Mothers' day

Mothers' day

ಬರಹ

ಅಮೆರಿಕೆಯ NPR ರೇಡಿಯೋ ಬಾತ್ಮೀದಾರ ಸ್ಕಾಟ್ ಸಿಮೋನ್ ಮಾತೆಯರ ದಿನದಂದು ಬರೆದ ಪ್ರಬಂಧದ ಅನುವಾದ.

ನಾನಿರುವಲ್ಲಿ ದಿನವೂ ಮಾತೆಯರ ದಿನ.
ನನ್ನ ಪತ್ನಿ ಕೆಲಸಕ್ಕೆ ಹೋಗುವುದಿಲ್ಲ. ಆಕೆ ಪೂರ್ಣ ಸಮಯ ತಾಯಿ. ಬೆಳಗ್ಗಾದ ಕೂಡಲೇ ಮಮ್ಮ ಮಮ್ಮ ಎಂದು ಚೀರುವ ೨ ವರ್ಷದ ಮಗಳನ್ನು ಒಂದು ಕೈಯಲ್ಲಿ ಎತ್ತಿಕೊಂಡು ಮತ್ತೊಂದು ಕಾಯ್ಯಿಂದ ಹಾಲು ಕಾಯಿಸಲು ಅಡುಗೆ ಮನೆಗೆ ಹೋಗುತ್ತಾಳೆ.
ನಾನಾದರೋ ನನ್ನ ಕಛೇರಿಯಲ್ಲಿ ಕುಳಿತು, ಮಾಡಬೇಕಾದ ಕೆಲಸವನ್ನು ಮುಂದಕ್ಕೆ ಹಾಕುವ ಬಗ್ಗೆ ಯೋಚಿಸುತ್ತಾ, ಬೇಸ್ ಬಾಲ್ ಸ್ಕೋರ್ ನೋಡುತ್ತಾ ನನ್ನ ಕಾಫಿಯ ನಿರೀಕ್ಷೆಯಲ್ಲಿ ಸಮಯ ಕಳೆಯುತ್ತೇನೆ.
ಪತ್ನಿ ಸ್ನಾನ ಗೃಹಕ್ಕೆ ತೆರಳಲು ಮಗಳು ಬಿಡದಾಗ ಆಕೆಯನ್ನೂ ಎತ್ತಿ ಕೊಂಡು ಒಳ ಹೋಗುತ್ತಾಳೆ. ೨ ವರ್ಷದ ಮಗುವನ್ನು ಸ್ನಾನ ಗೃಹದಲ್ಲಿ ಸಂಭಾಳಿಸುವುದು ಸರ್ಕ್ಸಸ್ಸೇ ಸರಿ. ಈಗ ನಮ್ಮ ೬ ವರ್ಷದ ಮಗಳು ಮಮ್ಮ ಮಮ್ಮ ಎನ್ನುತ್ತಾ ಎದ್ದು ಬಂದಾಗ ಆಕೆಯನ್ನೂ ಚಿಕ್ಕ ಮಗುವನ್ನೂ ಎರಡೂ ಕೈಗಳಲ್ಲಿ ಎತ್ತಿ ಹಿಡಿದು ತನ್ನ ಮೂರನೇ (?) ಕೈಯಿಂದ ಮತ್ತಷ್ಟು ಹಾಲನ್ನು ಬಿಸಿ ಮಾಡಲು ತೊಡಗುತ್ತಾಳೆ.
ಈಗ ಮತ್ತೊಂದು ಕಾಫಿಗಾಗಿ ನಾನು ಅಡುಗೆ ಕೊನೆಗೆ ಬರುತ್ತೇನೆ.
ಆಕೆ ಮಕ್ಕಳನ್ನು ಶಾಲೆಗೆ ತಯಾರಿ ಮಾಡಲು ಬಟ್ಟೆ ತೊಡಿಸುತ್ತಾಳೆ. ಮೊಲಗಳ ಥರ ಜಿಗಿದಾಡುವ ಅವರಿಗೆ ಬಟ್ಟೆ ತೊಡಿಸುವುದು ಮತ್ತೊಂದು ಸಾಹಸ. ಅವರನ್ನು ಪಕ್ಕದಲ್ಲೇ ಇರುವ ಶಿಶುವಿಹಾರಕ್ಕೆ ಬಿಟ್ಟು ಬರಲು ಅರ್ದ ಘಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ರತಿ ಅಂಗಡಿಯ ಮುಂದೆ ಮತ್ತು ಪ್ರತಿ ಕಿಟಕಿಗಳನ್ನು ಇಣಕಿ ನೋಡುತ್ತಾ ಸಾಗುತ್ತವೆ ನಮ್ಮ ಪುಟಾಣಿಗಳು.

ಮನೆಗೆ ಮರಳಿದ ಆಕೆಗೆ ಸ್ವಲ್ಪ ವಿರಾಮ. ಬಟ್ಟೆ ಒಗೆಯಲು ಹಾಕಿ,ಬಿಲ್ಲುಗಳನ್ನು, ಕ್ರೆಡಿಟ್ ಕಾರ್ಡ್ ಪಾವತಿ ಮಾಡಿ, ತಪ್ಪಾಗಿ ತನಗೆ ಬಂದ ಫೋನ್ ಬಿಲ್ಲುಗಳನ್ನು ಕಂಪನಿ ಯವರೊಂದಿಗೆ ರಗಳೆ ಮಾಡಿ ಬಗೆಹರಿಸುತ್ತಾಳೆ. ಇದನ್ನೆಲ್ಲಾ ಮಾಡುತ್ತಿದ್ದಾಗ ನಮ್ಮ ಚಿಕ್ಕ ಮಗಳು ಚಿಂಪಾನ್ಜೀ ಥರ ಅವಳ ತಾಯಿಯ ಕೊರಳ ಮೇಲೆ ತೂಗುತ್ತಿರುತ್ತಾಳೆ. ಚೆಲ್ಲಾಡಿದ ಆಟಿಕೆಗಳನ್ನು ಹೆಕ್ಕಿ, ಸ್ವಲ್ಪ ಶಾಪಿಂಗ್ ಮಾಡಿ, ಬೀರುವನ್ನು ಒಪ್ಪವಾಗಿಡುತ್ತಾಳೆ. fish tank ಕ್ಲೀನ್ ಮಾಡಿ ಬೆಕ್ಕಿನ ಗಲೀಜನ್ನು ಶುಚಿಕರಿಸುತ್ತಾಳೆ. ಚಿಕ್ಕ ಮಗಳ ಕಳೆದು ಹೋದ ಆಟಿಕೆ ಹುಡುಕಿ ಕೊಟ್ಟ ಮೇಲೆ ಸ್ನಾನಕ್ಕೆ ಹೋಗಲು ಸಮಯವಿರುವುದಿಲ್ಲ ಆಕೆಗೆ. ಇಷ್ಟಾದ ನಂತರ ಮಗಳನ್ನು ಶಾಲೆಯಿಂದ ಕರೆತಂದು ballet ಕ್ಲಾಸಿಗೆ ಕರೆದೊಯ್ಯುತ್ತಾಳೆ. ಮೂರು ಹೊತ್ತಿನ ಅಡುಗೆ ಮತ್ತು ತರಾವರಿ ತಿಂಡಿ ತಯಾರಿ ಮಾಡಿ, ಮಕ್ಕಳ ಅಜ್ಜಿಯಂದಿರಿಗೆ ಫೋನಾಯಿಸಿ, ಅವರಿಗೆ ಮೊಮಕ್ಕಳ ಫೋಟೋ ಕಳಿಸಿ ಕೊಡುತ್ತಾಳೆ. ನಾನು ಒಂದೆರೆಡು ಬಾರಿ ಆಕೆಗೆ ಫೋನ್ ಮಾಡಿ ನಾನು ಬಹಳ ಬ್ಯುಸಿ ಇದ್ದೇನೆ ' ಸ್ವಲ್ಪ ನನ್ನ ಕೆಂಬಣ್ಣದ ಕಾಲ್ಚೀಲ ಹುಡುಕಿ ಇಡ್ತೀಯ ಅಂತ ಕೇಳುತ್ತೇನೆ.

ಆಕೆಗೆಂದು ಲಭ್ಯವಿರುವುದು ಕೇವಲ ೪ ನಿಮಿಷಗಳು ಮಾತ್ರ. ನೆಲದ ಮೇಲೆ ಬಿದ್ದ ತಿನಿಸೇ ಆಕೆಯ ಊಟ. ದಿನಕ್ಕೆ ೧೫ ಘಂಟೆಗಳ ಬಿಡುವಿಲ್ಲದ ದುಡಿತ ಆಕೆಯದು. ೩೬೫ ದಿನ ಪೂರ್ತಿ, ರಜೆಯಿಲ್ಲ. ಇಷ್ಟೆಲ್ಲಾ ಕಷ್ಟ ಬಿದ್ದರೂ ಆಕೆಯ ಪ್ರಕಾರ ಪೂರ್ತಿ ಸಮಯ ತಾಯಿಯಾಗಿರುವುದೇ ಒಂದು ವರದಾನ, ಮಕ್ಕಳೊಂದಿಗೆ ಮನೆಯಲ್ಲಿರುವ ಭಾಗ್ಯ.

ಈ ಪ್ರಬಂಧ ಓದಿ ನನ್ನ ಬದುಕು ನನ್ನ ಕಣ್ಣ ಮುಂದೆ ಬಂದು ಬಿಟ್ಟಿತು. ಇದೇ juggling ನನ್ನ ಮಡದಿಯದೂ. ಆರು ವರ್ಷದ ಪೋರ, ೧೫ ತಿಂಗಳ ಪೋರಿ ಸರ್ಕಸ್ಸಿನ ರಿಂಗ್ ಮಾಸ್ಟರ್ ಪ್ರಾಣಿಗಳನ್ನು ಮಣಿಸಿ, ಕುಣಿಸುವಂತೆ ತಮ್ಮ ತಾಯಿಯನ್ನು ಕುಣಿಸುತ್ತಾರೆ. ನಾನಾದರೋ ನನ್ನ ಲ್ಯಾಪ್ಟಾಪ್ ಆಯಿತು ಇಲ್ಲಾ ಪುಸ್ತಕ ಆಯಿತು. ಮನೆಯಲ್ಲಿ ಭೂಕಂಪವಾದರೂ ತಿರುಗಿ ನೋಡುವುದಿಲ್ಲ. ನನ್ನ ಈ ಸ್ವಭಾವ ನೋಡಿಯೋ ಅಥವಾ ಗಂಡು ಜಾತಿಯೇ ಹೀಗೆ ಎಂದೋ ಆಕೆಯೂ ನನಗೆ ಯಾವ ಕೆಲಸವೂ ಹೇಳುವುದಿಲ್ಲ. ಹೆಚ್ಚು ಎಂದರೆ garbage ಹೊರಕ್ಕೆ ಎಸೆಯಲು ಮಾತ್ರ ನನ್ನ ಸಹಾಯ ಸೀಮಿತ. ಸಿಮೊನ್ ರ ಈ ಪ್ರಬಂಧ ಓದಿ ಸ್ವಲ್ಪ guilty ಫೀಲ್ ಆಗ್ತಿದೆ. ನೀವು ಇದನ್ನು ಓದುತ್ತಿರುವಂತೆಯೇ ನನ್ನ ಮಗಳು, ಹೂದಾನಿ ತುಂಬಾ ಸೌಟು, ಬೂಟು, ಚಮಚ, ಆಟಿಕೆಗಳನ್ನು ತುಂಬಿಸಿ ಇಟ್ಟಿದ್ದಾಳೆ, ಅದನ್ನು ಬರಿದು ಮಾಡಿ ಬರುತ್ತೇನೆ.

ಚಿತ್ರ ಸೌಜನ್ಯ
www.touchamemory.com