ನಮಗೂ ಇರಲಿ ಕೊಂಚ, ಭಾಷಾಭಿಮಾನ
"ಅಲ್-ನಂಸ" ಎಂದರೇನು ಅಥವಾ ಯಾವ ದೇಶ ಇದು ಎನ್ನುತ್ತಾ ಬಂದರು ನಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರು. ಅವರಿಗೆ ತಿಳಿದಿತ್ತು ಹೆಂಡತಿ, ಪುಟಾಣಿ ಮಕ್ಕಳ ಸಮಯ ಕದ್ದು, ಆಫೀಸ್ನಲ್ಲಿ ಕೆಲಸ ಇದೆ ಎಂದು ನೆಟ್ ಮೇಲೆ ನೇತಾಡುವ ನನ್ನ ಅಭ್ಯಾಸ. ಸರಿ, ಬೇಕಾದ್ದನ್ನೆಲ್ಲ ಕೇಳಲು ಅಲ್ಲಾವುದ್ದೀನನ ದೀಪ ದ ಮೊರೆಗೆ ಹೋದ ಹಾಗೆ ಯಾಹೂ ಸರ್ಚ್ ಬಾರ್ ಗೆ ನನ್ನ ಪಯಣ. ಕೂಡಲೇ ಸಿಕ್ಕಿತು ಉತ್ತರ. "ಅಲ್-ನಂಸ" ಎಂದರೆ ಆಸ್ಟ್ರಿಯಾ ದೇಶ ಅಂತ. ಆಸ್ತ್ರಿಯಾಕ್ಕೆ "ಅಲ್-ನಂಸ" ಎಂದು ಕರೆಯುತ್ತಾರೆ. ಅರಬ್ ಭಾಷೆ ರೋಚಕ. ಪ್ರತಿ ಆಂಗ್ಲ ಪದಕ್ಕೂ ಪರ್ಯಾಯವಾಗಿ ಒಂದು ಪದ ಇದ್ದೆ ಇರುತ್ತದೆ. ನಾವು ಫೋನ್ ಗೆ ಕನ್ನಡದಲ್ಲಿ ದೂರವಾಣಿ ಎನ್ನದೇ ಫೋನ್ ಎಂದೇ ಕರೆಯುತ್ತೇವೆ, ಅದೇ ರೀತಿ ಮೊಬೈಲ್ ಸಹ. ಮೊಬೈಲ್ ಗೆ ಕನ್ನಡದಲ್ಲಿ ಏನನ್ನುತ್ತಾರೋ ನನಗೆ ಗೊತ್ತಿಲ್ಲ ಆದರೆ ಅರಬ್ಬೀ ಭಾಷೆಯಲ್ಲಿ ಇದಕ್ಕೆ "ಜವ್ವಾಲ್" ಎನ್ನುತ್ತಾರೆ. ಅಪ್ಪಿತಪ್ಪಿಯೂ ಯಾವ ಅರಬನೂ ತಾನು ಮಾತನಾಡುವಾಗ ಮೊಬೈಲ್ ಎನ್ನುವುದಿಲ್ಲ. ಫೋನ್ ಗೆ "ಹಾತಿಫ್" ಎನ್ನುತ್ತಾರೆ. ಕಾರಿಗೆ "ಸಿಯಾರ". ವಿಮಾನಕ್ಕೆ "ತಯಾರ". ಇವುಗಳಿಂದಲೇ ತಿಳಿಯುತ್ತದೆ ಅರಬರಿಗೆ ತಮ್ಮ ಭಾಷೆಯ ಮೇಲೆ ವ್ಯಾಮೋಹ ಹೆಚ್ಚು ಎಂದು, ಅದರಲ್ಲೇನು ತಪ್ಪಿದೆ ಹೇಳಿ? ನಾವೂ ಸಹ ಅವರನ್ನು ಅನುಕರಿಸಬೇಕು ಈ ವಿಷಯದಲ್ಲಿ ಅಲ್ಲವೇ. ಇಲ್ಲದಿದ್ದರೆ ಬೆಳಿಗ್ಗೆ ಎದ್ದು ತಿಂಡಿಗೆ ಎಂದು ಉಪಾಹಾರ ಮಂದಿರಕ್ಕೆ ಹೋಗಿ ಅಲ್ಲಿ ಉದ್ದಿನ ವಡೆಗೆ "ಮೆದು ವಡ" ಎಂದು ಬರೆದ ಎಂದು ತಕರಾರು ಮಾಡಿ ನಂತರ ಸ್ವಲ್ಪ ದೂರ ಬಂದು ಬಾಯಾರಿತು ಎಂದು ಎಳನೀರು ಕುಡಿಯಲು ಹೋದರೆ ಅಲ್ಲಿ ಎಳೆ ನೀರಿಗೆ "ನಾರಿಯಲ್" ಎಂದ ಎಂದು ಅರಚಾಡಿ ಗಂಟಲನ್ನು ಮತ್ತಷ್ಟು ಒಣಗಿಸುವುದಕ್ಕಿಂತ ನಮ್ಮ ಭಾಷೆ ಬಗ್ಗೆ ನಮ್ಮಲ್ಲೂ, ನಮ್ಮ ಮಕ್ಕಳಲ್ಲೂ ಅಭಿಮಾನ ಹುಟ್ಟಿಸಬೇಕು.
ಉಪಕರಣಗಳ ಹಾಗೂ ಇತರೆ ಹೆಸರುಗಳನ್ನು ಬಿಡಿ ದೇಶಗಳ ಹೆಸರೂ ಅರಬ್ಬೀಕರಣ. ಭಾರತಕ್ಕೆ "ಹಿಂದ್" ಎನ್ನುತ್ತಾರೆ. ಜರ್ಮನಿಗೆ " ಅಲ್-ಮಾನಿಯಾ", ಗ್ರೀಸ್ ದೇಶಕ್ಕೆ "ಯುನಾನಿ". ಹಂಗೇರಿ ಗೆ "ಅಲ್-ಮಜಾರ್", ಹೀಗೆ ಸಾಗುತ್ತದೆ ಪಟ್ಟಿ.
ಋತು "ಶರತ್ಕಾಲ" ಕ್ಕೆ ಅರಬ್ಬೀ ಭಾಷೆಯಲ್ಲಿ "ಖಾರಿಫ್" ಎನ್ನುತ್ತಾರೆ. ಖಾರಿಫ್ ಎಂದು ನಮ್ಮಲ್ಲೂ ಕೇಳಿದ ನೆನಪು, ಅದೇನೆಂದು ಸರಿಯಾಗಿ ಗೊತ್ತಿಲ್ಲ. ಚಳಿಗಾಲಕ್ಕೆ " ಶಿತ ". ಇದನ್ನು ಕೇಳಿ ಚಳಿ ಹಿಡಿಯಿತಾ? ಇದೇನಪ್ಪಾ ನಮ್ಮ ಮೇಜು, ಕುರ್ಚಿ ಹಾಗೆ ಶೀತಾ ಸಹ ಅರಬ್ಬೀ ಮೂಲದ್ದೇ ಎಂದು? ಅದರ ಬಗ್ಗೆ ನನಗರಿವಿಲ್ಲ.
ವಾರದ ದಿನಗಳಿಗೆ ಅರಬರ ಹೆಸರುಗಳು ಸ್ವಲ್ಪ ನೀರಸವೇ ಎನ್ನಬಹುದು. ಭಾನುವಾರ ಕ್ಕೆ "ಅಹದ್" ಅಂದರೆ ಮೊದಲು ಎಂದು. ವಾರದ ಮೊದಲ ದಿನ ಭಾನುವಾರ ಅಲ್ಲವ, ಅದಕ್ಕಿರಬೇಕು. ಸೋಮವಾರಕ್ಕೆ " ಇತ್ನೇನ್" ಅಂದರೆ ಎರಡು. ಮಂಗಳವಾರ ಮೂರನೇ ದಿನ.....ಶುಕ್ರವಾರಕ್ಕೆ "ಜುಮಾ" ಮತ್ತು ಶನಿವಾರಕ್ಕೆ "ಸಬ್ತ್".
ಅರಬ್ಬೀ ಮತ್ತು ಪೆರ್ಶಿಯನ್ ಪದಗಳು ಕನ್ನಡದಲ್ಲೀ ಹೇರಳವಾಗಿ ಕಾಣಲು ಸಿಗುತ್ತವೆ. ಅವುಗಳ ಬಗ್ಗೆ ಮುಂದೆಂದಾದರೂ ಬರೆಯುವೆ. ಅದೂ ಅಲ್ಲದೆ ಅರಬ್ಬೀ ಅಕ್ಷರ ಮಾಲೆಯಲ್ಲಿ "p" , "t" ಗಳು ಇಲ್ಲ. ಇವುಗಳ ಅನುಪಸ್ಥಿತಿಯಲ್ಲಿ ಬರುವ ಕೆಲವು ಪದಗಳು ತಮಾಷೆಯಾಗಿವೆ, ಇವುಗಳ ಬಗ್ಗೆಯೂ ಮುಂದೆಂದಾದರೂ ಬರೆಯುವೆ.
Comments
ಉ: ನಮಗೂ ಇರಲಿ ಕೊಂಚ, ಭಾಷಾಭಿಮಾನ
ಉ: ನಮಗೂ ಇರಲಿ ಕೊಂಚ, ಭಾಷಾಭಿಮಾನ
ಉ: ನಮಗೂ ಇರಲಿ ಕೊಂಚ, ಭಾಷಾಭಿಮಾನ