ಆಯಿ ಮದ್ದು...

ಆಯಿ ಮದ್ದು...

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ವಾತಾವರಣನೇ ಒಂಥರಾ ಆಗೋಗ್ಬಿಟ್ಟಿದೆ. ರಾಜಕಾರಣಿಗಳ ಜತೆ ಇರೋ ಈ ಪರಿಸರಾನೂ ಅವರ ಥರಾನೇ ಆಗೋಗ್ಬಿಟ್ಟಿದೆ ಮೋಡ ಮಳೆ ಸುರಿಸ್ತೀನಿ ಅಂತ ಆಶ್ವಾಸನೆ ಕೊಡ್ತಾ ಇದೆಯೇ ಹೊರ್ತು ತೊಟ್ಟೂ ಹನಿಸಿಲ್ಲ ಇನ್ನ. ಸಹ-ವಾಸ ದೊಷ ಇರ್ಬೇಕು... ಈ ಥರಾ ವಾತಾವರಣ ಇದ್ರೆ ಕೆಮ್ಮು ಜ್ವರ ನೆಗ್ಡಿಗಳಿಗೆ ಹಬ್ಬ ಅಲ್ವ. ನಮ್ಮ ಕಛೇರಿಯಲ್ಲಂತೂ ಆಸ್ಟ್ರೇಲಿಯಾ ಎದ್ರುಗಡೆ ಆಡ್ತಾ ಇರೋ ನಮ್ಮ ಪ್ಲೇಯರ್ಗಳ ಥರ ಒಬ್ರಾದ ಮೇಲೆ ಒಬ್ರು ಈ ಜ್ವರಕ್ಕೆ ಬಲಿ ಆಗ್ತಾನೇ ಇದಾರೆ. ಇವತ್ತು ನೋಡಿದ್ರೆ ನಮ್ಮ ಕಾಟ್ಪಾಡಿ ಟೀಮ್ ಲೀಡ್ ಕರ್ಛೀಫ್ ಹಿಡ್ಕೊಂಡು ಕೂತಿದ್ದ. ಆಗ ನಂಗೆ ನೆನ್ಪಾದದ್ದು ನಮ್ಮನೆ ಡಾಕ್ಟರ್ ವಿಜಯಲಕ್ಷ್ಮಿ ಲಕ್ಷ್ಮೀನಾರಯಣ ಭಟ್ರದ್ದು (ನನ್ನಮ್ಮ :-)). ಇಲ್ಲಿ ಕೆಲ ನೆಗಡಿ ಔಷಧಿಗಳನ್ನ ಹಂಚಿಕೊಳ್ಳಬಯಸ್ತೇನೆ..
೧. ನಿಂಬೇ ಹಣ್ಣಿನ ಕಷಾಯ:
ಬೇಕಾದ ಪದಾರ್ಥಗಳು: ಲಿಂಬೇ ಹಣ್ಣು ೨, ಜೀರಿಗೆ ೩ ಚಮಚ,ಮೆಣಸಿನಕಾಳು(ಬೇಕಾದಲ್ಲಿ) ೨ ರಿಂದ ೩, ತುಳಸಿ (ಇದ್ದಲ್ಲಿ) ಸ್ವಲ್ಪ, ಉಪ್ಪು ಇಲ್ಲವೇ ಕಲ್ಲು ಸಕ್ಕರೆ ರುಚಿಗೆ.
ಮಾಡುವ ವಿಧಾನ: ಒಂದು ಪಾತ್ರದಲ್ಲಿ ಮೂರು ಲೋಟ ನೀರು ಹಾಕಿ. ನಿಂಬೇಹಣ್ಣನ್ನು ಕತ್ತರಿಸಿ ಅದರಲ್ಲಿ ಹಾಕಿ ಉಳಿದೆಲ್ಲ ಪದಾರ್ಥಗಳನ್ನೂ ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಯಲು ಬಿಡಿ. ನೀರು ಸರಿ ಸುಮಾರು ಅರ್ಧ ಆಗುವ ವರೆಗೂ ಕುದಿಸಿ.
ಇದನ್ನು ಬಿಸಿ ಬಿಸಿಯಾಗೇ ಕುಡಿದರೆ ಉತ್ತಮ.
ಇದು ದಿನಕ್ಕೆ ೩ ಇಲ್ಲ ೪ ಬಾರಿ ಕುಡಿದರೆ ನೆಗಡಿ ಜ್ವರ ಕಡಿಮೆಯಾಗುತ್ತೆ. ನನ್ನಮ್ಮನ ಸ್ಟೈಲ್ ಅಲ್ಲಿ ಹೇಳೋದಾದ್ರೆ ರಾಮ ಬಾಣ. ಇದರಿಂದ ಬಾಯಿ ಇಛ್ಛೆನೂ ಆಗುತ್ತೆ.
೨. ಅರಿಷಿಣದ ಕಾಫಿ:
ಬೇಕಾದ ಪದಾರ್ಥಗಳು: ಅರಿಷಿಣ ಅರ್ಧ ಚಮಚ, ಬಿಸಿ ಹಾಲು ೧ ಲೋಟ, ಕಲ್ಲು ಸಕ್ಕರೆ ರುಚಿಗೆ.
ಮಾಡುವ ವಿಧಾನ: ಬಿಸಿ ಹಾಲಿಗೆ ಅರಿಷಿಣ ಮತ್ತು ಕಲ್ಲು ಸಕ್ಕರೆಯನ್ನು ಸೇರಿಸಿ ಕುಡಿಯಿರಿ.
ಇದು ಕೆಮ್ಮು ಮತ್ತು ಕಫಕ್ಕೆ ಒಳ್ಳೆಯದು. ** ಕೆಲವರಿಗೆ ಇದರಿಂದ ಕಫ ಬಿಗಿಯುತ್ತೆ.
೩. ಬಿಸಿ ಪಾನಕ:
ಬೇಕಾದ ಪದಾರ್ಥಗಳು: ನಿಂಬೇಹಣ್ಣು ೧, ಸಕ್ಕರೆ ರುಚಿಗೆ, ೧ ಲೋಟ ಬಿಸಿ ನೀರು.
ಮಾಡುವ ವಿಧಾನ: ಬಿಸಿನೀರಿಗೆ ನಿಂಬೇಹಣ್ಣಿನ ರಸ ಮತ್ತು ಸಕ್ಕರೆಯನ್ನ ಬೆರೆಸಿ ಕುಡಿಯಿರಿ.
ಇದು ಗಂಟಲು ನೋವಿದ್ದಾಗ,ಮೂಗು ಸುರಿಯುತ್ತಿದ್ದಾಗ ಕಫ ಕಟ್ಟಿದ್ದಾಗ ಆರಾಮ ನೀಡುತ್ತೆ.
ಇನ್ನ ಬಾಯಿಗೆ ಯೇನು ಸೇರ್ದೆ ಇದ್ದಾಗ ಮಾವಿನ ಕಾಯಿ ಕೂಗಿಲೆ ತಂಬ್ಳಿ ಇದೆ, ಈರುಳ್ಳಿ ತಂಬ್ಳಿ ಇದೆ ಅಷ್ಟೊಂದೆಲ್ಲ ಪಾಕಶಾಸ್ತ್ರ ಜ್ನಾನ ಇಲ್ಲ. ಮುಂದೆ ಆಯಿ ಕೇಳಿ ಬರೀತೀನಿ.
Rating
No votes yet

Comments