ, ಶಾಮಣ್ಣ ಪೋಲೀಸ್ ಕಡತಗಳಿಗೆ ನಕ್ಸಲೈಟಾಗಿ ಸೇರಿಕೊಳ್ಳುವಂತಾಗಲು ಮತ್ತಾವ ಕಾರಣವೂ ಗೋಚರಿಸುತ್ತಿಲ್ಲ. ಹಾಗೇ, ಹಳೆಯ ಗೂಂಡಾಗಿರಿ ಪ್ರಕರಣವೊಂದರಲ್ಲಿ ಸಂಘ ಪರಿವಾರದವರು ಹೆಸರು ಕೆಡಿಸಿಕೊಳ್ಳಲು ಕಾರಣರಾಗಿದ್ದ ಸ್ಥಳೀಯ ಪತ್ರಕರ್ತ ಎನ್.ಮಂಜುನಾಥರ ಹೆಸರೂ, ಹಳೇ ದ್ವೇಷದ ಮೇಲೆ ನಕ್ಸಲೀಯರ ಪಟ್ಟಿಗೆ ಸೇರುವಂತೆ ನೋಡಿಕೊಳ್ಳಲಾಗಿದೆ.

ಪೋಲೀಸ್ ಮತ್ತು ರಾಜಕಾರಣದ ಇಂತಹ ಅಕ್ರಮ ಸಂಬಂಧದಿಂದ ಉಂಟಾಗಿರುವ ಅಸಂಬದ್ಧತೆಗಳ ವಿರುದ್ಧ ಕಡಿದಾಳು ಶಾಮಣ್ಣ ನ್ಯಾಯಾಲಯದಲ್ಲಿ ದೂರು ಸಲ್ಲಿಸುವ; ಚೆನ್ನಿ ಪೋಲೀಸರ ಈ 'ಅವಿವೇಕ'ದ ವಿರುದ್ಧ ಕಿಡಿ ಕಾರುತ್ತಾ, ತಾವು ನಕ್ಸಲೀಯ ರಾಜಕಾರಣವನ್ನು ಎಂದೂ ಒಪ್ಪಿಲ್ಲ ಎಂದು ಸ್ಪಷ್ಟೀಕರಿಸುವ ಪತ್ರಿಕಾ ಹೇಳಿಕೆ ನೀಡುವ ಸ್ಥಿತಿ ಉಂಟಾಗಿದೆ. ಹೀಗಾಗಿ ಈಗ ಶಿವಮೊಗ್ಗ ಜಿಲ್ಲೆಯ ಮಟ್ಟಿಗೆ ನಕ್ಸಲೀಯರ ಪಟ್ಟಿಯ ಪ್ರಕಟಣೆ, ಸಂಘ ಪರಿವಾರದವರ ರಾಜಕೀಯಕ್ಕೆ ವಿರುದ್ಧವಂತೆ ತೋರುವ ಯಾವುದೇ ಚಟುವಟಿಕೆ ನಡೆಯದಂತೆ ತಡೆಯುವ ರಾಜಕೀಯ ಹುನ್ನಾರವಾಗಿರಲಿಕ್ಕೂ ಸಾಕು. ಏಕೆಂದರೆ, ಪಟ್ಟಿ ಪ್ರಕಟವಾಗುವುದನ್ನೇ ಕಾಯುತ್ತಿದ್ದಂತೆ, ಸ್ಥಳೀಯ ಸಂಘ ಪರಿವಾರದ ಅಂಗ ಸಂಸ್ಥೆಗಳು ಇವರೆನ್ನೆಲ್ಲ ಕೂಡಲೇ ಬಂಧಿಸುವಂತೆ ಹಾಹಾಕಾರವೆಬ್ಬಿಸುತ್ತಿವೆ. ಅಷ್ಟೇ ಅಲ್ಲ, ನಕ್ಸಲೀಯ ಚಟುವಟಿಕೆಗಳನ್ನು ಕಾನೂನು ಮತ್ತು ಶಿಸ್ತು ಪಾಲನೆಯ ವಿಷಯವಾಗಿ ಮಾತ್ರ ನೋಡಬಯಸದೆ ಒಂದು ಸಾಮಾಜಿಕ-ಆರ್ಥಿಕ ವಿದ್ಯಮಾನವಾಗಿಯೂ ಪರಿಶೀಲಿಸಲು ಯತ್ನಿಸುತ್ತಿರುವ ಹಿರಿಯ ಪೋಲೀಸ್ ಅಧಿಕಾರಿ ಶಂಕರ ಬಿದರಿಯವರನ್ನು ನಕ್ಸಲೀಯರ ಬೆಂಬಲಿಗರೆಂದು ಕರೆಯಲೂ ಇವು ಹಿಂಜರಿದಿಲ್ಲ.

ನಕ್ಸಲೀಯ ಚಳುವಳಿಯೊಂದಿಗೆ ಸಹಾನುಭೂತಿ ಹೊಂದಿರುವವರೆಂದು ಈ ಹಿಂದೆ ಪೋಲೀಸರಿಂದಲೇ ಗುರುತಿಸಲ್ಪಟ್ಟವರೆಂದು ಹೇಳಲಾದ ಅನೇಕರನ್ನು ಕೈಬಿಟ್ಟು, ಸಂಬಂಧಪಡದಿದ್ದವರನ್ನೆಲ್ಲಾ ಪಟ್ಟಿಗೆ ಸೇರಿಸಿರುವುದರಿಂದಾಗಿ ರಾಜ್ಯ ಸರ್ಕಾರದ ನಕ್ಸಲ್ ವಿರೋಧಿ ಕಾರ್ಯಾಚರಣೆ ತನ್ನ ವಿಶ್ವಾಸಾರ್ಹತೆಗೇ ಭಂಗ ತಂದುಕೊಂಡಿದೆ. ಸಂಘ ಪರಿವಾರದ ಸ್ಥಳೀಯ ನಾಯಕರಿಗೆ ಹಾಗೂ ಸ್ಥಳೀಯ ಪೋಲೀಸ್ ವ್ಯವಸ್ಥೆಗೆ ನಕ್ಸಲೀಯ ಸಮಸ್ಯೆಯ ಪರಿಹಾರದ ಬಗ್ಗೆ ನಿಜವಾದ ಬದ್ಧತೆಯಿದ್ದಲ್ಲಿ, ಅವು ಕ್ರಮವಾಗಿ ಸ್ಥಳೀಯ ರಾಜಕಾರಣವನ್ನು ಮೀರುವ ಮತ್ತು ಮೆಟ್ಟಿ ನಿಲ್ಲುವ ವಿವೇಕವನ್ನು ಈಗಲಾದರೂ ಪ್ರದರ್ಶಿಸಬೇಕಿದೆ. ಉಪ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಸಂಬಂಧಪಟ್ಟ ಪೋಲೀಸ್ ಅಧಿಕಾರಿ ಶಂಕರ ಬಿದರಿಯವರು ಈಗಾಗಲೇ ಇಂತಹ ವಿವೇಕದ ಸೂಚನೆ ನೀಡಿರುವುದು ಸಂತೋಷದ ಸಂಗತಿಯಾಗಿದೆ. ಪಟ್ಟಿಯಲ್ಲಿ ತಪ್ಪುಗಳು ನುಸುಳಿದ್ದರೆ, ಸರಿಪಡಿಸುವ ಮಾತನ್ನು ಇಬ್ಬರೂ ಆಡಿದ್ದಾರೆ. ಸರಿಪಡಿಸುವುದರ ಜೊತೆಗೆ ಇಂತಹ ತಪ್ಪೇಕಾಯಿತು ಎಂಬುದನ್ನು ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.. ಅಲ್ಲದೆ, ಈ ತಪ್ಪುಗಳಿಂದಾಗಿ ನೊಂದವರ ಕ್ಷಮೆ ಕೇಳುವುದೂ ನಾಗರಿಕ ಆಡಳಿತದ ಪಾವಿತ್ರ್ಯವನ್ನು ಕಾಪಾಡುವ ದೃಷ್ಟಿಯಿಂದ ಅಗತ್ಯವಾಗಿದೆ.

ಗೃಹ ಮಂತ್ರಿ ಎಂ.ಪಿ.ಪ್ರಕಾಶ್ ಅವರು ಇಂತಹ ವಿಷಯಗಳಲ್ಲಿ ಮುಜುಗರ ವ್ಯಕ್ತಪಡಿಸುವ ತತ್ಕಾಲೀನ ಪ್ರತಿಕ್ರಿಯೆಗಳ ಇಕ್ಕಟ್ಟಿಗೆ ಸಿಲುಕುವ ಬದಲು, ಪೋಲೀಸ್ ವ್ಯವಸ್ಥೆಗೆ ರಾಜಕೀಯ ಒತ್ತಡಗಳನ್ನು ಮೆಟ್ಟಿ ನಿಂತು ಜನತೆಯ ಸೇವೆಗೆ ಬದ್ಧವಾಗಿ ಕಾರ್ಯ ನಿರ್ವಹಿಸುವಂತಹ ವೃತ್ತಿಪರವಾದ ನೈತಿಕ ಹಾಗೂ ಶೈಕ್ಷಣಿಕ ತರಬೇತಿ ಒದಗಿಸುವ ಶಾಶ್ವತ ವ್ಯವಸ್ಥೆ ಮಾಡಿದರೆ, ರಾಜ್ಯದ ಪೋಲೀಸರು, ಜನತೆಯೂ ಒಟ್ಟಿಗೆ ಅವರಿಗೆ ಋಣಿಯಾಗಿರುತ್ತಾರೆ. ಏಕೆಂದರೆ, ರಾಜಕೀಯ ಒತ್ತಡ ಹಾಗೂ ಕೃಪಾಶ್ರಯಗಳಿಂದಾಗಿಯೇ ಭ್ರಷ್ಟ ಹಾಗೂ ದುಷ್ಟವಾಗುತ್ತಾ ಹೋಗುವ ಪೋಲೀಸ್, ಸಮಾಜವನ್ನು ಕಾಯುವುದಕ್ಕಿಂತ ಹೆಚ್ಚಾಗಿ ಕಾಡುವ ವ್ಯವಸ್ಥೆಯಾಗಿಯೇ ಬೆಳೆಯುವ ಅಪಾಯವಿರುತ್ತದೆ. ರಾಜ್ಯದ ಮಾಜಿ ರಾಜ್ಯಪಾಲ ದಿವಂಗತ ಧರ್ಮವೀರ ಅವರ ಅಧ್ಯಕ್ಷತೆಯ ರಾಷ್ಟ್ರೀಯ ಪೋಲೀಸ್ ಸುಧಾರಣಾ ಆಯೋಗ ಬಹು ವರ್ಷಗಳ ಹಿಂದೆಯೇ, ಪೋಲೀಸ್ ವ್ಯವಸ್ಥೆಯನ್ನು ರಾಜಕೀಯ ಒತ್ತಡಗಳಿಂದ ಮುಕ್ತಗೊಳಿಸುವಂತಹ ಅನೇಕ ಕ್ರಮಗಳನ್ನು ಶಿಫಾರ್ಸು ಮಾಡಿದ್ದರೂ, ನಮ್ಮ ರಾಜಕೀಯ ವ್ಯವಸ್ಥೆ ಅವನ್ನು ಜಾರಿಗೆ ತರಲು ಹಿಂಜರಿಯುತ್ತಿರುವದರ ಹಿಂದಿನ ಮರ್ಮವಾದರೂ ಏನಿರಬಹುದು ಎಂದು ಯೋಚಿಸಿದರೇ, ರಾಜಕಾರಣ ಮತ್ತು ಪೋಲೀಸ್ ವ್ಯವಸ್ಥೆಯ ನಡುವೆ ಈಗಾಗಲೇ ಎಂತಹ ಎಷ್ಟು 'ಘನ' ಸಂಬಂಧ ಸ್ಥಾಪಿತವಾಗಿದೆ ಎಂಬುದು ಅರ್ಥವಾಗುತ್ತದೆ. ಇಂದು ಕೋಟ್ಯಾಂತರ ರೂಪಾಯಿಗಳ ದಂಧೆಯಾಗಿ ಪರಿವರ್ತಿತವಾಗಿರುವ ರಾಜಕಾರಣದ ಆಟದಲ್ಲಿ ಪೋಲೀಸ್ ವ್ಯವಸ್ಥೆ ಈಗ ಇನ್ನೂ ಸುಲಭವಾಗಿ ಹಾಗೂ ಸಲೀಸಾಗಿ ದಾಳವಾಗಿ ಬಳಕೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮಗಳನ್ನು ಸಾಮಾನ್ಯ ಜನತೆಯೇ ಎದುರಿಸಬೇಕಾಗುತ್ತದೆ. ಆದುದರಿಂದ, ನಾಗರಿಕ ಸಮಾಜ ಈ ಪ್ರವೃತ್ತಿಯ ವಿರುದ್ಧ ಸದಾ ಎಚ್ಚರದಿಂದಿರುವ ಅಗತ್ಯವಿದೆ. ಇಂದು ಕಡಿದಾಳು ಶಾಮಣ್ಣ... ನಾಳೆ?

ಅಂದಹಾಗೆ : ನಿಮ್ಮ ಪಕ್ಷದ ಶಾಸಕ ಪುಟ್ಟಣ್ಣ ಖಾಸಗಿ ಶಾಲೆಗಳ ಪರವಾಗಿ ನಿಂತು ಸಕರ್ಾರದ ಅಧಿಕೃತ ಶಾಲಾ ಶಿಕ್ಷಣ ನೀತಿಯ ವಿರುದ್ಧವೇ ಹೋರಾಡುತ್ತಿದ್ದಾರಲ್ಲ?
-ಅದು ಅವರ ವೈಯುಕ್ತಿಕ ನಿಲುವು. ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ.

ಸಚಿವ ಇಕ್ಬಾಲ್ ಅನ್ಸಾರಿಯವರು ನಿಮ್ಮ ಸಮ್ಮುಖದಲ್ಲೇ ಬಿ.ಜೆ.ಪಿ.ಗೆ ಅಧಿಕಾರ ಹಸ್ತಾಂತರವಿಲ್ಲ ಎಂದಿದ್ದಾರಲ್ಲ?
-ಅದು ಅವರ ಚುನಾವಣಾ ತಂತ್ರವಿರಬಹುದು. ಅದಕ್ಕೂ ಪಕ್ಷದ ನೀತಿಗೂ ಸಂಬಂಧವಿಲ್ಲ.

ನಿಮ್ಮ ಶಾಸಕ ಎಂ.ಪಿ.ವೆಂಕಟೇಶ್, ಕುಮಾರಸ್ವಾಮಿಯವರ ಹೊರತಾಗಿ ಬೇರೆ ಮುಖ್ಯಮಂತ್ರಿಗೆ ಶಾಸಕರ ಬೆಂಬಲವಿಲ್ಲ ಎಂದು ಘೋಷಿಸಿದ್ದಾರಲ್ಲ?
-ಅದು ವೈಯುಕ್ತಿಕ ವಿಶ್ವಾಸದ ಮಾತಷ್ಟೇ. ಅದರ ಹೊರತಾಗಿ ಅದಕ್ಕೆ ಬೇರೆ ಅರ್ಥ ಕೊಡಬೇಕಿಲ್ಲ.

ಹಾಗಾದರೆ, ಜಾತ್ಯತೀತ ಜನತಾ ದಳವೆಂಬುದು ಒಂದು ದಿಕ್ಕು-ದೆಸೆಯಿರುವ ರಾಜಕೀಯ ಪಕ್ಷವೋ ಅಥವಾ ರಾಜಕೀಯ ದಂಧೆಕೋರರ ಒಂದು ಸಮಯ ಸಾಧಕ ಗುಂಪೋ?

ಇದಕ್ಕೆ ಉತ್ತರ ಹೇಳಲು ವೈ.ಎಸ್.ವಿ.ದತ್ತರೇ ಬೇಕಿಲ್ಲ!

Rating
No votes yet

Comments