ಕಡಲತೀರ

ಕಡಲತೀರ

ಭೋರ್ಗರೆಯುವ ಕಡಲು ಸಿಡಿಲಬ್ಬರದ ಮಳೆ
ಮನದಲ್ಲೋಂದು ಸಣ್ಣ ಆಸೆ
ತಡೆಯಲು ಸಾಧ್ಯವಿಲ್ಲ ನನ್ನನ್ನು ಈ ಸಣ್ಣಪುಟ್ಟ
ಕಡಲು, ಹೆಮ್ಮಳೆ, ಸುಂಟರಗಾಳಿಗಳಿಂದ
ಇಂದೇ ಈಗಲೇ ಕಡಲ ತೀರಕ್ಕೆ ಹೋಗುವ ಆಸೆ

ಈಗ್ಯಾಕೆ ಕಡಲ ತೀರ ಎಂದರು ದೊಡ್ಡವರು
"ಹುಚ್ಚು" ಹಿಡಿದಿದೆ ಎಂದರು ಹೆತ್ತವರು
"ಇವರ ಮುಖಾಂತರ ಭುವಿಗೆ ಬಂದವನು ನಾನು, ಇವರಿಂದ ಅಲ್ಲ"
ಎಂದು ಹೊರಟೇ ಬಿಟ್ಟೆನು ನಾನು

ಮನೆಯಿಂದ ಕಾಲು ಹೊರಗೆ ಇಟ್ಟೊಡನೆ ಕಣ್ಕೊರೆದ ಮಿಂಚು
ಬೇರೆಯವರೆಲ್ಲ ಎದೆ ನಡುಗಿಸುವ ಗುಡುಗು
ಪ್ರಕೃತಿಯು ನನಗೆ ತೋರಿದ ಅದ್ದೂರಿಯ ಸ್ವಾಗತ ನೋಡಿ
ಮನದೊಳಗೆ ಉಲ್ಲಾಸದ ನಗು

ಯಾಕೋ ಮಳೆಯಲ್ಲಿ ನೆನೆಸಿಕೊಳ್ಳುತ್ತಿದ್ದೀಯ ಎಂದು ಕೇಳಿದರು ನೋಡಿದವರು
ಮಳೆರಾಯನೇ ನನಗೆ ಅಭಿಶೇಕ ಮಾಡುತ್ತಿದ್ದಾನೆ ಎಂಬುದ ನೋಡದವರು ಅವರು

ತಿಳಿಯಾಯಿತು ಮಳೆಯು ಜೋರಾಯಿತು ಬಿಸಿಲು ಹೆಚ್ಚಾಯಿತು ಶಾಖ
ತಲೆಯತ್ತಿ ಸೂರ್ಯನಿಗೆ ಕಣ್ಬಿಟ್ಟೊಡನೆ
ಮೋಡವೇ ಸರಿಯಿತು, ನೆರಳಾಯಿತೆನಗೆ

ಕಡಲ ತೀರದಲಿ ಎತ್ತರದ ಕಪ್ಪು ಬಂಡೆಯ ತುತ್ತ ತುದಿಯಲಿ
ನಿಂತೆನು ನಾನು ಅಟಲ ವಿಶ್ವಾಸದಲಿ
ಏನಾಯಿತೋ ಏನೋ ಉಕ್ಕೇರಿತು ಸಮುದ್ರ
ಅಲೆಗಳಾ ಇವು ಮತ್ತೇರಿದ ಆನೆಗಳ ಸಾಲು

ಅಯ್ಯಯ್ಯೊ ಎಂದು ಹಿಂದೋಡಿದರು ಸಾಮಾನ್ಯರು
ಇದೆಂತಾ ದೈತ್ಯತೆರೆ ಹಿಂದೆ ಬಾರೋ "ಅವಿವೇಕಿ"
ಕೂಗಿ ಕರೆದರು ನನ್ನನ್ನು ಯಾರೋ

"ಅಪ್ಪಳಿಸಿತು ತೆರೆ ಬಂಡೆಗೆ; ನುಗ್ಗಿತು ನೀರು ನನ್ನೆಡೆಗೆ"

ನೋಡುನೋಡುತ್ತಿದ್ದಂತೆಯೆ ಇಳಿಯಿತು ಅದರ ರಭಸ
ನಿಧಾನವಾಗಿ ಬಂದು ಮಾಡಿತು ನನ್ನ ಕಾಲ್ಗಳಿಗೆ ಸ್ಪರ್ಷ

ತುಂಬಿ ಬಂದಿತು ನನ್ನ ಹೃದಯ
ನುಡಿಸಿತು ನನ್ನ ಮನದ ಧ್ವನಿಯ
ಹರಸಿಯೇ ಬಿಟ್ಟೆನು ನಾನು
ಹೋಗಿಬಾ ಸಮುದ್ರ ರಾಜ "ಒಳ್ಳೆಯದಾಗಲಿ ನಿನಗೆ"

-ಕಂದ (ರವೀಶ್)

Rating
No votes yet

Comments