ಬಾಣಂತಿ ಹಸ್ತ

ಬಾಣಂತಿ ಹಸ್ತ

ಸಾಧಕರು, ಸಂತರು, ಮಾಂತ್ರಿಕರು, ಅಘೋರಿಗಳದೇ ಇತ್ತೀಚೆಗೆ ಮಾಧ್ಯಮಗಳ ಮುಖ್ಯ ಬಂಡವಾಳವಾದಂತಿದೆ. ಹಾಗೆ ನಿನ್ನೆ (೧೨-೦೩-೨೦೧೦) ರಾತ್ರಿ ನಮ್ಮ ಮನೆಯ ತರಕಾರಿ ಬುಟ್ಟಿಯಲ್ಲೊಂದು ಹಸ್ತದಂತಹ ಆಕಾರವನ್ನು ಕಂಡಾಗ   ಹಿಂದೆ ನಾವು ಚಿಕ್ಕವರಿರುವಾಗ  ಅಡಿಕೆ ಸುಗ್ಗಿಯ ಕಾಲಗಳಲ್ಲಿ ಬರುತ್ತಿದ್ದ ಕೆಲವು ಗಿಡಬುಡಿಕಿಗಳ ನೆನಪಾಯಿತು. (ಅದನ್ನು ಕ್ಲಿಕ್ಕಿಸಿದ್ದೇನೆ.) ಎಣ್ಣೆ ಹಚ್ಚಿಟ್ಟಂತಹ ಕಪ್ಪು ಸಣಕಲು ದೇಹದ ತಲೆಯ ಮೇಲೊಂದು ಕೆಂಬಣ್ಣದ ರುಮಾಲು,  ಬಿಳಿ ಅಂಗಿಯ ಮೇಲೊಂದು ಕಪ್ಪು ಕೋಟು ಹೆಗಲ ಮೇಲೊಂದು ಕಂಪು ಬಣ್ಣದ ಶಲ್ಯ, ಸಾಲದೆಂಬಂತೆ ಮುಖದ ಮೇಲೊಂದು ದೊಡ್ಡ ಮೀಸೆ, ಗುಳು ಗುಳು ಗುಟ್ಟುವ ದೊಡ್ಡ ಕಣ್ಣುಗಳು ಅದರ ಮಧ್ಯೆ ಅಚ್ಚ ಕೆಂಪು ಕುಂಕುಮದ ರಾಶಿ (ಬೊಟ್ಟು ಎಂದರೆ ಚಿಕ್ಕದಾಗುವುದರಿಂದ) ಅದೇ ಬಣ್ಣದ ಸೊಂಟ ಕಟ್ಟು, ಬಿಳಿ ಪಂಚೆ ಕೈಯಲ್ಲೊಂದು ಅಂಕು ಡೊಂಕಾದ ಎಣ್ಣೆ ಹಚ್ಚಿ ಕಪ್ಪಾಗಿಸಿದ ದಂಡ, ಆ ದಂಡದ ತುದಿಯಲ್ಲಿ  ಅಥವಾ ಕೈಲ್ಲಿ ಸುಟ್ಟು ಕರಕಲಾದಂತೆ ಕಾಣುತ್ತಿದ್ದ ಕೈ ಯಂತೆ ಕಾಣುತ್ತಿದ್ದ ಒಂದು ವಸ್ತು ಅದೇ ಅವರೇ ಹೇಳಿದಂತಹ ಬಾಣಂತಿ ಹಸ್ತ.  ಇದೇ ಅವರು ಹೇಳುವ ಭವಿಷ್ಯದ ಮಹಾ ಅಸ್ತ್ರ.


ಇವರು ಇದನ್ನು ಸ್ಮಶಾನ ಭೂಮಿಯಲ್ಲಿ ಸಾಧನೆ ಮಾಡಿ, ಚೊಚ್ಚಲ ಬಾಣಂತಿಯು ಮಗುವಿಗೆ ಜನ್ಮ ನೀಡಿದ ತಕ್ಷಣ ಮರಣ ಹೊಂದಿದ್ದಲ್ಲಿ, ಅಂತಹ ಮಹಿಳೆಯರ ಚಿತೆಯಲ್ಲಿಂದ ಸಂಪಾದಿಸಿದ ಹಸ್ತ ಎಂದು ಹೇಳುತ್ತಿದ್ದರು. ಇಂತಹವರು ಹಸ್ತ ಸಿದ್ಧಿ ಮಾಡಿಕೊಂಡವರು. ಇದರ ಆಧಾರದಲ್ಲಿ ಭವಿಷ್ಯ ಹೇಳುವವರು. ಅಲ್ಲದೇ ಮಂತ್ರ ಸಿದ್ಧಿ ಹೊಂದಿದವರು ಎಂದು ಹೇಳುತ್ತಿದ್ದರು. ಇವರನ್ನು ಕಂಡರೆ ಸಾಮಾನ್ಯವಾಗಿ ಕೆಳ ವರ್ಗದ ಕುಟುಂಬಗಳವರಿಗೆ ಭಯ ಭಕ್ತಿ ಹೆಚ್ಚಾಗಿತ್ತು. ಇದನ್ನೇ ಅಸ್ತ್ರ ವನ್ನಾಗಿಸಿಕೊಂಡ ಅವರು ಅವರ ಮನೆಯಲ್ಲಿ ಮಾಟ ತೆಗೆಯುವುದು, ಪೂಜೆ ಹಾಕುವುದು, ಬಲಿ ನೆರವೇರಿಸುವುದು, ಇತ್ಯಾದಿಗಳನ್ನು ಮಾಡಿ ಅವರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದುದೆಲ್ಲ ನನ್ನ ಕಣ್ಣೆದುರಿನಲ್ಲಿ ಒಮ್ಮೆ ಸುಳಿದಾಡಿತು.


ಇವರು ಒಮ್ಮೊಮ್ಮೆ ಕೆಲವರು ಮೇಲ್ವರ್ಗಗಳೆನಿಸಿಕೊಂಡವರ ಮನೆಗಳಲ್ಲಿಯೂ ಒಂಟಿ ಹೆಂಗಸರು, ಮಕ್ಕಳು ಇದ್ದುದನ್ನು ಖಾತ್ರಿ ಪಡಿಸಿಕೊಂಡ ನಂತರ ಹೆದರಿಸಿ ಸಾಕಷ್ಟು ಕಮಾಯಿ ಮಾಡಿಕೊಳ್ಳುತ್ತಿದ್ದರೆಂತಲೂ ಹೇಳುತ್ತಿದ್ದರು. (ನಾನೇನು ನೋಡಿಲ್ಲ).


ಇದು ಒಂದೆಡೆ ಯಾದರೆ ನನ್ನದೇ ಇತ್ತೀಚಿನ ಅನುಭವವೊಂದು ತುಂಬಾ ಭಿನ್ನವಾದುದು. ಮೊನ್ನೆ ಜನವರಿ ೧೪ರಂದು ಸಂಭವಿಸಿದ ಸಂಕ್ರಾಂತಿಯಂದು ನನ್ನ  ಕೆಮರಾ ಹಿಡಿದು ಮನೆಯ ಅಂಗಳದಲ್ಲೇ ಇದ್ದೆ. ಬೆಳಿಗ್ಗೆ ಸುಮಾರು ೧೧ರ ಸಮಯ ನಮ್ಮೂರಿಗೊಬ್ಬ ಗಾಳಿ ಮಾರಿಯಮ್ಮನ್ನು ಹೊತ್ತುಕೊಂಡು ಬಂದಿದ್ದ. ಬಂದವ ನಮ್ಮ ಪಕ್ಕದ ಮನೆಯಲ್ಲಿ ಊರಿನ ಕೆಲ ಹೆಂಗಸರು ಚಾಲಿ ಸುಲಿಯುತ್ತಿದ್ದರು. ಈತ ಬಂದವನೇ ತನ್ನ ದೇವಿಯ ಪೆಟ್ಟಿಗೆಯ ಮುಚ್ಚಲ ತೆಗೆದು ನಡು ರಸ್ತೆಯಲ್ಲಿಟ್ಟು ಛಾಟಿಯನ್ನೊಮ್ಮೆ ಬೀಸಿ, ಅವನ ಡರಮುರುಗಿಯಿಂದ ಬರ‍್ರ ಬರ‍್ರ ಸದ್ದು ಹೊರಡಿಸುತ್ತ ಒಂದು ಮರ (ವಂದರಿ) ಅಕ್ಕಿ, ಒಂದು ಮರ ಅಡಿಕೆ, ಒಂದು ಕಾಯಿ ಕೊಡಬೇಕು. ಇತ್ಯಾದಿಯಾಗಿ ತನ್ನ ನಿತ್ಯದ ಗತ್ತಿನಲ್ಲಿ ಕೂಗುತ್ತಿದ್ದ. ಹಾಗೆ ಅವರ ಮನೆಯೊಡತಿ ಅದೆಲ್ಲಾ ಇಲ್ಲ ಕೊಟ್ಟಷ್ಟು ಒಯ್ಯ ಬೇಕು ಇತ್ಯಾದಿಯಾಗಿ ಹೇಳುತ್ತಿದ್ದರು. ಹಾಗೆ ನಮ್ಮ ಮನೆಗೆ ಬರುತ್ತಾನೆಂದು ತಿಳಿದು ನಮ್ಮ ಅಣ್ಣನ ಮಗ ಅವನನ್ನು ನೀನೇ ಹ್ಯಾಂಡ್ಲ ಮಾಡುವುದೇ ಸರಿ ಎಂದು ನನ್ನಲ್ಲಿ ಹೇಳಿದ. ನಾನೂ ಸಹ ಸರಿ ಬಿಡು ಎಂದು ಅವನು ಬಂದ ತಕ್ಷಣವೇ ಏನಪಾ ನಿಂದು ಎಂದೆ, ಯಥಾಪ್ರಕಾರ ಅವನು ತನ್ನ ಕೆಸೆಟ್‌ ಹಾಕಿದ. ದೇವಿ ಬಂದಿದ್ದಾಳೆ ಮನೆಬಾಗಿಲಿಗೆ ಕರೆಸಿಕೊಳ್ಳ ಬೇಕು. ಒಂದು ಮರ . . . . .  ಇತ್ಯಾದಿ. ನಾನೇ ದೇವರು, ನಾನು ದೇವಿ ಕರೆಸಿಕೊಳ್ಳುವುದಿಲ್ಲ ಎಂದು ತಮಾಷೆ ಮಾಡಿದೆ. ಅದರೂ ಅವನು ತನ್ನ ಪ್ರವರ ಬಿಡದಿದ್ದಾಗ ತಮಾಷೆಗಾಗಿ ನೀನು ಬೇಕಾದರೆ ಪರೀಕ್ಷೆ ಮಾಡಿ ನೋಡು ನನ್ನನ್ನು ಕಿರಿ ಹಿಡಿದು ನೋಡಿದರೆ ನೀನು ನಿಂತಲ್ಲಿಯೇ ಕರಗಿ ಹೋಗುವೆ ಎಂದೆ. ತಕ್ಷಣ ಅವನಿಗೇನನ್ನಿಸಿತೋ ನಾ ತಿಳಿಯೆ. ಅವನು ಹಿಂತಿರುಗಿ ಜೋರಾಗಿ ಹೊರಟೇ ಬಿಟ್ಟ. ತಾಳಪ್ಪ ನಿನ್ನದೊಂದು, ನಿನ್ನ ದೇವಿಯದೊಂದು ಫೋಟೋ ತೆಗೆದುಕೊಳ್ಳುತ್ತೇನೆ ಎಂದರೂ ಬೇಡ ಸ್ವಾಮಿ ಎಂದು ಹೇಳುತ್ತಾ ಅಕ್ಷರಷಃ ಓಡತೊಡಗಿದಾಗ ಹಿಂಬದಿಯಿಂದಲೇ ಒಂದು ಫೋಟೋ ಕ್ಲಿಕ್ಕಿಸಿಕೊಂಡೆ. ಅದನ್ನು ಇದರೊಂದಿಗೆ ಇಡಲು ಪ್ರಯತ್ನಸುತ್ತೇನೆ.

Rating
No votes yet

Comments