ಹೌದಾದರೆ ಹೌದೆನ್ನಿ...

ಹೌದಾದರೆ ಹೌದೆನ್ನಿ...

ಬೆಂಗಳೂರು ಅಂದ್ರೆ ನನಗೆ ಮೊದಲಿಂದಲೂ ಅಚ್ಚರಿ. ಚಿಕ್ಕವನಿರುವಾಗ  ಇಲ್ಲಿನ ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿಯೇ ಎದೆಯಲ್ಲಿ ಅವಲಕ್ಕಿ ಕಟ್ಟಿದ ಅನುಭವ. ಮೆಜೆಸ್ಟಿಕ್ ನಲ್ಲಿ ಬಸ್ಸಿನಿಂದ ಇಳಿದ ತಕ್ಷಣವೇ ಅಪ್ಪ ಅಮ್ಮನ ಕೈಯನ್ನು ಗಟ್ಟಿಯಾಗಿ  ಹಿಡಿದುಕೊಂಡು ಇರುತ್ತಿದ್ದೆ.  ಘಳಿಗೆ ಘಳಿಗೆಗೆ  ಬುರ್ರೆಂದು ಬರುವ ಬಸ್ಸುಗಳು, ಮಹಡಿ ಬಸ್ಸು, ನೂರಾರು ಜನಗಳು, .. ಅಬ್ಬ ಒಂದೇ ಎರಡೇ. ಎಷ್ಟೊಂದು ಜನ ಇಲ್ಲಿ ಯಾರು ನಮ್ಮೋರು ಅನ್ನುವ ಭಾವ. ಬರುವ ನೂರಾರು ಬಸ್ಸುಗಳ ಮೇಲೆ ನಂಬರ್ ಇರುತ್ತಾ ಇದ್ದುದ್ದು ನನಗೆ ವಿಚಿತ್ರವೆನಿಸುತ್ತಿತ್ತು. ಅಪ್ಪ  ಬಸ್ಸಿನಲ್ಲಿ ನಮ್ಮನ್ನು ದೊಡ್ಡಪ್ಪನ ಮನೆಗೆ ಸರಿಯಾಗಿ ಕರೆದುಕೊಂಡು ಹೋಗುವ ರೀತಿ ಸೋಜಿಗ ಅನ್ನಿಸುತ್ತಿತ್ತು.  ಆವಾಗ ಆವಾಗ ನಾನು ಕಳೆದು ಹೋಗುತ್ತೇನೆಂಬ ಭಯ ಕಾಡುತ್ತಿತ್ತು. ಯಾವಾಗಲೂ ಏನೋನೋ ತರೆಹೆವಾರಿ ಕಥೆ ಹೇಳಿ ನನ್ನ ಗೆಳೆಯರು ನನ್ನನ್ನು ಇಷ್ಟು ಹೆದರಿಸಿ ಇಟ್ಟಿದ್ದರು.


     ಅಲ್ಲದೇ ಇಲ್ಲಿ ನಮ್ಮ ಬೆಂಗಳೂರು ದೊಡ್ಡಪ್ಪನ ಮನೆ ಇದೆ. ನನ್ನ ದೊಡ್ಡಪ್ಪಂದಿರು ಬೇರೆ ಬೇರೆ ಊರುಗಳಲ್ಲಿ ಇರುವುದರಿಂದ ಅದೇ ಊರಿನ ಹೆಸರಿನಿಂದ ದೊಡ್ಡಪ್ಪನನ್ನು ಗುರುತಿಸುವುದು ರೂಢಿ. ದೊಡ್ಡಪ್ಪನೆಂದರೆ ಎಲ್ಲಿಲ್ಲದ ಭಯ. ಅವರ ಮನೆಯಲ್ಲಿ ಮಗ್ಗಿ ಹೇಳಿಸುತ್ತಾರೆಂಬ ಭಯ ಇನ್ನೊಂದು ಕಡೆ.  ಹೀಗಾಗಿ ಬೆಂಗಳೂರೆಂದರೆ ಅಷ್ಟಕಷ್ಟೇ. ಚಿಕ್ಕಂದಿನ ಅನುಭವಗಳೂ ಬಹಳ ಬೇಗ ಬದಲಾಗುವುದಿಲ್ಲ.

    ನಾನು ಮಾಸ್ಟರ್ ಡಿಗ್ರಿಯಲ್ಲಿ ಇರುವಾಗಲೂ ಉದಾಸೀನ ಭಾವನೆ ಇತ್ತು. ಆದರೆ ಮಂಗಳೂರಲ್ಲಿದ್ದು ಯಾವಾಗ ಪೇಟೆಯ ಅನುಕೂಲಗಳು ತಿಳಿಯಲು ಆರಂಭಿಸಿತೋ ಆಗ ಬೆಂಗಳೂರು ಕೂಡ ಅಂದದೂರು ಬೆಂಗಳೂರು ಅಂತ ಅನ್ನಿಸತೊಡಗಿತು. ನನ್ನ ತಮ್ಮ ನ್ಯೂಸ್ ಚಾನೆಲ್ ಒಂದರಲ್ಲಿ ಕೆಲಸ ಮಾಡುವಾಗ ಒಮ್ಮೆ ಬೆಂಗಳೂರಿಗೆ ಬರಬೇಕಾಯಿತು. ನೋಡಿದ್ರೆ ಬೆಂಗಳೂರು ಏನೋ ಒಂಥರಾ ಚೆನ್ನಾಗಿದೆ ಅನ್ನಿಸಿತು. ಈಂಗತೂ ಸ್ನೇಹಿತರ ಜೊತೆಯಲ್ಲಿ ಬೆಂಗಳೂರು ಸುತ್ತುವುದೆಂದರೆ ಖುಷಿಯಾಗುತ್ತೆ, ಆದ್ರೆ ಧೂಳು, ಹೊಗೆ ನೋಡುವಾಗ ಬೇಡ ಅನ್ನಿಸಿಬಿಡುತ್ತೆ.


    ನನಗೆ ಕೆಲವು ಸಲ ಅನ್ನಿಸೋದು ಬೆಂಗಳೂರು ಇವತ್ತಿಗೂ ಹಳ್ಳಿತನ ಕಳಕೊಂಡಿಲ್ಲವೇನೋ ಅಂತ. ಎಲ್ಲಿ ನೋಡಿದ್ರು ದೇವಾಲಯಗಳು ಮುಖ್ಯವಾಗಿ ಗ್ರಾಮ್ಯ ದೇವತೆಗಳು, ಹೊರಗೆ ನಿಂತು ಊಟ ಮಾಡೋ ಜನ, ಮನೆ ಮುಂದೆ ರಂಗೋಲಿ ಎಲ್ಲವೂ ಹಳ್ಳಿ ಬದುಕನ್ನೇ ನೆನಪಿಸುತ್ತವೆ. ಒಂದು ಕಡೆ ಆಧುನಿಕತೆಯ ಮಹಾಸ್ಪರ್ಷ ಇದ್ರೆ ಇನ್ನೊಂದು ಕಡೆ ಹಳ್ಳಿಗರ ತಾಜಾತನ ಇದೆ.
 ಜನ ಹೈಟೆಕ್ ಆದ್ರೂ ಮನ ಹಳ್ಳಿದೂ ಏನಂತೀರಾ?

Rating
No votes yet

Comments