ಇದು ಬಂಜಗೆರೆಯಲ್ಲ ತುಂಬಿದ ಕೆರೆ

ಇದು ಬಂಜಗೆರೆಯಲ್ಲ ತುಂಬಿದ ಕೆರೆ

Comments

ಬರಹ

ಬಂಜಗೆರೆ ಜಯಪ್ರಕಾಶ ಅವರು ಬರೆದಿರುವ “ಆನುದೇವಾ ಹೊರಗಣವನು” ಎಂಬ ಸಂಶೋಧನಾ ಪ್ರಬಂಧದ ಕುರಿತಂತೆ ದೊಡ್ಡ ವಿವಾದ ನಡೆದಿದೆ. ಈ ಪುಸ್ತಕದಲ್ಲಿ ಅವರು ಬಸವಣ್ಣನವರು ವಿಚಾರಕ್ರಾಂತಿಗೆ ನಾಂದಿಯಾಗಿ ಬ್ರಾಹ್ಮಣತ್ವವನ್ನು ತೊರೆದರೆಂಬ ಸಿದ್ಧ ನಿಲುವಿಗೆ ವ್ಯತಿರಿಕ್ತವಾದ ವಾದವನ್ನು ಮುಂದಿಡುತ್ತಾ ತಮ್ಮ ವಾದಕ್ಕೆ ಪೂರಕವಾದ ಪುರಾವೆಯನ್ನು ಎಳೆಎಳೆಯಾಗಿ ಬಿಡಿಸಿಡುತ್ತಾ ಹೋಗುತ್ತಾರೆ.

ಹಾಗೆ ನೋಡಿದರೆ ಬಸವಣ್ಣನವರ ಬಗ್ಗೆ ಬರೆದ ಪರಿಚಯ ಸಾಹಿತ್ಯವೆಲ್ಲವೂ ಅವರ ಸಮಕಾಲೀನರು ಬರದಿದ್ದಲ್ಲ. ಬಸವನ ನಂತರ ಅಂದರೆ ನೂರು ನೂರೈವತ್ತು ವರ್ಷಗಳ ನಂತರ ಲಭ್ಯ ವಚನಗಳ ಆಧಾರದಲ್ಲಿ ಬರೆಯಲಾದ ಕಾವ್ಯ ಪುರಾಣಗಳ ಮೂಲಕ ಪ್ರಚುರಗೊಂಡಿದೆ. ಈ ಕಾವ್ಯ ಪುರಾಣಗಳಲ್ಲಿ ಸಿಗುವುದು ಅಲಂಕೃತ ಸತ್ಯಗಳು ಮಾತ್ರ. ಅಧಿಕೃತವೆನಿಸಬಲ್ಲಂತಹ ಶಾಸನ, ದಸ್ತಾವೇಜು, ತಾಳೆಯೋಲೆ. ಹಸ್ತಪ್ರತಿ, ವಂಶವೃಕ್ಷಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಈ ಕಪೋಲಕಲ್ಪಿತ ಪುರಾಣಗಳನ್ನು ಒರೆಗೆ ಹಚ್ಚಿ ನೋಡಬೇಕಿದೆ.

ಬಸವಣ್ಣನವರು ಬಿಜ್ಜಳನ ಸರ್ಕಾರದಲ್ಲಿ ಭಂಡಾರಿಯಾಗಿದ್ದರು ಎಂಬುದು ಪ್ರಚಲಿತ ಸತ್ಯ. ಆದರೆ ಬಸವನ ಕಾಲಾನಂತರ ಅಂದರೆ ಕೇವಲ ಅರ್ಧ ಶತಮಾನದ ನಂತರ ಬರೆಯಲಾದ ಶಾಸನಗಳಲ್ಲಿ ಬಸವನಿಗೆ ದಂಣಾಯಕ ಎಂಬ ಬಿರುದನ್ನೇ ಹೆಚ್ಚು ಬಳಸಲಾಗಿದೆ ಎಂದು ಗಮನಿಸಿದಾಗ ೧೩ನೇ ಶತಮಾನದ ಬಸವದೇವರಾಜರಗಳೆ, ೧೪ನೇ ಶತಮಾನದ ಬಸವಪುರಾಣ, ೧೫ನೇ ಶತಮಾನದ ಶಿವತತ್ವಚಿಂತಾಮಣಿ, ೧೬ನೇ ಶತಮಾನದ ಸಿಂಗಿರಾಜಪುರಾಣಗಳ ವಿಭಿನ್ನ ಕಥೆಗಳು ಕಲಸುಮೇಲೋಗರವಾಗಿ ಬೇರೊಂದು ತೆರನ ನಿರೂಪಣೆಗೆ ಪಕ್ಕಾಗಿವೆ ಎಂಬುದರಲ್ಲಿ ಸಂಶಯವಿಲ್ಲ.

ಜಯಪ್ರಕಾಶರು ಈ ಕುರಿತಂತೆ ಆಳ ಸಂಶೋಧನೆ ನಡೆಸಿ ಲಭ್ಯವಿರುವ ಎಲ್ಲ ಮಾಹಿತಿ ಹಾಗೂ ಹೇಳಿಕೆಗಳನ್ನು ಎಳೆಎಳೆಯಾಗಿ ಬಿಡಿಸಿಡುತ್ತಾ ಸತ್ಯಕ್ಕೆ ಕನ್ನಡಿ ಹಿಡಿದಿದ್ದಾರೆ. ಅವರ ಪರಿಪೂರ್ಣ ಸಂಶೋಧನಾ ಕ್ರಮವನ್ನು ಸರಿಯಾಗಿ ಅಭ್ಯಸಿಸಿ ಅವರು ನೀಡಿರುವ ಪುರಾವೆ ಹಾಗೂ ವಾದಸರಣಿಯನ್ನು ಪುಟಕ್ಕಿಟ್ಟು ಪರೀಕ್ಷಿಸಿ ತಮ್ಮಲ್ಲಿರುವ ಪುರಾವೆಗಳಿಂದ ಅವರದನ್ನು ಶೂನ್ಯಗೊಳಿಸುವ ಅಥವಾ ಖಂಡಿಸುವ ಭಂಜಿಸುವ ಪ್ರಯತ್ನ ಮಾಡುವುದು ಬಿಟ್ಟು ಬೀದಿ ಜಗಳಕ್ಕೆ ತೊಡಗಿರುವವರು ಜೋರುದನಿಯಿಂದ ಸುಳ್ಳನ್ನು ಸತ್ಯವಾಗಿಸ ಹೊರಟಿದ್ದಾರೆ.

ನಮ್ಮ ಸಮಾಜದ ಒಂದು ವರ್ಗವು ತಾವೇ ವಿದ್ಯಾವಂತರೆಂದೂ ಸಮಾಜವನ್ನು ಮುನ್ನಡೆಸುವರೆಂದೂ ಸಾಮಾಜಿ ಬದಲಾವಣೆಗಳಲ್ಲಿ ತಾವೇ ನಿರ್ಣಾಯಕರಂದೂ ಭಾವಿಸಿಕೊಳ್ಳುವ ಪರಿಪಾಠವನ್ನು ರಕ್ತಗತವಾಗಿ ಪಡೆದಿವೆ. ಇತರ ವರ್ಗಗಳು ಈ ತರ್ಕವನ್ನು ಬಹುಮಟ್ಟಿಗೆ ಪೋಷಿಸಿಕೊಂಡೇ ಬಂದಿವೆ. ಬಸವ ಬ್ರಾಹ್ಮಣಸಂಜಾತ ಎಂಬ ಸ್ಥಾಪಿತ ತರ್ಕವನ್ನು ಬಲವಾಗಿ ಬೇರೂರಿಸುತ್ತಾ ಬಂದಿರುವ ಈ ಅಯ್ಯಗಳಿಗೆ ಒಮ್ಮೆಲೇ ಆತ ದಲಿತ ಸಂಜಾತನೆಂದು ಹೇಳಿದರೆ ಅಪಥ್ಯವಾಗದೇ ಇದ್ದೀತೇ?

ಉದಾಹರಣೆಗೆ ಹಕ್ಕಬುಕ್ಕರೆಂಬ ಸಾಮಾನ್ಯ ಕೃಷಿಕರು ಅಥವಾ ಕುರುಬರು ಪುಂಡರ ವಿರುದ್ಧ ಸೆಣಸಲು ತಮ್ಮದೇ ಸೈನ್ಯ ಕಟ್ಟಿ ಅನಂತರ ಅದು ರಾಜ್ಯವಾದುದಕ್ಕೆ ವಿದ್ಯಾರಣ್ಯರೆಂಬ ಬ್ರಾಹ್ಮಣರೇ ಕಾರಣರೆಂದೂ, ಚಲಿಕೆಪ್ಪ ಗುದ್ಲೆಪ್ಪರಂಥ ರೈತರು ಚಾಲುಕ್ಯ ರಾಜ್ಯ ಕಟ್ಟಿ ಆಳಿದ್ದಕ್ಕೂ ಅಂತದೇ ಒಂದು ದೈವೀ ನಾಂದಿಯನ್ನು ತಳುಕುಹಾಕಿದ್ದನ್ನೇ ನಮ್ಮ ಪಠ್ಯಪುಸ್ತಗಳಲ್ಲಿ ಓದಿದ್ದೇವೆ. ಸಳನೆಂಬ ವೀರನು ಕೆಚ್ಚೆದೆಯಿಂದ ಹುಲಿಯೊಂದಿಗೆ ಹೋರಾಡಿ ನಂತರ ಕಟ್ಟಿದ ಹೊಯ್ಸಳ ಸಾಮ್ರಾಜ್ಯಕ್ಕೆ ಪ್ರೇರಣೆಯಿತ್ತವರೂ ಬ್ರಾಹ್ಮಣರಂಥ ಉಚ್ಚಕುಲದವರೆಂಬ ಸುಳಿವಿನಲ್ಲೂ ಈ ಅಂಶ ದೃಢವಾಗುತ್ತದೆ.

“(ಮಹಾಭಾರತ ಬರೆದ) ವ್ಯಾಸ ಬೆಸ್ತರ ಕುಲದವನು, (ರಾಮಾಯಣ ಬರೆದ) ವಾಲ್ಮೀಕಿ ಬೇಡರ ಕುಲದವನು ಎಂದು ಸಾಂಸ್ಕೃತಿಕ ಅಧ್ಯಯನಗಳ ಆಧಾರದಲ್ಲಿ ಈಗ ಹಲವಾರು ಸಂಸ್ಕೃತಿ ಚಿಂತಕರು ಸೂಚಿಸುತ್ತಿದ್ದಾರಾದರೂ ಅದು ನಿಜವಲ್ಲವೆಂಬಂತೆ ವಾದಿಸುವ ಅಥವಾ ಪ್ರತಿಪಾದಿಸುವ ಸಂಸ್ಕೃತಿತಜ್ಞರು ಈಗಲೂ ಇದ್ದಾರೆ. ಅದಕ್ಕೆ ಅವರು ಸೂಚಿಸುವ ಸರಳ ಸಾಕ್ಷ್ಯಾಧಾರವೆಂದರೆ, ಸಂಸ್ಕೃತವೆನ್ನುವುದು ಬ್ರಾಹ್ಮಣರಿಗೆ ಮೀಸಲಾದ ಭಾಷೆಯಾಗಿತ್ತಾದ್ದರಿಂದ ಸಂಸ್ಕೃತದಲ್ಲಿ ಎರಡು ಮಹಾಕಾವ್ಯಗಳನ್ನು ಬರೆಯಲು ಬ್ರಾಹ್ಮಣೇತರರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ವ್ಯಾಸ ಮತ್ತು ವಾಲ್ಮೀಕಿ ಇಬ್ಬರೂ ಬ್ರಾಹ್ಮಣರೇ ಇರಬೇಕು. ಹೆಚ್ಚಿನ ಪರಿಶೀಲನೆಗೆ ಹೋಗದೆ ಈ ಸಾಕ್ಷ್ಯಾಧಾರವನ್ನು ಗಮನಿಸಿದರೆ ಇದು ನಂಬಬಹುದಾದ ವಾಸ್ತವವೆಂಬಂತೆಯೇ ಕಾಣುತ್ತದೆ. ಆದ್ದರಿಂದ ಆ ಬಗೆಯ ಪ್ರತೀತಿಯೇ ವಾಸ್ತವ ಸತ್ಯವೆಂಬ ದಿರಿಸಿನಲ್ಲಿ ಜನಮನ್ನಣೆ ಪಡೆಯುತ್ತದೆ.” (ಬಂಜಗೆರೆ ಜಯಪ್ರಕಾಶ, ಆನುದೇವಾ ಹೊರಗಣವನು, ಪುಟ ೧೨, ಲಕ್ಷ್ಮೀ ಪ್ರಕಾಶನ,ಬೆಂಗಳೂರು ೨೦೦೭)

ಈ ಒಂದು ಬೌದ್ಧಿಕ ದಾಸ್ಯವನ್ನು ತೊಡೆದು ಹಾಕಲು ಬಸವಣ್ಣ ಪ್ರಯತ್ನಿಸಿದಾಗ ಅಂದಿನ ಸಮಾಜದ ಎಲ್ಲ ಪ್ರಗತಿಪರರೂ ಅವರೊಂದಿಗೆ ಕೈಜೋಡಿಸಿದರು. ಆ ಶರಣ ಚಳವಳಿಯ ಮೂಲಸ್ರೋತವು ವೇದವಿರೋಧೀ ಹಾಗೂ ವರ್ಣಭೇದವಿರೋಧೀ ಆಗಿತ್ತು.

“ಹನ್ನೆರಡನೇ ಶತಮಾನದ ತರುವಾಯ ಶರಣಧರ್ಮ ಕೆರೆಯ ಪದ್ಮರಸ, ಮಗ್ಗೆಯ ಮಾಯಿದೇವ, ಗುಬ್ಬಿಯ ಮಲ್ಲಣ್ಣರಿಂದಾಗಿ ವೇದಗಮಮುಖಿಯಾಗುತ್ತಾ ಬಂದಿದ್ದಿತು …” (ಎಂ ಎಂ ಕಲಬುರ್ಗಿ, ಮಾರ್ಗ ೪, ಪುಟ ೩೨೧, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೦೪) ಎಂಬ ಅಭಿಪ್ರಾಯವನ್ನು ಉಲ್ಲೇಖಿಸುತ್ತಾ ಜಯಪ್ರಕಾಶರು ಆರ್ ಎನ್ ನಂದಿಯವರ ಅಭಿಪ್ರಾಯವನ್ನೂ ನಮಗೆ ನೀಡುತ್ತಾರೆ. “ಸುಪ್ರಸಿದ್ಧ ‘ಬಸವಪುರಾಣ’ವನ್ನು ಬರೆದ ಭೀಮಕವಿ ಹದಿನಾಲ್ಕನೇ ಶತಮಾನದ ಸ್ಮಾರ್ತ ಪಂಡಿತನು ಹೌದು, ‘ಪ್ರಭುಲಿಂಗಲೀಲೆ’ಯನ್ನು ಬರೆದ ಚಾಮರಸ ಆರಾಧ್ಯ ಬ್ರಾಹ್ಮಣನಾಗಿದ್ದನು … ವೀರಶೈವ ಚಳವಳಿಯನ್ನು ಸೇರಿದ ಸ್ಮಾರ್ತ ಬ್ರಾಹ್ಮಣರು ತಮ್ಮ ಶ್ರೇಷ್ಠತೆಯನ್ನು ಪ್ರತಿಪಾದಿಸುವುದಲ್ಲದೆ ಧರ್ಮದ ಇತರ ಬ್ರಾಹ್ಮಣೇತರ ಸದಸ್ಯರ ಜೊತೆಗೆ ತಮ್ಮ ಉನ್ನತ ಸ್ಥಾನಮಾನಗಳನ್ನು ಹಂಚಿಕೊಳ್ಳಲೂ ಹಿಂಜರಿದರು. ವಚನಕಾರರು ಭ್ರಾತೃತ್ವ ಸಮಾನತೆಯನ್ನು ಪ್ರತಿಪಾದಿಸಿದರೂ ಬಹುತೇಕ ವೀರಶೈವ ಕೃತಿಗಳು ಬ್ರಾಹ್ಮಣ ಪ್ರತಿಪಾದಿತ ಜಾತಿಶ್ರೇಣಿಗೆ ವಿಧೇಯತೆಯನ್ನು ಉಪದೇಶಿಸುತ್ತವೆ. ಕರ್ನಾಟಕದಲ್ಲಿ ಈ ರೀತಿಯಾಗಿ ವರ್ಣಾಶ್ರಮ ಪ್ರಕಾರ ಪುನಾರಚನೆಗೊಂಡ ಶೈವ ಸಮುದಾಯವು ದೈವೀಪ್ರೇರಿತವಾದುದೆಂದು ಭೀಮಕವಿ ಒತ್ತಿ ಹೇಳುತ್ತಾನೆ.” (ಆರ್ ಎನ್ ನಂದಿ, ಬಸವಣ್ಣನ ವಚನಗಳು – ಸಾಂಸ್ಕೃತಿಕ ಮುಖಾಮುಖಿ, ಪುಟ ೭, ಕನ್ನಡ ವಿ ವಿ , ಹಂಪಿ, ೨೦೦೪)

“ಬ್ರಾಹ್ಮಣರ ಈ ಮನೋಭಾವವೇ ಬಸವಣ್ಣನಿಗೆ ಅಂಟಿಸಿದ ಜಾತಿಸೂಚನೆಯಲ್ಲಿ ಅಡಗಿದೆ ಎಂದು ಭಾವಿಸಬಹುದು…(ಏಕೆಂದರೆ) ಸತ್ಯವನ್ನು ಪ್ರತಿಪಾದಿಸುವುದಕ್ಕಿಂತ ಹಿತಾಸಕ್ತಿಯನ್ನು ಪ್ರತಿಪಾದಿಸುವುದು ಇತಿಹಾಸ ರಚನೆಯಲ್ಲಿ ಹಲವಾರು ಕಡೆ ಕಂಡುಬರುತ್ತದೆಯಾದ್ದರಿಂದ ತಮ್ಮ ಜಾತಿ ಶ್ರೇಷ್ಠತೆಯ ಬಗ್ಗೆ ಅಭಿಮಾನವುಳ್ಳ ಸ್ಮಾರ್ತ, ಆರಾಧ್ಯ ಬ್ರಾಹ್ಮಣರು ತಮ್ಮಂತೆಯೇ ಬಸವಣ್ಣನನ್ನು ಕಲ್ಪಿಸಿಕೊಂಡದ್ದು ಹೆಚ್ಚು ಸಹಜವಾದುದಾಗಿದೆ…ಲಿಂಗಾಯತ ಪಂಥದೊಳಗೆ ಭದ್ರ ತಳಪಾಯ ಕಲ್ಪಿಸಿಕೊಳ್ಳುವ ಅಗತ್ಯದಿಂದ ಆ ಚಳವಳಿಯ ನೇತಾರ ಬಸವಣ್ಣನೂ ಕೂಡ ಜನಿವಾರವನ್ನು ಕಿತ್ತುಹಾಕಿದ ಬ್ರಾಹ್ಮಣನಾಗಿದ್ದ ಎಂಬ ಕವಿಕಲ್ಪನೆಯು ಆ ಪಂಥದೊಂದಿಗೆ ಹೆಚ್ಚಿನ ಸಕೀಲ ಸಂಬಂಧವನ್ನು ಒದಗಿಸಿಕೊಡುತ್ತದೆ. (ಏಕೆಂದರೆ ಬಸವನ ಸಮಕಾಲೀನರಲ್ಲಿ ಇವನು ಇಂಥವ ಇಂಥ ವಂಶದವ ಎಂದು ಸೂಚಿಸುವ ಪರಿಪಾಠವಿರಲಿಲ್ಲ.) ಶರಣತತ್ವ ಪ್ರತಿಪಾದಿಸುವವರು ತಮ್ಮ ಜಾತಿ ಹಿನ್ನೆಲೆಗಳ ಶ್ರೇಷ್ಠತೆಯನ್ನು ಕೈಬಿಟ್ಟು ಶಿವಭಕ್ತರಾಗಿ ಪ್ರಾಚುರ್ಯ ಹೊಂದಲು ಹೆಚ್ಚು ಪ್ರಯತ್ನಿಸುವ ಸಾಂಸ್ಕೃತಿಕ ಮನೋಸ್ಥಿತಿಯವರಾಗಿದ್ದರು. ಆ ನಂತರದ ದಿನಗಳಲ್ಲಿ ತಾವು ಧಿಕ್ಕರಿಸುತ್ತಿದ್ದ ಬ್ರಾಹ್ಮಣಶಾಹಿಯನ್ನು ಸ್ವತಃ ಅದೇ ಜಾತಿಯಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ಧಿಕ್ಕರಿಸಿದ ಎಂಬ ರಮ್ಯ ಕಲ್ಪನೆಯನ್ನು ಜನರಲ್ಲಿ ತೇಲಿಬಿಟ್ಟಿರಬೇಕು.” (ಬಂಜಗೆರೆ ಜಯಪ್ರಕಾಶ, ಆನುದೇವಾ ಹೊರಗಣವನು, ಪುಟ ೩೧-೩೨, ಮೇಲಿನಂತೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet