ಬೆಲೆ ಕಟ್ಟುವುದು
ಒಬ್ಬ ಕೋಳಗಳನ್ನು ಸಾಕಿದ್ದನಂತೆ. ಅವನ ಕೋಳಿಗಳು ಸುತ್ತಮುತ್ತಲೆಲ್ಲ ಬಹು ಪ್ರಸಿದ್ಧಿ. ಪತ್ರಿಕೆಗಳಲ್ಲೂ ದೃಶ್ಯಮಾಧ್ಯಮಗಳಲ್ಲೂ ಅವುಗಳ ಬಗ್ಗೆ ಆಗಾಗ್ಗೆ ಉಲ್ಲೇಖವಾಗುತ್ತಿತ್ತು. ಒಬ್ಬ ಸಂದರ್ಶನ ನಡೆಸಿ ’ಏನ್ಸಾರ್ ನೀವು ನಿಮ್ಮ ಕೋಳಿಗಳಿಗೆ ಏನು ಊಟ ಹಾಕ್ತೀರಿ?’ ಅಂದ್ರಂತೆ. ಆತ ’ಸಾರ್ ನಾನು ಬಾದಾಮಿ, ಗೋಡಂಬಿ, ಪಿಸ್ತಾ, ಚಾಕಲೆಟ್ಟು ಇವನ್ನೆಲ್ಲ ಕೊಟ್ಟು ಸಾಕ್ತೀನಿ’ ಅಂದನಂತೆ. ಈ ವಿಷಯ ಗೊತ್ತಾಗಿದ್ದೇ ಆದಾಯ ತೆರಿಗೆಯವರು ದಾಳಿ ನಡೆಸಿದರಂತೆ. ಆಮೇಲೆ ಆತ ಹುಷಾರಾದ. ಹೀಗೇ ಮತ್ತೊಬ್ಬ ಸಂದರ್ಶಕ ಅದೇ ಪ್ರಶ್ನೆಯನ್ನು ಕೇಳಿದಾಗ ’ಸ್ವಾಮೀ ನಾನು ಏನೂ ತಿನ್ನಿಸೊಲ್ಲ, ಉಪವಾಸ ಕೆಡವ್ತೀನಿ, ಏನೋ, ಆಗೊಂದಿಷ್ಟು ಈಗೊಂದಿಷ್ಟು ಮಿಕ್ಕಿದ್ದು ಪಕ್ಕಿದ್ದು ಹಾಕ್ತೀನಿ’ ಅಂದ. ಕೂಡಲೇ ಪ್ರಾಣಿದಯಾಸಂಘದವರು ಬೊಬ್ಬೆ ಹಾಕಿದರು. ಆತ ಇನ್ನಷ್ಟು ಹುಷಾರಾದ, ಯಾರಾದ್ರೂ ಕೇಳಿದ್ರೆ ’ಹಾಗೆಲ್ಲ ನಾನು ಕೋಳಿಗಳಿಗೆ ಮೇವು ಹಾಕೋದಿಲ್ಲ, ಒಂದೊಂದು ಕೋಳಿಗೂ ದಿನಕ್ಕೆ ಒಂದೊಂದು ರೂಪಾಯಿ ಕೊಟ್ಟುಬಿಡುತ್ತೇನೆ, ಅವುಗಳೇ ತಮಗೆ ಬೇಕಾದ ಊಟವನ್ನು ಕೊಂಡು ತಿನ್ನುತ್ತವೆ’ ಎಂದು ಹೇಳತೊಡಗಿದ.
ಇದನ್ನು ಜೋಕಾಗಿ ತೆಗೆದುಕೊಳ್ಳಿ. ನಾನು ಇದನ್ನು ಹೇಳಿದ ಉದ್ದೇಶವಿಷ್ಟೆ. ಇತ್ತೀಚೆಗೆ ಬೆಂಗಳೂರು ವಿವಿಯ ಘಟಿಕೋತ್ಸವ ನಡೆಯಿತು. ವಿವಿಗೇ ಮೊದಲ ಸ್ಥಾನ ಪಡೆದವರಿಗೆ ಚಿನ್ನದ ಪದಕ ನೀಡುವುದು ನಡೆದುಕೊಂಡು ಬಂದ ಸಂಪ್ರದಾಯ ತಾನೇ? ಅವರು ನೀಡುವ ಪದಕ ಅಪ್ಪಟ ಚಿನ್ನದ್ದಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಆ ಪದಕ ಸ್ವೀಕರಿಸುವ ಸಂದರ್ಭದ ಸಂಭ್ರಮ ಇರುತ್ತಲ್ಲ ಅದು ಎಂದೂ ಮರೆಯಲಾಗದ ಅನುಭವ. ಆ ಒಂದು ಸಂತಸಕರ ಸಂದರ್ಭಕ್ಕೆ ಮಸಿ ಬಳಿದವರು ಈ ಬೆಂಗಳೂರು ವಿವಿಯವರು. ಅವರು ಪದಕದ ಬದಲಿಗೆ ಐವತ್ತು ರೂಪಾಯಿಗಳ ಡಿಡಿ ನೀಡಿ ಹೊಸ ಪರಂಪರೆಗೆ ನಾಂದಿ ಹಾಡಿದರು. ಐವತ್ತು ರೂಪಾಯಿಗಳಿಗೆ ವಿದ್ಯಾರ್ಥಿಗಳು ತಮಗೆ ಬೇಕಾದ ಗಾತ್ರದ, ಬೇಕಾದ ತೂಕದ ಪದಕ ಕೊಂಡು ಧರಿಸಿಕೊಳ್ಳಲಿ ಎಂದು.
Comments
ಉ: ಬೆಲೆ ಕಟ್ಟುವುದು
ಉ: ಬೆಲೆ ಕಟ್ಟುವುದು
ಉ: ಬೆಲೆ ಕಟ್ಟುವುದು
ಉ: ಬೆಲೆ ಕಟ್ಟುವುದು
In reply to ಉ: ಬೆಲೆ ಕಟ್ಟುವುದು by thesalimath
ಉ: ಬೆಲೆ ಕಟ್ಟುವುದು