ಸ್ತ್ರೀವಾದಿ ಏಕಾಗಬಾರದು?

ಸ್ತ್ರೀವಾದಿ ಏಕಾಗಬಾರದು?

ಇತ್ತೀಚೆ ದ ಹಿಂದೂ ಪತ್ರಿಕೆಯಲ್ಲಿ ಕಮಲಾ ದಾಸ್ ಜತೆ ಸಂದರ್ಶನ ಪ್ರಕಟವಾಗಿತ್ತು. ಅಲ್ಲಿ ತಮ್ಮ ಬರವಣಿಗೆ ಕುರಿತು ಮಾತನಾಡುತ್ತ ದಾಸ್ ತಾವು ಸ್ತ್ರೀವಾದಿ ಅಲ್ಲ ಎಂದು ಘೋಷಿಸಿದ್ದಾರೆ. ಅದನ್ನು ಓದಿ ನನಗೆ ಆಶ್ಚರ್ಯಕ್ಕಿಂತ ಹೆಚ್ಚಾಗಿ ಆಘಾತವಾಯಿತು. ಯಾಕೆಂದರೆ, ಮಲಯಾಳಂ ಹಾಗೂ ಇಂಗ್ಲೀಷನಲ್ಲಿ ಬರೆಯುವ ದಾಸ್ ಒಳ್ಳೆಯ ಕವಯಿತ್ರಿ ಹಾಗೂ ಕಥೆಗಾರ್ತಿ. ಅವರ ಪದ್ಯಗಳನ್ನು ಮೆಚ್ಚಿಕೊಂಡಿರುವ ನನಗೆ ಅವರು ಒಳ್ಳೆಯ ರಾಜಕೀಯ ಬರಹಗಾರ್ತಿ ಎನ್ನಿಸುತ್ತದೆ. ಮಹಿಳೆ ಅವರ ಕವನಗಳ ಕೇಂದ್ರ ಬಿಂದು. ಸ್ತ್ರೀಯ ಸಾಮಾಜಿಕ ಬದುಕಿನಲ್ಲಿ ಕಾಣುವ ವಿವಿಧ ಶೋಷಣೆ, ನೋವು ನಲಿವು, ಆಸೆಗಳು, ಪ್ರತಿಬಂಧಗಳ ಕುರಿತು ಸಾಮನ್ಯವಾಗಿ ಅವರ ಕವನಗಳು ದನಿಯೆತ್ತುತ್ತವೆ. ಅವರ ಕವಿತೆಗಳಲ್ಲಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಈ ಎಲ್ಲ ಸ್ತರಗಳಲ್ಲೂ ಮಹಿಳೆ ಬೇಡುವ ಚಿತ್ರ ಕಾಣುವುದಿಲ್ಲ. ಈ ಎಲ್ಲ ಕಡೆ ಮಹಿಳೆಗೆ ಆಗುವ ಅನ್ಯಾಯಗಳ ಪ್ರಸ್ತಾಪವಿದ್ದರೂ, ಮಹಿಳೆಯ ಹಕ್ಕುಗಳ ಬಗ್ಗೆ ಅಧಿಕಾರಯುತ demand ಇದೆ. ಮಹಿಳೆಯ ಕಾಮದ ಬಯಕೆಗಳ ಬಗ್ಗೆ ಕೂಡ ಈ ಒತ್ತಾಯ ಇದೆ. ಹೀಗೆ ಅವರ ಕವನಗಳು ಹಕ್ಕೊತ್ತಾಯ ಮಾಡುವ ಬಗೆ ತೀವ್ರವಾಗಿ ಓದುಗರನ್ನು ತಟ್ಟುತ್ತದೆ.
ಅವರ ಕವನಗಳಲ್ಲಿ ಬರುವ ಈ ರಾಜಕೀಯಕ್ಕೂ ಸ್ತ್ರೀವಾದಕ್ಕೂ ತೀವ್ರ ವ್ಯತ್ಯಾಸವಿಲ್ಲ. ಹೀಗಿರುವಾಗ ದಾಸ್ ಏಕೆ ತಾವು ಸ್ತ್ರೀವಾದಿ ಅಲ್ಲ ಎಂದು ಹೇಳಲಿಚ್ಛಿಸುತ್ತಾರೆ ಎನ್ನುವ ಪ್ರಶ್ನೆ ಬರುತ್ತದೆ. ನಮ್ಮ ಸಮಾಜದಲ್ಲಿ ಸ್ತ್ರೀವಾದಿ ಎಂದರೆ ಗಂಡಸು-ದ್ವೇಷಿ ಎಂಬ ಅನ್ನಿಸಿಕೆ ಇದೆಯೇ? ಯಾವಾಗ, ಸ್ತ್ರೀವಾದಿ ಕವನಗಳನ್ನು ಬರೆಯುವ ಮಹಿಳೆ ತನ್ನನ್ನು ತಾನೇ ಸ್ತ್ರೀವಾದಿ ಅಲ್ಲ ಅನ್ನುತ್ತಾಳೊ ಆಗ, ರಾಜಕೀಯವಾಗಿ ನಾವು ಸಾರ್ವಜನಿಕವಾಗಿ ತಳೆಯುವ ಧೋರಣೆಯ ಕುರಿತು ಪ್ರಶ್ನೆ ಬರುತ್ತದೆ.
ಕಮಲಾ ದಾಸ್ ಒಳ್ಳೆಯ ಕವಿಯಿತ್ರಿ, ಆದರೆ ಇಲ್ಲಿ ನನ್ನ ಪ್ರಶ್ನೆ ಅವರ ಕಾವ್ಯದ ರಾಜಕೀಯ ಹಾಗೂ ಅವರ ನಿತ್ಯದ ರಾಜಕೀಯದ ಕುರಿತಾಗಿದೆ. ಮುಂದುವರಿಸಿ ಹೇಳ ಬೇಕೆಂದರೆ ಇನ್ನೂ ನಾವು ಪುರುಷಪ್ರಧಾನ ವ್ಯವಸ್ಥೆಯ ಹೊರಬರಲು ಒಟ್ಟೂ ಸಮಾಜದ ಸ್ತರದಲ್ಲಿ ಮನಸ್ಸು ಮಾಡಿಲ್ಲವೆಂದೇ ಅನಿಸುತ್ತದೆ. ಎಲ್ಲಿಯವರೆಗೆ ನಾನು ಸ್ತ್ರೀವಾದಿ ಅಲ್ಲ ಅನ್ನುವ ಜರೂರತ್ತು ಇರುತ್ತದೆಯೋ ಆವರೆಗೆ ಲಿಂಗಭಾವಮುಕ್ತ ಸಮಾಜವಾಗಲು ನಮ್ಮ ತಯಾರಿಯೇ ಇಲ್ಲವೆಂದಾಗುತ್ತದೆ.
ಪ್ರಸಕ್ತ, ಜಾಗತೀಕರಣ ಹಾಗೂ ಸಾರ್ವಜನಿಕ ವಲಯವು ಅಮೌಲ್ಯೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ದಾಸ್ ಮಾತು ಮಡಿವಂತಿಕೆಯ ಮಾತಿಗಿಂತ ಬೇರೆಯಾಗಲಾರದು. ಈ ಮಡಿವಂತಿಕೆಗಳು ಹಲವು ಸ್ವಾಮಿತ್ವಗಳು ತಮ್ಮ ಅಧಿಕಾರವನ್ನು ಎಲ್ಲೆಡೆ ಹೇರುತ್ತಿರುವಾಗ, ದಾಸ್ಯಗಳನ್ನು ವಿರೋಧಿಸುವ ಶಕ್ತಿ ಕಮ್ಮಿಯಾಗುತ್ತಿರುವಾಗ, ನಾಶದ ಕಡೆ ನಮ್ಮನ್ನು ನೂಕುತ್ತದೆ.
ಸ್ತ್ರೀವಾದಿ ಏಕಾಗಬಾರದು?

Rating
No votes yet

Comments