ನಾಲ್ಕನೆಯ ವರ್ಷ

ನಾಲ್ಕನೆಯ ವರ್ಷ

ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕಾಲ ಉರುಳುವುದಿಲ್ಲ, ಓಡುತ್ತದೆ ಅನ್ನುವುದೇ ದಿಟವೇನೋ.

ಆದರೆ ಕೆಲವು ಸಂಗತಿಗಳು ಮಾತ್ರ ಬದಲಾಗುವುದೇ ಇಲ್ಲ. ಅದರಲ್ಲಿ ಕೆಲವು ಒಳ್ಳೆಯವು. ಕೆಲವು ಕೆಟ್ಟವು. ಅಂತಹುದರಲ್ಲಿ ಮತ್ತೊಂದು ಗಲಭೆ ನಮ್ಮೂರಿನಲ್ಲಿ ನಡೆಯುತ್ತಿದೆಯಂತೆ. ಕೇಳಿದೊಡನೆಯೇ ಮನೆಗೆ ಮಾತನಾಡಿ, ಏನೂ ತೊಂದರೆಯಿಲ್ಲ ಅನ್ನುವುದನ್ನು ತಿಳಿಯುವವರೆಗೆ ಮನಸ್ಸು ತಡೆಯಲೇ ಇಲ್ಲ. ಇಂತಹ ಘಟನೆ ಹಿಂದೆಯೂ ಆಗಿದ್ದು, ನೋಡಿದ್ದು, ಯಾವುದೇ ತಪ್ಪು ಇಲ್ಲದವರೇ ತೊಂದರೆಗೊಳಗಾಗಿದ್ದು ಎಲ್ಲ ನೋಡಿದ್ದೇನೆ. ಇವಕ್ಕೆ ಕೊನೆ ಎಲ್ಲಿ?

ಇದನ್ನು ನೋಡಿದಾಗ ನನಗೆ ಮತ್ತೆ ಹಿಂದೊಮ್ಮೆ ಮಾಡಿದ್ದ ಅನುವಾದವೇ ಮತ್ತೆ ನೆನಪಿಗೆ ಬಂದಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ೬೦೦ ವರ್ಷಗಳ ಹಿಂದೆ ಇದ್ದ ಸಮಚಿತ್ತ ಈಗ ಅರವತ್ತು ವರ್ಷಗಳಿಂದ ಮರೆಯೇ ಆಗಿಬಿಟ್ಟಿದೆಯೇ? ಇದಕ್ಕೆ ನಮ್ಮ ರಾಜಕಾರಣಿಗಳ ಕುಮ್ಮಕ್ಕು ಎಷ್ಟು? ಗೊತ್ತಿಲ್ಲ.

೧೩೯೭ರಲ್ಲಿ ಬೇಲೂರಿನ ಶಾಸನವೊಂದರಲ್ಲಿ ಕೆತ್ತಲಾಗಿರುವ ಶ್ಲೋಕವೊಂದಿದು:

ಆವನನು ಶೈವರು ಶಿವನೆಂದು ಹೊಗಳುವರೊ,
ವೇದಾಂತಿಗಳಿಗಾವನು ಪರಬೊಮ್ಮರೂಪಿಯೋ,
ಬೌದ್ಧರು ಬುದ್ಧನಿವನೆಂದಾಣೆ ಇಡುವರೋ,
ನೈಯಾಯಿಕರು ಆವನಿಗೆ ಕರ್ತನಿವನೆಂಬರೋ,
ಜಿನನ ಹಾದಿಯ ಹಿಡಿದವರಿಗಾರು ಅರಿಹಂತನೋ,
ಕಾರಣವ ಹುಡುಕುವರಿಗಿದು ಮಾಡಿದಾ ಕೆಲಸವೋ
ಅವನೆ ಕಾಯಲೆಮ್ಮೆಲ್ಲರನುದಿನವು ಕೇಳಿದುದ ಕೊಟ್ಟು
ಮೂರು ಲೋಕದ ಅರಸು ಬೇಲೂರ ಚೆನ್ನಿಗನು**

ಸಂಸ್ಕೃತ ಮೂಲ:  ಬೇಲೂರು ಚೆನ್ನಕೇಶವ ದೇವಾಲಯದ ಗೋಡೆಯಲ್ಲಿರುವ ಶಾಸನ

ಯಂ ಶೈವಾಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ
ಬೌದ್ಧಾಃ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾ:
ಅರ್ಹನ್ನಿತ್ಯಥ ಜೈನಶಾಸನರತಾ: ಕರ್ಮೇತಿ ಮೀಮಾಂಸಕಾ:
ಸೋಯಂ ವೋ ವಿದಧಾತು ವಾಂಚಿತಫಲಂ ಶ್ರೀ ಕೇಶವೇಶಸ್ಸದಾ

ನನ್ನೂರಿನಲ್ಲಿ ಹೆಚ್ಚಿನ ಜನಕ್ಕೆ ತೊಂದರೆಯಾಗದೇ ಹೋಗಲಿ ಅಂತ ಬಯಸುವುದಲ್ಲದೆ, ಹಾರೈಸುವುದಲ್ಲದೆ ನಾನು ಇನ್ನೇನು ತಾನೇ ಮಾಡಬಲ್ಲೆ?

-ಹಂಸಾನಂದಿ

Rating
No votes yet

Comments