ಬೇಸಿಗೆ ರಜಾ ಮಸ್ತ್ ಮಜಾ....

ಬೇಸಿಗೆ ರಜಾ ಮಸ್ತ್ ಮಜಾ....

ಇನ್ನೇನು ಪರೀಕ್ಷೆಗಳೆಲ್ಲಾ ಮುಗಿದು ಎರಡು ತಿಂಗಳು ರಜಾ. ಏಪ್ರಿಲ್, ಮೇ ತಿಂಗಳಲ್ಲಿ ಸಿಗುವ ಬೇಸಿಗೆ ಕಾಲದ ರಜೆಯಾದರೂ ಆ ರಜೆಯಲ್ಲಿನ ಗಮ್ಮತ್ತೇ ಬೇರೆ. ರಜೆಯ ಮಜಾ ಸವಿಬೇಕಾದರೆ ಹಳ್ಳಿಯಲ್ಲಿ ಹುಟ್ಟಬೇಕು ಎಂಬುದು ನನ್ನ ಅಭಿಪ್ರಾಯ. ಹಳ್ಳಿಯಲ್ಲಿ ರಜಾ ಕಾಲ ಕಳೆದವರಿಗೇ ಗೊತ್ತು ಅದರ ಮಜಾ ಏನೆಂದು. ನಗರದಲ್ಲಿ ಬೆಳೆದ ಸಂಬಂಧಿಕರ ಮಕ್ಕಳು ಈ ರಜಾ ಬಂದ ಕೂಡಲೇ ಸ್ವಿಮಿಂಗ್ ಕ್ಲಾಸು, ಕರಾಟೆ ಕ್ಲಾಸು ಅಂತಾ ಬ್ಯುಸಿಯಾಗಿರುವುದನ್ನು ನೋಡಿದಾಗ ನನ್ನ ಬಾಲ್ಯ ಅದೆಷ್ಟು ಸುಂದರವಾಗಿತ್ತು ಅಂತಾ ಅನಿಸಿ ಬಿಡುತ್ತದೆ. ಶಾಲೆಯ ಹೋಂ ವರ್ಕ್, ಕಾಪಿ ಬರೆಯುವ ತಲೆಬಿಸಿ ಇಲ್ಲ. ಅಂದಿನ ಬೇಸಿಗೆ ರಜಾ ದಿನಗಳೇ ಅಂತದ್ದು. ಏಪ್ರಿಲ್ ಮೇ ತಿಂಗಳಲ್ಲಿ ಸುಡು ಬಿಸಿಲಾದರೂ ನಾವದನ್ನು ಕ್ಯಾರೇ ಮಾಡುತ್ತಿರಲಿಲ್ಲ. ಬೆಳಿಗ್ಗೆ ಎದ್ದು ಅಣ್ಣನ ಜೊತೆ ಸೈಕಲ್ ಸವಾರಿ ಎಷ್ಟು ಮಜಾ ಕೊಡ್ತಿತ್ತು ಗೊತ್ತಾ? ಮನೆಯ ಮುಂದಿರುವ ಮಾವಿನ ಮರದಲ್ಲಿ ಜೋಕಾಲಿ ಆಡಲು, ಮರ ಹತ್ತಿ ಮಂಗನಾಟ ಆಡುವುದು ...ಪೊಟರೆಯಲ್ಲಿ ಇಣುಕಿ ಹಕ್ಕಿ ಮೊಟ್ಟೆ ಇದೆಯಾ ಅಂತಾ ನೋಡುವುದು ಹೀಗೆ ಏನೆಲ್ಲಾ ಕಿತಾಪತಿಗಳು! 

ಆ ಬಾಲ್ಯ ಎಷ್ಟು ಸುಂದರವಾಗಿತ್ತು. ನನ್ನ ಅಣ್ಣ ಓರಗೆಯ ಹುಡುಗರ ಜೊತೆ ಕ್ರಿಕೆಟ್ ಆಡುವಾಗ ಬಾಲ್ ಎಲ್ಲಿ ಯಾವ ಹಿತ್ತಿಲಿಗೆ ಬೀಳುತ್ತದೆ ಎಂದು ನೋಡಿಕೊಳ್ಳುವುದು ನನ್ನ ಕೆಲಸ. ಅಲ್ಲಿ ತಂದಿಟ್ಟ ನೀರಿನ ಕೊಡದ ಪಕ್ಕ ನಾಯಿಯೋ ಕಾಗೆಯೋ ಬಂದರೆ ಅದನ್ನು ಓಡಿಸಬೇಕು, ಕೆಲವೊಮ್ಮೆ ಥರ್ಡ್ ಅಂಪೈರ್ ಥರಾ ಔಟ್ ಹೌದೋ ಅಲ್ಲವೋ ಅಂತಾ ಹೇಳ್ಬೇಕು. ಆದ್ರೂ ಹುಡುಗರೆಲ್ಲ ಕ್ರಿಕೆಟ್ ಆಡುವಾಗ ನಾನು ಹುಡುಗ ಆಗಿರುತ್ತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಂತಾ ಅನಿಸಿ ಬಿಡ್ತಿತ್ತು. ಇನ್ನೇನು ಕೇವಲ ಬ್ಯಾಟ್್ನಷ್ಟೇ ಉದ್ದವಿರುವ ನೀನು ಹೇಗೆ ಬ್ಯಾಟಿಂಗ್ ಮಾಡ್ತೀಯಾ ಅಂತಾ ಅಣ್ಣ ತಮಾಷೆ ಮಾಡಿದಾಗ ಅಪ್ಪ ನನಗಾಗಿಯೇ ಕೊತ್ತಳಿಗೆಯ ಬ್ಯಾಟ್ ಮಾಡಿಕೊಟ್ಟಿದ್ರು. ಹಾಗೆ ನಾನು ಮತ್ತು ಅಪ್ಪ ನಮ್ಮ ಅಂಗಳದಲ್ಲೇ ಕ್ರಿಕೆಟ್ ಆಡ್ತಾ ಇರ್ಬೇರಾದ್ರೆ, ಸೆಗಣಿ ಸಾರಿಸಿದ ಅಂಗಳ ಹಾಳು ಮಾಡ್ಬೇಡಿ ಎಂದು ಅಮ್ಮ ಬೊಬ್ಬೆ ಹಾಕ್ತಿದ್ರು.

ಹೂಂ... ಈಗಂತೂ ಸೆಗಣಿ ಸಾರಿಸಿದ ಅಂಗಳ ಎಲ್ಲಿ ಕಾಣಲು ಸಿಗ್ತದೆ ಹೇಳಿ? ಆ ಅಂಗಳದಲ್ಲಿ ಮಸಿ ತುಂಡಿನಿಂದ ಚೌಕ ರಚಿಸಿ ಜಿಬ್ಲಿ ಆಡುವುದು, ಜಗಲಿಯಲ್ಲಿ ಗೇರು ಬೀಜ ಕುಟ್ಟುವುದು, ಮರಳು ರಾಶಿಯಲ್ಲಿ ಕುಳಿತು ಗೆರಟೆಯಲ್ಲಿ ಮರಳು ತುಂಬಿಸಿ ಇಡ್ಲಿ ತರಹ ಮಾಡುವುದು, ಮೋರಿ ಸಂಕದ ಒಳಗೆ ಹೋಗಿ ಅವಿತು ಕೊಳ್ಳುವುದು ಎಷ್ಟು ಆಹ್ಲಾದಕರವಾಗಿತ್ತು. ಬಿಸಿಲಿಗೆ ಹೊರಗೆ ಹೋಗ್ಬೇಡಿ ಮನೆಯಲ್ಲೇ ಇರಿ ಎಂದರೂ ನಮ್ಮ ಆ(ಕಾ)ಟ ತಪ್ಪಿದಲ್ಲ. ಮೂಲೆ ಕಂಬಾಟ, ಕಣ್ಣು ಮುಚ್ಚಾಲೆ, ಎಲ್ಲಾ ಕುರ್ಚಿಗಳನ್ನು ಜೋಡಿಸಿ ಅದರ ಮೇಲೆ ಸೀರೆ ಹೊದ್ದು ಬಸ್ ಆಟ ಹೀಗೆ ಎಲ್ಲಾ ಆಟಗಳು 'ಬ್ರೇಕ್್' ಇಲ್ಲದೆ ಮುಂದುವರಿಯುತ್ತಿತ್ತು.

 

ಆ ದಿನಗಳೇ ಹಾಗೆ. ಈಗಿನಂತೆ ಮೊಬೈಲ್್ನಲ್ಲಿ ಅಲರಾಂ ಕಿರುಚಾಟದಿಂದಲೋ, ಗುಡ್ ಮಾರ್ನಿಂಗ್ ಮೆಸೇಜ್್ನಿಂದಲೋ ನಮ್ಮ ದಿನ ಶುರುವಾಗುತ್ತಿರಲಿಲ್ಲ. ಕೋಳಿ ಗೂಡಿನಿಂದಲೋ, ಹತ್ತಿರದ ಮರದಲ್ಲಿ ಕುಳಿತ ಕೆಂಪು ಜುಟ್ಟಿನ ಹುಂಜ ಕೂಗಿದರೆ ಸಾಕು ಊರಿಗೆ ಊರೇ ಎದ್ದೇಳುತ್ತಿತ್ತು. ಅದೂ ಬೆಳಗ್ಗಿನ ಆರು ಗಂಟೆ. ಬಿಸಿಲು ಬರುವುದಕ್ಕಿಂತ ಮೊದಲು ಅಂಗಳ ಗುಡಿಸಿ ಆಗ್ಬೇಕು, ದನವನ್ನು ಮೀಯಿಸಿ ಹಾಲು ಕರೆಯಬೇಕು. ದೂರದಿಂದ ಕೇಳಿ ಬರುವ ಸುಪ್ರಭಾತ, ಕೋಗಿಲೆಯ ಮಧುರಗಾನ ಕೇಳಿದರೆ ಸಾಕು ಮೈ ಮನ ಪುಳಕಗೊಳ್ಳುತ್ತಿತ್ತು. ಹಿತ್ತಿಲಲ್ಲಿ ಸುತ್ತಾಡಿ ಗೇರು ಬೀಜ ಹೆಕ್ಕುವ ಕೆಲಸದ ಮಜವೇ ಬೇರೆ. ಗೇರು ಮರಕ್ಕೆ ಹತ್ತಿ ಹಣ್ಣು ಕೊಯ್ದೋ, ಇಲ್ಲವೇ ಮರದ ಗೆಲ್ಲನ್ನು ಕುಲುಕಿಸಿ, ದೊಡ್ಡ ಕೋಲು ತೆಗೆದು ಕೊಂಡು ಹಣ್ಣನ್ನು ಬೀಳಿಸಿ ತಿನ್ನುವ ಬಗ್ಗೆ ಹೇಳಬೇಕೆ?. ಗೇರು ಹಣ್ಣಿನ ರಸ ಅಂಗಿಗೆ ಬಿದ್ದರೆ ಕಲೆ ಖಂಡಿತ ಹಾಗಂತ ಅಂಗಿಗೆ ಬೀಳಿಸದೆ ತಿನ್ನೋಕೆ ಆಗುತ್ತಾ? ಮಾವಿನ ಮರವೇರಿ ಮಾವಿನ ಕಾಯಿ ಕೊಯ್ಯುವುದು ಇದ್ದೇ ಇರುತ್ತದೆ, ಆದ್ರೆ ಕಲ್ಲು ಬಿಸಾಡಿ ಮಾವಿನ ಮಿಡಿ ಬೀಳಿಸುವುದರ ಥ್ರಿಲ್ಲೇ ಬೇರೆ ಮಾರಾಯ್ರೆ. ಯಾರು ಎಸೆದ ಎಷ್ಟನೇ ಕಲ್ಲಿನಲ್ಲಿ ಎಷ್ಟು ಮಾವಿನ ಕಾಯಿ ಬೀಳುತ್ತೆ ಎಂಬ ಸ್ಫರ್ಧೆ ಬೇರೆ. ಆ ಮಾವಿನ ಕಾಯಿಯ ಸೊನೆಯನ್ನು ಮರಕ್ಕೋ, ಕಲ್ಲಿಗೋ ಉಜ್ಜಿ ತಿನ್ನುವುದು, ಒಂದೇ ಮಾವಿನ ಮಿಡಿಯನ್ನು ಹಂಚಿ ತಿನ್ನಬೇಕಾಗಿ ಬಂದಾಗ ಗೋಡೆಗೆ 'ರಪ್ಪ' ಅಂತಾ ಬಿಸಾಡಿ ಹೋಳು ಮಾಡುವುದು, ಅದಕ್ಕೆ ಉಪ್ಪು ಸೇರಿಸಿ ತಿಂದದ್ದು ಮರೆಯಲು ಸಾಧ್ಯವೇ?. ಮಾವಿನ ಸೊನೆ ತಾಗಿ ಮೂಗು ಬಾಯಿ ಹುಣ್ಣಾದದ್ದು, ಸೈಕಲ್್ನಿಂದ ಬಿದ್ದು ಕಾಲುಗಂಟಿಗೆ ನೋವಾದ್ದದು, ಅದಕ್ಕೆ ಅಮ್ಮ ಬೈದದ್ದು, ಅಪ್ಪ ಬ್ಯಾಂಡೇಡ್ ಹಾಕಿದ್ದು, ಆ ಗಾಯ ಒಣಗುವ ಮುನ್ನ ಮತ್ತೊಮ್ಮೆ ಗಾಯ ಮಾಡಿಸಿಕೊಂಡದ್ದು...ಆ  ನೋವಿನ ಅನುಭವ ಈಗ ಕೇವಲ ಮಧುರ ನೆನಪು ಮಾತ್ರ. ಆ ಎರಡು ತಿಂಗಳು ಹೇಗೆ ಕಳೆದು ಹೋಗ್ತಾ ಇತ್ತು ಅಂತಾ ಗೊತ್ತೇ ಆಗ್ತಾ ಇರ್ಲಿಲ್ಲ. ರಜೆಯಲ್ಲಿ ಅಜ್ಜಿ ಮನೆಗೆ ಹೋಗುವುದೆಂದರೆ ಗೌಜಿಯೇ ಗೌಜಿ. ಅಲ್ಲಿ ಹರಿಯುವ ತೋಡಿನಲ್ಲಿ ನೀರು ಬತ್ತಿ ಹೋಗುತ್ತಿದ್ದರೆ ಗಾಳ ಹಾಕಿ ಮೀನು ಹಿಡಿಯುವ ಸಂಭ್ರಮವೇ ಬೇರೆ. ಉರಿ ಬಿಸಿಲಿನ ಬೇಗೆಗೆ ಹತ್ತಿರದಲ್ಲಿರುವ ಕೆರೆಯಲ್ಲಿ ಮೀಯುವ ಸುಖ ಹೇಳಲೆಂತು? ಆಟವಾಡಿ ಬಂದಾಗ ಮಣ್ಣಿನ ಹೂಜಿಯಲ್ಲಿ ತುಂಬಿಸಿಟ್ಟ ನೀರು ಕುಡಿದಾಗ ಅನುಭವಿಸುವ ಹಿತಾನುಭವ, ಆಗೊಮ್ಮೆ ಈಗೊಮ್ಮೆ ಮರದೆಡೆಯಿಂದ ಬೀಸಿ ಬರುವ ತಣ್ಣನೆಯ ಗಾಳಿ...ಈ ಅನುಭವಗಳನ್ನೆಲ್ಲಾ ವಿವರಿಸಲು ಸಾಧ್ಯವಿಲ್ಲ ಅಲ್ವಾ? 

ಹೀಗೆ  ಮಹಾನಗರಿಯಲ್ಲಿ ಕುಳಿತು ಬಿಸಿಲ ಬೇಗೆಗೆ ಎಸಿ ರೂಮಲ್ಲಿ ಕುಳಿತು ಕೀಲಿಮಣೆ ಕುಟ್ಟುವಾಗ ಆ ಬಾಲ್ಯದ ಬೇಸಿಗೆ ರಜಾ ದಿನ ಮನಸ್ಸಿನಲ್ಲಿ ಹಾದುಹೋಗುತ್ತಿದ್ದೆ. ವೀಕೆಂಡು, ಸಂಡೇ ಬಂತು ಎಂದ ಕೂಡಲೇ ಶಾಪಿಂಗ್ ಮಾಲ್್ಗೆ ಲಗ್ಗೆ ಇಡುವ, ಕೆಎಫ್್ಸಿ ಮುಂದಿರುವ ಕ್ಯೂ ನಿಂತಿರುವವರನ್ನು ನೋಡಿದಾಗ, ಆದಿತ್ಯವಾರದಂದು ನಮ್ಮೂರಿನ ದೇವಸ್ಥಾನದಲ್ಲಿ ತುಂಬಿ ತುಳುಕುವ ಜನ , ಪ್ರಸಾದಕ್ಕಾಗಿ ಕ್ಯೂ ನಿಂತದ್ದು ನೆನಪಾಗುತ್ತದೆ. ಸಂಜೆ ಹೊತ್ತಲ್ಲಿ .. ಮನೆಗೆ ಹೋಗುವ ಧಾವಂತದಲ್ಲಿರುವ ಜನರು...ವಿಧ ವಿಧದ ಬೈಕು..ನಮ್ಮೂರಲ್ಲಾದರೆ ಬೈಕಿನ ಬದಲು ರಸ್ತೆ ತುಂಬಾ ದನಗಳ ಹಿಂಡು, ನಗರವಾಸಿಗಳಂತೆ ಪಿಜ್ಜಾ, ಬರ್ಗರ್, ಕೋಕ್ ಕುಡಿದು ಹೊಟ್ಟೆ ತುಂಬಿಸುವ ಬದಲು ತಾಪತ್ರಯಗಳಿದ್ದರೂ ಹಂಚಿ ಉಂಡು ಮಲಗುವ  ಜನರು....ಹೀಗೆ ಊರಿನ ನೆನಪು ಬಹಳವಾಗಿ ಕಾಡುತ್ತಿದೆ. ಇನ್ನೇನು ವಿಷು ಹಬ್ಬ ಸನ್ನಿಹಿತವಾಗಿದೆ. ಅದಕ್ಕಾಗಿ ಊರಿಗೆ ಹೋಗ್ಬೇಕು. ಊರ ಜಾತ್ರೆ, ವಿಷು ಕಣಿ ನೋಡಿ, ವಿಷು ಕೈನೀಟ್ಟಂ ಇಸ್ಕೊಂಡು ಮತ್ತೆ ಮಹಾನಗರಿಗೆ ಹಿಂತಿರುಗಬೇಕು...ನನ್ನೂರಿನ ನೆನಪುಗಳನ್ನು ಮನಸ್ಸಲ್ಲಿ ಭದ್ರವಾಗಿರಿಸಿಕೊಂಡು...

Rating
No votes yet

Comments