ಮಧುಚಂದ್ರ ಮುಗಿದಮೇಲೆ...!

ಮಧುಚಂದ್ರ ಮುಗಿದಮೇಲೆ...!

ಕೆಲವು
ಬಾಂಧವ್ಯಗಳೇ
ಹೀಗೆ,


ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ;


ಮೊದಲ
ಭೇಟಿಯ
ಆ ಮೊದಲ
ಮಾತಿನಿಂದಲೇ
ಮೋಡಿಗೊಳಗಾಗುವರು,


ತನ್ನ ಯಾವುದೋ
ಸದಭಿಪ್ರಾಯದ
ಮಾತುಗಳಿಗೆ
ಸಹಮತ
ವ್ಯಕ್ತಪಡಿಸಿದ್ದಕ್ಕೇ
ಮೆಚ್ಚಿ ಕೊಂಡಾಡುವರು;


ಬರಸೆಳೆದು
ಆಲಿಂಗನ ನೀಡಿ
ಬೆನ್ನು ತಟ್ಟಿ
ನೀವೆನಗೆ
ಹತ್ತಿರದವರೆಂದು
ಮುಖಸ್ತುತಿ ಮಾಡುವರು,


ದಾರಿಯಲಿ
ಹೋಗುವವನ
ಮನೆಗೆ ಕರೆದು
ಯಾವುದೋ ಜನ್ಮದ
ಬಂಧುವೆಂದು
ಸತ್ಕರಿಸಿ
ಸಂತಸಪಡುವರು;


ನಾಲ್ಕಾರು ದಿನ
ವಾರಗಳಾದಾಗ,
ವಸ್ತುನಿಷ್ಟ ಅಭಿಪ್ರಾಯಗಳು
ಬರಲು ಆರಂಭಿಸಿದಾಗ,
ಆ ಮೊದಲ ಮಾತನೇ
ಮರೆಸುವ ಮಾತುಗಳು
ನೂರಾರು ಬಂದಾಗ,
ಬಂಧು ಎಂದವನನೇ
ಅಳೆಯುವುದಕೆ
ಆರಂಭಿಸುವರು,


ತಿಂಗಳು
ಕಳೆಯುವಷ್ಟರಲ್ಲಿ
ಅಸಡ್ದೆ
ತೋರಿಸತೊಡಗಿ
ಸಂಪೂರ್ಣವಾಗಿ
ನಿರ್ಲಕ್ಷಿಸಲು
ಪ್ರಾರಂಭಿಸುವರು;


ತಮ್ಮದೇ
ತಪ್ಪುಗ್ರಹಿಕೆಗೆ
ತಾವೇ
ಬಲಿಯಾಗುವರು,


ಅನ್ಯರ
ಪಾಲಿಗೆ ಬರಿ ಒಂದು
ದುಃಸ್ವಪ್ನವಾಗಿ
ಕಾಡಿ ಹೋಗುವರು;


ಇವರು ತಮ್ಮೆಲ್ಲಾ
ಮಾತುಗಳಿಗೆ
ಹೂಂಗುಟ್ಟುವವರ
ಅರಸುತಿರುವವರು,


ತಮ್ಮ ಸಂಗಡ
ಗುರುತಿಸಿಕೊಳ್ಳಲು
ಮಂದಿ ಬೇಕೆಂದು
ಹಾತೊರೆಯುವವರು;


ಇಂಥವರು
ನಮ್ಮ ಬಾಳಲ್ಲಿ
ಇದ್ದರೆಷ್ಟು?
ಇಲ್ಲದಿದ್ದರೆಷ್ಟು?


ಬಲು ನಿಧಾನದಿ
ಮನವ ಬಾಗಿಲ
ತೆರೆದು ಹೃದಯವನೇ
ಸೇರಿಕೊಂಬವರು
ಈಗ ಇದ್ದಾರೆಷ್ಟು?


ಕೆಲವು
ಬಾಂಧವ್ಯಗಳೇ
ಹೀಗೆ,


ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ!
****
ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments