ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?

ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?

ನಮಸ್ಕಾರ,
ನಿನ್ನೆ ಸಂಜೆ ಕಚೇರಿ ಇಂದ ಮನೆಗೆ ಬರುತ್ತಿದ್ದಾಗ ಒಂದು ವಿಚಾರ ಸುಮ್ನೆ ಮನಸಿನಲ್ಲಿ ಹೀಗೆ ಹೊಳೀತು, ನಿಮ್ಮ ಜೊತೆ ಅದನ್ನ ಹಂಚಿಕೊಳ್ಳೋಣ ಅಂತ.
ಹೌದು ಸಂಪದವನ್ನ ಪೂರಾ ಒಂದು ಸರಿ ಅವಲೋಕಿಸಿದರೆ ನಿಜಕ್ಕೂ ಖುಷಿಯಾಗುತ್ತೆ, ಎಷ್ಟೋ ಜನ ಬರೀತಾರೆ, ಎಷ್ಟೋ ರೀತಿ ಬರೀತಾರೆ, ಎಷ್ಟೋ ಭಾವನೆಗಳು ಇಲ್ಲಿ ಅವತರಿಸುತ್ತವೆ, ಸಾವಿರಾರು ಕನಸುಗಳು ಇಲ್ಲಿ ರೆಕ್ಕೆ ಬಿಚ್ಚಿ ಹಾರಾಡುತ್ತವೆ, ನೂರಾರು ಜನ ತಮ್ಮ ಭಾವನೆಗಳಿಂದ ನೂರಾರು ಜನರ ಭಾವನೆಗಳು ಸ್ಪಂದಿಸುತ್ತವೆ.
ಯಾವೊದೋ ಒಂದು ಕವನ, ಅಥವಾ ವಾಕ್ಯ ಓದಿದರೆ ಯಾವಾಗ್ಲೋ ಬಾಲ್ಯದಲ್ಲಿ ಪಕ್ಕದ ಮನೆಯ ಹುಡುಗಿಯ ಕೈಯಿಂದ ಕಸಿದುಕೊಂಡು ತಿಂದ ಸಿಹಿ ತಿಂಡಿಯ ನೆನಪಾಗುತ್ತೆ, ಬಾಲ್ಯ ಚಿತ್ರಣ ಹಾಗೆ ಕಣ್ಣುಮುಂದೆ ಹಾದು ಹೋಗುತ್ತೆ. ಮನಸನ್ನ ಇನ್ನ್ಯಾವುದೋ ವಿಷಯಕ್ಕೆ ಮುದುಡುವಂತೆ ಮಾಡುತ್ತೆ.
ಇದೆಲ್ಲ ಹೌದು ಆದ್ರೆ ಇದೆಲ್ಲ ಒಬ್ಬ ಮನುಷ್ಯನ ವಯುಕ್ತಿಕ ನೆಲೆಗಟ್ಟಿನಲ್ಲಿ ನೋಡುವಂತಹ ವಿಷಯ. ಆದ್ರೆ ಇವತ್ತಿನ ದಿನಗಳಲ್ಲಿ ನೋಡೋದಾದ್ರೆ ಎಲ್ಲೋ ಒಂದು ಕಡೆ ಕನ್ನಡವನ್ನ ಕಡೆಗಣಿಸುತ್ತಿರುವ ಉದಾಹರಣೆಗಳು ನಮ್ಮ ಮುಂದೆ ಬಹಳ ಇವೆ. ನಾವುಗಳು ನಮ್ಮ ನಾಡಿನ ಏಳಿಗೆಗಾಗಿ ಏನು ಮಾಡುತಿದ್ದೇವೆ ಅನ್ನೋದು ನನ್ನ ಪ್ರಶ್ನೆ? ಇದರಲ್ಲಿ ನಾನೂ ಕೂಡ ಭಾಗಿ.
ಸಾಹಿತಿ ಎಸ್.ಎಲ್.ಭೈರಪ್ಪ ಹೇಳೋ ಹಾಗೆ ಭಾಷೆ ಅನ್ನೋದು ಒಂದು ಸಂವಹನ ಮಾಧ್ಯಮ, ಅದನ್ನ ನಾವುಗಳು ನಮ್ಮ ಸಾಹಿತ್ಯದಿಂದ ಸಮಾಜದಲ್ಲಿ ಕ್ರಾಂತಿ ಮಾಡುತ್ತೇವೆ ಅನ್ನೋದು ಬರಿ ಭ್ರಮೆ ಅಂತ. ಕ್ರಾಂತಿ ಅನ್ನೋದು ಜನರ ನಡುವೆಯಿಂದ ಎದ್ದು ಬರಬೇಕು ಅದು ಯಾವುದೇ ಪುಸ್ತಕದಿಂದ ಬರುವಂತಹದಲ್ಲ ಅಂತ.
ಈ ಮಾತುಗಳು ನಿಜ ಅನ್ನಿಸೋಲ್ವ? ನಾವು ಒಂದು ಪುಸ್ತಕ ಓದುತ್ತಿವಿ ಅದರಲ್ಲಿರೋ ಅಂಶ ನಮಗೂ ಹಿಡಿಸುತ್ತೆ ಇನ್ನೊಬ್ರಿಗೆ ಆ ಪುಸ್ತಕ ಓದು ಅಂತನೋ ಅಥವಾ ಉಡುಗೊರೆಯಾಗಿ ಕೊಡ್ತೀವಿ. ಅಲ್ಲಿಗೆ ನಮ್ಮ ಕೆಲಸ ಮುಗೀತು. ಇವತ್ತು ನೋಡೋದಾದ್ರೆ ಬಂಡಾಯ ಸಾಹಿತ್ಯಕ್ಕೂ ಬೆಲೆ ಇಲ್ಲ ಅಂತ ಹೇಳಬಹುದು. ಆದ್ರೆ ನಮ್ಮ ನಾಡಿನ ಏಳಿಗೆಗೆ ನಾವು ಕೊಡುತ್ತಿರುವ ಕಾಣಿಕೆ ಏನು?
ಬರಿಯ ಕಥೆ, ಕವನ, ಒಂದು ಒಳ್ಳೆಯ ಓದು, ಒಳ್ಳೆಯ ಚಿಂತನೆ ಇಷ್ಟೇ ಸಾಕೆ?
ನಾವು ಇದೆಲ್ಲ ಮಾಡುವುದು ನಮ್ಮ ಆತ್ಮ ಸಂತೋಷಕ್ಕೆ, ಇದನೆಲ್ಲ ನಾನು ವಿರೋಧಿಸುತ್ತಿಲ್ಲ. ಆದ್ರೆ ಎಲ್ಲೋ ಒಂದು ಕಡೆ ನಮಗೆ ಪಾಪ ಪ್ರಜ್ಞೆ ಕಾಡ್ತಿರುತ್ತೆ.
ಇವತ್ತು ಕರ್ನಾಟಕ ರಕ್ಷಣಾ ವೇದಿಕೆ ಬೀದಿಗೆ ಇಳಿದರೆ ಮಾತ್ರ ನಮಗೆ ನ್ಯಾಯ ಸಿಗುತ್ತೆ ಅನ್ನೋ ಹಾಗೆ ಆಗಿದೆ. ನಮ್ಮ ಕಣ್ಣ ಮುಂದೇನೆ ನಮ್ಮ ಕನ್ನಡಕ್ಕೆ ಅನ್ಯಾಯ ಮಾಡ್ತಾ ಇದ್ರೂ ನಾವುಗಳು ಪ್ರತಿಭಟಿಸದಷ್ಟು ಹೇಡಿಗಳಾಗಿದಿವಾ.
ನಾನೂ ಎಲ್ಲರು ಬೀದಿಗಿಳಿದು ದೊಡ್ಡ ಹೋರಾಟ ಮಾಡಿ ಅಂತ ಹೇಳ್ತಿಲ್ಲ, ಆದ್ರೆ ನಮ್ಮ ಪರಿಸರದಲ್ಲೇ, ನಮ್ಮ ಪರಿಮಿತಿಯೊಳಗೆ ಏನಾದ್ರೂ ಬದಲಾವಣೆ ಮಾಡೋಕೆ ಸಾಧ್ಯ ಅನ್ನೋದಾದ್ರೆ ನಾವುಗಳು ಅದನ್ನ ಮಾಡಬಹುದಲ್ವ?
ಉದಾಹರಣೆಗೆ ಇವತ್ತು ಯಾವುದೋ ಮಾಲ್ ಗೆ ಹೋದ್ರೆ ಅಲ್ಲಿ ನಿಮಗೆ ಕನ್ನಡ ಕಾಣೋದು ಅಪರೂಪ ಹಾಗಂತ ನಾವು ಅಲ್ಲಿ ಕನ್ನಡ ಮಾತನಾಡಿದರೆ ತಪ್ಪಲ್ಲ, ನಾವುಗಳು ಅಲ್ಲಿ ಗ್ರಾಹಕರು ಅಲ್ಲಿ ಗ್ರಾಹಕನೇ ರಾಜ ನೀವು ಕೇಳಿದ್ದು ಅಲ್ಲಿ ಸಿಗಬೇಕು, ಇಲ್ಲಿ ನಾವು ಕನ್ನಡ ಮಾತನಾಡಿ ಅಂತ ಅವರಿಗೆ ಒತ್ತಾಯಿಸೋಣ, ನಿಮ್ಮ ಕಛೇರಿಯಲ್ಲಿ ಯಾರೋ ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿದರೆ ಪ್ರತಿಭಟಿಸಿ ನಿಜಾಂಶವನ್ನ ತಿಳಿಸಿ ಹೇಳಿ, ಅಥವಾ ಕನ್ನಡ ಕಲಿಯುವ ಉತ್ಸಾಹವಿದ್ದರೆ ಅಂಥವರಿಗೆ ಕಲಿಸಿ ಕೊಡಿ, ಹೀಗೆ ನಾವು ಮಾಡುವ ಸಣ್ಣ ಕೆಲಸಗಳು ಒಂದು ಹೊಸ ದಾರಿಗೆ ನಾಂದಿಯಾಗಬಹುದು.
ಏನಂತೀರಾ???

Rating
No votes yet

Comments