ಇಂಗ್ಲೀಷ್ ಹೋಯ್ತು ಹಿಂದಿ ಬಂತು ಢುಂ ಢುಂ ಢುಂ...

ಇಂಗ್ಲೀಷ್ ಹೋಯ್ತು ಹಿಂದಿ ಬಂತು ಢುಂ ಢುಂ ಢುಂ...

    ನಾನು ಮೊದಲೇ ಒಂದು ವಿಷಯ ಸ್ಪಷ್ಟಪಡಿಸಿ ಬರಹವನ್ನು ಮುಂದುವರೆಸುತ್ತೇನೆ. ನನಗೆ ಕನ್ನಡ ಬಿಟ್ಟು ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ. ಇಂಗ್ಲಿಷ್ 'ಕೊಂಚ ಕೊಂಚ' ಅರ್ಥವಾದರೂ, ಹಿಂದಿ 'ಸುಟ್ಟು ತಿನ್ನಲಿಕ್ಕೂ' ಬರುವುದಿಲ್ಲ. ಬರುವುದಿಲ್ಲ ಎಂಬುದು ಹೆಮ್ಮೆಯ ವಿಷಯವಲ್ಲದಿದ್ದರೂ ಕಲಿಯಲು ಪ್ರಯತ್ನಿಸಿ ಸೋತಿದ್ದೇನೆ. ಇರಲಿ ಈಗ ನೇರ ವಿಷಯಕ್ಕೆ ಬರೋಣ. ಹಿಂದೆ ಒಮ್ಮೆ ಲೇಖನವೊಂದನ್ನು  ಓದುವಾಗ- ಹಿಂದಿ ರಾಷ್ಟ್ರಭಾಷೆ, ಅದನ್ನು ಕಲಿಯುವುದು ನಮ್ಮ ದೇಶದ ಏಕತೆಯ ಸಂಕೇತ. ಇಂಗ್ಲೀಷ್ ಎಂಬುದು ಪರಕೀಯ ಭಾಷೆ. ಅದನ್ನು ಉಪಯೋಗಿಸಿಯೇ ಬ್ರಿಟಿಷರು ನಮ್ಮನ್ನು ೨೦೦ ಹೆಚ್ಚು ವರ್ಷ ಆಳಿದರು. ಇಂಥ ದಾಸ್ಯದ ಸಂಕೇತವನ್ನು ಒಪ್ಪಬೇಕೆ? ಅಂತೆಲ್ಲ ಬರೆದಿದ್ದರು.
    ನನಗೆ ಅರ್ಥವಾಗದೇ ಇರುವುದು ಯಾವುದು ನಮ್ಮ ರಾಷ್ಟ್ರ ಭಾಷೆ? ಹಿಂದಿಗೂ ದೇಶಪ್ರೇಮಕ್ಕೂ ಏನು ಸಂಬಂಧ? ಸಮಾನತೆಯ ತಳಹದಿಯ ಮೇಲೆ ನಿಂತಿರುವ  ಸಂವಿಧಾನವಿರುವ ಭಾರತದಲ್ಲಿ ಹೆಚ್ಚು ಜನ ಒಂದು ಭಾಷೆಯನ್ನು ಮಾತಾಡುತ್ತಾರೆಂಬ ಕಾರಣಕ್ಕೆ ಅದನ್ನು ರಾಷ್ಟ್ರ ಭಾಷೆ ಎಂದು ಕರೆದು ಉಳಿದ ಭಾಷೆಗಳನ್ನು ಅಧೀನ ಭಾಷೆಗಳೆಂದು ಘೋಷಿಸಲು ಸಾಧ್ಯವೇ? (ಹಿಂದಿ ನಮ್ಮ ಸೇನೆಯ ಭಾಷೆಯಾಗಿದೆ. ಅದು ಅಗತ್ಯ. ಹಲವಾರು ರಾಜ್ಯಗಳಿಂದ ಬಂದ ಸಿಪಾಯಿಗಳು ಅಲ್ಲಿದ್ದು ಅವರು ಇಂಗ್ಲೀಷ್ ಗಿಂತ ಹಿಂದಿಯನ್ನು ಸುಲಭವಾಗಿ ಕಲಿಯಬಲ್ಲರೆಂಬ ಕಾರಣವಿರಬಹುದು. ಇದನ್ನು ನಮ್ಮ ಚರ್ಚೆಯಿಂದ ಹೊರಗಿಡುವ) ಹಿಂದಿಯನ್ನು ನಾವು ತೃತೀಯ ಭಾಷೆಯಾಗಿ ಕಲಿಯುತ್ತೇವೆ, ಯಾವ ಹಿಂದಿಯಾಡುವ ರಾಜ್ಯ, ಇತರೆ ಭಾರತೀಯ ಭಾಷೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುತ್ತಿದೆ? ಈ ದ್ವಂದ್ವ ನಿಲುವು ಯಾಕೆ? ಇದು ಹಿಂದಿಯೇತರ ವಿದ್ಯಾರ್ಥಿಗಳಿಗೆ ಹೊರೆಯಲ್ಲವೇ? ಸ್ವಲ್ಪ ಯೋಚಿಸಿ. ಭಾಷೆ ಎಂಬುದು ಕೇವಲ ಮಾಧ್ಯಮ ಮಾತ್ರ ಅಲ್ಲ. ಅದೊಂದು ಸಂಸ್ಕೃತಿವಾಹಕ ಕೂಡ. ಒಂದು ಭಾಷೆ ಬಂತು ಎಂದಾದರೆ ಅದರ ಜೊತೆಯಲ್ಲೇ ಅಲ್ಲಿನ ಸಂಸ್ಕೃತಿಯ ತುಣುಕುಗಳನ್ನು ಕಲಿಯುವ ವ್ಯಕ್ತಿಗಳಲ್ಲಿ ತುರುಕುತ್ತದೆ.
    ನನ್ನ ಗೆಳೆಯರಲ್ಲೂ ಕೂಡ ಹಲವರು ಹಿಂದಿಯ ಅಗತ್ಯದ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಾರೆ. ನನ್ನದು ಒಂದೇ ಪ್ರಶ್ನೆ. ಭಾಷೆಯೊಂದನ್ನು ನಮ್ಮ ಅಗತ್ಯಕ್ಕಾಗಿ ಕಲಿಯಬೇಕಾ ಇಲ್ಲ ಇಂಗ್ಲೀಷ್ ಗೆ ಬದಲಿಯಾಗಿ ಇರಲಿ ಅಂತಲಾ? ಜಾಗತೀಕರಣದ ಇಂದಿನ ದಿನಮಾನಗಳಲ್ಲಿ ಹೆಚ್ಚೆಚ್ಚು ಭಾಷೆಗಳನ್ನು ಕಲಿತಷ್ಟು ಒಳ್ಳೆಯದು ಎಂಬ ವಾದವೂ ಇದೆ. ಆದರೆ ಯಾವ ಭಾಷೆ ಕಲಿಯಬೇಕು? ಇಂಗ್ಲೀಷ್, ಹಿಂದಿ, ಫ್ರೆಂಚ್, ಜರ್ಮನ್ ಯಾವುದು?
    ಇಲ್ಲಿ ಇನ್ನೊಂದು ವಿಶೇಷವಿದೆ. ಅಧಿಕಾರ ಸಂಬಂಧಗಳಷ್ಟೇ ಭಾಷೆಯೂ ಕೂಡ ಒಂದು ಪವರ್ ಫುಲ್ ವೆಪನ್. ಎಲ್ಲ ಭಾಷೆಗಳ ನಡುವೆಯೂ ಇಂಥ ಏಣಿಶ್ರೇಣಿಗಳಿರುತ್ತವೆ. ಅಧಿಕಾರ ಕೇಂದ್ರಕ್ಕೆ ಹತ್ತಿರವಾಗಿರುವ ಭಾಷೆ ಪ್ರಧಾನ ಸ್ಥಾನದಲ್ಲಿದ್ದರೆ ಉಳಿದ ಭಾಷೆಗಳು ಅಧೀನದಲ್ಲಿರುತ್ತವೆ. ಹೇರಿಕೆಯ ಮೂಲಕ ಒಂದು ಭಾಷೆ ಇನ್ನೊಂದು ಭಾಷೆಯ ಮೇಲೆ ಅಧಿಕಾರ ಸ್ಥಾಪಿಸುತ್ತದೆ. ಭಾಷೆ ಎಂಬುದು ಒಂದು ಜನಸಮುದಾಯವನ್ನು ರೆಪ್ರೇಸೆಂಟ್ ಮಾಡುವುದರಿಂದ ಒಂದು ಸಮುದಾಯ ಇನ್ನೊಂದು ಸಮುದಾಯದ ನಡುವೆ ಚಿಕ್ಕ ಅಂತರವೇರ್ಪಡುತ್ತದೆ. ಇಷ್ಟು ನನ್ನ ವಿಚಾರ ನಿಮ್ಮ ಅಭಿಪ್ರಾಯಗಳಿಗೂ ಸ್ವಾಗತ.
  

Rating
No votes yet

Comments