ಹಳೆ ತಿಕ್ಕಲನ್ನು ಹೇಳುವ ಹೊಸಪದಗಳು...

Submitted by sathvik N V on Fri, 04/16/2010 - 17:54

         ನನಗಿನ್ನೂ ಸರಿಯಾಗಿ ನೆನಪಿದೆ. ಕಾಲೇಜು ಮುಗಿಸಿ ಮನೆಗೆ ಬರುವಾಗ ಬಸ್ಸಿನಿಂದ ಇಳಿದು ಬರುವಾಗ ಫುಲ್ ಟೈಟ್ ಆದವರ ತರಹ ಗಾಳಿಯಲ್ಲಿ ತೇಲುತ್ತಿದ್ದ ದೃಶ್ಯ. ಬೆಳಿಗ್ಗೆ ೭.೩೦ಕ್ಕೆ ಮನೆ ಬಿಟ್ಟರೆ ಬರೋಬ್ಬರಿ ೪೦ ಕಿಲೋ ಮೀಟರ್ ಪ್ರಯಾಣ. ಮತ್ತೆ ಬಸ್ ಸ್ಟ್ಯಾಂಡಿನ ಸುಮಾರು ಒಂದೂವರೆ ಕಿಲೋ ಮೀಟರ್ ನಡೆದು ಕ್ಲಾಸ್ ಸೇರುವಾಗ ದಣಿವಾರಿಸಿಕೊಳ್ಳಲು ಒಂದತ್ತು ನಿಮಿಷವೂ ಉಳಿಯುತ್ತಿರಲ್ಲಿಲ್ಲ . ಬೆಳಿಗ್ಗೆಯೇ ಬೇಗ ಗಬಗಬನೇ ತಿಂದು ಬಂದ ಎರಡು ಇಡ್ಲಿ ಯಾವಾಗಲೋ ಕರಗಿ, ಹೊಟ್ಟೆಯ ಯಾವುದೇ ಮೂಲೆಯಲ್ಲಿ ಆಸ್ಯಿಡ್ ಸುರುವಿದ ಅನುಭವ. ಒಂದು ಕಡೆ ಸೆಖೆಯಿಂದ ಬೆವರು ಇಳಿಯುತ್ತಿದ್ದರೆ ಇನ್ನೊಂದು ಗಣಿತಶಾಸ್ತ್ರ ಹೇಳಿಕೊಡುವ ಮೇಡಂ ಟ್ರಿಗ್ನೋಮೆಟ್ರಿ ಕ್ಲಾಸ್ ನಲ್ಲಿ 'ಟ್ಯಾನ್+ಕಾಸ್ ತೀಟ ಏನಾಗುತ್ತೆ' ಅಂತ ಕೇಳಿ ಬೆಪ್ಪರಾಗಿಸುತ್ತಿದ್ದರು. ಇಡೀ ರಾತ್ರಿ ಬಾಯಿ ಪಾಠ ಮಾಡಿದ್ದು ವೇಸ್ಟ್ ಆಗುತ್ತಿತ್ತು. ನಾನು ಮೊದಲ ಬಾರಿಗೆ ಬ್ಯ ಬ್ಯ ಬ್ಯ ಅಂದದ್ದು ಕಾಲೇಜಿನ ದಿನಗಳಲ್ಲಿಯೇ ಇರಬೇಕು.


       ಹೈಸ್ಕೂಲ್ ದಿನಗಳಲ್ಲಿ ಹಾಳೂರಿಗೆ ಉಳಿದವನೇ ಗೌಡ ಅನ್ನೋ ಹಾಗೆ ಎಲ್ಲದರಲ್ಲೂ ನನಗೆ ಪ್ರಾಶಸ್ತ್ಯ ಸಿಕ್ಕುತ್ತಿತ್ತು. ಕನ್ನಡ ಮೀಡಿಯಂನಲ್ಲಿ ಓದಿದರೂ ನಾನು ಸೈನ್ಸ್ ನಲ್ಲಿ ಒಳ್ಳೆ ಅಂಕಗಳಿಸುತ್ತಿದ್ದೆ. ಗಣಿತದಲ್ಲಿ ೧೦೦ ಶೇಕಡಾ ಅಂಕ ತೆಗೆದಾಗ ಗಣಿತದ ಮೇಸ್ಟ್ರು ತಲೆಗೆ ಪ್ರೀತಿಯಿಂದ ಮೊಟುಕಿ 'ನಿಜ ಹೇಳಲೇ ಯಾರ ಹತ್ರ ಕಾಪಿ ಹೊಡೆದೆ' ಅಂತ ಕೇಳ್ತಿದ್ರು. ಆಗ ನಾನು ನಾಚಿ ನೀರಾಗಿ 'ಇಲ್ಲ ಸಾ, ನಾನೇ ಬರೆದಿದ್ದು' ಅಂದರೂ ಅವರಿಗೆ ನನ್ನ ಮೇಲೆ ವಿಶ್ವಾಸ ಮೂಡಿದ ಹಾಗೆ ಕಾಣುತ್ತಿರಲ್ಲಿಲ್ಲ. ಎಸ್ ಎಸ್ ಎಲ್ ಸಿ ಯಲ್ಲಿ ಅವರ ಊಹೆ ನಿಜ ಅನ್ನೋ ಹಾಗೆ ಕಡಿಮೆ ಅಂಕ ಬಂದದ್ದು ಬೇರೆ ವಿಚಾರ. ಇಷ್ಟೆಲ್ಲಾ ಆದರೂ ನಾನು ದೂರದ ಊರಿನಲ್ಲಿರುವ ಕಾಲೇಜಿಗೆ ಸೇರಿ ವಿಜ್ಞಾನಿಯಾಗಬೇಕೆಂಬ ಕನಸು ಕಂಡಿದ್ದೆ!!! ನನ್ನ ಕೈಗೆ ಸಿಕ್ಕ ವಸ್ತುಗಳ ಕರುಳು ಮೂಳೆ ಬೇರೆ ಮಾಡುತ್ತಿದ್ದ ಕಾರಣ ನನ್ನ ಅಪ್ಪ ಅಮ್ಮ ಕೂಡ ನಮ್ಮ ಮಗ ಆದರೆ ಸೈನ್ಟಿಸ್ಟೇ ಆಗುತ್ತಾನೆ ಅಂತ ಕನಸು ಹೊತ್ತಿದ್ದರು. ಆಗಷ್ಟೇ ತಂದಿದ್ದ ರೇಡಿಯೋವನ್ನು ಬಿಚ್ಚಿ ಕೂಡಿಸಲು ಬರದೆ ಕುಲಗೆಡಿಸಿದ್ದರೂ ಮಗ ವಿಜ್ಞಾನಿ ಆಗುವ ಮೊದಲ ಹೆಜ್ಜೆಯಲ್ಲಿ  ಜಯಿಸಿದ ಅಂತ ಖುಷಿಪಟ್ಟಿದ್ದರು.  


       ಆದ್ರೆ ಕಾಲೇಜಿನಲ್ಲಿ 'ಕಂಪ್ಯೂಟರ್ ನ ಸಿ.ಪಿ.ಯುನಲ್ಲಿ ಯಾವ್ಯಾವ ಯೂನಿಟ್ ಇರುತ್ತವೆ ಹೇಳು' ಅಂತ ಕೇಳಿ ನನ್ನ ತಲೆಯಲ್ಲಿ ಎಂಥದ್ದು ಸಾಮಾನಿಲ್ಲ ಅಂತ ಪ್ರೂವ್ ಮಾಡಿದ್ದರು. ಬಹುಶ: ನನಗೆ ಮಗ್ಗುಲು ಮುಳ್ಳಾಗಿ ಕಾಡಿದ್ದು ಇಂಗ್ಲೀಷ್ ಎಂಬ ಭೂತ. ಏನಾದ್ರೂ ಅರ್ಥವಾದರೆ ತಾನೆ ತಲೆಯಲ್ಲಿ ಉಳಿಯೋದು. ಒಂದು ಕಡೆ ವಿಷಯ ಕಲಿಬೇಕು, ಇನ್ನೊಂದು ಕಡೆ ಭಾಷೆ, ಆದ್ರೆ ನನ್ನ ಸಹಪಾಠಿಗಳಿಗೆ ಭಾಷೆ ಸಮಸ್ಯೆಯೇ ಆಗಿರಲಿಲ್ಲ. ಜೊತೆಗೆ ಅನನುಭವಿ ಉಪನ್ಯಾಸಕರು. ಲ್ಯಾಬ್ ಇದ್ದ ದಿನವಂತೂ ಯಮ ಶಿಕ್ಷೆ.  ನನಗೆ ಲ್ಯಾಬ್ ಅಂದ್ರೆ ಏನೋ ಒಂಥರಾ ಜಿಗುಪ್ಸೆ. ಆ ವಾಸನೆ ಹಿಡಿದ ಕೆಮಿಸ್ಟ್ರಿ ಲ್ಯಾಬ್ ಗಿಂತ ಲೈಬ್ರರಿಯೇ ಹೆಚ್ಚು ಖುಷಿ ಕೊಡುತ್ತಿತ್ತು. ಆದರೆ ಸೈನ್ಸ್ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ಬಿಟ್ಟು ಬೇರೆ ಯಾವುದೇ ಪುಸ್ತಕಗಳನ್ನು ಓದಲು ಕೊಡುತ್ತಿರಲಿಲ್ಲ. ಕನ್ನಡದ ಕ್ಲಾಸ್ ಅಂದ್ರೆ ನಾನೇ ಹೀರೊ. ಸರ್ ಏನಾದ್ರೂ ಕೇಳಿ ಯಾರಿಗೂ ಗೊತ್ತಾಗದಿದ್ರೆ ನನ್ನ ಕಡೆ ನೋಡುತ್ತಿದ್ದರು. ಆಗ ಉಳಿದ ತರಗತಿಗಳಲ್ಲಿ ಆದ ಅವಮಾನಕ್ಕೆ ಸರಿಯಾಗಿ ಸೇಡು ತೀರಿಸಿಕೊಳ್ಳುತ್ತಿದ್ದೆ. ಮೇಸ್ಟ್ರು 'ಆ ಸಾತ್ವಿಕನನ್ನು ನೋಡಿ ಕಲಿಯಿರಿ' ಅಂತ ಹೇಳುವಾಗ ಸ್ವರ್ಗಕ್ಕೆ ಮೂರೇಗೇಣು. ಅವರ ಈರ್ಷ್ಯೆಯ ಕಣ್ಣುಗಳಿಗೆ ಉದಾಸೀನದ ಉತ್ತರ. ಇದರೆಲ್ಲರ ನಡುವೆ ಸ್ವಲ್ಪ ಖುಷಿಯ ಸಮಯ ಸಿಕ್ತಾ ಇದ್ದದ್ದು ಸ್ಟ್ರೈಕ್ ಟೈಮಲಿ. ಎಲ್ಲ ಸ್ಟ್ರೈಕ್ ಅಂತ ಗಡಿಬಿಡಿಲಿದ್ದರೆ ನಾನು ವಾಚ್ ನೋಡ್ತಿದ್ದೆ, ಬಸ್ ಎಷ್ಟೋತ್ತಿಗಿದೆ ಮನೆಗೆ ಅಂತ. ಹೀಗೆ ಕಾಲೇಜು ಮುಗಿಸಿ ಮನೆಗೆ ಬರುವಾಗ ಮತ್ತೆ ಸಂಜೆ ಏಳೂವರೆ. ಹಸಿದ ಹೊಟ್ಟೆಗೆ ಏನಾದರೂ ಬಿದ್ದರೆ ಮಾತ್ರ ಬಾಯಿಂದ ಮಾತು ಹೊರಡುವುದು.


      ಅಂತೂ ಇಂತೂ ನನ್ನ ಜೊತೆ ಬರುತ್ತಿದ್ದ ಸ್ನೇಹಿತರು ಎಕ್ಸಮ್ ನಲ್ಲಿ  ಒಂದೆರಡು ಸಬೆಕ್ಟ್ ಕಳಕೊಂಡು ಡುಮ್ಕಿ ಹೊಡೆದರೂ ನಾನು ಪಾಸಾಗಿದ್ದೆ. ಅದೂ ಫಸ್ಟ್ ಕ್ಲಾಸಿನಲ್ಲಿ. ಅದು ಹೇಗೆ ಅನ್ನೋದು ನನಗೆಯೇ ಸೋಜಿಗದ ಪ್ರಶ್ನೆ. ನನ್ನ ಹತ್ತಿರ ಟೆಸ್ಟ್ ಬುಕ್ ಗಳು ಕೂಡ ಇರಲಿಲ್ಲ. ಆಗಲೇ ನಿಶ್ಚಯಿಸಿಯಿದೇ ನಾನು ವಿಜ್ಞಾನಿಯಾಗುವುದು ಬೇಡ ಈ ಪಾಟಿ ಕಷ್ಟವೂ ಬೇಡ ಅಂತ. ಅಲ್ಲಿಗೆ ನಿಂತಿತು ನನ್ನ ವಿಜ್ಞಾನ ಕಲಿಕೆ.ಎಳವೆಯ ಹುಚ್ಚು ಎಲ್ಲಿಗೆ ಹೋಗುತ್ತೆ? ಈಗಲೂ ಯಾವಾಗಲಾದರೊಮ್ಮೆ ನನ್ನ ತಮ್ಮನ ವಿಜ್ಞಾನದ ಟೆಕ್ಸ್ ಬುಕ್ ಗಳನ್ನು ಪ್ರೀತಿಯಿಂದ ಮೈದಡವುತ್ತೇನೆ (ಓದಲ್ಲ).

ರಾತ್ರಿ ನನಗೆ ವಿಜ್ಞಾನಿಯಾಗಿರುವ ಕನಸು ಬೀಳುತ್ತೆ. 

Rating
No votes yet

Comments