ಚರಿತ್ರೆಯ ಕಾರ್ಮೋಡಗಳಲ್ಲಿ ಮರೆಯಾದ "ಚಂದ್ರ" - ಚಂದ್ರಶೇಖರ್
ಭಾನುವಾರ ನಿಧನರಾದ ಮಾಜಿ ಪ್ರಧಾನಿ ಚಂದ್ರಶೇಖರ್ ಸಂಕೀರ್ಣವಾದ
ನೆನಪುಗಳನ್ನು ಬಿಟ್ಟುಹೋಗಿದ್ದಾರೆ. ಅರವತ್ತರ ದಶಕದಲ್ಲಿ ಮತ್ತು ಎಪ್ಪತ್ತರ
ದಶಕದಲ್ಲಿ, ಚಂದ್ರಶೇಖರ್ ನಮ್ಮಂಥ ಯುವಜನರ ಹಾಟ್ ಫೇವರಿಟ್ ಆಗಿದ್ದರು. ರಾಮಮನೋಹರ
ಲೋಹಿಯಾ ಅವರ ನಂತರದ ಭಾರತೀಯ ಸಮಾಜವಾದಿ ರಾಜಕಾರಣದ ಪರ್ವದಲ್ಲಿ ತುಂಬ ಭರವಸೆಯ
ನಾಯಕರೆನಿಸಿದ್ದವರು ಅವರೇ. ಉತ್ತರಪ್ರದೇಶದಂತಹ ನಿರ್ಣಾಯಕ ಜನಬಲದ ರಾಜ್ಯದಿಂದ ಬಂದ,
ಬಲಿಯಾ ಕ್ಷೇತ್ರದಿಂದ ನಿರಂತರ ಚುನಾವಣಾ ಗೆಲುವು ಸಾಧಿಸಿದ ರಾಜಕಾರಣಿ ಎಂಬುದಕ್ಕಿಂತ
ಅಪ್ಪಟ ಸಮಾಜವಾದಿ ಎಂಬುದು ನಮಗೆ ಸಂಭ್ರಮದ ಸಂಗತಿಯಾಗಿತ್ತು. ಕಾಂಗ್ರೆಸ್ ನಲ್ಲಿದ್ದೇ
ಅವರು ನೆಹರೂ-ಇಂದಿರಾ ಶೈಲಿಯ ವಂಶಪಾರಂಪರ್ಯದ ರಾಜಕೀಯವನ್ನು ವಿರೋಧಿಸಿದವರು.
ಕಾಂಗ್ರೆಸ್ ನ ದೈತ್ಯ ರಾಜಕೀಯ ಶಕ್ತಿಯೆದುರು ವಿರೋಧಪಕ್ಷಗಳು ದುರ್ಬಲವಾಗಿದ್ದಂತಹ ಆ
ಕಾಲದಲ್ಲಿ, ಕಾಂಗ್ರೆಸ್ ನಲ್ಲೇ "ಯಂಗ್ ಟರ್ಕ್ಸ್" ಗುಂಪನ್ನು ಹುಟ್ಟು ಹಾಕಿದವರಲ್ಲಿ
ಒಬ್ಬರು. ಲೋಕನಾಯಕ ಜಯಪ್ರಕಾಶ ನಾರಾಯಣರ ೧೯೭೪ ರ ಇತಿಹಾಸ ಪ್ರಸಿದ್ಧ "ಸಂಪೂರ್ಣ
ಕ್ರಾಂತಿ" ಆಂದೋಲನದಲ್ಲಿ ತೊಡಗಿಸಿಕೊಂಡಿದ್ದ ಅವರು ಎಲ್ಲರ ಕಣ್ಮಣಿ ಆಗಿದ್ದರು. ಬರೀ
ನೆಹರು - ಇಂದಿರಾ - ಸಂಜಯ್ - ರಾಜೀವ್ ಗಾಂಧಿಯವರ ಕುಟುಂಬ ರಾಜಕೀಯದಿಂದ ಬೇಸತ್ತಿದ್ದ
ನಮಗೆ, "ಆದರೆ ಚಂದ್ರಶೇಖರ್ ಅಂತಹವರು ಈ ದೇಶದ ಪ್ರಧಾನಿ ಆಗಬೇಕು" ಎಂದು
ಅನ್ನಿಸುತ್ತಿದ್ದುದು ಸಹಜವೇ.
ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ರಾಜಕೀಯ ಹೊಲಸೆದ್ದು ಹೋದಾಗ, ಇದೇ
ಚಂದ್ರಶೇಖರ್ ೧೯೮೩ರಲ್ಲಿ ಕನ್ಯಾಕುಮಾರಿಯಿಂದ ದೆಹಲಿಯ ರಾಜಘಾಟ್ (ಮಹಾತ್ಮಾ ಗಾಂಧೀ
ಸಮಾಧಿ)ವರೆಗೆ ಪಾದಯಾತ್ರೆ ಕೈಗೊಂಡಾಗ, ದೇಶದ ರಾಜಕೀಯದಲ್ಲಿ ಆಶಾಪೂರ್ಣ ಸಂಚಲನ
ಉಂಟಾಯಿತು. ರಾಜಕೀಯದಲ್ಲೂ ವಿಶ್ವಾಸವಿಡಬಹುದಾದ ಜನ ಇರುತ್ತಾರೆ
ಎಂದುಕೊಳ್ಳುವಂತಾಯಿತು.
ಇಲ್ಲಿ ನಮ್ಮ ಬೀಚಿಯವರು ಹೇಳುತ್ತಿದ್ದುದು ನೆನಪಾಗುತ್ತದೆ. ಕತ್ತೆಮರಿ
ಚಿಕ್ಕದಿದ್ದಾಗ ಎಷ್ಟು ಚೆನ್ನಾಗಿತ್ತು, ಬೆಳೆದಂತೆ ಬೆಳೆದಂತೆ ಯಾಕೆ ಹೀಗಾಯಿತು, ಎಂದು
ಅವರು ಲೇವಡಿ ಮಾಡುತ್ತಿದ್ದರು. ನಮ್ಮ ಜನರು, ನಮ್ಮ ರಾಜಕಾರಣಿಗಳು ಬೀಚಿಯವರ ಎಲ್ಲ
ವಿಡಂಬನೆಗಳನ್ನು ಚಾಚೂತಪ್ಪದೆ ನಿಜಮಾಡುವ, ಅನುಸರಿಸುವ ಹಟದಲ್ಲಿದ್ದಾರೆ.
ಇದೇ ಚಂದ್ರಶೇಖರ್, ವಂಶವಾಹಿ ರಾಜಕೀಯದ ಕೂಸು ರಾಜೀವ್ ಗಾಂಧಿಯವರ ಮನೆಯ ಫುಟ್ ರಗ್
ಮೇಲೆ ಕಾದು ಕೂತು, ಅವರ ಕೃಪಾಶ್ರಯದಲ್ಲಿ "ಪ್ರಧಾನಮಂತ್ರಿ" ಆಗೇ ಬಿಟ್ಟರು. ಮಂತ್ರಿ,
ಮುಖ್ಯಮಂತ್ರಿ ಅಂತಹ ಯಾವ ಮೆಟ್ಟಿಲೂ ಇಲ್ಲದೆ (ರಾಜೀವ್ ಗಾಂಧಿಯವರಿಗಾದರೋ ಕುಟುಂಬ
ರಾಜಕೀಯದ, ನೆಹರೂ - ಇಂದಿರಾ ಹೆಸರಿನ ಹಿನ್ನೆಲೆಯಿತ್ತು) ನೇರವಾಗಿ ಪ್ರಧಾನಿಯಾದ
ಖ್ಯಾತಿ ಅವರದೆಂದು ಮಾಧ್ಯಮದ ಜನ ಅವರನ್ನು ಅಟ್ಟಕ್ಕೇರಿಸಿದ್ದೂ ಆಯಿತು.
ಆದರೆ ಬೀಚಿಯವರ ಕತ್ತೆಮರಿಯ ಉದಾಹರಣೆ ನಿಜವಾಗಿದ್ದು ಮಾತ್ರ ನೋವಿನ ಸಂಗತಿ.
ಭೋಂಡ್ಸಿ ಬಳಿ, ತಮ್ಮ ಭಾರತ ಯಾತ್ರಾ ಕೇಂದ್ರದ ಹೆಸರಿನಲ್ಲಿ, ಆಸ್ಪತ್ರೆಗೆಂದು
ಜನಸೇವಾ ಕಾರ್ಯಗಳಿಗೆಂದು ಭೂಮಿ ಗಿಟ್ಟಿಸಿಕೊಂಡರು. ಕಾಲಾನಂತರ ಅದು ೫೦೦ ಎಕರೆಯಷ್ಟು
ಒತ್ತುವರಿಯೂ ಆಯಿತು. ಆಸ್ಪತ್ರೆ ಮರೆತುಹೋಗಿ, ಗೆಸ್ಟ್ ಹೌಸ್ ಫಾರ್ಮ್ ಹೌಸ್ ಗಳು
ನಿರ್ಮಾಣವಾದವು. 'ಕಾಡುಪ್ರಾಣಿಗಳಿಂದ' ರಕ್ಷಿಸಲು ಆ ಭೂಮಿಗೆ ಬೇಲಿಯೂ ಬಂದಿತು.
ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಸ್ವಂತದ ಸೊತ್ತೆನಿಸಿಕೊಡಿತು. ವೈಯಕ್ತಿಕ,
ರಾಜಕೀಯದ ಉಪಯೋಗಕ್ಕೆ ಸೀಮಿತವಾಯಿತು. ಕೊನೆಗೆ ಸುಪ್ರೀಮ್ ಕೋರ್ಟು ಉಗಿಯುವವರೆಗೆ
ಭೋಂಡ್ಸಿ 'ಅಶ್ರಮ' ಮುಂದುವರಿಯಿತು.
ಚಂದ್ರಶೇಖರ್ ಅವರ ರಾಜಕೀಯದ ಉತ್ತರಾರ್ಧ, ಮುದಿಹಾವಿನ ಕಾರ್ಕೋಟಕ ವಿಷದ ಕಥೆಯನ್ನು
ನೆನಪಿಸುತ್ತದೆ. ತುಂಬ ಸೀನಿಯರ್, ತುಂಬ ಅನುಭವಿ ರಾಜಕೀಯ ಪಟು ಎನಿಸಿದ್ದ ಅವರ
ಕೃತಿ - ವರ್ತನೆ, ಬೆನ್ನಿಗೆ ಚೂರಿ ಇರಿಯುವ, ವಿಶ್ವಾಸದ್ರೋಹದ ಪುಟಗಳಿಂದ
ತುಂಬಿಹೋಯಿತು. ಕೆಲವೊಮ್ಮೆ ಅವರು ವಿಶ್ವನಾಥ ಪ್ರತಾಪ ಸಿಂಗ್ ರ "ರಾಜಕೀಯ"ವನ್ನೂ
ಮೀರಿಸುವಂತಾದುದು ನಮ್ಮ ದುರಂತ ಕೂಡ.
ಕೊನೆಗೊಂದು ಜೋಕ್ : ಭಾರತದ ರಾಜಕಾರಣದಲ್ಲಿ ಸಮಾಜವಾದಿ ಪಕ್ಷ ಅದೆಷ್ಟು ಬಾರಿ,
ಅದೆಷ್ಟು ಚೂರುಗಳಾಗಿ ಒಡೆಯಿತೆಂದರೆ, ಒಮ್ಮೆ ಚಂದ್ರಶೇಖರ್ ಅವರೇ ಸಂಸತ್ತಿನಲ್ಲಿ
"ನನ್ನ ಪಕ್ಷ ಯಾವುದು, ನಾನು ಯಾವ ರಾಜಕೀಯ ಪಕ್ಷಕ್ಕೆ ಸೇರಿದ್ದೇನೆ ಎಂಬುದು ನನಗೇ
ಗೊತ್ತಿಲ್ಲ", ಎಂದು ಹೇಳಿಕೆ ನೀಡಿದ್ದರು. ಅದು ಅವರ ವೈಯಕ್ತಿಕ ರಾಜಕೀಯದ ದುರಂತವೂ
ಹೌದು, ಭಾರತದ ಸಮಾಜವಾದಿ ರಾಜಕಾರಣದ ದುರಂತವೂ ಹೌದು.
ಇಂದು ಚಂದ್ರಶೇಖರ್ ನಿಧನದ ನಂತರ, ಯಾರಾದರೂ ದೇಶಕ್ಕೆ ಅವರ ಕೊಡುಗೆ ಏನು ? ಅವರ
ಸಾಧನೆ ಏನು ? ಎಂದು ಪ್ರಶ್ನೆ ಹಾಕಿದರೆ, ಕಳೆದ ನಲವತ್ತೈದು ವರ್ಷಗಳಿಂದ
ವೃತ್ತಪತ್ರಿಕೆ ಕೈಗೆತ್ತಿಕೊಂಡೇ ಪ್ರತಿ ಮುಂಜಾನೆ ಕಣ್ ಬಿಡುವ ನನ್ನಂತಹವರಿಗೂ, ಕಣ್
ಕಣ್ ಬಿಡುವಂತಾಗುತ್ತದೆ, ಗೊಂದಲ ಉಂಟಾಗುತ್ತದೆ, ಖಿನ್ನತೆ ಆವರಿಸುತ್ತದೆ.
ಮಂಜುನಾಥ ಅಜ್ಜಂಪುರ, ಬೆಂಗಳೂರು.
Comments
ಉ: ಚರಿತ್ರೆಯ ಕಾರ್ಮೋಡಗಳಲ್ಲಿ ಮರೆಯಾದ "ಚಂದ್ರ" - ಚಂದ್ರಶೇಖರ್
ಉ: ಚರಿತ್ರೆಯ ಕಾರ್ಮೋಡಗಳಲ್ಲಿ ಮರೆಯಾದ "ಚಂದ್ರ" - ಚಂದ್ರಶೇಖರ್