ನೋಡುತ್ತ ಕೂರಬೇಕಷ್ಟೆ.. ಬೊಬ್ಬೆ ಹಾಕಿದರೂ ಬದಲಾಗುವುದಿಲ್ಲ.

Submitted by sathvik N V on Wed, 04/14/2010 - 17:22

ಶುದ್ಧ ಕನ್ನಡ ಎನ್ನುವ ಪದದಲ್ಲಿಯೇ 'ಶುದ್ಧ' ಅನ್ನುವ ಪದ ಸಂಸ್ಕೃತದ್ದು. ಆದರೂ ಶುದ್ಧ ಎಂಬ ಪದ ಉಪಯೋಗಿಸಿ ಹೇಳುವ 'ಮಾದರಿ ಕನ್ನಡ' ದ (ಮೊಡೆಲ್ ಲಾಂಗ್ವೇಜ್)  ಅಗತ್ಯವೂ ಖಂಡಿತಾ ಇದೆ. ಯಾವುದೇ ಭಾಷೆಯು ಪ್ರತಿ ಹತ್ತು ಕಿಲೋ ಮೀಟರ್ ಅಂತರದಲ್ಲಿ ತುಸು ವ್ಯತ್ಯಾಸವಾಗುತ್ತಾ ಹೋಗುತ್ತದೆ ಎಂಬುದು ಭಾಷಾ ವಿಜ್ಞಾನಿಗಳ ಅಂಬೋಣ. ಈ ರೀತಿಯ ಒಂದೇ ಭಾಷೆಯ ಬಳಕೆಯಲ್ಲಿರುವ ಭಿನ್ನತೆಯನ್ನು ಉಪಭಾಷೆ ಎಂದು ಕರೆಯಲಾಗುತ್ತದೆ. ಅದರಲ್ಲೂ ಲಿಪಿ ರಹಿತ ಭಾಷೆಯಾದರೆ ಈ ಪ್ರಕ್ರಿಯೆಯ ಇನ್ನು ಬಿರುಸಾಗಿ ನಡೆಯುತ್ತಿರುತ್ತದೆ. ತುಳು ಭಾಷೆ  ಇದಕ್ಕೊಂದು ನಿದರ್ಶನ.  ಹೀಗಿರುವಾಗ  ವಿಶಾಲ ಕರ್ನಾಟಕ ವ್ಯಾಪ್ತಿಯಲ್ಲಿ ಅದೆಷ್ಟು ಕನ್ನಡಗಳಿರಬಹುದು?!


ಕನ್ನಡ 'ಪ್ರಮುಖ'ವಾಗಿ ನಾಲ್ಕು ಉಪಭಾಷೆಗಳಿವೆ. ಹಳೆ ಮೈಸೂರು ಕನ್ನಡ, ಮಂಗಳೂರು ಕನ್ನಡ, ಧಾರವಾಡ ಕನ್ನಡ, ಕಲ್ಬುರ್ಗಿ ಕನ್ನಡ. ಇವು ಪ್ರಾಂತೀಯ ಉಪಭಾಷೆಗಳು. ಅಂದರೆ ಪ್ರಾಂತ್ಯಗಳ ಆಧಾರದಲ್ಲಿ ಮಾಡಿದ ವಿಭಾಗಗಳು. ಈಗ ನಾವು ಮಂಗಳೂರು ಕನ್ನಡಕ್ಕೆ ಬರೋಣ. ಇಲ್ಲಿ ಎಲ್ಲ ಜನರು ಮಂಗಳೂರು ಕನ್ನಡ ಉಪಯೋಗಿಸಿದರೂ ಅದರ ಬಳಕೆಯಲ್ಲಿ ವ್ಯತ್ಯಾಸವಿರುತ್ತದೆ. ಇದನ್ನು ಸಾಮಾಜಿಕ ಉಪಭಾಷೆ ಎನ್ನುತ್ತಾರೆ. ಮಾದರಿ ಕನ್ನಡಕ್ಕೆ ಹತ್ತಿರವಾಗಿ ಮಾತಾಡುವ ಬ್ರಾಹ್ಮಣರಿರಬಹುದು, ಪಠ್ಯವನ್ನು ಓದುವ ರೀತಿಯಲ್ಲಿ ಮಾತಾಡುವ ಕ್ಯಾಥೋಲಿಕರಿರಬಹುದು. ತುಳು ಭಾಷೆಯ ಪ್ರಭಾವದಲ್ಲಿ ಕನ್ನಡ ಮಾತಾಡುವ ಬ್ರಾಹ್ಮಣೇತರಿರಬಹುದು. ವಿಶಿಷ್ಟ ರೀತಿಯಲ್ಲಿ ಕನ್ನಡ ಪ್ರಯೋಗದ ಕುಂದಗನ್ನಡವಿರಬಹುದು. ಮಲೆಯಾಳಂ ಪ್ರಭಾವದಲ್ಲಿ ಮಾತಾಡುವ ಕಾಸರಗೊಡು ಕನ್ನಡಿಗರಿರಬಹುದು ಹೀಗೆ ಹಲವು. ಇನ್ನೂ ವೃತ್ತಿ ಉಪಭಾಷೆಗಳಿವೆ, ಅವು ಪ್ರತಿ ವೃತ್ತಿಯನ್ನು ಅನುಸರಿಸಿ ಬದಲಾಗುತ್ತಿರುತ್ತದೆ. ಅಷ್ಟೇ ಏಕೆ ಪ್ರತಿ ವ್ಯಕ್ತಿ ಮಾತಾಡುವ ರೀತಿಯಲ್ಲೂ ವ್ಯತ್ಯಾಸವಿರುತ್ತದಂತೆ. ಇದನ್ನು ವ್ಯಕ್ತಿ ಉಪಭಾಷೆ ಎನ್ನುತ್ತಾರೆ.  


ಉಪಭಾಷೆಗಳು ಹುಟ್ಟಲು ಪ್ರಮುಖ ಕಾರಣ ವಿಸ್ತಾರವಾದ ಭಾಷಿಕ ಪ್ರದೇಶ. ಹಿಂದೆಲ್ಲ ವ್ಯವಸ್ಥಿತ ಸಾರಿಗೆ ವ್ಯವಸ್ಥೆ ಇಲ್ಲದೇ ಇದ್ದುದರಿಂದ, ಸಹಜ ಪ್ರಾಕೃತಿಕ ಅಡೆತಡೆಗಳಿಂದ  ಜನರು ತಮ್ಮ ತಮ್ಮಲ್ಲೇ ವ್ಯವಹರಿಸಬೇಕಿತ್ತು. ಇದು ಭಾಷೆಯ ಕೊಡುಕೊಳ್ಳುವಿಕೆಗೆ ತಡೆಯೊಡ್ಡಿ ಒಂದೊಂದು ಗುಂಪು ಒಂದೊಂದು ತರಹ ಮಾತಾಡುವಂತೆ ಆಯಿತು. ಆದರೆ ಜಗತ್ತು ಆಧುನೀಕರಣಗೊಂಡಂತೆ ಜನರ ಪರಸ್ಪರ ಸಂವಹನವೂ ಹೆಚ್ಚಿತು. ಧಾರವಾಡ ಒಬ್ಬಾತ ಬೆಂಗಳೂರಿಗೆ, ಹಾಸನದವ ವಿಜಾಪುರಕ್ಕೆ ಕೆಲಸದ ಸಲುವಾಗಿ ಹೋಗಬೇಕಾಗಿ ಬರಬಹುದು. ವಿದೇಶಿಯಾತ್ರೆಗಳೇ ದಿನನಿತ್ಯದ ಸಂಗತಿಗಳಾಗಿರುವಾಗ ಇನ್ನು ನಮ್ಮ ರಾಜ್ಯದ ಒಳಗೆಯೇ ಇಂಥ ಚಟುವಟಿಕೆಗಳು ನಡೆಯುವುದಿಲ್ಲವೇ? ಅಷ್ಟೇ ಅಲ್ಲ ಮಕ್ಕಳು ಶಾಲೆಯಲ್ಲಿ ಕಲಿಯುವಾಗ, ವರ್ತಮಾನ ಪತ್ರಿಕೆಗಳು ಸುದ್ದಿಯನ್ನು ತಿಳಿಸುವಾಗ, ತುಮಕೂರಿನ ವ್ಯಕ್ತಿ ಬಾಗಲಕೋಟೆಯವನೊಂದಿಗೆ ಮಾತಾಡುವ ಕಮ್ಯುನ್ಯೂಕೇಶನ್ ಗ್ಯಾಪ್ ಆಗದಂತೆ ಇಬ್ಬರಿಗೂ ಒಂದು ಸಾಮಾನ್ಯ ಭಾಷೆಯ ಅಗತ್ಯವಿರುತ್ತದೆ. ಆಗ ಬಂದದ್ದೇ ಈ ಶುದ್ಧ ಕನ್ನಡದ ಕಲ್ಪನೆ.


ಕನ್ನಡ ಭಾಷೆಯ ಮೇಲೆ ಹಲವು ಭಾಷೆಗಳ ಪ್ರಭಾವವಿದೆ. ಅದರಲ್ಲೂ ಇಂಗ್ಲೀಷ್ ಮತ್ತು ಸಂಸ್ಕೃತದ್ದು ತುಸು ಹೆಚ್ಚು. ಕಂದಾಯ ಇಲಾಖೆಯಲ್ಲಿ ಬಳಕೆಯಾಗುವ ಪದಗಳಲ್ಲಿ ಪರ್ಶಿಯನ್ ಮತ್ತು ಅರೇಬಿಕ್ ಪದಗಳು ಸೇರಿವೆ. ಆದರೆ ನಾವು ಶುದ್ಧ ಎಂಬ ಪರಿಗಣಿಸುವಾಗ ಸಂಸ್ಕೃತದ ಮೊರೆಹೋಗುತ್ತೇವೆ. ಅದಕ್ಕೂ ಕಾರಣವಿದೆ. ಹೆಚ್ಚಿನ ನಮ್ಮ ವೈಯಾಕರಣಿಗಳು ಅನುಸರಿಸಿರುವುದು ಸಂಸ್ಕೃತ ವ್ಯಾಕರಣ ಪದ್ಧತಿಯನ್ನೇ. ಆಮೇಲೆ ಇಂಗ್ಲೀಷರು ಬಂದ ಮೇಲೆ ಇಂಗ್ಲೀಷ್  ವ್ಯಾಕರಣ ಪರಂಪರೆಯನ್ನು ಅನುಸರಿಸಿ ವ್ಯಾಕರಣ ರಚಿಸಲಾಯಿತು. ಯಾವಾಗ ನಮಗೆ ಭಾಷೆಯ ತಪ್ಪು ಸರಿಯ ಜಿಜ್ಞಾಸೆ ಬಂದಾಗಲೆಲ್ಲ  ನಾವು ಮೊರೆಹೋಗುವುದು ಈ ಪ್ರಭಾವಿ ಭಾಷೆಗಳ ಮೊರೆಯನ್ನು. ಅದರಲ್ಲೂ ಸಂಸ್ಕೃತದ ಮೂಲವನ್ನು ಹುಡುಕಿಕೊಂಡು.  
ಏನೇ ಆಗಲಿ ಕಾಲ ಕಾಲಕ್ಕೆ ಭಾಷೆಯು ಯಾರ ಅಡೆತಡೆಯನ್ನು ಲೆಕ್ಕಿಸದೇ ತನ್ನಷ್ಟಕ್ಕೆ ತಾನು ಬದಲಾಗುತ್ತಾ ಹೋಗುತ್ತದೆ. ನಾವು ನೋಡುತ್ತಾ ಹೋಗಬೇಕಷ್ಟೆ.  

(ಭಾಗ್ವತ ಅವರ 'ಯಾವುದು ...........ಪರಿಶುದ್ಧ ಕನ್ನಡ ಶಬ್ದಗಳು' ಎಂಬ ಬರಹ ಮತ್ತು ಪ್ರತಿಕ್ರಿಯೆಗಳನ್ನು ನೋಡಿ ಇಷ್ಟನ್ನು ಹೇಳಬೇಕೆನಿಸಿತು)


Rating
No votes yet

Comments