ಛೇ! ಬೀದಿ ನಾಯಿಗೆ ಹೆದರುತ್ತ ಬದುಕುವುದೂ ಒಂದು ಬದುಕೇ? :-)

ಛೇ! ಬೀದಿ ನಾಯಿಗೆ ಹೆದರುತ್ತ ಬದುಕುವುದೂ ಒಂದು ಬದುಕೇ? :-)

ಛೇ! ಬೀದಿ ನಾಯಿಗೆ ಹೆದರುತ್ತ ಬದುಕುವುದೂ ಒಂದು ಬದುಕೇ? :-)

ಹೌದು; ಕಳೆದ ಕೆಲವು ದಿನಗಳಿಂದ ನಾನು ಅತಿ ಹೆಚ್ಚು ಚಿಂತಿತನಾಗಿರುವುದು ನನ್ನ ಹೊಸ ಹುದ್ದೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಲಿ  ಎಂದಾಗಲೀ, ಅಚಾನಕ್ಕಾಗಿ ನನಗೆ ಶುರುವಾಗಿರುವ ಈ adult onset atopic dermatitis ಎಂಬ ರೋಗದ ಕುರಿತಾಗಲೀ, ಇನ್ನೇನು ಗೆದ್ದಿತು ಎಂದುಕೊಳ್ಳುವಷ್ಟರಲ್ಲಿ ಸೋತೇ ಬಿಡುವ ಬೆಂಗಳೂರು ಕ್ರಿಕೆಟ್ ತಂಡದ ಕುರಿತಾಗಲೀ ಅಲ್ಲ. ನಮ್ಮ ಬೀದಿಯಲ್ಲಿರುವ ಬೀದಿನಾಯಿಯೊಂದರ ಕುರಿತಾಗಿ. ಈ ಚಿಂತೆ ಸಂಪದಿಗ ಸುರೇಶ ನಾಡಿಗರಿಗೆ (http://sampada.net/article/24831) ಇರುವಂತೆ ಪ್ರಾಣಿದಯೆಯಿಂದ ಹುಟ್ಟಿದ್ದಲ್ಲ. ಬದಲಿಗೆ ನನ್ನದೇ ಸುರಕ್ಷತೆಯ ಕುರಿತು ಬಂದಿರುವ ತೀವ್ರ ಅನುಮಾನಗಳಿಂದಾಗಿ.

ಸುತ್ತಿ ಬಳಸಿ ಹೇಳುವಂತದ್ದೇನೂ ಇಲ್ಲ. ನನ್ನ ರೂಮಿಗೆ ಹೋಗುವ/ಬರುವ ದಾರಿಯಲ್ಲಿ ಕೊನೆಯಲ್ಲಿರುವುದು ಒಂದು ಸಣ್ಣ dead-end ಗಲ್ಲಿ. ಅದರ ನಡುವೆ ಕಳೆದ ಕೆಲವು ದಿನಗಳಿಂದ ಬೀದಿ ನಾಯಿಯೊಂದು ತನ್ನ ಬಿಡಾರ ಹೂಡಿದೆ.  ನನ್ನನ್ನು ಕಂಡರೆ ಅದಕ್ಕೇಕೆ ಸಿಟ್ಟು ಎಂದು ನನಗೆ ತಿಳಿಯದು. ಪ್ರತಿ ಸಾರೆ ನಾನದನ್ನು ಹಾಯ್ದು ಹೋಗುವಾಗ ಜೋರಾಗಿ ಗುರ್ರೆನ್ನುತ್ತದೆ. ಅದು ಬೇರೆ ಯಾರಿಗೂ ಹಾಗೆ ಗುರ್ರೆನ್ದಿದ್ದನ್ನು ನಾನು ನೋಡಿಲ್ಲ. ನನಗೋ ನಾಯಿಯಿಂದ ಕಚ್ಚಿಸಿಕೊಳ್ಳಲು ಸ್ವಲ್ಪವೂ ಇಷ್ಟವಿಲ್ಲ. ಸರಿ ಸ್ವಾಮಿ, ನಿಮಗೂ ನಾಯಿಯಿಂದ ಕಚ್ಚಿಸಿಕೊಳ್ಳಲು ಇಷ್ಟವಿಲ್ಲ. ಒಮ್ಮೆಯಂತೂ ಗುರ್ರೆನ್ದಿದ್ದಷ್ಟೇ ಅಲ್ಲ, ನನ್ನತ್ತ ಕಚ್ಚಲೆಂಬಂತೆ ಬಂದಾಗ ಜೀವ ಬಾಯಿಗೆ ಬಂದಿತ್ತು. ಅಂದಿನಿಂದ, ರಾತ್ರಿಯೂಟ (ಭೋಜನಾಲಯವೊಂದರಲ್ಲಿ) ಮುಗಿಸುತ್ತಿರುವಾಗಲೇ ನನ್ನೆದೆಯಲ್ಲಿ ಡವ ಡವ ಶುರುವಾಗುತ್ತಾ ಇರುತ್ತದೆ.

ನನ್ನ ಗೆಳೆಯರು 'ಉಸಕೋ ಬ್ರೆಡ್ ಖಿಲಾದೇನಾ', 'ಏಕ ಬಾರ್ ದಂಡಾ ಲೇಕೆ ಮಾರ್ ದೋಗೆ, ದುಬಾರಾ ಕುಚ್ ನಹಿ ಕರೇಗಾ' ಎಂದೆಲ್ಲ ತರಹೇವಾರಿ ಸಲಹೆ ನೀಡಿದ್ದಾರೆ. ಸದ್ಯಕ್ಕೆ ನನ್ನಿಂದ ಅದ್ಯಾವುದನ್ನೂ ಮಾಡಲಾಗಿಲ್ಲ.

ಹೀಗಾಗಿ, ಒಮ್ಮೊಮ್ಮೆ ಅನ್ನಿಸಿಬಿಡುತ್ತದೆ, "ಛೇ! ಬೀದಿ ನಾಯಿಗೆ ಹೆದರುತ್ತ ಬದುಕುವುದೂ ಒಂದು ಬದುಕೇ?" :-)

 

೨೩-೦೫-೨೦೧೦ರ ಟಿಪ್ಪಣಿ:

ಇತ್ತೀಚೆಗೆ ಆ ನಾಯಿ ಒಂದು ಬೈಕ್ ಹಿಂದೆ ಮಲಗಿರತ್ತೆ. ಹಾಗಾಗಿ ನನಗೆ ಅಷ್ಟು ಹೆದರಿಕೆ ಆಗಲ್ಲ. ಬಹುಶಃ ನಾನು ಧೈರ್ಯವಾಗಿ ನಡೆಯೋದರಿಂದ ನಾಯಿ ನನ್ನ ಕಡೆ ಮೊದಲಿನಂತೆ ಲಕ್ಷ್ಯ ಹಾಕ್ತಾ ಇಲ್ಲ. ಒಟ್ಟಿನಲ್ಲಿ ಈಗ ಒಂದು ತರಹದ ಕದನ ವಿರಾಮ ಇದ್ದಂತಿದೆ (ಹಾಗೆ ನೋಡಿದರೆ, ಕದನ ನಾಯಿಯ ಕಡೆಯಿಂದ ಮಾತ್ರ ಇತ್ತು).

 

೧೮-೦೯-೨೦೧೦

ಈಗ ಆ ನಾಯಿ ದಾರಿಯಲ್ಲೇ ಮಲಗಿದ್ದರೂ, ನನಗೆ ಅಷ್ಟೇನೂ ಹೆದರಿಕೆ ಆಗುವುದಿಲ್ಲ. ಆದರೂ ಸಾಧ್ಯವಾದಷ್ಟು ದೂರದಿಂದಲೇ ಆ ನಾಯಿಯನ್ನು ಹಾಯ್ದು ಹೋಗುತ್ತೇನೆ.  

 

 

Rating
No votes yet

Comments