ಟೀ.ವೀ. ಹೋಗಿ ರೇಡಿಯೋ ಬಂತು ಡುಂ ಡುಂ ಡುಂ

ಟೀ.ವೀ. ಹೋಗಿ ರೇಡಿಯೋ ಬಂತು ಡುಂ ಡುಂ ಡುಂ

ನನ್ನ ಮಗನಿಗೆ ಆರು ಮತ್ತು ಮಗಳಿಗೆ ೨ ವರ್ಷ. ಮಗ ಆರು ವರ್ಷದನಾದದ್ದು ಹೇಗೆ ಎಂದು ನನಗೆ ತಿಳಿಯದು. ಸದ್ದು ಗದ್ದಲವಿಲ್ಲದೆ ೬ ಜನ್ಮದಿನಗಳನ್ನು ಆಚರಿಸಿಬಿಟ್ಟ. ಕ್ಷಮಿಸಿ ಆರಲ್ಲ ನಿಜವಾಗಿ ಹೇಳಬೇಕೆಂದರೆ ಒಂದೇ ಒಂದು. ಆರು ವರ್ಷದವನಾದರೂ ಒಂದೇ ಒಂದು ಸಲವೇ ಅವನ ಜನ್ಮದಿನ ಎನ್ನುವಿರಾ? ನನ್ನ ಮಗ leap year baby. ಇಂಥವರಿಗೆ leaper ಎನ್ನುತ್ತಾರೆ. ಅಂದರೆ ಫೆಬ್ರವರಿ ೨೯ ಕ್ಕೆ ಹುಟ್ಟಿದ ಇವನ ಜನ್ಮ ದಿನ ನಾಲ್ಕು ವರ್ಷಕ್ಕೊಮ್ಮೆ ತಾನೇ ಬರೋದು? ನೋಡಿ, ಸೀದಾ ಸಾದಾ, ತಕರಾರಿಲ್ಲದೆ ತನ್ನ ಪಾಡಿಗೆ ತಾನಿದ್ದುಬಿಡುವ ಜನರಿಗೆ ಹೇಗೆ ಅನ್ಯಾಯವಾಗುತ್ತದೆ ಎಂದು. ಎಲ್ಲಾ ಪುಂಡ ಪೋಕರಿ/ಣಿ ಯರಿಗೂ ಪ್ರತೀ ವರ್ಷ ತಪ್ಪದೆ ಜನ್ಮ ದಿನ ಬಂದರೆ ಯಾರ ಗೊಡವೆಗೂ ಹೋಗದ ಮಂಚದ ತೀರಾ ತುದಿಯಲ್ಲಿ ಮಲಗಿಸಿದರೂ ಹೊರಳದೆ, ಬೀಳದೆ, ಸಂತನಂತೆ ಇರುವ ನನ್ನ ಮಗನಿಗೆ ನಾಲ್ಕು ವರ್ಷಕ್ಕೊಂದು ಸಲ "ಈ ಸುದಿನ, ನಿನ್ನಾ ಜನುಮ ದಿನ". ಅವನು ಹುಟ್ಟಿದ ದಿನ ನನಗೆ ತಿಳಿದಿರಲಿಲ್ಲ ಫೆಬ್ರವರಿ ೨೯ ಎಂದು. ಮೊಟ್ಟ ಮೊದಲ ಬಾರಿಗೆ ತಂದೆಯಾದ ಸಂಭ್ರಮದಲ್ಲಿ ಮಗ ಹುಟ್ಟಿದ್ದು ವಿಶೇಷ ದಿನ ಎಂದು ತಿಳಿಯಲೇ ಇಲ್ಲ. ನನ್ನ ಸಂಬಂಧಿಯೊಬ್ಬರು ಬಂದು ಈ ವಿಷಯ ಹೇಳಿದರು. ಕೂಡಲೇ ಎಲ್ಲರಿಗೂ ಇದನ್ನು ತಿಳಿಸಿದೆ. ಓಹೋ, ನೀನೂ ಜಿಪುಣ ಅದಕ್ಕೆ ಸರಿಯಾಗಿ ನಿನಗೆ ಮಗನೂ ಬಂದ ಎಂದು ಘೊಳ್ ಎಂದು ಎಲ್ಲರೂ ನಕ್ಕರು. ಯಾವಾಗಲೋ ಒಮ್ಮೆ ದಾಳಿಂಬೆಗಾಗಿ ಚೌಕಾಶಿ ಮಾಡಿದ್ದನ್ನು ಯಾರೋ  ನೋಡಿ ಬಂದು ಮನೆಯಲ್ಲಿ ಹೇಳಿದ್ದರು. ಇನ್ನು ಕೆಲವರ ಪ್ರಕಾರ ನನ್ನ ಕೈಯಲ್ಲಿ ಕಾಸು ನಿಲ್ಲುವುದಿಲ್ಲವಂತೆ. ಆದರೂ ಎಲ್ಲಾದರೂ ಬದಲಾವಣೆಗಾಗಿ ಚೌಕಾಶಿ ಮಾಡಿ ಬಿಟ್ಟರೆ ಮಾಡುತ್ತಾರೆ ಪಟ್ಟಾಭಿಷೇಕ, ಜಿಪುಣ ಮಹಾರಾಜ ಎಂದು. ಯಾರೇನಾದರೂ ಹೇಳಿ ಕೊಳ್ಳಲಿ, ಈ ಜನ್ಮ ದಿನ, ಅನ್ನಿವರ್ಸರಿ ಇಂಥವುಗಳಲ್ಲಿ ನನಗೆ ಮಾತ್ರವಲ್ಲ ಸಂಪ್ರದಾಯಸ್ಥ ಮುಸ್ಲಿಮರಲ್ಲೂ ಅನಾಸಕ್ತಿ. ಜನ್ಮ ದಿನ, ವರ್ಷಾಚರಣೆ ಮುಂತಾದವುಗಳನ್ನು ಕೊಂಡಾಡುವುದರಲ್ಲಿ ಏನರ್ಥ? ಧನದಾಹಿ ಪಾಶ್ಚಾತ್ಯ ವಾಣಿಜ್ಯೋದ್ಯಮಿಗಳ ತಂತ್ರವಲ್ಲವೇ ಇವು? ದಿನಾಚರಣೆಗಳ ಹೆಸರಿನಲ್ಲಿ ಹೂವು, ಕಾರ್ಡು ಮಾರುವುದು. ನಮ್ಮ ಹಣವನ್ನ ಕೀಳಲು ಹೂಡಿದ ತಂತ್ರಗಳಿವು. ಇವುಗಳಿಗೆ ನಾವು ಬಲಿ. ಈ ಬಲೆಗೆ ನಾವು ಬೀಳದಿದ್ದರೆ ಇವನೊಬ್ಬ ಹಳೆತಲೆಮಾರಿನವ ಎಂದು ಗೇಲಿ.     


ಮಗ ಫೆಬ್ರವರಿ ೨೯ ಕ್ಕೆ ಜನಿಸಿದ್ದು ನನಗೆ ಮತ್ತೊಂದು ರೀತಿಯಲ್ಲೂ ಖುಷಿ. ಏಕೆಂದರೆ ನಮ್ಮ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿಯವರೂ ಹುಟ್ಟಿದ್ದು ಇದೇ ದಿನ. ಅಂದರೆ ನನ್ನ ಮಗ ಪ್ರಧಾನಿ ಆಗಬಹುದಾ? ಆದರೂ ಆಗಲಿ, ಆದರೆ ಮೊರಾರ್ಜಿಯವರ "ಪಾನ ಪ್ರಿಯತೆ" ಮಾತ್ರ ಅವನಿಗೆ ಬರದಿದ್ರೆ ಸಾಕು.


Xerxes Yancy Zeus Wolfeschlegelsteinhausenberdorft Sr., ಈ ವಿಶ್ವದ ಅತಿ ಉದ್ದದ ಹೆಸರಿನ ವ್ಯಕ್ತಿಯೂ ಹುಟ್ಟಿದ್ದು ಫೆಬ್ರವರಿ ೨೯ ಕ್ಕೆ. ಆಂಗ್ಲ ವರ್ಣ ಮಾಲೆಯ ಎಲ್ಲಾ ೨೬ ಅಕ್ಷರಗಳೂ ಇವನ ಹೆಸರಿನಲ್ಲಿವೆ.      


ನನ್ನ ಮಗ ಸಾಧು ಸಂತನಾದರೂ ಅಲ್ಪ ಸ್ವಲ್ಪ ತುಂಟತನ ಇದ್ದಿದ್ದೇ. ಅವನಿಗೆ ನೆಲದ ಮೇಲೆ ನಡೆಯಲು  ಬರುವುದಿಲ್ಲ. ಗಂಡಿಗೆ ಮೀಸೆ ಬಂದರೆ ಆಕಾಶ ಕಾಣೋದಿಲ್ಲವಂತೆ. ಇವನಿಗೆ ಏನು ಬಂದಿದೆಯೋ, ನೆಲ ಕಾಣೋದಿಲ್ಲ. ಹಾರುತ್ತಾ ನಡೆಯುತ್ತಾನೆ. ಮೊನ್ನೆ ರೇಶನ್ ಮುಗಿಯಿತು ಎಂದು ಹತ್ತಿರದ ಮಾಲಿಗೆ ಸಂಸಾರ ಸಮೇತ ಹೋದೆವು. ನನ್ನ ಹೆಂಡತಿಗೆ ನೀನು ಮೊದಲು ಹೋಗು, ಪ್ರಾರ್ಥನೆಯ ಕರೆಗಿಂತ ಮೊದಲು ಶಾಪಿಂಗ್ ಮುಗಿಯಲಿ, ನಾನು ಮಕ್ಕಳೊಂದಿಗೆ ಬರುತ್ತೇನೆ ಎಂದು ಆಕೆಯನ್ನು ಕಳಿಸಿದೆ. ಆಕೆ ಆಚೆ ಹೋಗಿದ್ದೆ ತಡ ನನ್ನ ಮಗ ಜಿಗಿಯುತ್ತಾ ಶರವೇಗದಲ್ಲಿ ಮಾಲಿನೊಳಗೆ ನುಗ್ಗಿದ. ಅವನು ನುಗ್ಗಿದ್ದು ದಪ್ಪನಾದ ಗಾಜಿನ ಗೋಡೆಯ ಮೂಲಕ. ಢಮಾರ್ ಎಂದು ಸದ್ದು ಕೇಳಿತು, ನೋಡಿದರೆ ನನ್ನ ಮಗ ತನ್ನ ತಲೆಯನ್ನು ಗಾಜಿನ ಗೋಡೆಗೆ ಅಪ್ಪಳಿಸಿದ್ದ. ಚೀರಾಡುತ್ತಿದ್ದ ಅವನನ್ನು ನೆರೆದವರು ಕೂಡಲೇ ಶುಶ್ರೂಷೆ ಮಾಡಿ, ತಂಪಾದ ನೀರನ್ನು ತಲೆಗೆ ಹಣೆಗೆ ಹಾಕಿ ಕಳಿಸಿದರು. ಗಾಜಿಗೆ ಅಪ್ಪಳಿಸಿದ ಶಬ್ದ ಬಾಂಬ್ ಸ್ಫೋಟ ದಂತೆ ಇತ್ತು. ಸುದೈವವಶಾತ್ ದೊಡ್ಡ ಪೆಟ್ಟೇನೂ ಆಗಲಿಲ್ಲ. ಇಂಥ ಆಟದಲ್ಲಿ ಮುಕ್ತಾಯ ನನ್ನ ಮಗನ ತುಂಟಾಟ. ಆದರೆ ನನ್ನ ಮಗಳೋ?


ಅವಳ ಹುಟ್ಟೇ ಒಂದು ಕಂಟ್ರೋವರ್ಸಿ. ಕಂಟ್ರೋವರ್ಸಿ ಎಂದ ಕೂಡಲೇ ನಿಮ್ಮ ಕಿವಿ ನಿಮಿರಿರಬೇಕು ಅಲ್ಲವೇ?  ಅಂದ್ರೆ ಅವಳ ನಾಮಕರಣದ ಕಂಟ್ರೋವರ್ಸಿ. ಸಾಮಾನ್ಯವಾಗಿ ಮಗು ಹುಟ್ಟಿದ ಕ್ಷಣದಲ್ಲೇ ನಮ್ಮಲ್ಲಿ ನಾಮಕರಣ ಮಾಡುತ್ತಾರೆ. ನನ್ನ ತಂಗಿ ತನ್ನ ಮಗಳಿಗೆ ಎಂದು reserve ಮಾಡಿದ್ದ "ಇಸ್ರಾ" ಹೆಸರನ್ನು ನಾನು ಕದ್ದು ನನ್ನ ಮಗಳಿಗೆ ಇಟ್ಟಿದ್ದೆ. ಅದೇ ಕಂಟ್ರೋವರ್ಸಿ.  


ನನ್ನ ಪುತ್ರಿ ಪುಂಡ ಪೋಕರಿಯರ ಸಾಲಿಗೆ ಸುಲಭವಾಗಿ ಸೇರುತ್ತಾಳೆ. ನಮ್ಮ ಕುಟುಂಬದಲ್ಲಿ ಯಾರೂ rowdy sheeter ಗಳಿಲ್ಲ, ಆದರೂ ಯಾವುದೋ ಒಂದು truant genes ಎಲ್ಲಿಂದ ಬಂದು ಅವಳೊಳಗೆ ಸೇರಿಕೊಂಡಿತೋ ಗೊತ್ತಿಲ್ಲ. ಹೋದವಾರ ಮಕ್ಕಳಿಗೆ ಎರಡು ವಾರಗಳ ಬಿಡುವು ಎಂದು ನನ್ನ ತಂಗಿ ಮಕ್ಕಳೊಂದಿಗೆ ಭಾರತಕ್ಕೆ ಹೋದಳು. ನಾವು ನಮ್ಮ ಫ್ಲಾಟ್ ನಿಂದ ಅವಳಿರುವ ವಿಲ್ಲಾಕ್ಕೆ ಬಂದೆವು. ನನ್ನ ಮಕ್ಕಳಿಗೆ ವಿಲ್ಲಾ ಬಹಳ ಇಷ್ಟ. ಮೂರು ಅಂತಸ್ತಿನ ಐರೋಪ್ಯ ಶೈಲಿಯ  ಮನೆ, ಹಿತ್ತಲಿನಲ್ಲಿ ಈಜು ಕೊಳ. ಫ್ಲಾಟ್ ನಲ್ಲಿ ನಾಲ್ಕೂ ಗೋಡೆಗಳ ಮಧ್ಯೆ ಕಳೆಯುವ ನನ್ನ ಮಕ್ಕಳಿಗೆ ವಿಲ್ಲಾ ಎಂದರೆ ಪ್ರಾಣ. ವಿಲ್ಲಾಗೆ ಬಂದ ಮೂರನೇ ದಿನ ಒಂದು ಘಟನೆ. ಎಂದಿನಂತೆ ನನ್ನ ಮಗಳಿಗೂ ಅವಳ ಅಮ್ಮನಿಗೂ ಜಟಾಪಟಿ. ವಾಗ್ಯುದ್ಧ. ಬೇಬಿ ಟೀವೀ (www.babytv.com ನೋಡಿ ತುಂಬಾ ಚೆನ್ನಾಗಿದೆ ಮಕ್ಕಳಿಗೆ) ಬೇಕೂಂತ ಪುಟ್ಟಿ, ಏಕ್ತಾ ಕಪೂರಳ ಸೀರಿಯಲ್ ಬೇಕೂಂತ ನನ್ನವಳು. war of words ಶುರು ಜಾರ್ಜ್ ಬುಷ್ನನ್ನು ನಾಚಿಸುವಂತೆ. ಯಾರಿಗೂ ಬೇಡ ಟೀವೀ ಎಂದು ನನ್ನ ಹೆಂಡತಿ ಟೀವೀ ಆಫ್ ಮಾಫ್ ಮಾಡಿ ತಿರುಗಿದ್ದೆ ತಡ ನನ್ನ ಮಗಳು ತನ್ನ ಅಣ್ಣನ ಲಂಚ್ ಬಾಕ್ಸ್ ತೆಗೆದು ಬೀಸಿದಳು, ಟೀವೀಗೆ. ಟೀವೀ ಭಸ್ಮ. ಹೆಚ್ಚೂ ಕಡಿಮೆ ಒಂದು ಲಕ್ಷ ರೂಪಾಯಿಯ ಸೋನಿ ಬ್ರೇವಿಯಾ ನನ್ನ ಪುಟಾಣಿ ಮಗಳ astounding bravery ಮುಂದೆ ನೆಲ ಕಚ್ಚಿತು. ನನಗೆ ನನ್ನಾಕೆಯ ಫೋನು. ರೀ, ಇಸ್ರಾ ಟೀ ವೀ ಮೇಲೆ ಲಂಚ್ ಬಾಕ್ಸ್ ಎಸೆದ್ಲು, ಸೌಂಡ್ ಮಾತ್ರ ಬರ್ತಾ ಇದೆ, ಚಿತ್ರ ಇಲ್ಲ ಅಂತ. ನಿಮಗೆ ಗೊತ್ತಲ್ಲ, "ಮೂಕಿ ಟಾಕಿ" ಚಿತ್ರದಲ್ಲಿ ಮಾತಿಲ್ಲ. ಆದರೆ ಇಲ್ಲಿ ಸ್ವಲ್ಪ ಬೇರೆ. ಚಿತ್ರ ಇಲ್ಲ.ಬರೀ ಮಾತು. ಬೇರೆಯದೇ ಆದ scenario. ಮನೆಗೆ ಬಂದು ನೋಡಿದೆ. LCD ಸ್ಕ್ರೀನ್ ಸೀಳು ಬಿಟ್ಟಿತ್ತು. ಶಬ್ದ ಮಾತ್ರ ಸೊಗಸಾಗಿ ಬರುತ್ತಿತ್ತು, ಚಿತ್ರದ ಸುಳಿವಿಲ್ಲ. ಲೇ, ಟೀ ವೀ ಹೋಗಿ ರೇಡಿಯೋ ಆಗಿ ಬಿಡ್ತಲ್ಲೇ ಇದು ಎಂದೆ ಅಳು ತುಂಬಿದ ನಗುವಿನೊಂದಿಗೆ. ನಿಮಗೆ ತಮಾಷೆ, ಹೋಗಿ ವಿಚಾರಿಸ್ರೀ ಎಷ್ಟಾಗುತ್ತೆ ರಿಪೇರಿಗೆ ಎಂದಳು. ಹತ್ತಿರದ ಸೋನಿ ಮಳಿಗೆಗೆ ಹೋಗಿ ವಿಚಾರಿಸಿದಾಗ ಎದೆ ಧಸಕ್ಕೆಂದಿತು. cool 3,000 riyals (ಸುಮಾರು ೩೫.೦೦೦ ರೂಪಾಯಿ). ಇನ್ನೊಂದು ಸಾವಿರ ರಿಯಾಲ್ ಹಾಕಿದರೆ ಇದಕ್ಕಿಂತ ಒಳ್ಳೆಯ brand new ಟಿವಿ ಬರುತ್ತೆ ಎನ್ನುವ ಸುವಾರ್ತೆಯನ್ನೂ ನೀಡಲು ಅಂಗಡಿಯಾತ ಮರೆಯಲಿಲ್ಲ.


"ಮಕ್ಕಳಿರಲವ್ವ ಮನೆತುಂಬಾ" ಗಾದೆಯ ಕಾಲದಲ್ಲಿ ಇಂಥ ಮಕ್ಕಳಿರಲಿಲ್ಲವೋ ಏನೋ. ಇದ್ದಿದ್ದರೆ ಈ ಗಾದೆ ಹುಟ್ಟಿಕೊಳ್ಳುತ್ತಿರಲಿಲ್ಲ, ಅಲ್ಲವೇ? ಆದರೂ ನನ್ನ ಪುಟ್ಟ ಮಲ್ಲಿ ಒಂದು ರೀತಿಯ ನೆಲ್ಲಿ ಕಾಯಿಯಂತೆ. ಅಲ್ಲೊಂಚೂರು ಇಲ್ಲೊಂಚೂರು ಹುಳಿ ತೋರಿದರೂ ನಮ್ಮ  ಮನೆಗೆ ವಿಶೇಷವಾದ ಶೋಭೆಯನ್ನು ತಂದಿದ್ದಾಳೆ ಎಂದರೆ ಅತಿಶಯೋಕ್ತಿ ಆಗಲಾರದು.       


 

Rating
No votes yet

Comments