ಕ್ಷಮಯಾ ಧರಿತ್ರಿಯೇ?

ಕ್ಷಮಯಾ ಧರಿತ್ರಿಯೇ?

  ಕ್ಷಮಯಾ ಧರಿತ್ರಿಯೇ?

  • ಏಪ್ರಿಲ್ ೨೨! ಅರ್ಥ ಡೇ! ವಿಶ್ವ ಭೂದಿನ!
  • ಕೆಲವು ದೇಶಗಳಲ್ಲಿ ಏಪ್ರಿಲ್ ೬-ಏಪ್ರಿಲ್ ರಿಂದ ಏಪ್ರಿಲ್ ೧೨ ರವರೆಗೆ ವಿಶ್ವ ಭೂ ಸಪ್ತಾಹವನ್ನು ಆಚರಿಸುವುದುಂಟು.
  • ನಮ್ಮ ಭೂಮಿಯು ಸೌರಮಂಡಲದ ಮೂರನೆಯ ಗ್ರಹ; ಐದನೆಯ ದೊಡ್ಡ ಗ್ರಹ. ಇಂದು ಲಭ್ಯವಿರುವ ದಾಖಲೆಯ ಅನ್ವಯ ನಮ್ಮ ಸೌರಮಂಡಲದಲ್ಲಿ ಜೀವರಾಶಿಯಿರುವ ಏಕೈಕ ಗ್ರಹ.
  • ಭೂಮಿ ಒಂದು ಸಂಕೀರ್ಣ ಗ್ರಹ. ಭೂಮಿಯನ್ನು ಆವರಿಸಿರುವ ತೆಳುವಾದ ವಾಯುಮಂಡಲ. ವಾಯುಮಂಡಲದ ಕೆಳಗೆ ಇರುವ ಜಲಪದರ. ನೆಲಪದರ. ವಾಯು-ಜಲ-ನೆಲದಲ್ಲಿ ತುಂಬಿ ತುಳುಕುತ್ತಿರುವ ಜೀವರಾಶಿ. ಈ ಜೀವರಾಶಿಯ ದೈನಂದಿನ ಆಗುಹೋಗುಗಳಿಗೆ ಅಗತ್ಯವಾದ ಎಲ್ಲ (ವಿನಾಯತಿ:ಸೂರ್ಯರಶ್ಮಿ) ಅನುಕೂಲತೆಗಳು. ಈ ಜೀವರಾಶಿಗಳಲ್ಲಿ ಶಿಖರಪ್ರಾಯ ಜೀವಿ ಮನುಷ್ಯ. ಇದು ಮನುಷ್ಯನ ಅಭಿಮತ. ಏಕೆಂದರೆ ಇವನು ತನ್ನನ್ನು ತಾನು ಹೋಮೋ ಸೆಪಿಯನ್ಸ್ (ಮತಿವಂತ ಮಾನವ) ಎಂದು ಕರೆದುಕೊಂಡಿರುವನು.
  • ಮಹಾತ್ಮ ಗಾಂಧಿ “ಪ್ರಕೃತಿಯು ಮಾನವನ ಎಲ್ಲ ಅಗತ್ಯಗಳನ್ನು ಪೂರೈಸುವ ಶಕ್ತಿಯನ್ನು ಪಡೆದಿದೆ. ಆದರೆ ಅವನ ದುರಾಸೆಗಳನ್ನಲ್ಲ” ಎಂಬರ್ಥ ಬರುವ ಒಂದು ಮಾತನ್ನು ಹೇಳಿರುವರು. ದುರದೃಷ್ಟವಶಾತ್ ಮತಿವಂತ ಮಾನವನು ಗಾಂಧಿಯವರ ಮಾತಿಗೆ ಜಾಣಕಿವುಡನಾಗಿರುವನು. ತನ್ನ ದುರಾಸೆಯನ್ನು ಹತ್ತಿಕ್ಕಲಾರದೆ ತನ್ನನ್ನು ಹೆತ್ತು ಹೊತ್ತಿರುವ ಅವ್ವನ ಎದೆಯನ್ನು ಕೊಯ್ಯುವ ಕೆಲಸಕ್ಕಿಳಿದಿರುವನು.
  • ಭೂಮಿಯ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯುವುದು ತಪ್ಪು ಎಂದು ಮಾನವನನ್ನು ಎಚ್ಚರಿಸಲು ವಿಶ್ವ ಭೂದಿನವನ್ನು ಆಚರಿಸುವ ಸಂಪ್ರದಾಯ, ಏಪ್ರಿಲ್ ೨೨, ೧೯೭೦ ರಂದು ಆರಂಭವಾಗಿದೆ. ಈ ಎಚ್ಚರಿಕೆ ಕಳೆದ ೪೦ ವರ್ಷಗಳಿಂದ ಅವನ ಕಿವಿಯ ಮೇಲೆ ಬೀಳುತ್ತಲೇ ಇದೆ. ಆದರೆ ಅವನು ತನ್ನ ಕೊಳ್ಳೆಯನ್ನು ದಿನೇ ದಿನೇ ಹೆಚ್ಚಿಸುತ್ತ ನಿರುಮ್ಮಳವಾಗಿದ್ದಾನೆ.  
  • ಈ ಭೂದಿನದಂದು ನಾವು-ನೀವೇನು ಮಾಡಬಹುದು?

-      ನಮ್ಮ ಎಲ್ಲ ಬಿಲ್ಲುಗಳನ್ನು ‘ಆನ್-ಲೈನ್’ ಪಾವತಿ ಮಾಡಲು ನಿರ್ಧರಿಸಬಹುದು (ಕಾಗದ-ಮರ-ಪರಿಸರ ವಿನಾಶ ನಿಗ್ರಹ).

-      ವಾರಕ್ಕೊಮ್ಮೆಯಾದರೂ ಸ್ವಂತ ವಾಹನ ಬಳಕೆಯನ್ನು ನಿಲ್ಲಿಸಿ ಸಾರ್ವಜನಿಕ ವಾಹನದಲ್ಲಿ ಪಯಣಿಸಬಹುದು.

-      ಸಾಧ್ಯವಾದಷ್ಟು ಶ್ರೀಸಾಮಾನ್ಯನ ವಾಹನವಾದ ಸೈಕಲನ್ನು ಬಳಸುವುದು.

-      ಟಬ್ ಬಾತ್ / ಶೋವರ್ ಬಾತ್ ಬಿಡುವುದು. ಲಕ್ಷಣವಾಗಿ ಒಂದೂವರೆ ಬಕೆಟ್ ನೀರಿನಲ್ಲಿ ಸ್ನಾನ ಮಾಡುವುದು.

-      ಹಲ್ಲುಜ್ಜುವಾಗ / ಮುಖಕ್ಷೌರ ಮಾಡಿಕೊಳ್ಳುವಾಗ ನೀರನ್ನು ಹಿತ-ಮಿತವಾಗಿ ಬಳಸುವುದು.

-      ಸಮಯವಿದ್ದಾಗ ಬಟ್ಟೆಗಳನ್ನು ವಾಶಿಂಗ್ ಮೆಶೀನಿಗೆ ಹಾಕುವ ಬದಲು ಸ್ವಯಂ ಒಗೆಯುವುದು.

-      ಮಳೆ-ಕೊಯ್ಲನ್ನು ಮಾಡುವುದು.

-      ಚಾಕೊಲೆಟ್ ತಿಂದಮೇಲೆ ಕಾಗದವನ್ನು ರಸ್ತೆಯಲ್ಲಿ ಬಿಸಾಡದೆ ಜೇಬಿನಲ್ಲಿಟ್ಟುಕೊಳ್ಳುವುದು; ನಂತರ ಸುರಕ್ಷಿತವಾಗಿ ವಿಲೇವಾರಿ ಮಾಡುವುದು. ಇದೇ ಸೂತ್ರ ಕಡಲೇಕಾಯಿ / ಕಿತ್ತಳೆ / ಮೂಸಂಬಿ ಇತ್ಯಾದಿಗಳಿಗೆ ಅನ್ವಯಿಸಬಹುದು.

-      ಅಂಗಡಿಗೆ ಕೊಳ್ಳಲು ಹೋಗುವಾಗ ಜೊತೆಯಲ್ಲಿ ಒಂದು ಬಟ್ಟೆಯ ಚೀಲವನ್ನು ಕೊಂಡೊಯ್ಯುವುದು; ಅನಿವಾರ್ಯ ಸಂದರ್ಭಗಳನ್ನು ಬಿಟ್ಟು, ಉಳಿದೆಡೆಯಲ್ಲಿ ಪ್ಲಾಸ್ಟಿಕ್ ಉಪಯೋಗವನ್ನು ನಿಲ್ಲಿಸುವುದು.

-      ಸಾಧ್ಯವಾದಲ್ಲಿ ಸಂಪೂರ್ಣ ಸಸ್ಯಾಹಾರಿಯಾಗುವುದು; ಮಾಂಸಾಹಾರಿಯಾದಲ್ಲಿ ವಾರಕ್ಕೊಮ್ಮೆ ಮಾತ್ರ ಸೇವಿಸಲು ಮನಮಾಡುವುದು. (ಆಹಾರಕ್ಕಾಗಿ ಬಳಸುವ ಪ್ರಾಣಿಗಳು ಬಿಡುವ ಅಪಾನವಾಯುವಿನಲ್ಲಿ ಓಜ಼ೋನ್ ನಾಶಕ ಅನಿಲಗಳಿರುತ್ತವೆ)

-      ವಿದ್ಯುತ್ತನ್ನು ಹಿತ-ಮಿತವಾಗಿ ಬಳಸುವುದು. ಇನ್ ಕ್ಯಾಂಡಿಸೆಂಟ್ ದೀಪಗಳ ಬದಲು ಸಿಎಫ್ಎಲ್ ಬಲ್ಬುಗಳನ್ನು ಉಪಯೋಗಿಸುವುದು.

-      ಮನೆಯಲ್ಲಿ ಸಾಧ್ಯವಿದ್ದ ಕಡೆ ಸೌರ-ವಿದ್ಯುತ್ತನ್ನು ಬಳಸುವುದು.

-      ಮನೆಯಲ್ಲಿಯೇ ಕುಳಿತು ಟಿವಿ-ಕಂಪ್ಯೂಟರಿಗೆ ದಾಸನಾಗುವ ಬದಲು ಪ್ರಕೃತಿಯೊಡನೆ ಪ್ರತ್ಯಕ್ಷ ಒಡನಾಡುವುದು.

-      ಗಿಡ-ಮರಗಳನ್ನು ನೆಡುವುದು ಹಾಗೂ ಅವುಗಳ ಪೋಷಣೆಯ ಜವಾಬ್ದಾರಿಯನ್ನು ಹೊರುವುದು.

-      ಉಗಾದಿ ಮುಂತಾದ ಹಬ್ಬಗಳಲ್ಲಿ ಮಾವು-ಬೇವಿನ ತೋರಣವನ್ನು ಕಟ್ಟದಿರುವುದು.

-      ಸ್ಪ್ರೇ ತತ್ವವನ್ನು ಆಧರಿಸಿರುವ ಎಲ್ಲ ರೀತಿಯ ಉಪಕರಣಗಳ ಬಳಕೆಯನ್ನು ನಿಲ್ಲಿಸುವುದು.

-      ಧೂಮಪಾನವನ್ನು ಮಾಡದಿರುವುದು

-      ಮನೆಯ ಕಸವನ್ನು ವಿಂಗಡಿಸಿ, ಅಧಿಕೃತ ವಿಲೇವಾರಿ ವಿಧಾನವನ್ನು ಪಾಲಿಸುವುದು.

-      ಆಹಾರ ಪದಾರ್ಥಗಳನ್ನು ಆಯಾ ಹೊತ್ತಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಸಿದ್ಧಪಡಿಸುವುದು. ಸಹಜ ಹಾಗೂ ತಾಜಾ ಪದಾರ್ಥಗಳನ್ನು ಸೇವಿಸುವುದು; ಡಬ್ಬಿ ಪದಾರ್ಥಗಳ ಸೇವನೆಯನ್ನು ಮಿತಗೊಳಿಸುವುದು ಇಲ್ಲವೇ ನಿಲ್ಲಿಸುವುದು.

-      ಜನಸಾಮಾನ್ಯರಲ್ಲಿ ಪ್ರಕೃತಿಯನ್ನು ಉಳಿಸಿ-ಬೆಳೆಸುವುದರ ಬಗ್ಗೆ ಅರಿವನ್ನು ಬೆಳೆಸುವುದು.

ಸಂಪದಿಗರೆ!

        ನನ್ನ ಮನಸ್ಸಿಗೆ ಈ ಕ್ಷಣದಲ್ಲಿ ತೋಚಿದ ಕೆಲವು ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ. ಈ ಪಟ್ಟಿಯನ್ನು ನೀವು ಖಂಡಿತಾ ಬೆಳೆಸಬಹುದು. ಹಾಗೆಯೇ ಇವುಗಳಲ್ಲಿ ಯಾವ ಯಾವನ್ನು ನೀವು ಜಾರಿಗೆ ತರುವ ಬಗ್ಗೆ ಪ್ರಯತ್ನಿಸುತ್ತೀರಿ ಎಂದೂ ಹೇಳಬಹುದು.

        ತಾಯಿಯಾದವಳು ತನ್ನ ಮಕ್ಕಳು ಮಾಡುವ ಎಲ್ಲ ತಂಟೆ-ತುಂಟತನಗಳನ್ನು ಸಹಿಸಿಕೊಳ್ಳಬಲ್ಲಳು. ನಿಜ. ಆದರೆ, ಅದಕ್ಕೆ ಮಿತಿಯೇ ಇಲ್ಲವೆ? ನಮ್ಮ ವಸುಂಧರೆ ಸದಾ ಕಾಲಕ್ಕೂ ಕ್ಷಮಯಾ ಧರಿತ್ರಿಯಾಗಿಯೇ ಉಳಿಯುವಳೆ?

 

-ನಾ.ಸೋಮೇಶ್ವರ

Rating
No votes yet

Comments