ಉಗಾದಿ, ವಸಂತ ನವರಾತ್ರಿ ಹಾಗೂ ಪ್ರಕೃತಿ
ಭಾರತ ಉಪಖಂಡದಲ್ಲಿ ವಾಸ ಮಾಡುವ ಜನರು ಮೂಲತಃ ಮಾತೃದೇವತೆಯ ಆರಾಧಕರಾಗಿದ್ದರು. ಆನಂತರ ವೇದಕಾಲದ ದೇವತೆಗಳು ಹಾಗೂ ಪುರಾಣದ ದೇವತೆಗಳು ಬಂದರು. ಹೊಸ ಹೊಸ ದೇವತೆಗಳು ಬಂದರೂ ಸಹಾ ಮಾತೃ ದೇವತೆಯ ಪ್ರಾಧಾನ್ಯತೆ ಕಡಿಮೆಯಾಗಲಿಲ್ಲ. ಮಾತೃದೇವತೆಯು ಹೊಸ ಹೊಸ ರೂಪದಲ್ಲಿ, ಹೊಸ ಹೊಸ ಹೆಸರಿನಲ್ಲಿ ಜನರ ಭಕ್ತಿ-ಪ್ರೀತಿಗೆ ಪಾತ್ರವಾದಳು. ಅಸಂಖ್ಯ ಪುರುಷ ಪ್ರಧಾನ ದೇವತೆಗಳ ನಡುವೆ ಮಾತೃದೇವತೆಯು ತನ್ನ ಸ್ಥಾನವನ್ನು ಉಳಿಸಿಕೊಂಡಿರುವುದು ನಿಜಕ್ಕೂ ಒಂದು ಚೋದ್ಯ.
ಮಾತೃದೇವತೆಯ ಆರಾಧನೆಯಲ್ಲಿ ನವರಾತ್ರಿ ಉತ್ಸವ ಮುಖ್ಯವಾದದ್ದು. ಒಂದು ವರ್ಷದಲ್ಲಿ ಐದು ಸಲ ನವರಾತ್ರಿ ಉತ್ಸವವನ್ನು ಆಚರಿಸುವ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ. ಚೈತ್ರಮಾಸದಲ್ಲಿ ವಸಂತ ನವರಾತ್ರಿ, ಆಷಾಢ ಮಾಸದಲ್ಲಿ ಶಾಕಾಂಬರೀ ನವರಾತ್ರಿ, ಅಶ್ವಯುಜದಲ್ಲಿ ಶರನ್ನವರಾತ್ರಿ, ಪುಷ್ಯ ಮಾಸದಲ್ಲಿ ಪೌಷ ನವರಾತ್ರಿ ಹಾಗೂ ಮಾಘ ಮಾಸದಲ್ಲಿ ಮಾಘ ನವರಾತ್ರಿ. ಆದರೆ ಇಂದಿನ ದಿನಗಳಲ್ಲಿ ಕೇವಲ ಶರನ್ನವರಾತ್ರಿ ಮಾತ್ರ ವಿಸ್ತೃತ ಆಚರಣೆಯಲ್ಲಿದೆ. ಉಳಿದ ನಾಲ್ಕು ನವರಾತ್ರಿಗಳು ಹೆಚ್ಚು ಜನರಿಗೆ ಪರಿಚಯವಿಲ್ಲ. ಹಾಗಾಗಿ ಅವುಗಳ ಆಚರಣೆ ಅಪರೂಪವೇ ಸರಿ.
ವಸಂತ ನವರಾತ್ರಿಯು ಶರನ್ನವರಾತ್ರಿಯಷ್ಟು ಪ್ರಚಲಿತದಲ್ಲಿ ಇರದಿದ್ದರೂ ಸಹಾ, ಕೆಲವೆಡೆ ಆಚರಣೆಯಲ್ಲಿದೆ. ದಕ್ಷಿಣ ಭಾರತಕ್ಕಿಂತಲೂ ಉತ್ತರ ಭಾರತದಲ್ಲಿ ಹೆಚ್ಚು ಆಚರಣೆಯಲ್ಲಿದೆ ಎಂದು ಕೇಳಿ ಬಲ್ಲೆ. ಈ ಹಬ್ಬವನ್ನು ಚೈತ್ರ ನವರಾತ್ರಿ, ಬಸಂತ ನವರಾತ್ರಿ, ರಾಮ ನವರಾತ್ರಿ ಎಂದೂ ಕರೆಯುವುದುಂಟು. ಈ ವಸಂತ ನವರಾತ್ರಿಯು ಉಗಾದಿಯ ದಿನ, ಅಂದರೆ ಚೈತ್ರ ಶುದ್ಧ ಪಾಡ್ಯದಿಂದ ಆರಂಭವಾಗಿ ಚೈತ್ರ ಶುದ್ಧ ನವಮಿಯಂದು ಕೊನೆಗೊಳ್ಳುತ್ತದೆ. ಈ ನವಮಿಯು ರಾಮನವಮಿಯೂ ಆಗಿರುತ್ತದೆ. ರಾಮ ಇದೇ ದಿನ ಹುಟ್ಟಿದನು ಎಂದು ಪುರಾಣ ಹೇಳುತ್ತದೆ. ವಸಂತ ನವರಾತ್ರಿ ಹೇಗೆ ಆರಂಭವಾಯಿ ಎಂಬುದಕ್ಕೆ ಒಂದು ಕಥೆಯಿದೆ. ಅದರ ಸಂಕ್ಷಿಪ್ತ ವಿವರಣೆ ಹೀಗಿದೆ.
ಕೋಸಲ ದೇಶ. ಅದರ ರಾಜಧಾನಿ ಅಯೋಧ್ಯಾ. ರಾಜ ಧ್ರುವಸಿಂಧು. ಈತನಿಗೆ ಇಬ್ಬರು ಹೆಂಡತಿಯರು. ಕಳಿಂಗ ರಾಜ್ಯದ ಅರಸನ ವೀರಸೇನನ ಮಗಳು ಮನೋರಮೆ ಹಾಗೂ ಉಜ್ಜೈನಿಯ ಅರಸು ಯುಧಾಜಿತನ ಮಗಳು ಲೀಲಾವತಿ. ಧ್ರುವಸಿಂಹ ಹಾಗೂ ಮನೋರಮೆಯ ಮಗ ಸುದರ್ಶನ. ಧ್ರುವಸಿಂಹ ಹಾಗೂ ಲೀಲಾವತಿಯರಿರಿಗೆ ಶತ್ರುಜಿತ್ ಎಂಬ ಮಗ.
ಧ್ರುವಸಿಂಹನು ಬೇಟೆಯಾಡಲು ಕಾಡಿಗೆ ಹೋದಾಗ ಅವನನ್ನು ಒಂದು ಸಿಂಹವು ಕೊಲ್ಲುತ್ತದೆ. ರಾಜನ ಮರಣಾ ನಂತರ ಪಟ್ಟದರಾಣಿಯ ಮಗನಾದ ಸುದರ್ಶನನಿಗೆ ಪಟ್ಟಾಭಿಷೇಕವನ್ನು ಮಾಡಬೇಕೆನ್ನುವಾಗ, ಉಜ್ಜೈನಿಯ ಅರಸನಾದ ಯುಧಾಜಿತನು ತನ್ನ ಮೊಮ್ಮೊಗನಿಗೆ ಪಟ್ಟಾಭಿಷೇಕವಾಗಬೇಕು ಎಂದು ದಂಡೆತ್ತಿ ಬರುತ್ತಾನೆ. ಆಗ ಮನೋರಮೆಯ ತಂದೆಯೂ ಹಾಗೂ ಕಳಿಂಗಾಧಿಪತಿಯೂ ಆದ ವೀರಸೇನನು ನ್ಯಾಯಯುತವಾಗಿ ತನ್ನ ಮೊಮ್ಮೊಗನಿಗೆ ರಾಜ್ಯ ದಕ್ಕಬೇಕೆಂದು ಪ್ರತಿಯುದ್ಧಕ್ಕೆ ಸಿದ್ಧನಾಗುತ್ತಾನೆ. ಯುದ್ಧ ನಡೆಯುತ್ತದೆ. ವೀರಸೇನ ಯುದ್ಧದಲ್ಲಿ ಮರಣಿಸುತ್ತಾನೆ. ಮನೋರಮೆ, ಸುದರ್ಶನರು ಮತ್ತು ನಪುಂಸಕ ಸೇವಕನೊಬ್ಬ ತಲೆತಪ್ಪಿಸಿಕೊಂಡು ಕಾಡಿಗೆ ಹೋಗಿ ಭರದ್ವಾಜ ಋಷಿಗಳ ಆಶ್ರಮದಲ್ಲಿ ಆಶ್ರಯ ಪಡೆಯುತ್ತಾರೆ. ಶತ್ರುಜಿತ್ ಕೋಸಲ ದೇಶದ ರಾಜನಾಗುತ್ತಾನೆ.
ಒಂದು ಸಲ ಆಶ್ರಮವಾಸಿಯೊಬ್ಬನು ನಪುಂಸಕ ಸೇವಕನನ್ನು ಅವನ ‘ಕ್ಲೀಬ’ ಎಂದು ಕರೆಯುತ್ತಾನೆ. ಸಂಸ್ಕೃತದಲ್ಲಿ ಕ್ಲೀಬ ಎಂದರೆ ನಪುಂಸಕ ಎಂದು ಅರ್ಥ. ರಾಜಕುಮಾರ ಸುದರ್ಶನನ ಕಿವಿಗೆ ಕ್ಲೀಬ ಶಬ್ದದ ಮೊದಲ ಭಾಗವಾದ ಕ್ಲೀ ಮಾತ್ರ ಕೇಳಿಸುತ್ತದೆ. ಅವನು ಕ್ಲೀ ಅಕ್ಷರವನ್ನು ಕ್ಲೀಂ ಎಂದು ಉಚ್ಚರಿಸಲು ಆರಂಭಿಸುತ್ತಾನೆ. ಕ್ಲೀಂ ಎನ್ನುವುದು ಆದಿಪರಾಶಕ್ತಿಯ ಬೀಜಮಂತ್ರ. ಈ ಬೀಜಾಕ್ಷರ ಮಂತ್ರವನ್ನು ನಿರಂತರವಾಗಿ ಪಠಿಸಿದಾಗ, ಸುದರ್ಶನನಿಗೆ ಆದಿ ಪರಾಶಕ್ತಿಯ ದರ್ಶನವಾಗುತ್ತದೆ. ಸುದರ್ಶನನಿಗೆ ಅಲೌಕಿಕವಾದ ಬಿಲ್ಲು ಹಾಗೂ ಅಕ್ಷಯ ತೂಣೀರವನ್ನು ನೀಡುತ್ತಾಳೆ.
ಕಾಶೀರಾಜನ ಪಂಡಿತವರ್ಗ ಒಂದು ಸಲ ಭರದ್ವಾಜ ಋಷಿಯ ಆಶ್ರಮದಲ್ಲಿ ಸುದರ್ಶನನ್ನು ನೋಡುತ್ತಾರೆ. ತಮ್ಮ ರಾಜಕುಮಾರಿಗೆ ಶಶಿಕಲಳಿಗೆ ಇವನೇ ಸರಿಯಾದ ವರ ಎಂದು ತೀರ್ಮಾನಿಸಿ ಸ್ವಯಂವರಕ್ಕೆ ಬರುವಂತೆ ಆಹ್ವಾನವನ್ನು ನೀಡುತ್ತಾರೆ. ಸ್ವಯಂವರಕ್ಕೆ ಸುದರ್ಶನ ಹೋಗುತ್ತಾನೆ. ಆಗ ರಾಜಕುಮಾರಿ ಶಶಿಕಲಾ ಸುದರ್ಶನನಿಗೆ ವರಮಾಲೆಯನ್ನು ತೊಡಿಸುತ್ತಾಳೆ. ಸ್ವಯಂವರಕ್ಕೆ ಬಂದಿದ್ದ ಯುಧಾಜಿತ್ ತನಗೆ ಅವಮಾನವಾಯಿತು ಎಂದು ಭಾವಿಸಿ ಕಾಶೀರಾಜನ ಮೇಲೆ ಆಕ್ರಮಣ ಮಾಡುತ್ತಾನೆ. ಯುದ್ಧ ಆರಂಭವಾಗುತ್ತದೆ. ಕಾಶೀರಾಜ ಹಾಗೂ ಸುದರ್ಶನರ ಪರವಾಗಿ ಸ್ವಯಂ ಆದಿಪರಾಶಕ್ತಿ ಯುದ್ಧಕ್ಕೆ ನಿಲ್ಲುತ್ತಾಳೆ. ಅದನ್ನು ನೋಡಿ ಯುಧಾಜಿತ್ ಅಪಹಾಸ್ಯ ಮಾಡುತ್ತಾನೆ. ದೇವಿಯು ಒಂದು ಸಲ ಹೂಂಕರಿಸಿದ ಕೂಡಲೆ ಯುಧಾಜಿತ್ ಹಾಗೂ ಆತನ ಸೈನ್ಯ ಸುಟ್ಟು ಭಸ್ಮವಾಗುತ್ತದೆ.
ಸುದರ್ಶನ ಹಾಗೂ ಶಶಿಕಲಾ, ಕೋಸಲ ದೇಶದ ಅರಸರಾಗುತ್ತಾರೆ. ದೇವಿಯು ಕೃಪೆಯಿಂದ ತಮಗೆ ಒದಗಿದ ಭಾಗ್ಯವನ್ನು ಕಂಡು ದೇವಿಯನ್ನು ೯ ದಿನಗಳ ಕಾಲ ಆರಾಧಿಸುತ್ತಾರೆ. ಈ ಆರಾಧನೆಯು ವಸಂತ ನವರಾತ್ರಿ ಎಂದು ಪ್ರಸಿದ್ಧವಾಗುತ್ತದೆ.
ಕೋಸಲ ದೇಶದ ಎಲ್ಲ ಅರಸರು ವಸಂತ ನವರಾತ್ರಿಯ ಉತ್ಸವವನ್ನು ತಪ್ಪದೇ ಆಚರಿಸುತ್ತಾ ಬರುತ್ತಾರೆ. ಈ ಸುದರ್ಶನನ ವಂಶವೃಕ್ಷದಲ್ಲಿ ಮುಂದೆ ರಾಮ,ಲಕ್ಷಣ, ಭರತ, ಶತ್ರುಘ್ನಾದಿಗಳು ಹುಟ್ಟುತ್ತಾರೆ. ಮುಂದೆ ರಾಮನಿಗೆ ಸೀತಾ ವಿಯೋಗವಾಗುತ್ತದೆ. ಕಾಡಿನಲ್ಲಿ ರಾಮನು ಲಕ್ಷಣನ ಒಡಗೂಡಿ ದೇವಿಯ ವಸಂತ ನವರಾತ್ರಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಿದಾಗ, ದೇವಿಯು ಸೀತೆಯು ಮರಳಿ ರಾಮಸಾನ್ನಿಧ್ಯವನ್ನು ಪಡೆಯುವಂತೆ ಆಶೀರ್ವಾದ ಮಾಡುತ್ತಾಳೆ. ಇದು ಕಥೆ.
ಕಾಲಕ್ರಮೇಣ ನಮ್ಮ ಜನ ಸುದರ್ಶನನನ್ನು ಮರೆತರು. ಶ್ರೀರಾಮಚಂದ್ರನ ಬದುಕು ಅಪಾರವಾದ ಪರಿಣಾಮ ಬೀರಿತು. ಅದರ ಫಲವಾಗಿ ದೇವಿಯ ಆರಾಧನೆಯಾದ ವಸಂತ ನವರಾತ್ರಿಯು ಶ್ರೀರಾಮ ನವರಾತ್ರಿಯಾಗಿ ಬಳಕೆಗೆ ಬಂದಿತು. ಉಗಾದಿಯಂದು ಆರಂಭವಾಗಿ ಶ್ರೀರಾಮನ ಹುಟ್ಟಿದ ದಿನವಾದ ನವಮಿಯಂದು ಕೊನೆಗೊಳ್ಳುತ್ತದೆ. ಈಗಲೂ ಕೆಲವೆಡೆ ಈ ಉತ್ಸವ ಸಣ್ಣ ಪ್ರಮಾಣದಲ್ಲಾದರೂ ನಡೆಯುತ್ತದೆ.
ವಸಂತ ನವರಾತ್ರಿಯನ್ನು ಪುನರುಜ್ಜೀವನಗೊಳಿಸಬೇಕು ಎಂದು ನನಗನಿಸುತ್ತದೆ.
ಇದು ಮೂಲತಃ ದೇವಿಯ ಆರಾಧನೆ. ಅಂದರೆ ಪ್ರಕೃತಿಯ ಆರಾಧನೆ. ಚೈತ್ರಮಾಸದಲ್ಲಿ ಎಲ್ಲೆಲ್ಲೂ ಹಸಿರು ಉಕ್ಕುತ್ತಿರುತ್ತದೆ. ಹಾಗಾಗಿ ಹಸಿರೇ-ಉಸಿರು ಎನ್ನುವುದರ ಬಗ್ಗೆ ಜನಜಾಗೃತಿಯನ್ನು ಮಾಡಬೇಕಾಗುತ್ತದೆ. ಹಸಿರಿನ ಬಗ್ಗೆ, ಹಸಿರನ್ನು ಉಳಿಸಿಕೊಳ್ಳುವ ಬಗ್ಗೆ, ಬೆಳೆಸುವ ಬಗ್ಗೆ ಒಂಬತ್ತು ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಕಿಕೊಂಡರೆ, ನಿಜಕ್ಕೂ ಅದು ಪ್ರಕೃತಿಯ ಆರಾಧನೆಯಾಗುತ್ತದೆ.
ಈ ಬಗ್ಗೆ ನಾವು ಮನಮಾಡಬೇಕಲ್ಲವೆ!
-ಡಾ.ನಾ.ಸೋಮೇಶ್ವರ
Comments
ಉ: ಉಗಾದಿ, ವಸಂತ ನವರಾತ್ರಿ ಹಾಗೂ ಪ್ರಕೃತಿ
ಉ: ಉಗಾದಿ, ವಸಂತ ನವರಾತ್ರಿ ಹಾಗೂ ಪ್ರಕೃತಿ
In reply to ಉ: ಉಗಾದಿ, ವಸಂತ ನವರಾತ್ರಿ ಹಾಗೂ ಪ್ರಕೃತಿ by gopaljsr
ಉ: ಉಗಾದಿ, ವಸಂತ ನವರಾತ್ರಿ ಹಾಗೂ ಪ್ರಕೃತಿ
ಉ: ಉಗಾದಿ, ವಸಂತ ನವರಾತ್ರಿ ಹಾಗೂ ಪ್ರಕೃತಿ
ಉ: ಉಗಾದಿ, ವಸಂತ ನವರಾತ್ರಿ ಹಾಗೂ ಪ್ರಕೃತಿ