ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ 3

ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ 3

ಊಟವನ್ನು ಬಡಿಸುವ ಪದ್ದತಿಯ ಬಗ್ಗೆ ಇರುವ ಬೇರೆ ಬೆರೆ ಪ್ರಕಾರದ ಅನುಭವಗಳು ನನಗೆ ಆಗಿವೆ. ಅವುಗಳಲ್ಲಿ ನೆನಪದ್ದಷ್ಟು ಇಲ್ಲಿ ಬರೆಯುತ್ತೇನೆ.

 

  • ನಮ್ಮ ತಂಗಿಯ ಮದುವೆ ಸಂಧರ್ಭ. ಭಾವ ಬಯಲುಸೀಮೆಯಲ್ಲಿ ಸೇವೆಯಲ್ಲಿದ್ದ. ಒಂದು ಪಂಕ್ತಿ ತುಂಬಾ ಅವನ ಮಿತ್ತ್ರರೇ ಕುಳಿತಿದ್ದರು. ಅನ್ನ ಬಡಿಸಿ ಆಗಿತ್ತು. ಹುಳಿ ಬೋಗಣಿ ಹಿಡಿದು ನೆಂಟರ ಮಗಳೊಬ್ಬಳು ಆ ಪಂಕ್ತಿಗೆ ಹೋಗಿದ್ದು ನೋಡಿದೆ.. ಕೆಲವು ಸಮಯದ ನಂತರ ಆ ಪಂಕ್ತಿಗೆ ಹೋಗಿ ನೋಡಿದರೆ ಒಬ್ಬರೂ ಊಟ ಮಾಡುತ್ತಿರಲಿಲ್ಲ. ಹುಳಿಬಡಿಸಲು ಬಂದವಳು ಕಂಬದಂತೆ ನಿಂತಿದ್ದಳು. ಊಟಕ್ಕೆ ಕುಳಿತವರು ಗೊಂಬೆಯಂತೆ ಕುಳಿತಿದ್ದರು. ಯಾಕೆ ಬಡಿಸುತ್ತಾ ಇಲ್ಲ? ಬಡಿಸಲು ಬಂದವಳನ್ನು ವಿಚಾರಿಸಿದೆ.”ಮಾವಾ, ಯಾರೂ ಇನ್ನೂ ದರ್ಸಿದ್ದ್ವೇ ಇಲ್ಲೆ!!” (ಇನ್ನೂ ಯಾರೂ ಚಿತ್ರಾಹುತಿಯನ್ನು ನೀಡಲೇ ಇಲ್ಲ). "ಅವ್ಯಾರೂ ದರ್ಸ್ತ್ವಿಲ್ಲೆ. ನೀನು ಬಡಿಸು. "ಎಂದು ಹೆಳಿದೆ. ಆಗ ಅವಳು ಬಡಿಸಿದಳು ಮಿತ್ರರು, ಉಂಡರು.

     

  • ತುಮುಕೂರಿನಿಂದ ಬಂದೊಬ್ಬ ಮಿತ್ರ ,ನನ್ನ ಮದುವೆಯ ಮರುದಿನ, ಹಿಂದಿನ ದಿನ ನಮ್ಮ ಮಾವನ ಮನೆಯಲ್ಲಾದ ಊಟದ ಕುರಿತು ಕ್ಯಾತೆ ತೆಗೆದ. ಅವನು ಬ್ರಾಹ್ಮಣ. ಬ್ರಾಹ್ಮಣರಲ್ಲಿ ಕೊನೆಯ ಪದಾರ್ಥ ಮಜ್ಜಿಗೆ. ಮಜ್ಜಿಗೆಯು ಪಂಕ್ತಿಗೆ ಬಂದಮೇಲು ಉಪ್ಪನ್ನೂ ಅವರೂರಿನಲ್ಲಿ ಬಡಿಸುವುದಿಲ್ಲ. ಹವ್ಯಕ ಸಂಪ್ರದಾಯದಂತೆ, ನನ್ನ ಮದುವೆಯಲ್ಲಿ ಮೊದಲಿಗೇ ಮಜ್ಜಿಗೆಯನ್ನು ಬಡಿಸಿದರು.(ಈಗ ಆ ಸ್ಥಾನವನ್ನು ತಂಬಳಿ ತೆಗೆದುಕೊಂಡಿದೆ.) "ಹೀಗಾಗಿ ನಾನು ಬರೀ ಮಜ್ಜಿಗೆ ಊಟಮಾಡಿದೆ. ಬೇರೆ ಏನನ್ನೂ ಉಂಡಿಲ್ಲ. ಒಂದು ಕಜ್ಜಾಯವನ್ನೂ ರುಚಿನೋಡಿಲ್ಲ. ” ಎಂದು ಮುಂತಾಗಿ ಆಕ್ಷೇಪಣೆಗಳನ್ನು ಒದರಿದ. (ಆದರೆ ಅವನು ಪೊಗದಸ್ತಾಗಿ ಕತ್ತರಿಸಿದ್ದಾನೆ, ಎಂದು ಉಳಿದ ಮಿತ್ರರು ಸಾಕ್ಷಿ ಹೇಳಿದರು.)

  • ನಮ್ಮ ಅಣ್ಣನ ಮದುವೆಗೆ ಮನೆಗೆ ಬರುವಾಗ ಬಿಜಾಪುರದಿಂದ ಒಬ್ಬನನ್ನು ನನ್ನೊಡನೆ ಕರೆದುಕೊಂಡು ಬಂದಿದ್ದೆ. ಆತ ಕೆಲವು ದಿನ ನಮ್ಮ ಮನೆಯಲ್ಲೇ ಇದ್ದ. ಅವನಿಗಾಗಿ ನಮ್ಮ ಮನೆಯಲ್ಲಿ ಊಟಕ್ಕೆ, ಚಪಾತಿ ಮಾಡುತ್ತಿದ್ದರು. ಒಂದು ದಿವಸ ಆತ, ನನ್ನ ಹತ್ತಿರ ಹೇಳಿದ. "ನಾನು ನಿಮ್ಮ ಮನೆಯವರ ಜೊತೆಗೆ ಪಂಕ್ತಿಯಲ್ಲಿ ಕೂಡ್ರುವುದಿಲ್ಲ. ನಾನು ಆಮೇಲೆ ಊಟ ಮಾಡುತ್ತೇನೆ.” ಅವನಿಗೆ ಬ್ರಾಹ್ನಣರಂತೆ ಚಕ್ಕಳಬಕ್ಕಳ (ಸುಖಾಸನ) ಹಾಕಿ ಕುಳಿತು ಊಟಮಾಡಿದರೆ, ಊಟಮಾಡಿದ ತ್ರಪ್ತಿ ಸಿಗುತ್ತಿರಲಿಲ್ಲ. ಅವನಿಗೆ ಕುಕ್ಕರ ಗಾಲಿನಲ್ಲಿ ಕುಳಿತೇ ಅಭ್ಯಾಸ. ಹಾಗೆ ಊಟ ಮಾಡಿದರೆ ಮಾತ್ರ ಊಟಮಾಡಿದಂತೆನಿಸುತ್ತದೆ..(ನಮ್ಮ ಹಳ್ಳಿಜನರಿಗೆ ಟೇಬಲ್ ಊಟ ಮಾಡಿದಾಗ ಹೊಟ್ಟೆತುಂಬಿದಂತನಿಸುವುದಿಲ್ಲ.)

    ಕುಕ್ಕರ ಕಾಲಿನಲ್ಲಿ ಕುಳಿತು ಊಟವನ್ನೂ ಮಾಡುತ್ತಾರೆ ಎಂಬುದನ್ನು ಅರಗಿಸಿಕೊಳ್ಳಲೂ ಹವ್ಯಕರಿಂದ ಸಾಧ್ಯವಾಗಲಾರದು. ಆ ಜಿಲ್ಲೆಯ ಎಲ್ಲ ಜನಾಂಗದವರೂ (ಬ್ರಾಹ್ಮಣರನ್ನು ಹೊರತುಪಡಿಸಿ) ಮನೆಯಲ್ಲೂ , ಮದುವೆ ಮನೆಯಲ್ಲೂ ಊಟಕ್ಕೆ ಕೂಡ್ರುವುದು ಕುಕ್ಕರಗಾಲಲ್ಲಿ ಮಾತ್ರ.

  • ಕುದುರೆ ಇಲ್ಲದ ಬಂಡಿಗಳು, ಎಣ್ಣೆ ಇಲ್ಲದ ದೀಪಗಳೂ ಇರುವ ಊರಿಗಲ್ಲ. ಇವು ಯಾವುದೂ ಇಲ್ಲದ ಊರಿಗೆ ಕಾರ್ಯನಿಮಿತ್ತ ಹೋದವನಿಗೆ ಅಂದು ಅಲ್ಲಿಯೇ ಊಳಿಯ ಬೇಕಾದ ಪ್ರಸಂಗ ಬಂದಿತು. ಅಂದು ಕಛೇರಿಯ ಅಟೆಂಡರನ ಮನೆಯಲ್ಲಿಯೇ ಊಟ ಮಾಡ ಬೇಕಾಯಿತು. ಅಟೆಂಡರನ ಮಡದಿ ಆ ಹಳ್ಳಿಯಲ್ಲಿ ಮಾಡಬಹುದಾದದ್ದೆಲ್ಲವನ್ನು ಮಾಡಿದ್ದಳು. ಬಡತನ ಇದ್ದರೂ ಮುಸಲ್ಮಾನರಲ್ಲಿ ಕಲಾವಂತಿಕೆಗೆ ಕೊರತೆ ಇರುವುದಿಲ್ಲ. ಊಟಕ್ಕೆ ಕೂಳಿತುಕೊಳ್ಳುವುದಕ್ಕಾಗಿಯೇ ತಯಾರಿಸಿ ಕಲಾತ್ಮಕವಾದ ಚದ್ದರಿನ ಮೇಲೆ ನನ್ನನ್ನು ಕುಡ್ರಿಸಿ ಚದ್ದರಿನ ಮೇಲೆಯೇ ತಾಟನ್ನೂ ಇಟ್ಟು, ನನಗೆ ಊಟಕ್ಕೆ ನೀಡಿದರು. ಆದರೆ ಅವರು ಬಡಿಸಲಿಲ್ಲ. ಚಿತ್ರವಿಚಿತ್ರ ಚಿತ್ತ್ತಾರ ಹಾಕಿದ್ದ ಪಿಂಗಾಣಿಪಾತ್ರೆಗಳು ಹಾಗೂ ಪಿಂಗಾಟಿಯ ತಾಟನ್ನು ಎದುರಿಗಿಟ್ಟು “ಸಾಹೇಬರೇ,(ಆ ಸಾಬರವನಿಗೆ ನಾನು ಸಾಬ) ನೀವೇ ನೀಡಿಕೋರಿ”ಎಂದ. ನಾನು ಊಟ ಸುರುಮಾಡಿದೆ. ಒಂದು ಡಜನ್ ಗಿಂತ ಹೆಚ್ಚು ಚಪಾತಿಗಳನ್ನು ಒಂದು ಪಿಂಗಾಣಿ ಪ್ಲೇಟಿನಲ್ಲಿ ಪೇರಿಸಿಡಲಾಗಿತ್ತು. ಒಂದು ಚಪಾತಿಯನ್ನು ತಿಂದಾದಮೇಲೆ, ಇನ್ನೊಂದು ಚಪಾತಿಯನ್ನು ಎಡಗೈಯಿಂದ ತೆಗೆದುಕೊಳ್ಳುತ್ತಿರುವಾಗ ಅಟೆಂಡರನ ಹೆಂಡತಿ ಹೇಳಿದಳು.”ಓ ಹಾತ್ ಸೇ ನಕ್ಕೋ. ಸೀದೇಹಾತ್ ಸೆ ಲೇವ್”. (ಎಡಗೈಯಲ್ಲಿ ಬೇಡ. ಬಲಗೈಯಲ್ಲಿ ತೆಗೆದುಕೊಳ್ಳಿ).ಅವಳ ಇಚ್ಚೆಯಂತೆ ಮುಂದೆ ಎಂಜಲು ಕೈಯಲ್ಲಿಯೇ ಚಪಾತಿ ಬಡಿಸಿಕೊಂಡೆ. ಆ ಚಪಾತಿ ರಾಸಿಯೊಳಗಿಂದ ನಾನು ಮೂರು ಚಪಾತಿಯನ್ನು ಮಾತ್ರ ತಿಂದ. .ನಾನು ಬಕಾಸುರ ಅಲ್ಲ. ಒಂದು ಡಜನ್ ಚಪಾತಿಯನ್ನು ತಿನ್ನುವುದಿಲ್ಲ. ಎನ್ನುವ ವಿಷಯ ಆ ಗ್ರುಹಣಿಗೆ ಹೊತ್ತಿಲ್ಲದ್ದಾಗಿರಲಿಲ್ಲ. ಆದರೆ ಅತಿಧಿಸತ್ಕಾರಕ್ಕಾಗಿ ಅಷ್ಟನ್ನೂ ನನ್ನ ಎದುರಿಗೆ ಪೇರಿಸಿದ್ದರು. ನಾನು ಉಂಡು ಉಳಿಸಿದ್ದನ್ನು / ನಾವು ಎಂಜಲು ಎಂದು ಭಾವಿಸುವುದನ್ನು ಅವರು ಯಾವ ಸಂಕೋಚವಿಲ್ಲದೇ ತಿಂದರು. ಮುಸಲ್ಮಾನ ಧರ್ಮದಲ್ಲಿ ಎಲ್ಲರೂ ಸಹೋದರರು./ ಬೇಧ ಭಾವ ಇಲ್ಲ. ಹೀಗಾಗಿ ಎಲ್ಲರೂ ಒಂದೇ ಬಟ್ಟಲಿನಲ್ಲಿಯೇ ಒಟ್ಟಿಗೆ ಊಟಮಾಡುತ್ತಾರೆ. ಇಷ್ಟು ವರ್ಷದಿಂದ ನಾನು ಊಟ ಮಾಡುತ್ತಿದ್ದರೂ, ನನಗೆ ತಾಟಿನ ಸುತ್ತು ಚೆಲ್ಲಿಕೊಳ್ಳದೇ ಊಟ ಮಾಡಲು ಬರುವುದೇ ಇಲ್ಲ. ಅಂದು ರತ್ನ ಕಂಬಳಿಯು ಹಾಳಾಗಬಾಗದೆಂದು ಬಹಳ ಎಚ್ಚರಿಕೆಯಿಂದ ಊಟ ಮಾಡಿದೆ!

  • ಈ ಪ್ರಭಾವ ಬೇರೆ ಜನಾಂಗದ ಮೇಲೂ ಬಿದ್ದಿದೆ. ಹೀಗಾಗಿ ಕುಕ್ಕುರುಗಾಲಲ್ಲಿಕುಳುತು ಊಟಮಾಡುವವರೆಲ್ಲರೂ ತಮಗಾಗಿ ಪ್ರತ್ಯೇಕ ಗಂಗಾಳ / ತಾಬಾಂಡಿಯೇ ಬೇಕೆನ್ನುವುದಿಲ್ಲ. ಪರಿಕರ ಸಾಲದಾದಾಗ ಅಣ್ಣ-ತಮ್ಮ -ಅಪ್ಪಮಗ, ಅಷ್ಟೇಅಲ್ಲ ಗೆಳೆಯರೂ ಸಹ ಒಂದೇ ಬಟ್ಟಲಿನಲ್ಲಿ ಒಂದೇಕಾಲಕ್ಕೆ ಒಟ್ಟಿಗೆ ಊಟಮಾಡುತ್ತಾರೆ. ಇಬ್ಬರ ನಡುವೆ ಇರುವ ಪ್ರೀತಿ, ವಿಶ್ವಾಸಗಳಿಂದ ಮಾತ್ರ ಇದು ಸಾಧ್ಯ.

  • ಮದುವೆ ಮನೆಯೊಂದರಲ್ಲಿ ಮೂರು ನಾಲ್ಕು ಗಂಗಾಳಗಳಲ್ಲಿ ಮೂವತ್ತು ನಲವತ್ತು ಹೆಂಗಸರಿಗೆ ಚಹಾ ನೀಡಿದರು. ಒಂದು ಸಾರೆಯೂ ತೊಳೆಯಲಿಲ್ಲ.! ಬೀಗರ್ಯಾರೂ ಸಿಟ್ಟಿಗೇಳಲಿಲ್ಲ.!!

Rating
Average: 5 (1 vote)

Comments