bg******@ rediffmail. com ಗೆ ಒಂದು ಪತ್ರ
ಸುಮಾರು ಎಂಟೊಂಭತ್ತು ವರುಷಗಳ ಹಿಂದಿನ ಮಾತು.. ಕಂಪ್ಯೂಟರ್ ಕೋರ್ಸಿಗಾಗಿ ಸೇರಿದ್ದ ನನಗೆ ನಿನ್ನ ಪರಿಚಯವಾಯ್ತು. ಮೊದಲೇ ಕೆಲಸದಲ್ಲಿದ್ದ ನಾನು ಕಂಪ್ಯೂಟರಿನ ಬಗ್ಗೆ ನಿನಗಿಂತಾ ತುಸು ಹೆಚ್ಚೇ ತಿಳಿದಿದ್ದೆ. ನಮ್ಮೊಡನೆ ಕಲಿಯಲು ಬಂದವರಲ್ಲಿ ನೀನು ನಿನ್ನ ಅನುಮಾನಗಳ ಪರಿಹಾರಕ್ಕೆ ನನ್ನನೇ ಏಕೆ ಆಯ್ಕೆ ಮಾಡಿದೆಯೋ, ಗೊತ್ತಿಲ್ಲ. ನಮ್ಮ ಪರಿಚಯವಾಯ್ತು. ನಾನು ಅಂದು ಬಹಳ ಸಂಕೋಚದ ಹುಡುಗ. ಹೆಚ್ಚಿಗೆ ಯಾರೊಡನೆಯೂ ಬೆರೆಯುತ್ತಿರಲಿಲ್ಲ. ಅದರಲ್ಲೂ ಹುಡುಗಿಯರನ್ನು ಕಂಡರೆ ಮಾರು ದೂರ ಹೋಗಿ ನಿಲ್ಲುತ್ತಿದ್ದೆ.
ನಮ್ಮ ಕೋರ್ಸಿಗಾಗಿ ಮೀಸಲಿದ್ದದ್ದು ಕೇವಲ ೬ ತಿಂಗಳು ಮಾತ್ರ. ಅದೂ ನಾನು ಕೆಲಸ ಮುಗಿಸಿ ನನ್ನ ಮೊದಲ ದ್ವಿಚಕ್ರವಾಹನ TVS-XL ನಲ್ಲಿ ಮಾನಸ ಗಂಗೋತ್ರಿಗೆ ಬರುತ್ತಿದ್ದೆ. ಮೊದ ಮೊದಲು ಮುಖ ಪರಿಚಯವಾಗಿ ಕೇವಲ ನಗುವಿನಲ್ಲೇ ನಮ್ಮ ಸಂಭಾಷಣೆ ನಡೆಯುತ್ತಿತ್ತು. ನಿನ್ನೊಡನೆ ಸದಾಕಾಲವೂ ಇರುತ್ತಿದ್ದ ನಿನ್ನ ಗೆಳತಿ ರಷ್ಮಿ ಯೊಡನೆ ನೀನು ಏನು ಮಾತನಾಡಿಕೊಳ್ಳುತ್ತಿದ್ದೆಯೋ ನನಗದು ತಿಳಿಯುತ್ತಿರಲಿಲ್ಲ. ಆದರೆ ಸದಾ ಹಸನ್ಮುಖಿಯಾಗಿ ಗೆಲುವಿನಿಂದ ಕೂಡಿರುತ್ತಿದ್ದ ನಿನ್ನೊಡನೆ ಎಲ್ಲರೂ ಸ್ನೇಹಬೆಳೆಸಬಯಸುವವರೇ ಆಗಿರುತ್ತಿದ್ದರು.
ಕ್ರಮೇಣ ನಗುವಿನ ಸಂಭಾಷಣೆ ಮಾತು ಕಲಿಯತೊಡಗಿತು. ಕಳೆದದಿನದಂದು ಮಾಡಿದ ಪಾಠದಲ್ಲಿನ ಅನುಮಾನ ನಿನ್ನನ್ನು ನನ್ನಹತ್ತಿರಕ್ಕೆ ತರುತ್ತಿತ್ತು. ಕೇವಲ ಅದನ್ನು ನೆಪವಾಗಿಟ್ಟುಕೊಂಡು ನಮ್ಮ ಗೆಳೆತನವನ್ನು ಪ್ರೀತಿ ಎಂದೆನಿಸಿಕೊಳ್ಳುವ ಹುಚ್ಚು ಮನಸ್ಸು ನನ್ನದಲ್ಲವಾದ್ದರಿಂದ ನನ್ನ ನಿನ್ನ ಗೆಳೆತನ ಮೊಳಕೆಯೊಡೆದಿತ್ತು. ತರಗತಿಯಲ್ಲಿ ನಾವಿಬ್ಬರೂ ಮತ್ತೆ ರಷ್ಮಿ ಒಟ್ಟಿಗೇ ಕುಳಿತು ಅಭ್ಯಾಸಿಸುತ್ತಿದ್ದೆವು. ಲ್ಯಾಬ್ ಗಳಲ್ಲಿ ನಾವೆಲ್ಲಾ ಒಟ್ಟಿಗೇ ಸೇರಿ ಕೊಟ್ಟ ಅಸೈಮೆಂಟ್ ಗಳನ್ನು ಮುಗಿಸುತ್ತಿದ್ದೆವು. ನನ್ನಲ್ಲಿ ನನ್ನ ಜೀವನದ ಕನಸುಗಳು ಮೊಳೆಯುವ ಕಾಲವದು. ಅಂದು ನಾನು ಕನಸಿನಲ್ಲಿಯೂ ಬೆಂಗಳೂರಿಗೆ ಬರುವೆನೆಂದು ಅನಿಸಿರಲಿಲ್ಲ. ನನ್ನದೇ ಒಂದು ಪುಟ್ಟ ಗೂಡನ್ನು ಕಟ್ಟುವ ತವಕವಿರಲಿಲ್ಲ. ಕೇವಲವಿದ್ದದ್ದು ಮುಗ್ದ ಹೃದಯ ಮತ್ತು ತನ್ಮಯತೆ.
ನಮ್ಮ ತರಗತಿಗಳು ೪ತಿಂಗಳ ಅವಧಿಯನ್ನು ಮುಗಿಸಿದ್ದವು. ಇನ್ನು ಬಾಕಿ ಉಳಿದದ್ದು ಕೇವಲ ೨ ತಿಂಗಳುಗಳು ಮಾತ್ರ. ಅಷ್ಟರಲ್ಲಾಗಲೇ ನಾವೆಲ್ಲಾ (ಅದರಲ್ಲೂ ನಾವಿಬ್ಬರು) ಒಳ್ಳೆಯ ಸ್ನೇಹಿತರಾಗಿದ್ದೆವು. ಅಂದು ವಾರಾಂತ್ಯ- ನಾನು ನನ್ನ ಅಣ್ಣ, ಮತ್ತವನ ಸ್ನೇಹಿತರು ಎಲ್ಲಾ ಸೇರಿ ಬೆಳಗ್ಗೆ ಚಾಮುಂಡಿ ಬೆಟ್ಟವನ್ನು ಹತ್ತಿಳಿದು ಗಾಯತ್ರಿ ಟಿಫನ್ ರೂಂ ನಲ್ಲಿ ತಿಂಡಿ ತಿಂದು ಇನ್ನೇನು ಹೊರಡಬೇಕೆನಿಸುವಷ್ಟರಲ್ಲಿ ಬೆಂಗಳೂರಿನಿಂದ ಅಣ್ಣನ ಸ್ನೇಹಿತನ ಕರೆ ಮೊಬೈಲಿನಲ್ಲಿ ಮೊಳಗಿತ್ತು. ಅಣ್ಣನ ಸ್ನೇಹಿತ ನನಗೆ ಬೆಂಗಳೂರಿನಲ್ಲಿ ಕೆಲಸ ಖಾಲಿ ಇರುವ ಬಗ್ಗೆ ತಿಳಿಸಿದ್ದ. ಅಂದಿನಿಂದ ನನಗೆ ಮೈಸೂರಿನ ಸೆಳೆತ ಜೋರಾಗತೊಡಗಿತು. ಮೈಸೂರನ್ನು ಬಿಟ್ಟು ಹೋಗಬೇಕಾ ? ಅಪ್ಪ, ಅಮ್ಮ, ಅಣ್ಣ, ಅಕ್ಕ ಎಲ್ಲರನ್ನೂ ಬಿಟ್ಟು ಹೋಗಬೇಕಾ.... ನಿನ್ನಿಂದ ದೂರ ಹೋಗಬೇಕಾ ???
ಈ ವಿಚಾರವನ್ನು ನಿನ್ನೊಡನೆ ಸೋಮವಾರ ಚರ್ಚಿಸಿದೆ. ಮನೆಯವರ ಧೈರ್ಯದೊಡನೆ ನಿನ್ನ ಧೈರ್ಯವೂ ಬೆರೆತು ಮನಸ್ಸು ಗಟ್ಟಿಯಾಗತೊಡಗಿತು. ತರಗತಿಗಳು ಇನ್ನೂ ೨ ತಿಂಗಳು ಬಾಕಿ ಇದ್ದವು. ನಾನು ಧೈರ್ಯಗೆಡಲಿಲ್ಲ, ಕಾರಣ ನನ್ನವರ ಪ್ರೋತ್ಸಾಹ ನನ್ನೊಡನಿತ್ತು. ನೀನೂಕೂಡ ಓದುವ ಸಲುವಾಗೇ ನಿನ್ನೂರಾದ ಮಂಡ್ಯವನ್ನು ಬಿಟ್ಟು ಬಂದು ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದ Working Women's hostel ನಲ್ಲಿ ತಂಗಿದ್ದೆ.
ಆದಿನ ಯಾವ ಕಾರಣಕ್ಕೋ ತಿಳಿಯದು.. ಬಹುಷಃ ಕೆಲಸಕ್ಕೆಂದು ಅರ್ಜಿ ಕಳಿಸಲಿರಬಹುದು ಮೊದಲ ಸಲ ನನ್ನ ಸಹಾಯ ಕೇಳಿದ್ದೆ ನೀನು. ರಾಯರ ಮಠಕ್ಕೆ ನಾವಿಬ್ಬರೂ ಒಟ್ಟಿಗೇ ನನ್ನ TVS-XL ನಲ್ಲಿ ಹೋಗಿ ನಮಸ್ಕರಿಸಿ ಹೊರಾಂಗಣದಲ್ಲಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಿದ್ದೆವು. ಅಂದು ನೀ ಹೇಳಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಹೇಳಿದಂತೆ ಅಚ್ಚಳಿಯದೇ ಉಳಿದಿದೆ. "ನಾನು ಇದೇ First time ಕಣೋ ಒಬ್ಬ ಹುಡುಗನ ಜೊತೇಲಿ ದೇವಸ್ಥನಕ್ಕೆ ಬಂದಿರೋದು. ಯಾಕೋ ಗೊತ್ತಿಲ್ಲ, ನಿನ್ನ ಮೇಲೆ ನನ್ಗೆ ಅಷ್ಟು ನಂಬಿಕೆ" ಹೌದು... ಅದೇ ನಂಬಿಕೆಯನ್ನ ನಾನು ಇಂದಿಗೂ ಉಳಿಸಿಕೊಂಡಿದ್ದೇನೆ. ನಿಜವಾಗಲೂ ನನಗೂ ಅದು ಫಸ್ಟ್ ಟೈಮೇ... ಸಂಕೋಚದ ಹುಡುಗನಾದ ನಾನು ಒಬ್ಬ ಹುಡುಗಿಯನ್ನ ಗಾಡಿಯಲ್ಲಿ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿದ್ದಕ್ಕೆ ಇಂದಿಗೂ ನನ್ನಮೇಲೇ ನನಗೆ ಅಚ್ಚರಿಇದೆ. ಅಲ್ಲಿಂದ ನಾವು ನಿನ್ನ ಕೆಲಸದ ಅರ್ಜಿಯ ವಿಚಾರವಾಗಿ ಕುವೆಂಪು ನಗರದ ಕೊರಿಯರ್ ಆಫೀಸಿಗೆ ಹೋಗಿದ್ದೆವು. ಅಲ್ಲಿಂದ ನಾನು ನಿನ್ನನ್ನು ನಿನ್ನ Working Women's hostel ಗೆ ಬಿಟ್ಟು ಮನೆಗೆ ಮರಳಿದ್ದೆ.
ನನ್ನ ಜನ್ಮದಿನದಂದು ನೀ ಕೊಟ್ಟ ಉಡುಗೊರೆ ಇಂದಿಗೂ ನನ್ನ ಜೊತೆಯಲ್ಲೇ ಇದೆ. ನೀಕೊಟ್ಟ Wallet, ಅದರೊಳಗಿದ್ದ ೫ ರೂಪಾಯಿ Coin, ರಷ್ಮಿ ಕೊಟ್ಟ Key chain, ನೀವಿಬ್ಬರೂ ಸೇರಿ ನಿನ್ನ ಹಸ್ತಾಕ್ಷರದಿಂದ ಬರೆದ ಆ "To Dear Friend From, Appi and Rashu" ಸಾಲು ಇಂದಿಗೂ ನನ್ನೊಡನೆ ಭದ್ರವಾಗಿವೆ. ಬಹುಷಃ ನೀನು ನನ್ನ ಪಾಲಿನ "Crush" ಆಗಿದ್ದೆ. ಅಂದು ನಿಮ್ಮಲ್ಲಿಂದ ಪಡೆದುಕೊಂಡ ಉಡುಗೊರೆ ನನಗೆ ನಿಮ್ಮ ನೆನಪಿನ ಕಾಣಿಕೆಯಾಗಿದೆ. ಸಂಜೆ ತರಗತಿ ಮುಗಿದ ಬಳಿಕ ನಾನು ನಿಮ್ಮಿಬ್ಬರನ್ನೂ ನನ್ನ TVS-XL ನಲ್ಲಿ Working Women's hostel ಗೆ ಬಿಟ್ಟು ಮನೆಗೆ ಮರಳಿದ್ದೆ. ದಾರಿಯಲ್ಲಿ ನನ್ನ ಗಮನವೆಲ್ಲಾ ನಿನ್ನಮೇಲಿತ್ತು. ಅಪ್ಪಿತಪ್ಪಿ ನಾನೆಲ್ಲಿ ನಿನ್ನನ್ನು ಸ್ಪರ್ಶಿಸಿ ನಿನ್ನ ದೃಷ್ಟಿಯಲ್ಲಿ ಕೆಟ್ಟವನಾಗಿ ಸ್ನೇಹವನ್ನು ಕಳೆದುಕೊಳ್ಳುವೆನೋ ಎಂಬ ಭಯ.
ನಮ್ಮ ತರಗತಿಗಳು ಮುಗಿದಿದ್ದವು, ನನ್ನ ಪಯಣ ಬೆಂಗಳೂರಿನ ಕಡೆಗೆ ಸಾಗಿತ್ತು. ಬೆಂಗಳೂರಿಗೆ ಬಂದು ೨ ತಿಂಗಳ ನಂತರ ನಾ ಮತ್ತೆ ನಿನ್ನನ್ನು ನಿನ್ನ Working Women's hostel ಗೆ ಬಂದು ಭೇಟಿ ಮಾಡಿದ್ದೆ. ನಿನ್ನ ಈ-ಮೈಲ್ ವಿಳಾಸವನ್ನು ಖುದ್ದಾಗಿ create ಮಾಡಿ ಅದನ್ನು ಉಪಯೋಗಿಸುವ ವಿಧಾನವನ್ನೂ ಕಲಿಸಿದ್ದೆ. ಆದರೀಗ ಅದು ಕೆಲಸ ಮಾಡುತ್ತಿಲ್ಲ. ಮೊದ ಮೊದಲು ನಿನ್ನಿಂದ ನನ್ನ ಈ-ಅಂಚೆಗೆ ಉತ್ತರ ಬಂದರೂ ನಂತರದ ದಿನಗಳಲ್ಲಿ ಅದು ಸಂಪೂರ್ಣವಾಗಿ ನಿಂತುಹೋಯಿತು. ನಿನಗೆ ಮೈಲ್ ಮಾಡಲೆಂದೇ ನಾನು Browsing Center ಗಳಿಗೆ ಬರುತ್ತಿದ್ದೆ. ಆಗಿನ ದಿನಗಳಲ್ಲಿ ಮೊಬೈಲ್ ಫೋನ್ ಎಂಬುದು ಆಕಾಶದಲ್ಲಿನ ನಕ್ಷತ್ರದಷ್ಟೇ ದೂರವಾಗಿತ್ತು ನನಗೆ. ಇದ್ದ ಒಂದೇ ಒಂದು ಸಂಪರ್ಕ ಕೊಂಡಿ ಆ ಈ-ಮೈಲ್.
ನಂತರದ ದಿನಗಳಲ್ಲಿ ನಿನ್ನ ಸಂಪರ್ಕ ಸಾಧ್ಯವಾಗಲಿಲ್ಲ. ನಿನಗೂ ನಿನ್ನದೇ ಆದ ಜವಾಬ್ದಾರಿಗಳಿದ್ದಿರಬೇಕು. ಪರಿಸ್ಥಿತಿಯ ಒತ್ತಡಕ್ಕೆ ನೀನೂ ಸಿಲುಕಿರಬೇಕು. ನಿನ್ನ ಮಾತನಾಡಿಸಲು ಮತ್ತೊಮ್ಮೆ ನಿನ್ನ hostel ಗೆ ಫೊನಾಯಿಸಿದಾಗ ನೀನು ಅಲ್ಲಿಂದ ಬೇರೆಡೆಗೆ ಹೋಗಿರುವ ವಿಷಯ ತಿಳಿಯಿತು.
ಕಡೆಯದಾಗಿ ನೀನು ಬಳಿಬಂದು ಕೇಳಿದ ಪ್ರಶ್ನೆ: "ಬೆಂಗಳೂರಿಗೆ ಹೋಗ್ತಾ ಇದೀಯ... ನಾವೆಲ್ಲಾ ನಿನ್ಗೆ ನೆನ್ಪಿರ್ತೀವೇನೋ ?" ಹೌದು ಖಂಡಿತಾ ನೆನಪಿದೆ ಗೆಳತಿ ಆದರೆ ನಿನಗೆ ನನ್ನ ನೆನಪಿಲ್ಲ ಅನ್ನುವುದು ವಿಪರ್ಯಾಸ.
ಇಂದಿಗೂ ನಾನು ಆ ದಿನಗಳನ್ನ ಮರೆತಿಲ್ಲ. ಕುವೆಂಪು ನಗರಕ್ಕೆ ಹೋದಲ್ಲಿ ಆ ಕೊರಿಯರ್ ಆಫೀಸಿನೆಡೆಗೆ ನೋಡುತ್ತೇನೆ, ನಿನ್ನನ್ನು ಕಾಣುತ್ತೇನೆ... ಗೌರವದಿಂದ :)
Comments
ಉ: bg******@ rediffmail. com ಗೆ ಒಂದು ಪತ್ರ
In reply to ಉ: bg******@ rediffmail. com ಗೆ ಒಂದು ಪತ್ರ by sprasad
ಉ: bg******@ rediffmail. com ಗೆ ಒಂದು ಪತ್ರ
ಉ: bg******@ rediffmail. com ಗೆ ಒಂದು ಪತ್ರ
In reply to ಉ: bg******@ rediffmail. com ಗೆ ಒಂದು ಪತ್ರ by asuhegde
ಉ: bg******@ rediffmail. com ಗೆ ಒಂದು ಪತ್ರ
ಉ: bg******@ rediffmail. com ಗೆ ಒಂದು ಪತ್ರ
In reply to ಉ: bg******@ rediffmail. com ಗೆ ಒಂದು ಪತ್ರ by Harish Athreya
ಉ: bg******@ rediffmail. com ಗೆ ಒಂದು ಪತ್ರ